
ಕನ್ನಡ ಟೀಚರ್ ವಿದ್ಯಾರ್ಥಿಗಳಿಗೆ ಹಲಸಿನ ಬೀಜ (ಪೆಲತ್ತರಿ ) ವಿಷಯವಾಗಿ ಎರಡು ಪುಟಗಳಿಗೆ ಮೀರದಂತೆ ಪ್ರಬಂಧ ಬರೆಯಲು ಹೇಳುತ್ತಾರೆ. ತಿಮ್ಮನು ಬರೆಯಲಾರಂಭಿಸಿದ. ಕನ್ನಡ -ತುಲು ಭಾಷೆ ಮಿಶ್ರಣ ಮಾಡಿ ಹೀಗೆ ಬರೆದ.

ಪೆಲತ್ತರಿಯು ಬಡವರ ಬಂಧು ಎಂದು ಹೇಳಿದರೆ ತಪ್ಪಾಗಲಾರದು. ನಾವು ಶಾಲೆ ಬಿಟ್ಟು ಮನೆಗೆ ಹೋಗಿ ತಿಪ್ಪಿಯಲ್ಲಿ ತಿನ್ನುವ ಪೆಲತ್ತರಿ ರುಚಿ ಅಧ್ಭುತವೋ ಅಧ್ಭುತ. ಪೆಲತ್ತರಿಯನ್ನು ಬೇರೆ ಬೇರೆ ಯಾಗಿ ಬಗೆ ಬಗೆಯ ರುಚಿಗಳಲ್ಲಿ ತಿನ್ನಲು ಬರುತ್ತದೆ. ಇದನ್ನು ಸಿಪ್ಪೆ ಸಹಿತ ಗೆಂಡದಲ್ಲಿ ಕಾಯದ್ ತಿಂದರೆ ಒಂದು ರುಚಿ ಆದರೆ ಮಣ್ಣಿನ ಓಡಿನಲ್ಲಿ ಹುರಿದು ತಿಂದರೆ ಇನ್ನೊಂದು ರುಚಿ. ಸಿಪ್ಪೆ ಸಹಿತ ಮತ್ತು ರಹಿತ ಬೇಯಿಸಿ ತಿಂದಾಗ ವಿವಿಧ ರುಚಿಯಲ್ಲಿರುತ್ತದೆ. ಬೇಯಿಸಿದ ಪೆಲತ್ತರಿಯನ್ನು ಎರಡು ಹೋಳುಮಾಡಿ ಬೇಯಿಸಿದ ಕೆರೆಂಗ್ ಪೂಲು ಒಡನೆ ತೆಂಗಿನ ಎಣ್ಣೆ ಯಲ್ಲಿ ನೆಸಲ್ ಕೊಟ್ಟು ಅದಕ್ಕೆ ತಾರಾಯಿ ಪೂವು ಹಾಕಿ ತಿಂದಾಗ ಖುಷಿಯೇ ಖುಷಿ. ವರ್ಣಿಸಲು ಆಗದ ರುಚಿ. ಇದು ಪಿಜ್ಜ ಪಿಜ್ಜಿ ಕಾಲದಿಂದಲೂ ಮಾಡುವ ವಿಶೇಷವಾದ ತಿಂಡಿ. ಅಂದು ಬ್ರಿಟಿಷರು ಇದರ ರುಚಿ ನೋಡಿ ಸೂಪರ್ ಟೇಸ್ಟ್ ಎನ್ನುತ್ತಿದ್ದರಂತೆ.

ನಮ್ಮ ಅಜ್ಜ ಹೇಳುವಂತೆ ಪೆಲತ್ತರಿಯು ಸರ್ವ ರೋಗಗಳಿಗೆ ದಿವ್ಯ ಔಷಧ. ನರ ದೌರ್ಬಲ್ಯ ಹೋಗಲಾಡಿಸಿ ಸಂತಾನ ಪ್ರಾಪ್ತಿ ಆಗುವುದಂತೆ.ವಾಯು ಬಾಧೆಯಿಂದ ಬಳಲುವವರಿಗೆ ಪೆಲತ್ತರಿಯು ಅಮೃತವಂತೆ. ಯಾವುದೇ ಅಡೆತಡೆ ಇಲ್ಲದೆ ಆರಾಮವಾಗಿ ಇರುವರು ಎಂದು ಅಜ್ಜ, ಅಜ್ಜಿ ಅಲ್ಲದೆ ಹಿರಿಯರೂ ಹೇಳುತ್ತಾರೆ.”
ತಿಮ್ಮನ ಪೆಲತ್ತರಿಯ ಪ್ರಬಂಧಕ್ಕೆ ನೀವೇ ಅಂಕ ಕೊಡಬೇಕು !
ಇ.ಗೋ.ಭಂಡಾರಿ, ಕಾರ್ಕಳ.