January 18, 2025
Independence day Feauture image

ಪ್ರಸ್ತುತ ಸಮಾಜದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರುಷ ತುಂಬಿತು. 75 ವರುಷದ ಮೊದಲು ಭಾರತ ಬ್ರಿಟಿಷ್ ಆಡಳಿತದಿಂದ ತತ್ತರಿಸಿ ಹೋಗಿತ್ತು. ಭಾರತದಲ್ಲಿ ಇರುವ ಬಡತನ,ಮೇಲು ಕೀಳು ಎಂಬ ತಾರತಮ್ಯ ಪರಸ್ಪರ ಒಗ್ಗಟ್ಟು ಇಲ್ಲದೆ ಇರುವುದರಿಂದ ಬ್ರಿಟಿಷರು ಸಾರ್ವಭೌಮವಾಗಿ ಮೆರೆದರು.ನಂತರ ಅವರ ದಬ್ಬಾಳಿಕೆ, ಕ್ರೌರ್ಯಗಳಿಂದ ರೋಸಿ ಹೋಗಿ ಸಹಸ್ರಾರು ದೇಶ ಪ್ರೇಮಿಗಳ ಸ್ವದೇಶಾಭಿಮಾನ ಹಾಗೂ ನಿರಂತರ ಹೋರಾಟದ ಪರಿಣಾಮವಾಗಿ, ವಿಶ್ವ ಸಮರಗಳಿಗಿಂತ ಭಿನ್ನವಾಗಿ ಸತ್ಯ, ಶಾಂತಿ, ಎಂಬ ಅಸ್ತ್ರಗಳನ್ನು ಹಿಡಿದು, ಗಾಂಧೀಜಿಯವರ ನೇತೃತ್ವದಲ್ಲಿ ಭಾರತೀಯರ ಹೋರಾಟ ಆಗಸ್ಟ್ 15, 1947 ರಂದು ಯಶಸ್ಸು ಕಂಡಿತು. ಗಾಂಧೀಜಿ ಹಾಗೂ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ನೆತ್ತರು ಮಳೆಯನ್ನೇ ಹರಿಸಿ ಮದ್ಯರಾತ್ರಿ ತ್ರಿವರ್ಣದ್ವಜವನ್ನು ಮುಗಿಲೇರಿಸಿದರು.

ಬ್ರಿಟೀಷರ ಕೈಗೊಂಬೆಯಾಗಿದ್ದ ಭಾರತೀಯರಿಗೆ ಶಾಶ್ವತವಾದ ನೆಲೆಯನ್ನು ಕಂಡುಕೊಳ್ಳುವಲ್ಲಿ ಯಶಸ್ಸು ದೊರೆಯಿತು. ಆಗಸ್ಟ್ 15 ಸ್ವಾತಂತ್ರ್ಯ ದಿನವನ್ನು ಭಾರತೀಯರೆಲ್ಲರೂ ತಮ್ಮ ಪ್ರಾಂತ್ಯ, ಜಾತಿ, ಮತ, ವರ್ಗಗಳ ಬೇಧಗಳಿಲ್ಲದೆ ಆಚರಿಸುವ ಹಬ್ಬ. ಇದೊಂದು ರಾಷ್ಟ್ರೀಯ ಹಬ್ಬ. ಭಾರತೀಯ ಏಕತೆಯ ಪ್ರತೀಕ. ಅಲ್ಲದೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಪ್ರಾಣವನ್ನು ತಮ್ಮ ದೇಶಕ್ಕಾಗಿ ಪಣಕಿಟ್ಟ ಮಹಾತ್ಮಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ನೆಹರೂ ಮುಂತಾದ ಸಾವಿರಾರು ಹೋರಾಟಗಾರರನ್ನು ನೆನೆಯುವ ದಿನ. ಭಾರತೀಯರ ಸ್ವಾಭಿಮಾನದ ಸುದಿನ. ಶತಮಾನಗಳ ದಾಸ್ಯದ ಸಂಕೋಲೆಯಿಂದ ಬಿಡುಗಡೆ ಪಡೆದ ಸಂತಸದ ದಿನ. ಇಡೀ ದೇಶದ ಜನರಿಗೆ ಆನಂದದ ದಿನ.

ಆದರೆ ಅಂದಿನ ಸ್ವಾತಂತ್ರ್ಯವನ್ನು ಇಂದಿಗೆ ಹೋಲಿಸಿದರೆ ಇಂದು ಸ್ವಾತಂತ್ರ್ಯ ದಿನಾಚರಣೆ ಎಂದರೆ ಹೆಸರು, ಪ್ರತಿಷ್ಠೆ , ಅಧಿಕಾರಕ್ಕಾಗಿ ಮಾತ್ರ ಎಂದೆನಿಸುವಂತಾಗಿದೆ, ಹೊರತು ಭಾರತೀಯರಿಗಲ್ಲ. ಇಂದಿಗೂ ಭಾರತ ಮಾತೆಯ ಮಕ್ಕಳಾದ ನಾವು ನೀವು ರಾಜಕೀಯದ ಕುತಂತ್ರಿಗಳ ಕೈ ಸೆರೆಯಾಗಿದ್ದೇವೆ. ಹಾಗಾದರೆ ನಮಗೆ ಸ್ವಾತಂತ್ರ್ಯ ಎಲ್ಲಿದೆ ? ಅಂದು ಬ್ರಿಟೀಷರು, ಇಂದು ನಮ್ಮವರೆ ಆದ ರಾಜಕಾರಣಿಗಳು ಭಾರತ ದೇಶವನ್ನು ಇಕ್ಕಟ್ಟಿನ ಪರಿಸ್ಥಿತಿಗೆ ಒಯ್ಯುತ್ತಿದ್ದಾರೆ. ಜಾತಿ,ಮತ, ಪಂಥ ಎಂದು ಜನರನ್ನು ವಿಕೇಂದ್ರೀಕರಣ ಮಾಡುತಿದ್ದಾರೆ. ಅಂದು ಗಾಂಧೀಜಿ ಅಹಿಂಸೆ, ಸತ್ಯ, ನ್ಯಾಯದ ಮೂಲಕ ಹೋರಾಡಿದ್ದಾರೆ. ಆದರೆ ಇಂದು ಎಲ್ಲಿ ನೋಡಿದರೂ ಅಸತ್ಯ, ಹಿಂಸೆ, ಅನ್ಯಾಯಗಳು ನಡೆಯುತ್ತಿದೆ. ಇದರಿಂದ ನಮ್ಮ ಅಂತ್ಯಕ್ಕೆ ನಾವೇ ಅಡಿಪಾಯ ಹಾಕಿಕೊಳ್ಳುತ್ತಿದ್ದೇವೆ.

ಅಂದು ಗಾಂಧೀಜಿ ತಮಗೆ ಯಾರಾದರೂ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುತ್ತಿದ್ದರು. ಆದರೆ ಇಂದು ನಮ್ಮನ್ನು ಯಾರಾದರೂ ಹೊಡೆಯುವುದು ಬೇಕಾಗಿಲ್ಲ. ಕಣ್ಣು ಬಿಟ್ಟು ನೋಡಿದರೆ ಅವರ ಮೇಲೆ ಯಾವಾಗ ಸೇಡು ತೀರಿಸುತ್ತೇವೆಯೋ ಎಂದು ಕ್ಷಣ ಗಣನೆ ಮಾಡುತ್ತಿದ್ದೇವೆ! ಹೀಗಾದಲ್ಲಿ ನಮಲ್ಲಿ ಐಕ್ಯತೆ, ಶಾಂತಿ ಮೂಡಲು ಸಾದ್ಯವೇ? ದೇಶ ಅಭಿವೃದ್ಧಿ ಆಗಲು ಸಾಧ್ಯವೇ? ಗಾಂಧಿ ತತ್ವಗಳು ಎಲ್ಲಿ ಹೋಯಿತು ? ಅವುಗಳನ್ನು ಗಾಳಿಗೆ ತೂರಿಬಿಡುತ್ತಿದ್ದೇವೆ ಅನಿಸುತ್ತಿಲ್ಲವೇ? ರಾಜಕೀಯ ಪಕ್ಷಗಳ ನಾಯಕರ ಮಾತು ಕೇಳಿ ಅಧಿಕಾರ, ಪದವಿ,ಅಂತಸ್ತು , ಧರ್ಮ ಎಂದು ಪರಸ್ಪರ ಕಚ್ಚಾಟ ಮಾಡಿಕೊಂಡು ಸರ್ವಶಾಂತಿಯ ಸರ್ವ ಜನಾಂಗದ ದೇಶವನ್ನು ನರಕ ಮಾಡುತ್ತಿದ್ದೇವೆ.
ಹೀಗೆ ನಮ್ಮಲ್ಲಿ ಒಗ್ಗಟ್ಟು ಇಲ್ಲ ಅಂತಾದರೆ ಬೇರೆ ದೇಶದವರಿಗೆ ಆಕ್ರಮಣ ಮಾಡಲು ಸುಲಭ ದಾರಿ ಮಾಡಿಕೊಟ್ಟಂತೆ ಆಗುವುದಿಲ್ಲವೇ.

ಯುವ ಪೀಳಿಗೆಗಳಾದ ನಾವು ನೀವು ಇಂದು ಪುನಃ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಬಂದೊಗಿದೆ. ಇದನ್ನು ತೊಲಗಿಸಲು ನಾವು- ನೀವು ಸನ್ನದ್ದರಾಗಬೇಕು. ಎದ್ದೇಳಿ ಯುವ ಜನರೇ ಸತ್ಯದ ಶಾಂತಿಯ ಮಾರ್ಗದಲ್ಲಿ ಹೋರಾಡೋಣ.

75ನೇ ಸ್ವಾತಂತ್ರ್ಯ ದಿನಾಚರಣೆಯು ಎಲ್ಲೆಲ್ಲೂ, ಎಲ್ಲರಲ್ಲಿಯೂ ಶಾಂತಿ ಪ್ರೀತಿ ಮೂಡಲಿ. ದೇಶ ಅಭಿವೃದ್ಧಿ ಪಥದತ್ತ ಸಾಗಲು ನಾವೆಲ್ಲರೂ ಜೊತೆಯಾಗಿ ಐಕ್ಯತೆಯಿಂದ ಸಾಗೋಣ ಎಂದು ಹಾರೈಸೋಣ.

ಜೈ ಹಿಂದ್.

✍️ ವನಿತಾ ಅರುಣ್ ಭಂಡಾರಿ ಬಜಪೆ

1 thought on “ಪ್ರಸ್ತುತ ಸಮಾಜದಲ್ಲಿ ಸ್ವಾತಂತ್ರ್ಯ ದಿನಾಚರಣೆ – ವನಿತಾ ಅರುಣ್ ಭಂಡಾರಿ ಬಜಪೆ

Leave a Reply

Your email address will not be published. Required fields are marked *