January 18, 2025
letter clipart

letter clipart

ಕ್ಷಮಿಸಿಬಿಡು ಮಗನೇ ಇದು ನನ್ನ ಮೊದಲನೆಯ ಪತ್ರ ಮತ್ತು  ಕೊನೆಯ ಪತ್ರ.ಜೀವನದಲ್ಲಿ ಹಲವು ಆಸೆ ಆಕಾಂಕ್ಷೆಗಳನ್ನು ಹೊಂದಿದ ನಿನ್ನನ್ನು ನಡುದಾರಿಯಲ್ಲಿ ಬಿಟ್ಟು ಹೋಗುವುದಷ್ಟೇ ಅಲ್ಲದೇ ಜೀವನಪೂರ್ತಿಯ ಸಾಲದ ಹೊರೆಯನ್ನು ಹೊರಿಸುತ್ತಿರುವುದಕ್ಕೆ ಕ್ಷಮಿಸಿಬಿಡು. ಏನು ಮಾಡುವುದು ಹೇಳು ಅಂದಿಗೆ ಹರೆಯದ ಉತ್ಸಾಹ, ಕೆಲಸದ ತುಡಿತ, ವ್ಯವಹಾರ ಉಳಿಸಿಕೊಳ್ಳುವ ಹಂಬಲ ಜೊತೆಗೆ ಹೊಟ್ಟೆಪಾಡಿನ ಹೊಡೆತ ಇವೆಲ್ಲವೂ ನನ್ನನ್ನು ಅನಿಮಿಯತವಾಗಿ ದುಡಿಯುವಂತೆ ಮಾಡಿಬಿಟ್ಟಿತು. ಊಟ,ಟೀ,ಕಾಫಿ,ತಿಂಡಿಗೆ ಸಮಯದ ಮಿತಿಯೇ ಇರಲಿಲ್ಲ. ನಿಂತೇ ಹಲವು ಗಂಟೆಗಳ ಕೆಲಸ ಮಾಡುವ ದೇಹಕ್ಕೆ ನೀರಿನ ಪಸೆಯನ್ನು ತಾಗಿಸದೇ ದುಡಿಸಿದ ದಿನಗಳು ಹಲವು. ಊಟವೇ ಇಲ್ಲದ ಖಾಲಿ ಹೊಟ್ಟೆಯ ಕೆಲಸ ದೇಹ ಕೇಳದಿದ್ದರೂ ಮನಸ್ಸು ಮಾಡು ಮಾಡು ಎನ್ನುತ್ತಿತ್ತು. ಜನಗಳ ಅಂದಿನ ದಿನದ ಕರುಣೆ,ಪ್ರೀತಿ ಮತ್ತಷ್ಟು ಪ್ರೋತ್ಸಾಹಿಸುತ್ತಿತ್ತು. ಇಂತಹ ಪ್ರೀತಿಯ ಮುಂದೆ ಒಂದು ದಿನದ ಊಟ ಎಷ್ಟರದ್ದು ಎಂದೆನಿಸುತಿತ್ತು !
ಹೀಗೆ ಕಳೆದ ಆ ಒಂದೊಂದು ದಿನಗಳನ್ನು ಈಗ ಲೆಕ್ಕ ಹಾಕಿದರೆ ಉಳಿದ ದಿನಗಳ ಸಂಖ್ಯೆ ಅದರ ಕಾಲುಭಾಗದಷ್ಟು ಇಲ್ಲ.ಅಂದಿನ ಮನೆಯ ಪರಿಸ್ಥಿತಿಯು ಅಂತೆಯೇ ಇದ್ದಿತ್ತು, ಸ್ವಾಧೀನ ಕಳೆದುಕೊಂಡ ನಿನ್ನ ಅಜ್ಜನ ಆರೋಗ್ಯ.ನಂತರದಲ್ಲಿ ಆಗಾಗ ಅನಾರೋಗ್ಯಕ್ಕೆ ಈಡಾಗುವ ನಿನ್ನ ತಾಯಿ.ನಂತರ ನಿಮ್ಮ ನಾಲ್ಕು ಜನರ ವಿದ್ಯಾಭ್ಯಾಸ, ದೂರದ ಊರಿನ ಖರ್ಚುವೆಚ್ಚಗಳು.ಹೀಗೆ ಹಲವು ಮಜಲುಗಳಲ್ಲಿ  ಎದುರಿಸಿದ ಕಷ್ಟಗಳು, ಅತೀ ಕಡಿಮೆ ದರದಲ್ಲಿ ಸೇವೆ ನೀಡುತ್ತಿದ್ದ ನನ್ನ ಆರ್ಥಿಕತೆಯ ಮಟ್ಟ ಅದೇ ಕೆಳಸ್ಥರದಲ್ಲಿ ಸಾಗುವಂತೆ ಮಾಡಿ ಬಡತನದ ಬದುಕಿಗೆ ಮತ್ತಷ್ಟು ಸೊಪ್ಪು ಹಾಕಿತು. ಅದಕ್ಕಾಗಿಯೂ ಈ ಅನಿಯಮಿತ ದುಡಿಮೆ ಅನಿವಾರ್ಯವಾಗಿತ್ತು. ಈಗ ನನಗೆ ತಿಳಿದಿದೆ ಇಂದಿನ ನನ್ನ ಈ ಪರಿಸ್ಥಿತಿಗೆ ನಾನೇ ಕಾರಣ. ಆದರೇನು ಮಾಡುವುದು ಹೇಳು, ಕಾಲ ಮಿಂಚಿ ಹೋಗಿದೆ. ಬಡತನ ಯಾರಿಗೆ ಇರುವುದಿಲ್ಲ ಹೇಳು! ಹತ್ತುಪಟ್ಟು ಕೆಲಸ ನೀಡಿ ದೇಹ ದುಡಿಸುವ ಬದಲಿಗೆ ನಿಯಮಿತವಾಗಿ ದುಡಿದಿದ್ದರೆ ಇಂದಿಗೆ ಅರ್ಧಜೀವನಕ್ಕೆ  ಜೀವನವನ್ನು ಮುಗಿಸುವ ಪ್ರಮೇಯ ಬರುತ್ತಿರಲಿಲ್ಲ. ಅಂದು ಕಂಡು ಖುಷಿಗೊಂಡಿದ್ದ ಜನಗಳ ಪ್ರೀತಿಯ ಒಳಾರ್ಥ ಇಂದಿಗೆ ಅರಿವಾಗುತ್ತಿದೆ.  ಬೀದಿಯ ಬದಿಯಲ್ಲಿ ನಿಂತು ಕರುಣೆ ತುಂಬಿದ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಆದರೆ ಆಸ್ಪತ್ರೆಯ ಹಾಸಿಗೆ ಹಿಡಿದವನ ನೋಡಲು ಬಂದವರು ಬೆರಳೆಣಿಕೆಯಷ್ಟಾದರು ಇದ್ದಾರಲ್ಲ ಎಂಬ ಖುಷಿಯಷ್ಟೆ.
ಆದರೆ ಮಗನೆ ನನಗೆ ಹೆದರಿಕೆಯಾಗುತ್ತಿರುವುದು ನಾನು ಸಾಯುವ ಬಗೆಗಲ್ಲ,ನಿನ್ನ ಮುಂದಿನ ಜೀವನದ ಬಗೆಗೆ. ಇನ್ನೂ ಪಿ.ಯು.ಸಿ ಹಂತದಲ್ಲಿರುವ ನಿನ್ನ ಮೇಲೆ ಇಡಿಯ ಸಂಸಾರದ ಹೊರೆಯನ್ನು ಹೊರೆಸಿ ಹೋಗುತ್ತಿದ್ದೇನೆ. ಹೇಗೆ ನಿಭಾಯಿಸುವೆ ನೀನು ? ಎದೆ ನಡುಕವುಂಟಾಗುತ್ತಿದೆ! ಕಸುಬೇ ಆಸ್ತಿಯಾಗಿದ್ದ ನನಗೆ ನಿಮಗೆಂದು ಆಸ್ತಿಯನ್ನು ಮಾಡಲಿಲ್ಲ.ನಮ್ಮದೇ ಕುಲಕಸುಬಿದೆಯಲ್ಲಾ ಎಂದರೆ ನೀನು ಕತ್ತರಿ-ಬಾಚಣಿಕೆ ಹಿಡಿದದ್ದು ಅಲ್ಲೊಂದು ಇಲ್ಲೊಂದು ದಿನ. ಊರಿಗೆ ಒಂದೇ ಅಂಗಡಿ ಕಲಿತು ನಿಭಾಯಿಸಬಹುದು. ದಿನದ ಹನ್ನೆರಡು, ಹದಿನಾಲ್ಕು ಗಂಟೆ ನಿಂತು ಅದು ಹೇಗೆ ಸುಧಾರಿಸುವೆ ? ನಿಂತು ದುಡಿಯುವ ದೇಹಕ್ಕೆ ಪೆಟ್ಟು ಬಿದ್ದದ್ದು ತಿಳಿಯುವುದೇ ಇಲ್ಲ, ಬಿದ್ದಮೇಲೆ ಏಳುವುದೂ ಇಲ್ಲ. ಇತ್ತೀಚಿನ ಪಟ್ಟಣದ ಬೆರಗು ಮೂಡಿಸುವ ಅತ್ಯಾಕರ್ಷಕ ಅಂಗಡಿಗಳತ್ತ ಜನರು ಒಲವು ತೋರುತ್ತಿದ್ದಾರೆ. ಕೆಲವೇ ಕಿಲೋಮೀಟರ್ ದೂರದಲ್ಲಿರುವ ಅವರು ಇಲ್ಲಿಗೆ ಲಗ್ಗೆಯಿಟ್ಟರೂ ಆಶ್ಚರ್ಯವಿಲ್ಲ. ಆದರೆ ಈ ಪೈಪೋಟಿಯ ಜೀವನದಲ್ಲಿ, ಈ ಚಿಕ್ಕವಯಸ್ಸಿನಲ್ಲೇ ನೀನು ಹೇಗೆ ಅಷ್ಟು ಮೊತ್ತದ ಬಂಡವಾಳ ಹೂಡಲು ಸಾಧ್ಯ ? ಸರ್ಕಾರಕ್ಕೆ ಅವರುಗಳ ಮೇಲಿರುವಷ್ಟು ಪ್ರೀತಿ ನಮ್ಮ ಮೇಲಿಲ್ಲ, ಅವರಿಗೆ ನೀಡುವ ಸಾಲಭಾಗ್ಯ ನಮಗಿಲ್ಲ. ಪುಟ್ಟ ತಂಗಿಯಿದ್ದಾಳೆ, ಉಳಿದೆರಡು ತಮ್ಮಂದಿರಿದ್ದಾರೆ ಅವರನ್ನು ಓದಿಸುವ ಜವಾಬ್ದಾರಿ ನಿನ್ನ ಮೇಲಿದೆ. ಆಗಾಗ ಕಾಯಿಲೆಬೀಳುವ ತಾಯಿಯಿದ್ದಾಳೆ ಅವಳ ಜವಾಬ್ದಾರಿಯೂ ನಿನ್ನದೆ ಆಗಿದೆ. ಹೆದರಿಸುತ್ತಾ ಜೀವನವನ್ನು ತೋರಿಸುತ್ತಿದ್ದೇನೆ ಮಗನೆ, ಹೆದರಬೇಡ. ಜೀವನ ಜಟಿಲ ಮುನ್ನುಗುವುದೇ ಆಗಬೇಕು ಕಾಯಕ. ನನ್ನಂತೆ ಕುಗ್ಗಬೇಡ ಹಿಗ್ಗಿನೆಡೆ,ಆದರೆ ಕೆಲವರಿಗೆ ದಾರಿಯಾಗು. ಆರೋಗ್ಯದ ನಿರ್ಲಕ್ಷ್ಯ ಬೇಡ, ದೇಹ ಪುಟುವಿದ್ದರೆ ಮನಸ್ಸು ಕನಸನ್ನು ನನಸಾಗಿ ಅರಳಿಸಲು ಸಾಧ್ಯ. ಬಡತನವನ್ನು ಮೆಟ್ಟಿನಿಂತು ಮಾದರಿಯಾಗಿ ಬಾಳು. ಹಿಂದೆ ಸರಿಯಬೇಡ, ಹಿಂಸೆಯೆನಿಸಿದರೂ ಆತ್ಮಹತ್ಯೆಯತ್ತ ಮುಖ ಮಾಡಲೇಬೇಡ. 
ಪತ್ರ ಬರೆದು ಇಂದಿಗೆ ಮೂವತ್ತೊಂದು ವರ್ಷಗಳು ಸಂದಿವೆ. ಕುಲಕಸುಬೇ ನೆಚ್ಚಿನೆಡೆದವನಿಗೆ ದೈವಾನುಗ್ರಹವೆಂಬಂತೆ ಕೈಹಿಡಿದುಬಿಟ್ಟಿತು. ಜೊತೆಗೆ ನಡೆಸಿದ ಇತರೆ ವ್ಯವಹಾರಗಳು ಕೈಗೂಡಿಬಿಟ್ಟಿತು. ಒಂದೊಂದರಂತೆ ಹಲವು ಅತ್ಯಾಧುನಿಕ ಕ್ಷೌರದಂಗಡಿಗಳು ತೆರೆದವು. ಅರಸಿ ಬಂದ ಕೆಲಸದವರಿಗೆ ವಿಶೇಷ ಸೌಲಭ್ಯಗಳು ದೊರೆತವು. ದಾರಿ ತೋರುವ ಮನಸ್ಸಾಯಿತು, ಬಡ ಕ್ಷೌರಿಕರಿಗೆ ಶೇಖಡ ಒಂದರ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಿ ಬೆಳೆಯಬೇಕೆಂಬ ಆಶಾಭಾವ ಮೂಡಿಸಲಾಯಿತು. ತಿರುಗಿ ಕೊಟ್ಟವರೆಷ್ಟೋ ಕೊಡದವರೆಷ್ಟೊ.ನೋಡಿ ಕೈ ಜೋಡಿಸಲು ಬಂದವರು ಹಲವರು,ಉರಿದು ಹೋದವರು ಕೆಲವರು,ಸಂಸ್ಥೆ ಬೆಳೆಯಿತು.ಆರೋಗ್ಯ ಭಾಗ್ಯದೊಂದಿಗೆ, ಪಿಂಚಣಿಯ ವ್ಯವಸ್ಥೆಯೊಂದಿಗೆ, ವ್ಯವಹಾರದ ಸಹಾಯದೊಂದಿಗೆ, ಮಕ್ಕಳ ವಿದ್ಯಾಭ್ಯಾಸದೊಂದಿಗೆ ಹೀಗೆ ಹಲವು ಮಜಲುಗಳಲ್ಲಿ ಸಹಾಯಹಸ್ತ ಚಾಚಿ ಹಲವರ ಬಾಳಿನ ಬೆಳಕಾಗಿ ಬೆಳೆದುಬಿಟ್ಟ. ಇಂದು ಪ್ರತಿಷ್ಠಿತ ಪ್ರಶಸ್ತಿಗಳು ಅವನಿಗಾಗಿ ಕಾದು ಕುಳಿತಿವೆ, ಬರುತ್ತಿರುವ ಕರೆಗಳು ಹಲವು. ಯಾವುದೂ ಬೇಕಾಗಿಲ್ಲ, ತಂದೆಯ ಪತ್ರ ಪಾರಿತೋಷಕದ ಮುಂದೆ.
ವಿಜಯ್ ಭಂಡಾರಿ ನಿಟ್ಟೂರು.

Leave a Reply

Your email address will not be published. Required fields are marked *