ಪ್ರೀತಿ ಭೇದಗಳ ಕೆಡವಿ
ಸುಡುಬಿಸಿಲ ಕಾಯಕದಲಿ
ಗಮಟು ವಾಸನೆಯ ಹೊಂದಿ
ನದಿ ನೀರು ಹರಿದಂತೆ ಹರಿಯುತ್ತಿದ್ದ
ಬೆವರು ಮೆತ್ತಿದ್ದ ಈ ಕಾಯ
ಘಮಸುವಾಸನೆಯ ಸೂಸುತ್ತಿದ್ದ
ನಿನ್ನ ಕಂಡು ಹಿಂಜರಿಕೆಯಾದದ್ದು ನಿಜ,
ಆಗಲೇ ನೀ ಕೊಟ್ಟ ಕಿರುನಗೆಯು
ಹಿಂಜರಿಕೆಯ ಹಾರಿಸಿದ್ದೂ ದಿಟ.
ಕೂಲಿ ಹಿಡಿದ ಕೈಗಳ ಸದೃಢ ಮೈಕಟ್ಟು
ಎದೆಯೆತ್ತರಿಸಿ ನಿಂತಾಗ
ಬಣ್ಣದ ಕಾರಿನಲ್ಲಿ ನಿನ್ನ ಕಂಡಾಗ
ಎತ್ತರಿಸಿದ ಎದೆಯು ಕುಗ್ಗಿದ್ದು ನಿಜ
ಅದೇ ಎದೆಯ ಮೇಲೆ
ನೀ ತಲೆಯೊರಗಿ ನಿಂತಾಗ
ನೇವರಿಸಿದ ಕೈಗಳು ಖುಷಿಸಿ
ಎದೆಯುಬ್ಬಿಸಿ ನಿಂತದ್ದು ದಿಟ.
ಕಾರ್ಮೋಡದಂತೆ ಕರಿದಾದ ಈ ನನ್ನ ಬಣ್ಣ
ಬಿಳ್ಮೋಡದಂತೆ ಕಣ್ಣು ಕೋರೈಸುವ
ನಿನ್ನ ಬಿಳುಪಿನ ಹೊಳಪಿಗೆ
ಬೆನ್ನು ಹಾಕಿ ನಿಂತು ಅಂಜಿದ್ದು ನಿಜ
ನೀ ಅಪ್ಪಿದ ಪರಿಗೆ ಅಂಜಿಕೆಯು ಹಾರಿ
ಬಣ್ಣಗಳು ಪರಿಧಿಯ ಮೀರಿದ್ದು ದಿಟ.
ಕೈ ಹಿಡಿಯುವ ಇಚ್ಚೆಯಿಂದ
ಕೈ ಎತ್ತಲು ಮುಂದಾದಾಗ
ಈ ಒರಟು ಕೈಗಳು ಕ್ಷಣ
ಮತಪಂಥವೆಂಬ ಬೃಹತ್ ಗೋಡೆ ಕಂಡು
ಹೆದರಿ ಕಂಪಿಸಿದ್ದು ನಿಜ.
ನನ್ನೊಂದಿಗೆ ಜೋಡಿಸಿದ್ದ ನಿನ್ನ
ಸುಕೋಮಲ ಕೈಗಳು ಅದನ್ನು ಕೆಡವಿ
ಮಾನವತೆಯ ಮೆರೆಸಿದ್ದು ದಿಟ.
ಹೇಳಿದವರು ಯಾರು
ಪ್ರೀತಿಯೆಂಬುದು ಮಾಯೆ !
ಕರೆದು ತಾ ಅವರನ್ನು ತಿಳಿಯಲಿ
ಮಾಯೆಯೊಳಗಿನ ಸುಂದರತೆಯನ್ನು
ಮಾನವತೆ ಎಲ್ಲ ಮೀರಿ ನಿಂತ ಪರಿಯನ್ನು
ಕಾಲಶಿವನ ಪ್ರೀತಿ ಭೇದಗಳ ಕೆಡವಿ.
✍️ ವಿಜಯ್ ನಿಟ್ಟೂರು