ನೇಹಾ ಮತ್ತು ಆಕಾಶ್ ಖಾಸಗಿ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರು. ನೇಹಾ ಸರಳ ಸುಂದರಿಯಾಗಿ ಹೆಚ್ಚು ಮೇಕಪ್ ಇಲ್ಲದೆ ಸುಂದರವಾಗಿ ಕಾಣುತ್ತಿದ್ದಳು. ಯಾರಲ್ಲೂ ಹೆಚ್ಚು ಮಾತುಕತೆ ಇರಲಿಲ್ಲ ಆಕಾಶ್ ಗೆ ನೇಹಾಳ ಮೇಲೆ ತುಂಬಾ ಪ್ರೀತಿ ಇತ್ತು ಆದರೆ ಅದನ್ನು ಅವಳಲ್ಲಿ ಹೇಳಲು ಭಯವಾಗುತ್ತಿತ್ತು. ಮದುವೆ ಅಂತ ಆದರೆ ಇವಳನ್ನೇ ಆಗುವುದು ಎಂದು ತೀರ್ಮಾನ ಮಾಡಿದ್ದನು . ತನ್ನ ಗೆಳೆಯ ಪೃಥ್ವಿಯಲ್ಲಿ ಹೇಳಿದ್ದನು. ಅದಕ್ಕೆ ಪೃಥ್ವಿ ನಿನಗೆ ವಿಷಯ ಗೊತ್ತಾ? ನೇಹಾಳಿಗೆ ಮದುವೆ ಆಗಿ ಒಂದು ಹೆಣ್ಣು ಮಗು ಇದೆ , ಮದುವೆ ಆಗಿ ಎರಡೇ ವರ್ಷಕ್ಕೆ ಗಂಡ ತೀವ್ರ ನ್ಯುಮೋನಿಯಾ ದಿಂದ ತೀರಿಕೊಂಡಿದ್ದಾರೆ. ನೀನೇನೋ ಅವಳನ್ನೇ ಮದುವೆ ಆಗುತ್ತೇನೆ ಅನ್ನುತ್ತೀ ನಮ್ಮ ಸಮಾಜದಲ್ಲಿ ವಿಧವೆಯನ್ನು ಮದುವೆಯಾಗುವುದು ಅಷ್ಟು ಸುಲಭವಾ ? ನಿನ್ನ ಅಮ್ಮ ಒಪ್ಪುತ್ತಾರಾ? ಯೋಚಿಸು ಎಂದನು. ಈ ಬಗ್ಗೆ ದಿನಾ ಆಕಾಶ್ ಯೋಚಿಸುತ್ತಿದ್ದ. ಅವಳ ಬಾಳು ಬೆಳಕಾಗಬೇಕು ಅಮ್ಮ ಒಪ್ಪುತ್ತಾರಾ? ಹೇಗೆ ಹೇಳುವುದು ನೇಹಾ ಒಪ್ಪುತ್ತಾಳ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದ. ಅಮ್ಮ ತುಂಬಾ ಸಲ ಆಕಾಶನಲ್ಲಿ ಕೇಳಿದ್ದರು ಈ ವರ್ಷ ಮದುವೆ ಆಗಬೇಕು 27 ವರ್ಷವಾಯಿತು ಬೇಡ ಬೇಡ ಎನ್ನುತ್ತೀ ಎನ್ನುತ್ತಿದ್ದರು. ಆ ದಿನ ಭಾನುವಾರ ರಜೆ, ತಿಂಡಿ ತಿನ್ನುವಾಗ ಅಮ್ಮ ‘ಆಕಾಶ್ ನಾನು ನೀನು ಹತ್ತಿರದ ದುರ್ಗಾದೇವಿಯ ಗುಡಿಗೆ ಹೋಗಿ ಬರೋಣ . ಸರಿಯಾಗಿ 11 ಗಂಟೆಗೆ ಹೋಗೋಣ ಎಂದರು.
ಇಲ್ಲ ಅಮ್ಮ ನೀವು ಹೋಗಿ ಬನ್ನಿ ನನಗೇಕೋ ಮನಸಿಲ್ಲ ಅಂದುಬಿಟ್ಟ. ಇಲ್ಲ ಆಕಾಶ್ ನಾನು ನನ್ನ ಬಾಲ್ಯದ ಗೆಳತಿಯಲ್ಲಿ ಮಾತು ಕೊಟ್ಟಿದ್ದೇನೆ ನನ್ನ ಮಗನನ್ನು ಕರೆದುಕೊಂಡು ಬರುತ್ತೇನೆ ಎಂದು , ನೀನು ಬರಲೇ ಬೇಕು ಅಂದರು. ಯಾಕೆ ಅಮ್ಮ!. ಆಕಾಶ್ ನಿನ್ನಲ್ಲಿ ಏನು ಮುಚ್ಚು ಮರೆ. ಅವಳ ಮಗಳನ್ನೂ ಕೂಡ ಗುಡಿಗೆ ಕರೆದುಕೊಂಡು ಬರಲು ಹೇಳಿದ್ದೇನೆ. ನೀವಿಬ್ಬರೂ ನೋಡಿ ಇಷ್ಟಪಟ್ಟರೆ ಮದುವೆ ಮಾಡೋಣ ಎಂದರು. ಆಕಾಶನಿಗೆ ಒಮ್ಮೆಲೇ ಭೂಮಿ ಅದುರಿದ ಹಾಗೆ ಆಯಿತು. ಅಮ್ಮ ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಮದುವೆ ಆದರೆ ಅವಳನ್ನೇ ಎಂದುಬಿಟ್ಟ. ಇಷ್ಟು ದಿನ ನಾನು ಕೇಳಿದಾಗ ಹೇಳದವನು ಇಂದು ಯಾಕೆ ಹೇಳುತ್ತೀ , ನಾನು ಅವರಲ್ಲಿ ಹೇಳಿ ಆಗಿದೆ ನೀನು ಈ ಹುಡುಗಿ ನೋಡು ಆ ಮೇಲೆ ನಾನು ಏನೋ ಕಾರಣ ಹೇಳಿ ಬೇಡ ಎನ್ನುತ್ತೇನೆ, ಈಗ ನೀನು ಬರಲೇ ಬೇಕು ಎಂದರು. ಆಕಾಶನಿಗೆ ನೇಹಾಳ ಮುಖ ನೆನಪಿಗೆ ಬಂದು ಕಣ್ಣೆಲ್ಲಾಮಂಜಾಯಿತು . ಬೆಳಿಗ್ಗೆ 11 ಗಂಟೆಗೆ ಗುಡಿಗೆ ಬಂದರು. ಆಕಾಶ್ ದೇವಿಯಲ್ಲಿ ನನ್ನ ನೇಹಾಳನ್ನೇ ಮದುವೆ ಆಗುವ ಹಾಗೆ ಮಾಡಮ್ಮಎಂದು ಕಣ್ಣು ಮುಚ್ಚಿ ಪ್ರಾರ್ಥನೆ ಮಾಡಿದನು. ಆಕಾಶ್ ಆಚೆ ಈಚೆ ನೋಡದೆ ಹೊರಗೆ ಮರದ ಕೆಳಗೆ ಕುಳಿತನು. ಅಮ್ಮ ಹತ್ತಿರ ಬಂದು ನೋಡು ಆಕಾಶ್ ಇವಳು ನನ್ನ ಬಾಲ್ಯದ ಗೆಳತಿ ಮಂಜುಳ ಎಂದರು. ಇವನು ನಮಸ್ತೆ ಎಂದಾಗ ಅವರೂ ನಮಸ್ತೆ ಹೇಳಿ ನನ್ನ ಮಗಳು ದೇವರಿಗೆ ಕೈ ಮುಗಿಯುತ್ತಿದ್ದಾಳೆ ಎಂದರು. ಆಕಾಶನಿಗೆ ಹೆಣ್ಣು ನೋಡುವ ತವಕ, ಕುತೂಹಲ ಯಾವುದೂ ಇರಲಿಲ್ಲ. ದೂರದಲ್ಲಿ ನೋಡುತ್ತಾನೆ.ನೇಹಾ ಮತ್ತು ಮುದ್ದಾದ ಹೆಣ್ಣು ಮಗು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಇವನಿಗೆ ಒಮ್ಮೆಲೇ ಹರ್ಷ ಪುಳಕ ರೋಮಾಂಚನವಾಯಿತು. ಅಮ್ಮನಲ್ಲಿ ನೇಹಾಳನ್ನು ತೋರಿಸಬೇಕು ಇವಳು ಹೇಳಿದ ಹುಡುಗಿ ಜೊತೆ ನೇಹಾಳನ್ನೂ ತೋರಿಸಬೇಕು. ಇಂದೇ ನೋಡುವ ಭಾಗ್ಯ ಬಂತಲ್ಲ ಎಂದು ಸಂತೋಷವೂ ಆಯಿತು. ನೇಹಾ ಮತ್ತು ಮಗು ನೇರವಾಗಿ ಆಕಾಶ್ ಕುಳಿತಲ್ಲಿಯೇ ಬಂದರು. ಆಕಾಶ್ ನಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಒಮ್ಮೆಲೇ ಮುಖವೆಲ್ಲಾ ಕೆಂಪಾಯಿತು. ಅಮ್ಮ ಆಕಾಶ್ ನೋಡಪ್ಪ ಇವಳೇ ನನ್ನ ಗೆಳತಿಯ ಮಗಳು ಎಂದಾಗ ಆಕಾಶ್ ನಿಗೆ ನಾನು ನೋಡಿದ ಹುಡುಗಿ ಅಮ್ಮ ಹೇಳಿದ ಹುಡುಗಿ ಒಂದೇ ಎಂದು ಎನಿಸಿ ಖುಷಿಯಲ್ಲಿ, ಅಮ್ಮ ನಾನು ನೋಡಿದ ಹುಡುಗಿ ಇವಳೇ ನನಗೆ ಒಪ್ಪಿಗೆ ಅಮ್ಮ ಎಂದ. ಆಗ ಅಮ್ಮ ಆಕಾಶ್ ನೀನು ಐದು ವರ್ಷದವನಿರುವಾಗ ನಿನ್ನ ಅಪ್ಪ ತೀರಿಕೊಂಡರು ನಂತರ ನಾನು ವಿಧವೆ ಎಂಬ ಬಿರುದಿನಲ್ಲೇ ದಿನ ಕಳೆಯಬೇಕಾಯಿತು. ಅದಕ್ಕೆ ನೇಹಾಳ ಬಾಳು ಹಾಗೆ ಆಗಬಾರದು ಎಂದೆನಿಸಿ ನಿನಗೆ ತೋರಿಸಿದೆ ಎಂದರು. ಆಕಾಶ್ ಮತ್ತು ನೇಹಾ ನಗುವಿನ ಮೂಲಕ ಪರಸ್ಪರ ಒಪ್ಪಿಗೆ ನೀಡಿದರು. ಇವರಿಬ್ಬರ ಬಾಳು ಆನಂದಮಯವಾಗಿತ್ತು.
✍🏻 ವಂದನಾ ,ಭಂಡಾರಿ