January 18, 2025
puddar6

ಕೊರಲ್ ಕಟ್ಟುವ ಹಬ್ಬದ ಜವಾಬ್ದಾರಿ ತಂದೆಯವರದ್ದಾಗಿದ್ದರೆ ‘ ಪುದ್ದರ್ ‘ಹಬ್ಬದ ಆಚರಣೆಯ ಜವಾಬ್ದಾರಿ ಅಂದು ತಾಯಿಯವರದ್ದಾಗಿತ್ತು.ಇಲ್ಲಿ ” ಪುದ್ದರಿ” ಎಂದರೆ ಹೊಸ ಅಕ್ಕಿ ಎಂದು.ಕೊಡಗಿನ ” ಪುತ್ತರಿ” (ಹುತ್ತರಿ-ಕನ್ನಡ)ಹಬ್ಬವೂ ತುಲುನಾಡ್ “ಪುದ್ದರಿ”ಅಥವಾ “ಪುದ್ದರ್”ಎಂದರೆ ಒಂದೇ ಆಗಿರುತ್ತದೆ.

 ಕೊಡಗಲ್ಲೂ , ತುಲುನಾಡಲ್ಲೂ ಈ ಹಬ್ಬಕ್ಕೆ ಮಾಂಸಾಹಾರ ನಿಷೇಧ ಆಗಿರುತ್ತದೆ. ತೆಲುಗು ಭಾಷೆಯಲ್ಲಿ ಹೊಸತು ಶಬ್ಧಕ್ಕೆ ‘ಕೊತ್ತ’ಎಂದಿದ್ದರೆ ತಮಿಲ್,ಮಲಯಾಲಂ ಭಾಷೆಗಳಲ್ಲಿ “ಪುತ್ತಿಯಾ”ಎನ್ನುವರು. ಕೊಡಗು ಭಾಷೆಯಲ್ಲಿ “ಪುತ್ತ”ಎಂದಿದ್ದರೆ ತುಲು ಭಾಷೆಯಲ್ಲಿ “ಪುದ್ದ”(ಅಪ್ಪಟ ತುಲು) ಎಂದಿದೆ.ಪುತ್ತ+ಅರಿ=ಪುತ್ತರಿ , ಪುದ್ದ+ಅರಿ=ಪುದ್ದರಿ ಆಯಿತು. ಪುದ್ದರಿ ಊಟವೇ ಪುದ್ದರ್ ಆಯಿತು. ಅಂದರೆ ಹೊಸ ಅಕ್ಕಿ ಊಟ..
     ಪುದ್ದರ್ ಮುಂಚಿನ ದಿನ ಮನೆ ಹಿತ್ತಿಲಿನಿಂದ ತಂದೆಯವರು ತರಕಾರಿಗಳನ್ನು ಕೊಯ್ದು ಮನೆಯಲ್ಲಿ ಸಂಗ್ರಹಿಸುತ್ತಿದ್ದರು. ಭರ್ಜರಿ ಊಟಕ್ಕೆ ಬಾಳೆ ಎಲೆಗಳನ್ನು ಕೊಯ್ದು ಜೋಪಾನ ವಾಗಿ ಇಡುತ್ತಿದ್ದರು. ತಾಯಿಯವರು ಪುದ್ದರ್ ಗೆ ಬಳಸುವ ಮಣ್ಣಿನ ಪಾತ್ರೆ
(ಕರ ಬಿಸಲೆ) ಗಳನ್ನು ಹೊರ ತೆಗೆದು ತೊಳೆದು ಮರು ದಿನಕ್ಕೆ ತಯಾರು ಗೊಳಿಸುತ್ತಿದ್ದರು.ಈ ಪುದ್ದರ್ ಕರ ಬಿಸಲೆಗಳು ಬಹಳ ಪವಿತ್ರವಾದುದು. ಈ ಪುದ್ದರ್ ದಿನಗಳಲ್ಲಿ ಮಾತ್ರ ಇವುಗಳನ್ನು ಉಪಯೋಗಿಸಲಾಗುತ್ತಿತ್ತು.
ಇವುಗಳು ವರ್ಷಗಟ್ಟಲೆ ಉಳಿಯುತ್ತಿತ್ತು. ಇವುಗಳನ್ನು ಅಕ್ಷಯ ಪಾತ್ರೆಯಂತೆ ,ಕಾಮಧೇನುವಿನಂತೆ ಒಡೆಯದಂತೆ ಜಾಗ್ರತೆಯಿಂದ ಇಡುತ್ತಿದ್ದರು.ಒಂದು ವೇಳೆ ಒಡೆದರೆ “ಪೊಲಿ” (ಸಮ್ರಧ್ಧಿ) ಕಡಿಮೆ ಆಯಿತೆಂದು ಬೇಸರ ಪಡುತ್ತಿದ್ದರು. ಕೂಡಲೇ ಹೊಸ ಪುದ್ದರ್ ಕರಬಿಸಲೆಗಳನ್ನು ತರಿಸುತ್ತಿದ್ದರು.
  ಪುದ್ದರ್ ದಿನ ತಾಯಿಯವರು ಮತ್ತು ಅಕ್ಕ ಅತ್ತಿಗೆಯವರು ಬೆಳಗ್ಗೆ ಸ್ನಾನ ಮುಗಿಸಿ ಪುದ್ದರ್ ಕರಕ್ಕೆ ನೀರು ತುಂಬಿಸುವ ಕಾರ್ಯಕ್ರಮ ದಿಂದ ಪುದ್ದರ್ ಆಚರಣೆ ಆರಂಭ ಆಗುತ್ತದೆ. ತಾಯಿಯವರು ಆ ದಿನ ಮಾಮುಲು ಸೀರೆಯ ಬದಲು ಸ್ವಲ್ಪ ಉತ್ತಮವಾದ ಸೀರೆಯನ್ನು ಉಡುತ್ತಿದ್ದರು. ಹಲಸಿನ ಮರದ ಎಲೆಯಲ್ಲಿ ಬರುವ ಹಾಲು ಸಂಗ್ರಹಿಸಿ ಅದನ್ನು ಹಣೆಗೆ ತಾಗಿಸಿ ದೊಡ್ಡ ಬೊಟ್ಟು ಇಡುತ್ತಿದ್ದರು. ಎಲೆ ಅಡಿಕೆ ತಿಂದು ತಮ್ಮ ಚೆಲುವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದರು. ತಾಯಿಯವರ ಆ ಗತ್ತು ಈಗಲೂ ನೆನಪಾಗಿ ನೆನೆಯುತ್ತದೆ.ತಾಯಿಯೊಡನೆ ಅತ್ತಿಗೆ, ಅಕ್ಕನವರೂ ,ಮನೆ ಮಕ್ಕಳೆಲ್ಲಾ ಬಾವಿಕಟ್ಟೆಗೆ ಹೋಗುತ್ತಿದ್ದೆವು. ಕೊಡ, ತಂಬಿಗೆ ಚೊಂಬುಗಳಲ್ಲಿ ನೀರು ತಂದು ಪುದ್ದರ್ ಕರಕ್ಕೆ ನೀರು ತುಂಬಿಸುವ ಕಾರ್ಯ ಕ್ರಮ.ನಮಗೆಲ್ಲ ಅವುಗಳು ಖುಷಿಯ ಕ್ಷಣಗಳು.
   ತೆರಿಯದಲ್ಲಿ ಇಟ್ಟ ಪುದ್ದರ್ ಕರಕ್ಕೆ ಅರೆದ ಶ್ರೀಗಂಧದ ಚುಕ್ಕಿಯನ್ನು ತಾಯಿ ಇಡುತ್ತಿದ್ದರು. ಈ ಚುಕ್ಕಿಗೆ ತುಂಬೆ ಹೂವನ್ನು ಇಡುತ್ತಿದ್ದರು. ಪುದ್ದರ್ ಕರದ ಎದುರು ಬಾಳೆ ಎಲೆಯಲ್ಲಿ ಅಕ್ಕಿ , ಕಾಯಿ,ಎಲೆ,ಅಡಿಕೆ ತಾಂಬೂಲ ಇಟ್ಟು ಕೈ ಮುಗಿಯುತ್ತಾರೆ.ಪುದ್ದರ್ ಕರವನ್ನು ಮುಟ್ಟಿ ಮೂರು ಬಾರಿ ನಮಸ್ಕರಿಸುತ್ತಾರೆ. ಪುದ್ದರ್ ಕಾರ್ಯಕ್ರಮಗಳು ,ಆಚರಣೆಗಳು ಹಿರಿಯರು ಕಲಿಸಿಕೊಟ್ಟಂತೆ ಯಾವೊಂದು ವಿಘ್ನಗಳು ಇಲ್ಲದೆ ನೆರವೇರಲೆಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.
ಪುಗೆಪತ್ತುನ ಧೂಪದಿಂದ ಆರತಿ ನಡೆಯುತ್ತದೆ.ನೀರು ತುಂಬಿದ ಕರವನ್ನು ಇತರರೊಡನೆ ಒಲೆಯಲ್ಲಿಟ್ಟು ಅಗ್ನಿಯನ್ನು ಸ್ಮರಿಸಿ ಕೊಂಡು ಒಲೆ ಹಚ್ಚುತ್ತಾರೆ. ಹೊಸ ಕಾಯಮೆ ಜಾತಿಯ ಕುಚಲಕ್ಕಿ ಅಕ್ಕಿಯ ಅನ್ನ ರೆಡಿ ಆಗುತ್ತಿತ್ತು.
  ಪುದ್ದರ್ ಕೊದ್ದೆಲ್ ಬಿಸಲೆಯಲ್ಲಿ  ರುಚಿ ರುಚಿಯಾದ ಕೊದ್ದೆಲ್ ತಯಾರಾಗುತ್ತದೆ. ಅತ್ತಿಗೆ ಅಕ್ಕನವರಿಗೆ ರುಬ್ಬುವ ಕೆಲಸ ಇರುತ್ತಿತ್ತು. ಅಲ್ಲದೆ ಪಕ್ಕದ ಮನೆಯವರೂ ಸಹಾಯ ಮಾಡುತ್ತಿದ್ದರು.ಅಲ್ಲದೆ ನಮ್ಮ ಮಾವನವರ ಹೆಂಡತಿ ದೇವಕಿ ಮಾಮಿಯವರು ಮೀಯಾರು ಊರಿಂದ ಹಿಂದಿನ ದಿನವೇ ಬರುತ್ತಿದ್ದರು. ಮನೆಯ ಹತ್ತಿರ ಇರುವ ಮುತ್ತು ಮಾಮಿಯವರು, ತಾಯಿ ಅಕ್ಕ ,ಜಾನಕಿ ದೊಡ್ಡಮ್ಮ ಇವರೆಲ್ಲ ಸೇರಿ ಪುದ್ದರ್ ಅಡಿಗೆ ಮಾಡುವುದೇ ನೋಡಲು ಒಂದು ಮಜಾ ಕಾಣುತ್ತಿತ್ತು. ಅದರಲ್ಲೂ ಪಕ್ಕದ ಮನೆಯ ಒಪ್ಪಸಾಲೆ (ಶೈಲಿಯ)ಸೇಸಕ್ಕನವರ ಮಾತುಗಳು ಎಲ್ಲರನ್ನು ಸೂರೆಗೊಳ್ಳುತ್ತಿತ್ತು.ಅವರು ಹೆಚ್ಚಾಗಿ ತರಕಾರಿ ಹಚ್ಚುತ್ತಿದ್ದರು.
   ಪುದ್ದರಿಗೆ ತೇವು ಮತ್ತು ಪದ್ಪೆ (ಕೆಸು ಮತ್ತು ಹರಿವೆ)ದಂಟಿನ ಸಾಂಬರ್ ಆಗಲೇ ಬೇಕೆಂದು ಕಟ್ಟಲೆ ಇತ್ತು. ಕೆಲವರು ಈ ಕೊದ್ದೆಲಿಗೆ ರುಚಿಗೆಂದು ಗರ್ಬಿಜ(ಸಿಹಿ ಸೌತೆಕಾಯಿ)ಬೆರಕೆ ಮಾಡುತ್ತಿದ್ದರು. ಇಲ್ಲಿ ತೇವು ಮತ್ತು ಪದ್ಪೆ ಉಷ್ಣ ಮತ್ತು ತಂಪುಣಿಸುವ ವಸ್ತುಗಳು. ತಾಯಿಯವರ ಆದೇಶದಂತೆ ಬಗೆ ಬಗೆಯ ತರಕಾರಿ ಖಾದ್ಯಗಳು ರೆಡಿ ಆಗುತ್ತಿತ್ತು. “ಪುದ್ದರ್ ಗ್ ಏತ್ ಬಗೆ ಇತ್ತ್ಂಡ್” ಎಂಬ ಮಾತಿದೆ. ಬಗೆಗಳ ಸಂಖ್ಯೆಗಳು ಹೆಚ್ಚಿದಂತೆ ಮನೆಯ ಪ್ರತಿಷ್ಟೆ ಹೆಚ್ಚುತ್ತಿತ್ತು.ಪುದ್ದರ್ ಊಟಗಳ ಬಗೆ ಬಗೆಯ ಐಟಮ್ಗಳನ್ನು ಮತ್ತು ಅವುಗಳ ರುಚಿಗಳನ್ನು ನಂತರದ ದಿನಗಳಲ್ಲಿ ವರ್ಣನೆ ಮಾಡಲಿಕ್ಕಿತ್ತು. ನಮ್ಮತಾಯಿಯವರ ಪುದ್ದರ್ ಅಡಿಗೆಯನ್ನು ಎಲ್ಲರೂ ಕೊಂಡಾಡುತ್ತಿದ್ದರು.ಬಗೆಗಳು ಬೆಸ ಸಂಖ್ಯೆಯಲ್ಲಿ ಇರಬೇಕೆಂಬ ಕಟ್ಟಲೆ ಇತ್ತು.ಕೆಲವು ಮನೆಗಳಲ್ಲಿ 9, 11, 13, 15….ಬಗೆಗಳು ಇರುತ್ತಿದ್ದವು. ಪುದ್ದರ್ ವನಸ್ ಗೆ ಸಾಮಾನ್ಯ ಆಗಿ ತೇವು ಪದ್ಪೆ ಕೊದ್ದೆಲ್, ಗರ್ಬಿಜ ಗಸಿ, ಲತ್ತಂಡೆ ಕಾಯಿಮುಂಚಿಡ್ ಉಪ್ಕರಿ, ಬೆಂಡೆನ್ ಅಂಬಡೆಡ್ ಮುಂಚಿದ ಪೊಡಿಟ್ಟ್ ಸುಕ್ಕ, ನುಂಗೆಲ್ ಮುಂಚಿದ ಒಗ್ಗರಣೆಡ್ ಪೀರೆ,ಪಟ್ಲಕಾಯಿ ಉಪ್ಕರಿ. ತೆಕ್ಕರೆ ತಲ್ಲಿ, ತಿಮರೆ ಚಟ್ನಿ, ಆಜಾದಿನ ಪೆಲತ್ತರಿ ಪಚ್ಚಿರ್, ಅಂಬಡೆ ಹಾಕಿ  ಮುಂಚಿದ ಪೊಡಿಟ್ಟ್ ಕಂಚಲ ಗಸಿ ಗಸಿ, ಎಳೆ ಸಿಹಿ ಕುಂಬಳ ಗಸಿ, ಉರ್ದಡ್ಡೆ (ಪತ್ರಡ್ಡೆ)ಇತ್ಯಾದಿ .ವಿವಿಧ ಬಗೆ ತಯಾರಿಸಿ ಅವುಗಳು ಸರಿ ಸಂಖ್ಯೆಯಲ್ಲಿ ಬಂದಿದ್ದರೆ ಇನ್ನೊಂದು ಬಗೆ ” ಉಪ್ಪು ಮುಂಚಿ” ಗುದ್ದಿ ಬೆಸ ಸಂಖ್ಯೆಗೆ ತರುತ್ತಿದ್ದರು.” ಕಾಯಮೆ” ಅಕ್ಕಿಯ ಅನ್ನ ತಯಾರಿಸಿದ್ದರೆ “ರಾಜ ಕಾಯಮೆ” ಅಕ್ಕಿಯ ಪಾಯಸ ತಯಾರಿಸುತ್ತಿದ್ದರು.
   ಅಡಿಗೆ ತಯಾರಿಸಿ ಸಾಲಾಗಿ ಇಡುತ್ತಿದ್ದರು. ಮಕ್ಕಳೆಲ್ಲಾ ಎಷ್ಟು ಬಗ್ಗೆ ಇದೆ ಎಂದು ಲೆಕ್ಕ ಹಾಕುತ್ತಿದ್ದೆವು.ತಯಾರಿಸಿಟ್ಟ ಅಡಿಗೆ ಪಾತ್ರೆಗಳಿಗೆ ಶೇಡಿ ಮಣ್ಣಿನ ನೀರಿನಿಂದ ಸೂರ್ಯ, ಚಂದ್ರ,ನಕ್ಷತ್ರ,ಹೂವು ಇತ್ಯಾದಿ ಚಿತ್ರಗಳನ್ನು ಬಿಡಿಸುತ್ತಿದ್ದೆವು. ಅಲಂಕರಿಸುತ್ತಿದ್ದೆವು. ಈ ಸಮಯದಲ್ಲಿ ನಮ್ಮ ನಮ್ಮ ಒಳಗೆ ಜಗಳ ಆಗುತ್ತಿತ್ತು.”ಪುದ್ದರ್  ಪಂದ್ ತೂವಯೆ”
ಎಂದು ಸೌಟಿ(ಕೈಲ್) ನಲ್ಲಿ ತಿಂದ ಪೆಟ್ಟಿನ ರುಚಿ ನೆನಪಿದೆ. ಅಂದು ಪುದ್ದರ್ ಊಟಗಳು ಕೆಲವು ಮನೆಗಳಲ್ಲಿ ಮಧ್ಯಾಹ್ನ ಇದ್ದರೆ ಇನ್ನು ಕೆಲವು ಮನೆಗಳಲ್ಲಿ ರಾತ್ರಿ ಇರುತ್ತಿತ್ತು. ಒಂದೇ ದಿನಗಳಲ್ಲಿ ಇಡದೆ ಬೇರೆ ಬೇರೆ ದಿನ ಇಡುತ್ತಿದ್ದರು. ಏಕೆಂದರೆ ಪುದ್ದರ್ ನಲ್ಲಿ ನೆರೆ ಹೊರೆಯವರು, ಕುಟುಂಬ ಸಂಬಂಧಿಕರು ಒಟ್ಟಾಗುವ ಉದ್ದೇಶ ಇತ್ತು.
     ಪುದ್ದರ್ ಊಟದ ಮೊದಲು ತಾಯಿಯವರು 5, 7, 9, 11 ರ ಪ್ರಕಾರ ಬಾಳೆ ಎಲೆಯಲ್ಲಿ ಎಡೆ ಇಡುತ್ತಿದ್ದರು.ತಂದೆಯವರನ್ನು ಎರಡು ಮಾತು ಆಡಲು ಒಳಗೆ ಕರೆಯುತ್ತಿದ್ದರು.” ಪುಗೆ ಪತ್ತುನ” ದಲ್ಲಿ  ಆರತಿ ತೋರಿಸುತ್ತಿದ್ದರು. ಮನೆ ಮಂದಿ ಎಲ್ಲಾ ಹಿರಿಯರನ್ನು ಸ್ಮರಿಸಿ ಕೈ ಮುಗಿಯುತ್ತಿದ್ದೆವು. ನಂತರ ತಂದೆಯವರನ್ನು ಬಿಟ್ಟು ಎಲ್ಲರೂ ಅನ್ನದ ಕರವನ್ನು ಮುಟ್ಟಿ ನಮಸ್ಕರಿಸುತ್ತಿದ್ದೆವು. ಎಲ್ಲಾ ಸಂಪ್ರದಾಯದ ಕ್ರಮಗಳನ್ನು ಮುಗಿಸಿ ಊಟದ ಕಾರ್ಯಕ್ರಮ. ತಂದೆಯವರು ಪ್ರಥಮವಾಗಿ ಊಟದ ಸಾಲಿನಲ್ಲಿ ಕೂರುತ್ತಿದ್ದರು. ತಾಯಿಯವರು ಇತರರ ಸಹಾಯದಿಂದ ಅನ್ನದ ಕರವನ್ನು ತಂದೆಯವರ ಎದುರಿಗೆ ತೆರಿಯದಲ್ಲಿ ಇಡುತ್ತಿದ್ದರು. ತಂದೆಯವರು ಪುದ್ದರ್ ಕರವನ್ನು ಭಕ್ತಿಯಿಂದ ಮೂರು ಬಾರಿ ಮುಟ್ಟಿ ನಮಾಸ್ಕಾರ ಮಾಡುತ್ತಿದ್ದರು. ಪ್ರಥಮವಾಗಿ ತಾಯಿಯವರು ತಂದೆಯ ಎಲೆಗೆ ಅನ್ನ ಬಡಿಸುತ್ತಿದ್ದರು.. ನಂತರ ಇತರರಿಗೆ ಅನ್ನವನ್ನು ಇತರರು ಬಡಿಸುತ್ತಿದ್ದರು. ಅಂದು ಮನೆ ಯಜಮಾನ ತನ್ನ ಮನೆಯ ಪುದ್ದರ್ ಊಟದ ಮೊದಲು ಬೇರೆ ಮನೆ ಪುದ್ದರ್ ಗೆ ಹೋಗುವಂತಿರಲಿಲ್ಲ. ಮನೆ ಮಂದಿಗೆ ಅದು ಅನ್ವಯ ಇರಲಿಲ್ಲ.
   ಊಟ ಆದ ಬಳಿಕ ತಾಂಬೂಲ(ಎಲೆ ಅಡಿಕೆ) ಸವಿಯುವ ಸಮಯ. ತಾಂಬೂಲ ತಿನ್ನಲೇ ಬೇಕೆಂಬ ಸಂಪ್ರದಾಯ ಇತ್ತು. ಹೊಟ್ಟೆ ತುಂಬಾ ತಿಂದು ಜೀರ್ಣ ಆಗಲು ಇದು ಅಗತ್ಯನೂ ಹೌದು. ಅಂದು ಎಲೆ ಅಡಿಕೆ ತಿನ್ನದಿದ್ದರೆ ಹೊಟ್ಟೆ ಒಳಗೆ ನರಿ ಪ್ರವೇಶಿಸುತ್ತಾನೆ ( ಬಚ್ಚಿರೆ ತಿಂದಿಜಿಡ ಬಂಜಿದ ಉಲಾಯಿ ಕುದ್ಕೆ ಪೊಗ್ಗುವೆ)‌ಎಂದು ಹಿರಿಯರು ಮಕ್ಕಳಿಗೆ ಜೋಕ್ ಮಾಡುತ್ತಿದ್ದರು.ಪುದ್ದರ್ ದಿನ ನಮಗೆಲ್ಲ ಎಲೆ ಅಡಿಕೆ ತಿನ್ನುವ ಭಾಗ್ಯ ಸಿಗುತ್ತಿತ್ತು. ನಮಗೆಲ್ಲ ಸುಣ್ಣ ಹೆಚ್ಚಾಗ ಬಾರದೆಂದು ತಂಬಾಕನ್ನು ಖುದ್ದಾಗಿ ತಾಯಿಯವರೇ ತಯಾರು ಮಾಡಿ ಕೊಡುತ್ತಿದ್ದರು.
     ನಮ್ಮ ಮನೆಯಲ್ಲಿ ರಾತ್ರಿಯಲ್ಲೇ ಪುದ್ದರ್ ಇರುತ್ತಿತ್ತು. ನೆರೆ ಹೊರೆಯ ಮಕ್ಕಳು ಅಲ್ಲದೆ ಕುಟುಂಬ ಸಂಬಂಧಿಕರು ರಾತ್ರಿ ನಮ್ಮ ಮನೇಯಲ್ಲೇ ಇರುತ್ತಿದ್ದರು. ನಾವೆಲ್ಲರೂ ಕೂತು ಮಾತಾಡುತ್ತಿದ್ದೆವು.ತಾಯಿಯವರು ಇನ್ನೊಮ್ಮೆ ಮಕ್ಕಳಿಗೆಲ್ಲ ರಾತ್ರಿ ಪಾಯಸ ತಿನ್ನಿಸುವುತ್ತಿದ್ದರು. ರಾತ್ರಿ ಉಳಿದವರೆಲ್ಲ
ಮರುದಿನ ಬೆಳಗ್ಗೆ ಉಳಿದ ಪುದ್ದರ್ ಊಟ ತಿಂದು ತೆರಳುತ್ತಿದ್ದರು. ಬಂದವರು ಅವರ ಪುದ್ದರ್ ಗೆ ಆಹ್ವಾನ ಕೊಟ್ಟು ಹೋಗುತ್ತಿದ್ದರು.
   ಒಟ್ಟಾರೆ ಆ ವರ್ಷಗಳ ಪುದ್ದರ್ ಎಷ್ಟೊಂದು ಖುಷಿ ಸಡಗರ ಇತ್ತೆಂದರೆ ಅವುಗಳನ್ನು ಮೆಲುಕು ಹಾಕ ಬೇಕಷ್ಟೇ. ಈಗ ಅದು ಕನಸು ಮಾತ್ರ.ಈಗ ಪುದ್ದರ್ ಆಚರಣೆ ಮಾಡದ ಮನೆಗಳೇ ಇರುವುದು.
      ತುಲುವರು ತಪ್ಪದೆ ಮನೆಗಳಲ್ಲಿ ಪುದ್ದರ್ ಆಚರಿಸಿ ಮುಂದಿನ ಪೀಳಿಗೆಯವರೂ ಮುಂದಕ್ಕೆ ಆಚರಿಸುವಂತೆ ಮಾಡಬೇಕು.ಇವುಗಳನ್ನು ಮರೆತರೆ ಕುರಲ್ ಪಾಡುನು, ಪುದ್ದರ್ ಉನ್ಪುನು,ಪೊಲಿ ಪೊಲಿ ಪನ್ಪುನು ,ಕೆಡ್ಡಸ ಆಚರಣೆ ಇಂತಹ ಸಂಸ್ಕೃತಿಗಳು ತುಲುನಾಡಲ್ಲಿ ಇರುವುದಿಲ್ಲ.
    ಅಂದು ನವರಾತ್ರಿಯ ದಿನಗಳಲ್ಲಿ ತಾಯಿಯವರ ಯಜಮಾನಿಕೆಯಲ್ಲಿ ನಡೆಯುತ್ತಿದ್ದ ಅಂದಿನ ಪುದ್ದರ್ ಹಬ್ಬವನ್ನು ನೆನೆದು ಇಲ್ಲಿ ಬರೆದ ಪ್ರತಿಯೊಂದು ಅಕ್ಷರಗಳನ್ನೂ ಅವರ ಪಾದಗಳಿಗೆ ಅರ್ಪಿಸುತ್ತೇನೆ.
 ಇ.ಗೋ.ಭಂಡಾರಿ, ಕಾರ್ಕಳ.
   9632562679.

Leave a Reply

Your email address will not be published. Required fields are marked *