January 18, 2025
purana-1

ಪುರಾಣ ನೀತಿ

(ಹೆಜ್ಜೆ – 1)

ಯಾರಿವನು ಉತ್ತಂಕ…..?

          ಪುರಾಣದ ಕಥೆಗಳು ಇರುವುದು ಮನುಷ್ಯ ತಾನು ಧರ್ಮದಿಂದ ನಡೆಯಲು, ಸತ್ಕರ್ಮಗಳನ್ನು ಮಾಡಲು. ಧರ್ಮ, ಅಧರ್ಮ, ಸರಿ, ತಪ್ಪುಗಳ ನಡೆ ಹೇಗೆ ಎಂಬುದನ್ನು ನಾವು ಪುರಾಣದ ಕಥೆಗಳಿಂದ ತಿಳಿಯಬಹುದು.
          ಈಗ ಹೇಳಲು ಹೊರಟಿರುವ ಈ ಪಾತ್ರವನ್ನು ಕೆಲವರು ಕೇಳಿ, ಓದಿ ತಿಳಿದುಕೊಂಡಿರಬಹುದು. ಆದರೆ ಇನ್ನು ಕೆಲವರಿಗೆ ಈ ಪಾತ್ರದ ಬಗ್ಗೆ ತಿಳಿದಿರಲಿಕ್ಕಿಲ್ಲ. ಈತ ಒಂದು ದೊಡ್ಡ ಯಾಗಕ್ಕೆ ಕಾರಣವಾದವನು. ಇವನಿಗೆ ಒಬ್ಬನಿಂದ ಆದಂತಹ ಮೋಸಕ್ಕೆ ಅವನ ಇಡೀ ಸಂತತಿಯನ್ನೇ ಬಲಿಕೊಡಲು ತಂತ್ರವನ್ನು ಹೂಡಿದವನು. ತನ್ನ ಕೈಯಲ್ಲಿ ಆಗದ ಕೆಲಸವನ್ನು ತನ್ನ ಬುದ್ಧಿವಂತಿಕೆಯಿಂದ ಇನ್ನೊಬ್ಬರ ಕೈಯಲ್ಲಿ ಮಾಡಿಸಿ ಸೇಡು ತೀರಿಸಿಕೊಳ್ಳಲು ಹೊರಟವನು.
          ಜಗತ್ತಿಗೆ ಆಧಾರವಾದುದು ಧರ್ಮ, ಅದು ಜಗತ್ತಿನಿಂದ ಆಧರಿಸಲ್ಪಡಬೇಕು. ನಾವು ಧರ್ಮವನ್ನು ರಕ್ಷಿಸಬೇಕು ಆಗ ಧರ್ಮವೂ ನಮ್ಮನ್ನು ರಕ್ಷಿಸುತ್ತದೆ. ಚಂದ್ರವಂಶದ ಪರಂಪರೆಯಲ್ಲಿ ಅತ್ಯಂತ ಸಾಹಸಿಯೂ ವಿಕ್ರಮಿಯೂ ಆಗಿದ್ದ ಜನಮೇಜಯನೆಂಬ ಮಹಾರಾಜನೊಬ್ಬನು ಹಸ್ತಿನಾವತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದನು. ಈತನ ಸಂಬಂಧ ಇತರೆ ರಾಜ್ಯದ ರಾಜರುಗಳ ಜೊತೆ ವಿಹಿತ ಕ್ರಮದಲ್ಲಿತ್ತು. ಆದುದರಿಂದ ಈ ರಾಜ್ಯದಲ್ಲಿ ಶಾಂತಿ ನೆಮ್ಮದಿ ನೆಲೆಸಿತ್ತು. ಒಂದು ದಿನ ಮಹಾರಾಜನ ಓಲಗಕ್ಕೆ ಬ್ರಾಹ್ಮಣ ಸ್ನಾತಕನೊಬ್ಬನು ಬಂದು ಅರಸನಿಗೂ ಅವನ ರಾಜ್ಯಕ್ಕೂ ಸನ್ಮಂಗಲವನ್ನು ಹಾರೈಸಿ, ಶುಭಾರ್ಶೀವಾದವನ್ನು ಮಾಡಿದನು. ಜನಮೇಜಯನು ತಾನೇ ಎದ್ದು ಹೋಗಿ ಆಗಂತುಕನನ್ನು ವಿಧ್ಯುಕ್ತವಾಗಿ ಕರೆತಂದು ಸತ್ಕರಿಸಿ, ವಿನಮ್ರವಾಗಿ ಪರಿಚಯವನ್ನು ವಿಚಾರಿಸಿದನು.
          ಬಂದಂತಹ ಆಗಂತುಕನು ಒಮ್ಮೆ ಸುತ್ತಲೂ ದೃಷ್ಟಿ ಹರಿಸಿ ಸಂತುಷ್ಟನಾಗಿ ತನ್ನ ಕುರಿತು ಮಹಾರಾಜನ ಜೊತೆ ನಿರೂಪಿಸತೊಡಗಿದನು. “ನಾನೊಬ್ಬ ಬಡ ಬ್ರಾಹ್ಮಣ ಕುಮಾರನು. ಉತ್ತಂಕನೆಂದು ನನ್ನ ಹೆಸರು, ವೇದನನೆಂಬ ಶ್ರೋತ್ರಿಯ ಬ್ರಾಹ್ಮಣನಲ್ಲಿ ನಾನು ವಿದ್ಯಾಭ್ಯಾಸವನ್ನು ಪೂರೈಸಿದೆನು. ಕಲಿಸಿದಾತನಿಗೆ ಗುರುದಕ್ಷಿಣೆ ಏನೆಂದು ಕೇಳಿಕೊಂಡಾಗ ಗುರುಗಳು ” ನೀನು ಕೇಳಬೇಕಾದುದೂ, ನಾನು ಕೇಳಿದುದನ್ನು ನೀನು ಕೊಡಬೇಕಾದುದೂ ಸರಿಯೆ ನನಗೆ ಯಾವ ಅಪೇಕ್ಷೆಯೂ ಇಲ್ಲ.” ಎಂದು ನಂತರ ತನ್ನ ಪತ್ನಿಯ ಕಡೆ ಕೈ ತೋರಿಸಿ “ಬೇಕಿದ್ದರೆ ಅವಳನ್ನು ಕೇಳು, ಅವಳೇನನ್ನಾದರೂ ಬಯಸಿದರೆ ಅದನ್ನು ಕೊಡು ನಾನು ಸಂತೃಪ್ತನು ” ಎಂದು ಹೇಳಿದರು. ಗುರುಗಳ ಪತ್ನಿಯು ” ವತ್ಸಾ ಪೌಷ್ಯರಾಜನ ಪತ್ನಿಯು ಧರಿಸುವ ಓಲೆಗಳು ಹೆಚ್ಚಿನ ಮಹಿಮೆಯಿಂದ ಕೂಡಿರುತ್ತವೆಯೆಂದು ಕೇಳಿದ್ದೆ. ನಾನೂ ಅವುಗಳನ್ನೊಮ್ಮೆ ಧರಿಸಿಕೊಳ್ಳಬೇಕೆಂದು ಆಶಿಸಿದ್ದೆ ಸಾಧ್ಯವಾದರೆ ಪ್ರಯತ್ನಿಸು” ಎಂದಳು “ಆಗಲಿ” ಎಂದು ಅವರಿಬ್ಬರಿಗೂ ವಂದಿಸಿ ನಾನು ಅಲ್ಲಿಂದ ಹೊರಟೆನು.
            ಹೀಗೆ ವಿಚಾರಿಸುತ್ತಾ ಬಂದವನು ಪೌಷ್ಯರಾಜನ ಆಸ್ಥಾನವನ್ನು ಸೇರಿ ಆತನನ್ನು ಕಂಡು ನನ್ನ ಆಭೀಷ್ಟವನ್ನು ತೋಡಿಕೊಂಡೆನು. ಅವನು ಯಾವ ಆಕ್ಷೇಪವನ್ನೂ ಹೇಳದೆ “ಒಳ್ಳೆಯದು ಹೋಗಿ ಅವಳನ್ನು ಕಂಡು ಕೇಳಿಕೊ ಕೊಡುತ್ತಾಳೆ” ಎಂದು ನುಡಿದು ಅಂತಃಪುರಕ್ಕೆ ಕಳುಹಿಸಿಕೊಟ್ಟನು. ಆದರೆ ಅಲ್ಲಿ ಎಲ್ಲಿ ನೋಡಿದರೂ ನನಗೆ ರಾಣಿ ಕಾಣಿಸಲಿಲ್ಲ. ಕಾಣದೇ ಇದ್ದಾಗ ಕೇಳುವುದು ಹೇಗೆ..? ಬಳೆಗಳ ಸದ್ದು, ನಗು ಎಲ್ಲಾ ಕೇಳುತ್ತಿತ್ತು, ದಾಸಿಯರು ಉಪಚರಿಸುತ್ತಿರುವುದೂ ಕಾಣುತ್ತಿತ್ತು. ಆದರೆ ರಾಣಿಯು ಮಾತ್ರ ಅದೃಶ್ಯಳಾಗಿದ್ದಳು. ಅದು ಆ ಓಲೆಯ ಪ್ರಭಾವವೇ ಇರಬಹುದು ಎಂದು ಅನಿಸುತ್ತಿತ್ತು. ಧೈರ್ಯ ಮಾಡಿ ವಿನೀತನಾಗಿ ನನ್ನ ಕೋರಿಕೆಯನ್ನೂ ಮಹಾರಾಜನ ಅಪ್ಪಣೆಯನ್ನೂ ನಿವೇದಿಸಿಕೊಂಡೆನು. “ಸಾಧಿಸಿ ಪಡೆ” ಎಂಬ ಉತ್ತರವೊಂದು ಕೇಳಿಸಿತು. ನಾನೂ ಅದೇ ಚಿಂತೆಯಲ್ಲಿ ಅಲ್ಲೇ ದಿನಗಳೆಯುತ್ತಿದ್ದೆ. ಒಂದು ದಿನ ಮಹಾರಾಣಿಯು ಸ್ನಾನಗೃಹದಿಂದ ಬರುತ್ತಿದ್ದಾಗ ನನ್ನ ದೃಷ್ಟಿಗೆ ಬಿದ್ದಳು- ಕೂಡಲೇ “ಅಮ್ಮ ನಿನ್ನನ್ನು ನಾನು ಕಂಡೆನು ಇನ್ನಾದರೂ ನಿನ್ನ ಓಲೆಗಳನ್ನಿತ್ತು ಅನುಗ್ರಹಿಸು” ಎಂದು ಬೇಡಿಕೊಂಡೆನು. ಅವಳಿಗೂ ನನ್ನ ತಾಳ್ಮೆಯನ್ನು ಕಂಡು ಕರುಣೆಯುಂಟಾಗಿರಬೇಕು. ಅಂತೆಯೇ ಅವಳು “ಆಗಲಿ ನಿನ್ನ ಗುರುಪತ್ನಿಯ ವಾಂಛಿತವು ಪೂರೈಸಲಿ. ನೀನೂ ಗುರುಋಣದಿಂದ ಮುಕ್ತನಾಗು” ಎಂದು ನುಡಿದು ಸ್ನಾನಗೃಹದಲ್ಲಿ ತೆಗೆದಿಟ್ಟಿದ್ದ ಓಲೆಗಳನ್ನು ನನಗಿತ್ತಳು, ಅಲ್ಲದೆ “ಬಹಳ ಎಚ್ಚರವಾಗಿರು, ತಕ್ಷಕನು ಇವುಗಳ ಮೇಲೆ ಕಣ್ಣಿಟ್ಟಿದ್ದಾನೆ ಹೊರಡು”. ಎಂದು ನುಡಿದು ನನ್ನನ್ನು ಬೀಳ್ಗೊಟ್ಟಳು.
            ಮಾರ್ಗಮಧ್ಯದಲ್ಲಿ ಆಯಾಸಗೊಂಡಿದ್ದ ನಾನು ಈ ಓಲೆಗಳನ್ನು ಒಂದು ಮರದ ಬುಡದಲ್ಲಿಟ್ಟು ಅಲ್ಲೇ ಹರಿಯುತ್ತಿದ್ದ ಸಣ್ಣ ತೊರೆಯೊಂದರಲ್ಲಿ ನೀರು ಕುಡಿದೆ. ದಾಹವನ್ನಾರಿಸಿಕೊಂಡು ಬಂದು ನೋಡಿದಾಗ ಓಲೆಗಳು ಅಲ್ಲಿರಲಿಲ್ಲ.ಎಷ್ಟು ಹುಡುಕಿದರೂ ಸಿಗಲಿಲ್ಲ. ರಾಣಿಯ ಮಾತು ನೆನಪಿಗೆ ಬಂತು. ತಕ್ಷಕನೇ ಮಾಯಾವಿಯಾಗಿ ಓಲೆಗಳನ್ನು ಅಪಹರಿಸಿರಬೇಕೆಂದು ಖಚಿತವಾಯಿತು. ಯಾವ ದಾರಿಯೂ ತೋಚದೆ ಕಂಗೆಟ್ಟ ನನಗೆ ಇಂದ್ರನ ಅನುಗ್ರಹದಿಂದ ಪಾತಾಳದವರೆಗೂ ಹೋಗಿ ಅಲ್ಲಿ ವಾಸುಕಿಯಲ್ಲಿ ಪ್ರಾರ್ಥಿಸಿಕೊಂಡಮೇಲೆ ಅವನು ತಕ್ಷಕನಿಂದ ನನಗೆ ಆ ಓಲೆಗಳನ್ನು ಕೊಡಿಸಿದನು. ಅಂತೆಯೇ ನಾನು ಅವುಗಳನ್ನು ನನ್ನ ಗುರುಪತ್ನಿಗೆ ತಂದಿತ್ತು ನಮಸ್ಕರಿಸಿದೆನು. ಆ ಗಂಡಹೆಂಡಿರಿಬ್ಬರೂ ನನ್ನನ್ನು ವಾತ್ಸಲ್ಯಪೂರ್ಣವಾಗಿ ಹರಸಿ ಬೀಳ್ಕೊಟ್ಟರು.

           ತನಗೆ ತಕ್ಷಕನಿಂದ ಆದ ತೊಂದರೆಯಿಂದ ಕುಪಿತಗೊಂಡ ಉತ್ತಂಕನು ಮಾಡಿದ್ದಾದರೂ ಏನು….?
ಮುಂದಿನ ಸಂಚಿಕೆಯಲ್ಲಿ…..

✍🏻 ಎಸ್ ಕೆ ಬಂಗಾಡಿ

 

Leave a Reply

Your email address will not be published. Required fields are marked *