January 18, 2025
peperere perere

ಸುಮಾರು 10 ವರ್ಷದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ನಾಟಕಗಳ ಪ್ರದರ್ಶನಗಳು ಉತ್ತುಂಗದಲ್ಲಿತ್ತು , ಜೀವನದ ಜಂಜಾಟದಲ್ಲಿ ಬಳಲಿದ ಜನತೆಗೆ 3 ಗಂಟೆಯ ಮನರಂಜನೆಯು ತುಳು ನಾಟಕಗಳಲ್ಲಿ ದೊರಕುತಿತ್ತು. ಕ್ರಮೇಣ ತುಳು ಸಿನಿಮಾಗಳು ಬರಲು ಪ್ರಾರಂಭವಾಯಿತು. ತುಳು ನಾಟಕಗಳಲ್ಲಿ ಜನರನ್ನು ರಂಜಿಸಿದ ನಟರು ತುಳು ಸಿನಿಮಾದಲ್ಲೂ ನಟಿಸಲು ಪ್ರಾರಂಭಿಸಿದರು। ಒಂದು ಸಿನಿಮಾ ಹಿಟ್ ಆಗುತ್ತಿದ್ದಂತೆ , ಸಾಲು ಸಾಲಾಗಿ ಅನೇಕ ತುಳು ಸಿನಿಮಾಗಳು ಬಿಡುಗಡೆಯಾದವು. ಆದರೆ ಕೆಲವೇ ಕೆಲವು ಚಿತ್ರಗಳು ಜನರ ಮನದಲ್ಲಿ ಉಳಿಯುವಂತಹ ಪ್ರದರ್ಶನ ಕೊಟ್ಟವು.
 
ಇದೀಗ ಭಂಡಾರಿ ಸಮಾಜದ ಯುವಕನೋರ್ವನ ನಿರ್ಮಾಣದೊಂದಿಗೆ ಇನ್ನೊಂದು ಹೊಸ ತುಳು ಸಿನಿಮಾ ತಯಾರಾಗಿ ಬಿಡುಗಡೆಗೆ ಸಿದ್ಧಗೊಂಡಿದೆ.
 
ಹೌದು , ಯಾವುದೇ ನಾಟಕ ಅಥವಾ ಸಿನಿಮಾಕ್ಕೆ ಸೂಕ್ತ ಹೆಸರು ಹುಡುಕುವುದೇ ಕಷ್ಟದ ಕೆಲಸ , ಸಿನಿಮಾದ ಹೆಸರು ಊರೆಲ್ಲಾ ಸದ್ದು ಮಾಡಬೇಕೆನ್ನುವುದು ಎಂಬುದು ತಂಡದ ಆಶಯವಾಗಿರುತ್ತದೆ. ಆದರೆ ಸದ್ದನ್ನೇ ಸಿನಿಮಾದ ಹೆಸರನ್ನಾಗಿಸಿದ್ದು ವಿಶೇಷ.
 
 ಈಗ ನಾನು ಹೇಳ ಹೊರಟಿರುವುದು ಚಿತ್ರದ ಸಂಪೂರ್ಣ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿರುವ “ಪೆಪ್ಪೆರೆರೆ ಪೆರೆರೆರೆ” ತುಳು ಚಲನಚಿತ್ರದ ಬಗ್ಗೆ.  ಈ ಚಿತ್ರದ ನಿರ್ಮಾಪಕರು ನಿಶಾನ್ ಕೆ. ಭಂಡಾರಿ ಮತ್ತು ವರುಣ್ ಸಾಲ್ಯಾನ್ , ಇದರ ನಿರ್ದೇಶಕರು ಶೋಭರಾಜ್ ಪಾವೂರು. “ಏಸ” ತುಳು ಚಲನಚಿತ್ರಕ್ಕೆ ಚಿತ್ರಕಥೆ ಬರೆದು  ಹಾಗೂ DK ಬೋಸ್ ನಲ್ಲಿ ನಟಿಸಿ ಪ್ರಸಿದ್ಧರಾಗಿರುವ ಶೋಭರಾಜ್  “ಪೆಪ್ಪೆರೆರೆ ಪೆರೆರೆರೆ” ಚಲನಚಿತ್ರವನ್ನು ವಿಭಿನ್ನವಾಗಿ ನಿರ್ದೇಶಿಸಿದ್ದಾರೆ . ಯಾವುದೇ ವ್ಯಕ್ತಿಯ ಪ್ರಸ್ತುತ ಪರಿಸ್ಥಿತಿಗೆ ಆತನೇ ಜವಾಬ್ದಾರ , ಇನ್ನೊಬ್ಬ ವ್ಯಕ್ತಿಯು ನಮಗೆ ಸಹಕಾರ ನೀಡಬಹುದು ಅದನ್ನು ಉಪಯೋಗಿಸಿಕೊಂಡು ಹೇಗೆ ನಮ್ಮ ಜೀವನದಲ್ಲಿ ಮುಂದುವರಿಯಬೇಕು ಮತ್ತು ಆ ಮೂಲಕ ಯಾವ ರೀತಿ ಯಶಸ್ಸು ಕಾಣಬೇಕು ಎನ್ನುವುದನ್ನು ನಾವೇ ನಿರ್ಧರಿಸಬೇಕು. ನಮ್ಮ ಪ್ರಸಕ್ತ  ಸ್ಥಿತಿಗೆ  ಇನ್ನೊಬ್ಬನನ್ನು ಹೊಣೆಗಾರರನ್ನಾಗಿಸಬಾರದೆಂದು ಈ ಚಿತ್ರದ ಸಾರಾಂಶ.
ತುಳು ಚಿತ್ರರಂಗದ ಮೇರು ನಟರೆಲ್ಲರೂ ಇದರಲ್ಲಿ ಅಭಿನಯಿಸಿದ್ದಾರೆ. ನಟರಾದ ನವೀನ್ ಡಿ ಪಡೀಲ್ , ಅರವಿಂದ ಬೋಳಾರ್ , ಭೋಜರಾಜ್ ವಾಮಂಜೂರು , ಸಾಯಿಕೃಷ್ಣ ಕುಡ್ಲ , ಸತೀಶ್ ಬಂದಲೆ , ಜೆ ಪಿ ತೂಮಿನಾಡು , ಬಂಟ್ವಾಳ ಜಯರಾಮ್ ಆಚಾರ್ಯ , ಉಮೇಶ್ ಮಿಜಾರ್ ಇವರೆಲ್ಲರ ನಟನೆ ನಿಮ್ಮನ್ನು ಎದ್ದು ಬಿದ್ದು ನಗುವಂತೆ ಮಾಡಲಿದೆ.
ಇದೆಲ್ಲಕ್ಕಿಂತಲೂ ವಿಶೇಷವಾಗಿ ಭಂಡಾರಿ ಸಮಾಜದ 3 -4 ಹುಡುಗರಿಗೆ ನಿಶಾನ್ ಭಂಡಾರಿ ಅವಕಾಶ ನೀಡಿದ್ದಾರೆ.  ನೀತಿ ಕಿರು ಚಲನಚಿತ್ರದ ಮೂಲಕ ಹೆಸರುಗಳಿಸಿರುವ ದೀಕ್ಷಿತ್ ಭಂಡಾರಿ ಉಜಿರೆ , ನಿತಿನ್ ಭಂಡಾರಿ ಬಜಾಲ್ ಇವರಲ್ಲಿ ಪ್ರಮುಖರು. ಒಟ್ಟಿನಲ್ಲಿ ನಲಿಪುನಕುಲೇ ಉರಿಪೆರೆ (ಕುಣಿಯುವವರೇ ಊದುವವರು) ಎಂಬಂತೆ ಈ ಚಲನಚಿತ್ರ ಪ್ರೇಕ್ಷಕರ ಮನತಣಿಸುವುದಂತೂ ಶತಸಿದ್ಧ.
ಬಹುಪಾಲು ಹಾಸ್ಯ ,ಹೊಟ್ಟೆ ಹುಣ್ಣಾಗಿಸುವ ಸಂಭಾಷಣೆಗಳು , ಅಂತಿಮವಾಗಿ ಸಮಾಜಕ್ಕೊಂದು ಉತ್ತಮ ಸಂದೇಶವನ್ನು ಈ ಚಿತ್ರ ಕೊಡಲಿದೆ , ಅದೇನೆಂಬುದನ್ನು ನಾವು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು.
ಸಿನಿಮಾ ಶೀಘ್ರದಲ್ಲೇ ಚಿತ್ರಮಂದಿರಕ್ಕೆ ಬರುವ ನಿಟ್ಟಿನಲ್ಲಿ ತಂಡ ಶ್ರಮ ವಹಿಸುತ್ತಿದೆ , ನಮ್ಮ ನಿಮ್ಮ ನಿರೀಕ್ಷೆ ಆದಷ್ಟು ಬೇಗ ನೆರವೇರಲಿದೆ.
Nishan Bhandary
 
 
Nithin Bhandary
Nithin Bhandary
 
Deekshith Bhandary
ಮಾರ್ಚ್ 7, 2021 ಭಾನುವಾರ ಮಧ್ಯಾಹ್ನ 3ರಿಂದ ಮೂರು ದಿನಗಳ ಕಾಲ streaming ಇದೆ. ಇದೇ ಪ್ಲಾಟ್ ಫಾರಂ ನಲ್ಲಿ ₹199 ಕ್ಕೆ ಟಿಕೆಟ್ ಕೂಡಾ ಲಭ್ಯ ಇದೆ. ಥಿಯೇಟರ್ನಲ್ಲಿ ಸಿನಿಮಾ ಬಿಡುಗಡೆ ಆದಾಗ ಇದೇ ಟಿಕೆಟ್ ನಲ್ಲಿ ಉಚಿತವಾಗಿ ಸಿನಿಮಾ ನೋಡಬಹುದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ನಮ್ಮ ಕುಡ್ಲ ಟಾಕೀಸಿನಲ್ಲಿ 120₹ & 160₹ ನೀಡಿ ವೀಕ್ಷಿಸಬಹುದು.
 
ಚಲನಚಿತ್ರರಂಗಕ್ಕೆ ನಿರ್ಮಾಪಕರಾಗುವ ಮೂಲಕ ಪಾದಾರ್ಪಣೆಗೈದ ಮಂಗಳೂರಿನ ಭಂಡಾರಿ ಯುವಕ ನಿಶಾನ್ ಕೆ. ಭಂಡಾರಿ ನೀರುಮಾರ್ಗ “ಪೆಪ್ಪೆರೆರೆ ಪೆರೆರೆರೆ” ತುಳು ಚಲನಚಿತ್ರದ ಮೂಲಕ ಯಶಸ್ಸು ಗಳಿಸಲಿ , ಚಿತ್ರ ನೂರಕ್ಕಿಂತಲೂ ಅಧಿಕ ದಿನ ಪ್ರದರ್ಶನಗೊಂಡು ದಾಖಲೆ ನಿರ್ಮಿಸಲಿ ಎಂದು ಭಂಡಾರಿ ವಾರ್ತೆ ಮನದುಂಬಿ ಹಾರೈಸುತ್ತದೆ.
 

ವರದಿ : ಕುಶಲ್ ಭಂಡಾರಿ ಬೆಂಗಳೂರು

Leave a Reply

Your email address will not be published. Required fields are marked *