ತುಲುನಾಡಲ್ಲಿ ಕಾಪು ಕಲ್ಲು(ಕಾಯುವ ಕಲ್ಲು), ಪೂಕಲ್ಲ್, ಪೂಕಲೆ, ಪೂಕರೆ ಎಂದರೆ ಬೃಹತ್ ವಿಶಾಲವಾದ ಗದ್ದೆಯ ಮಧ್ಯದಲ್ಲಿ ಅಂದಿನ ರೈತರು ಇಡುತ್ತಿದ್ದ ಬೇರೆ ಬೇರೆ ಮಾದರಿಯ ಹೆಸರಿನ ಕಾಪು. ಅಂದರೆ ಕಾಯುವ ಚಿತ್ರಣಗಳು ಚಿತ್ರಗಳು.
ಕಾಪು ಕಲ್ಲು: ವಿಶಾಲವಾದ ಬೃಹತ್ ಬಲುದೊಡ್ಡ ಗದ್ದೆಗಳ ಮಧ್ಯದಲ್ಲಿ ತುಲುನಾಡಿನಾದ್ಯಂತ ಈ ನಮೂನೆಗಳ ಕಲ್ಲುಗಳು ಕಂಡು ಬರುತ್ತದೆ. ಇದರ ಉದ್ದೇಶ ಏನೆಂದು ಹಲವರಿಗೆ ತಿಳಿದಿರುವುದಿಲ್ಲ. ಈ ಕಲ್ಲಿಗೆ ಅಂದು ಕಾಪು ಕಲ್ಲು ಎಂದು ಕರೆಯುತ್ತಿದ್ದರು. ಕಾಪು ಕಲ್ಲು ಎಂದರೆ ಕಾಯುವ ಕಲ್ಲು ಎಂದರ್ಥ. ಗದ್ದೆಗಳ ಮಧ್ಯ ಭಾಗದಲ್ಲಿ ಕಾಪು ಇಡುವ ಕ್ರಮ ಸಂಪ್ರದಾಯ ಇದೆ. ಪ್ರತಿ ವರ್ಷ ಗದ್ದೆಗಳ ಮಧ್ಯ ಭಾಗವನ್ನು ಅಳೆಯಲು ಕಷ್ಟವಾಗುತ್ತದೆ. ಈ ಕಾರಣಕ್ಕಾಗಿ ಗದ್ದೆಯ ಉದ್ದ ಅಗಲವನ್ನು ಹಗ್ಗದಿಂದ ಅಳೆದು ಮಧ್ಯಕ್ಕೆ ಶಾಶ್ವತವಾಗಿ ಕಲ್ಲು ಹಾಕಿ ಇಡುವುದು. ಇದರಿಂದ ಪ್ರತಿವರ್ಷ ಕಾಪು ಇಡಲು ಮಧ್ಯ ಭಾಗವನ್ನು ಅಳೆಯುವ ಕೆಲಸ ತಪ್ಪುತ್ತದೆ. ಈ ಕಲ್ಲಿನ ಮೇಲೆ ಬೇರೆ ಬೇರೆ ವಿವಿಧ ಕಾಪುಗಳನ್ನು ಗದ್ದೆಗಳ ನಾಟಿ,ಬಿತ್ತನೆ ಆದ ನಂತರ ಇಡುತ್ತಾರೆ. ‘ ಕಾಪು ಕಲ್ಲ್ ‘ ಎಂಬ ಪದದ ‘ಕಾ’ ಅಕ್ಷರವನ್ನು ಮರೆತು ‘ಪುಕಲ್ಲ್ ‘ , ‘ಪೂಕಲ್ಲ್’ ಎಂದರು.
ಪೂಕಲೆ: ಅಡಿಕೆ ಮರದ ಸಲಾಕೆ (ತಲಕೆ)ಗಳಿಂದ ಅಟ್ಟಣಿಗೆ (ಅಟ್ಟೊಲಿಗೆ)ಯನ್ನು ಚಿತ್ರದಲ್ಲಿ ಇರುವಂತೆ ತಯಾರಿಸಿ ಅದಕ್ಕೆ ಕಾಡು ಹೂವುಗಳಾದ ಕೇಪುಲ, ತೇರು ಹೂವು, ನೆಕ್ಕರೆ ಹೂವು, ಕುದ್ಕ ಹೂವು ಇತ್ಯಾದಿ ಹೂವುಗಳಿಂದ ಐತ್ತ(ಶೃಂಗಾರ) ಮಾಡಿದ ಈ ಪೂಕರೆ(ಈಗ ಈ ಹೆಸರಿನಲ್ಲಿ ಕರೆಯುವರು)ಯನ್ನು ಗದ್ದೆಯಲ್ಲಿ ನೇರವಾಗಿ ನೆಡುತ್ತಾರೆ. ಆದಿ ಆರಂಭದಲ್ಲಿ ಈ ಚಿತ್ರದಲ್ಲಿ ಕಾಣುವಂತೆ ಇದನ್ನು ‘ಕಂಡೊಗು ಅಟ್ಟೊಲಿಗೆ ದೀಪುನು’ ಅಥವಾ ‘ಕಂಡೊಗು ಅಟ್ಟೊಲಿಗೆ ಪಾಡುನು'(ಅಟ್ಟಣಿಗೆ ಇಡುವುದು ಅಥವಾ ಹಾಕುವುದು)ಎಂದಿದ್ದರು. ಈ ಕಾಲದಲ್ಲಿ ಈ ಅಟ್ಟಣಿಗೆಗೆ ಹೂಗಳಿಂದ ಶೃಂಗಾರ ಅಲಂಕಾರ ಮಾಡುವ ಪದ್ಧತಿ ಇರಲಿಲ್ಲ. ನಂತರದ ಕಾಲದಲ್ಲಿ ಬದಲಾವಣೆ ಆದಂತೆ ಅಟ್ಟಣಿಗೆಗೆ ಬಗೆ ಬಗೆಯ ಕಾಡು ಹೂವುಗಳಿಂದ ವಿವಿಧ ಶೈಲಿಯ ಅಲಂಕಾರ ಶೃಂಗಾರ ಮಾಡಿದರು. ಆಗ ಆ ಅಟ್ಟಣಿಗೆಗೆ ಒಂದು ರೀತಿಯ ಕಲೆ(ಕಳೆ)ಬಂದು ಬಿಡ್ತು. ವಾವ್ ‘ಪೂ ಕಲೆ’ (ಹೂವು ಕಳೆ) ಎಂದರು. ಆ ಹೂವಿನ ಕಳೆಯೇ “ಪೂ ಕಲೆ” ಎಂದಾಯಿತು. ನಂತರದಲ್ಲಿ ಕ್ರಮೇಣ ಪೂಕಲೆ ‘ಪೂಕರೆ’ಎಂದಾಯಿತು. ತುಲು ಭಾಷೆಯಲ್ಲಿ ‘ಲ’ ಕಾರಕ್ಕೆ ‘ರ’ಕಾರ ಮತ್ತು’ರ’ ‘ಕಾರಕ್ಕೆ ‘ಲ’ಕಾರ’ ಬಂದಿರುವ ಹಲವು ಪದಗಳು ಸಿಗುತ್ತದೆ.(ಬಳಿ-ಬರಿ, ಅಲಿಂಡ್-ಅರಿಂಡ್). ನಂತರದ ಕಾಲದಲ್ಲಿ ಅಟ್ಟಣಿಗೆಗೆ ಬಣ್ಣ ಬಣ್ಣದ ಬಟ್ಟೆಗಳನ್ನು ಸುತ್ತಿ ಹೂವಿನ ಆಕೃತಿಯನ್ನು ಮಾಡಿದರು. ಆ ಕಲೆಯೇ ಹೂವಿನ ಕಲಾಕೃತಿ.ಹೂವಿನಂತೆ ರಚಿಸಿದ ಬಟ್ಟೆಯ ಆಕೃತಿಯನ್ನು ಕಲೆಯನ್ನು ” ಪೂ ಕಲೆ ” ಎಂದರು. ಕ್ರಮೇಣವಾಗಿ “ಪೂಕರೆ” ಎಂದರು. ನಮ್ಮ ಪೂರ್ವಜರು ಅದ್ಭುತವಾದ ಉದ್ದೇಶ ಇಟ್ಟು ಕೊಂಡು ಪೂಕಲೆಯನ್ನು(ಅಟ್ಟಣಿಗೆ)ಪರಿಚಯಿಸಿರುವರು. ಈ ಪೂಕಲೆ ಹೆಸರಿನಲ್ಲಿ ಕಂಬುಲ, ಬೂತೊಗಳು, ದೇವರು ಗಳು ಎಲ್ಲಾ ನಂತರದ ಕಾಲದಲ್ಲಿ ಬದಲಾವಣೆ ರೂಪದಲ್ಲಿ ಬಂದಿರುತ್ತದೆ. ಪೂಕಲೆಗೆ ಸಂಬಂಧ ಪಟ್ಟಿರುವುದ್ದಿಲ್ಲ. ಬೃಹತ್ ಗದ್ದೆಯಲ್ಲಿ ಬಿತ್ತನೆ, ನಾಟಿ ಆದ ನಂತರ ಆ ಗದ್ದೆಗಳ ಹತ್ತಿರ ಇರಲು ಕಷ್ಟ. ಈ ಎತ್ತರದ ಅಟ್ಟಲಿಗೆಯನ್ನು ಗದ್ದೆಯ ಮಧ್ಯದಲ್ಲಿ ಇಟ್ಟರೆ ಇಲ್ಲವೇ ಹಾಕಿದರೆ ಮೃಗಗಳು, ಪಕ್ಷಿಗಳು ಈ ಗದ್ದೆಯ ಪಕ್ಕಕ್ಕೆ ಬರುವುದಿಲ್ಲ. ಯಾವನೋ ಮೈ ಸಂದಾಯ(ಬೃಹತ್ ಶರೀರದ ಮಾನವ)ನಿಂತು ಕಾಯುತ್ತಿ ದ್ದಾನೆ ಎಂದು ಗದ್ದೆಯ ಹತ್ತಿರ ಅವುಗಳು ಪ್ರವೇಶಿಸುವುದ್ದಿಲ್ಲ. ಈ ಅಟ್ಟಣಿಗೆ ಇಡುವಾಗ ಮನಸ್ಸಲ್ಲೇ “ಈ ಕಾಪು”(ನೀನು ಕಾಯು)ಎಂದು ಹೇಳುವರು. ಬೆಳೆಯಿಸಿದಬೆಳೆಯನ್ನು ಪ್ರಾಣಿ ಪಕ್ಷಿಗಳಿಂದ ಈ ‘ಪೂಕರೆ’ ಕಾಯುತ್ತದೆಎಂಬ ನಂಬಿಕೆ ಅಂದಿನವರಾಗಿತ್ತು. ಪೂಕಲೆ ಅಥವಾ ಪೂಕರೆ ಎಂದರೆ ಕಾಯುವ(ಕಾಪು) ಸಾಧನ ವಿನಹ ಬೇರೇನೂ ಮಹತ್ವ ಇದರಲ್ಲಿ ಇರುವುದಿಲ್ಲ. ನಂತರದ ಕಾಲದಲ್ಲಿ ಈ ಪೂಕರೆಯಲ್ಲಿ ನಾಗ,ಬೂತೊಗಳು, ಕಂಬುಲ ದೇವರು, ರಾಜರು, ಗುತ್ತು ಇತ್ಯಾದಿಗಳನ್ನು ಜೋಡಿಸಿದರು.ಅದರ ಮೂಲ ಅರ್ಥ ,ಉದ್ದೇಶ,ಮಹತ್ವವನ್ನು ಮರೆತರು.
ಕಾಪು(ಕಾಯು) : ಬೀಜ ಬಿತ್ತನೆ ಅಥವಾ ನಾಟಿ ಆದ ಮೇಲೆ ಗದ್ದೆಯ ಮಧ್ಯದಲ್ಲಿ ‘ಕಾಪು'(ಕಾಯು)ಇಡುವ ಪದ್ಧತಿ ತುಲುನಾಡಿ ನಲ್ಲಿದೆ. ಇಲ್ಲಿ ಬೇರೆ ಬೇರೆ ಗಿಡ ಮರಗಳ ಗೆಲ್ಲುಗಳನ್ನು ಒಟ್ಟುಗೂಡಿಸಿ ಸೂಡಿ ಕಟ್ಟಿ ಗದ್ದೆಗಳ ಮಧ್ಯದಲ್ಲಿ ಇಡುವುದು. ಗದ್ದೆ ಸ್ವಲ್ಪ ವಿಶಾಲವಾಗಿದ್ದರೆ ಅಂತಹ ಗದ್ದೆಗೆ ‘ತೂಂಕಲ್’ (ತೂಗಾಡುವ ಕಲ್ಲು)ಎಂಬ ಹೆಸರಿನ ‘ಕಾಪು’ ಇಡುತ್ತಿದ್ದರು. ಇಲ್ಲಿ ಐದಾರು ಅಡಿಯ ಮೂರು ಮರದ ಸಲಾಕೆಗಳನ್ನು ತ್ರಿಕೋನವಾಗಿ ಕಟ್ಟುವುದು. ಮೇಲೆ ಬೇರೆ ಬೇರೆ ಜಾತಿಯ ಗಿಡ ಮರಗಳ ಗೆಲ್ಲುಗಳನ್ನು ಜೋಡಿಸುವು ದು.ಕೆಳ ಭಾಗದಲ್ಲಿ ಒಂದು ಕಲ್ಲನ್ನು ತೂಗುವಂತೆ ನೇತಾಡಿ ಸುವುದು. ಇದಕ್ಕೆ ‘ತೂಂಕಲ್ಲ್’ಎಂದು ಕರೆದರು. ಈ ರೀತಿಯ ಕಾಪುವನ್ನು ‘ತೂಂಕಲ್ ಕಾಪು’ ಎಂದು ಕರೆದರು. ಇದನ್ನು ಗದ್ದೆಯಲ್ಲಿ ಬಿತ್ತನೆ ಅಥವಾ ನಾಟಿ ಆದ ನಂತರ ಮಧ್ಯದಲ್ಲಿ ಇಡುವುದು. ಇದನ್ನು ಒರ್ವನೇ ಹೊತ್ತು ಇಡು ವುದು. ಈ ಕಾಪು ಮಗುಚಿ ಬೀಳದಂತೆ ಕಲ್ಲನ್ನು ನೇತು ಹಾಕುವುದು.
ಇತರ ಕಾಪುಗಳು ಎಂದರೆ ಬಾಳೆ ಗಿಡ ಹಾಕುವುದು. ಕಾಸರಕ್ಕ ಮರದ ಕನೆ,ಮುಂಡೇವು ಇತ್ಯಾದಿ. ಬೃಹತ್ ವಿಶಾಲವಾದ 20-30 ಮುಡಿ ಬೀಜ ಸಾಮರ್ಥ್ಯದ ಗದ್ದೆಗಳಿಗೆ ಮೇಲಿನ ಸಣ್ಣ ಸಣ್ಣ ಕಾಪುಗಳು ಸಾಲವು. ಅವುಗಳು ದೂರಕ್ಕೆ ಕಾಣದು. ಅದಕ್ಕೆ ಬಲು ದೂರ ಕಾಣುವಂತೆ ಎತ್ತರದ ಪೂ ಕಲೆ (ಹೂ ಕಳೆ)ಅಥವಾ ಪೂಕರೆ ಎಂಬ ಅಡಿಕೆ ಮರದ ಸಲಾಕೆಯಲ್ಲಿ ತಯಾರಿಸಿ ಗದ್ದೆಯಲ್ಲಿ ಇಟ್ಟರು. ಕಂಬುಲದ, ರಾಜನ, ಗುತ್ತು ಮನೆಗಳ ಗದ್ದೆಗಳು ಎಂದರೆ ಅದು ಬಹಳಷ್ಟು ದೊಡ್ಡ ವಿಶಾಲವಾದ ಗದ್ದೆಗಳು ಆಗಿರುತ್ತದೆ .ಇದಕ್ಕೆ ಸಣ್ಣ ಕಾಪು ಹಾಕಿದರೆ ದೂರಕ್ಕೆ ಕಾಣಿಸುವುದಿಲ್ಲ. ಇದಕ್ಕೆ ದೊಡ್ಡ ಕಾಪು ಎಂದರೆ ಎತ್ತರದ ಪೂಕಲೆ ಕಾಪು ಹಾಕ ಬೇಕಾಗುತ್ತದೆ. ಇಂತಹ ದೊಡ್ಡ ಕಾಪು ಹಾಕುವ ಗದ್ದೆಗೆ ಪೂಕಲೆ ಕಂಬುಲ ಎನ್ನುವುದು. ಇಂತಹ ದೊಡ್ಡ ಗದ್ದೆಗಳಿಗೆ ಪೂಕಲೆ ಕಾಪು ಇಟ್ಟ ನಂತರವೇ ಬೀಜ ಬಿತ್ತನೆ ಇಲ್ಲವೇ ನಾಟಿ ಕೆಲಸ ನಡೆಯುತ್ತದೆ. ಬಿತ್ತನೆ, ನಾಟಿ ಆದ ನಂತರ ಕಾಪು ಇಟ್ಟರೆ ಬಿತ್ತಿದ ಬೀಜ ಅಥವಾ ನಾಟಿ ನಾಶವಾಗುತ್ತದೆ. ಇಂತಹ ದೊಡ್ಡ ಪೂಕಲೆಯನ್ನು ಗದ್ದೆ ಮಧ್ಯಕ್ಕೆ ಒಯ್ಯಲು 8-10 ಮಂದಿ ಬೇಕಾಗುತ್ತದೆ. ಕಾಲು ತುಳಿತಕ್ಕೆ ಬೀಜ, ನೇಜಿ ಹಾಳಾಗುತ್ತದೆ. “ಪೂಕರೆ” ಎಂದು ಕರೆಯುವುದು ತಪ್ಪು.”ಪೂಕಲೆ”ಎಂಬುದು ಸರಿಯಾಗಿ ಇದೆ. ತುಲುನಾಡ್ ಇಲ್ಲಿ ಸತ್ತವರಿಗೆ ಉತ್ತರ ಕ್ರಿಯೆ(ಬೊಜ್ಜ)ದಿನ ಅಟ್ಟಣಿಗೆ ತಯಾರಿಸಿ ಪೂಕಲೆ ನಿಲ್ಲಿಸುವ ಸಂಪ್ರದಾಯ ಇದೆ. ಇಲ್ಲಿ ಉತ್ತರ ಕ್ರಿಯೆ ನಡೆದಿದೆ ಎಂಬ ಸೂಚನೆ ಸಾರ್ವಜನಿಕರಿಗೆ ಇದರಿಂದ ತಿಳಿಯುತ್ತದೆ.
ಒಟ್ಟಾರೆ ಹೇಳುವುದಾದರೆ “ಪೂಕರೆ” ಪಾಡುನು ಅಥವಾ “ಪೂಕರೆ” ದೀಪುನು ಎಂದರೆ “ಕಾಪು”(ಕಾಯು)ಇಡುವುದು. ದೂರದಿಂದಲೇ ಈ ಚಿತ್ರಣ ಕಂಡು ಪ್ರಾಣಿ ಪಕ್ಷಿಗಳು ಗದ್ದೆಗೆ ಇಳಿಯಲು ಹೆದರುತ್ತವೆ.ಯಾರೋ ಅಲ್ಲಿ ಕಾಯುತ್ತಾ ಇದ್ದಾರೆ ಎಂದು ಅವುಗಳು ಗದ್ದೆ ಕಡೆಗೆ ಬರುವುದಿಲ್ಲ.
ಐ.ಕೆ.ಗೋವಿಂದ ಭಂಡಾರಿ , ಕಾರ್ಕಳ.
(ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೇಜರ್)