
ಉಡುಪಿ ಕೋಡಂಕೂರಿನ ವಿಕ್ರಂ ಭಂಡಾರಿ ಮೂಡಂಬೈಲ್ ಮತ್ತು ಜ್ಯೋತಿ ವಿಕ್ರಮ್ ಭಂಡಾರಿ ಮೂಡಂಬೈಲ್ ದಂಪತಿಯ ಪುತ್ರ ಪವನ್ ಭಂಡಾರಿ ಮೂಡಂಬೈಲ್ ಇತ್ತೀಚೆಗೆ ನಡೆದ ಕರಾಟೆ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕರಾಟೆ ಬ್ಲಾಕ್ ಬೆಲ್ಟ್ ಮತ್ತು ಪ್ರಮಾಣ ಪತ್ರವನ್ನು ಪಡೆದಿದ್ದಾರೆ.

ಪವನ್ ಕುದ್ರೋಳಿ,ಹಾವೇರಿ,ಉಡುಪಿ ಪಡುಬಿದ್ರಿ,ಬೆಂಗಳೂರು ಹಾಗೂ ಹೈದರಾಬಾದ್ ಗಳಲ್ಲಿ ನಡೆದ ಹಲವಾರು ರಾಜ್ಯ ಮಟ್ಟದ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿ ಕರಾಟೆಯಲ್ಲಿ ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ.


ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಬುಡೋಕಾನ್ ಕರಾಟೆ ಇಂಡಿಯಾದ ಕಾರ್ಯದರ್ಶಿ ಹಾಗೂ ಹಿರಿಯ ಪರೀಕ್ಷಕ ಕ್ಯೋಶಿ ಪ್ರವೀಣ್ ಕುಮಾರ್ ಇವರ ಮುಂದಾಳತ್ವದಲ್ಲಿ ಆಯೋಜಿಸಲಾಗಿದ್ದ ಕರಾಟೆ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ, ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್ ನ ಉಡುಪಿಯ ಹಿರಿಯ ಶಿಕ್ಷಕರಾದ ಶಿಹಾನ್ ರಾಜಶೇಖರ್ ಸುವರ್ಣ ರವರ ಮಾರ್ಗದರ್ಶನದಲ್ಲಿ ಕಳೆದ ಏಳೆಂಟು ವರ್ಷದಿಂದ ಸತತವಾಗಿ ಕರಾಟೆ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ, ಕಠಿಣ ಸವಾಲುಗಳನ್ನು ಎದುರಿಸಿ ತೇರ್ಗಡೆಗೊಂಡು ಕರಾಟೆ ಬ್ಲಾಕ್ ಬೆಲ್ಟ್ ಮತ್ತು ಪ್ರಮಾಣ ಪತ್ರವನ್ನು ಪಡೆದಿದ್ದಾರೆ.


ಪವನ್ ಮೂಡಂಬೈಲ್ ಉಡುಪಿಯ ಸೈಲಸ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಶಿಹಾನ್ ರಾಜಶೇಖರ್ ಸುವರ್ಣರ ಗರಡಿಯಲ್ಲಿ ಕರಾಟೆ ಅಭ್ಯಸಿಸುತ್ತಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಯನ್ನು ಸೈಲಸ್ ಇಂಟರ್ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರಾದ ಡಿಯೆಡ್ರಾ.ಎಸ್.ಮಾಬೆನ್ ರವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.


ನಮ್ಮ ಭಂಡಾರಿ ಸಮಾಜದ ಕುಡಿ ಪವನ್ ಮೂಡಂಬೈಲ್ ಕರಾಟೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಭಂಡಾರಿ ಸಮಾಜಕ್ಕೂ,ಹೆತ್ತವರಿಗೂ,ಶಾಲೆಗೂ ಮತ್ತು ಕರಾಟೆ ಗುರುಗಳಿಗೂ ಇನ್ನಷ್ಟು ಗೌರವ ತಂದುಕೊಡಲಿ,ಆ ನಿಟ್ಟಿನಲ್ಲಿ ಮುಂದುವರೆಯಲು ಶ್ರೀ ದೇವರು ಅನುಗ್ರಹಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.