ಸತಿಯು ದಕ್ಷನಿಗೆ ನೀಡಿದ ಶಾಪವಾದರೂ ಏನು…?
ಪುರಾಣ ನೀತಿ.
(ಹೆಜ್ಜೆ-11)
ಕೈಲಾಸದಿಂದ ಕೋಪದಿಂದ ಹೊರನಡೆದ ದಕ್ಷನು ಶಿವನ ಮೇಲಿನ ಪ್ರತೀಕಾರ ಭಾವದಿಂದ ಅವನನ್ನು ಮಾತ್ರ ಆಹ್ವಾನಿಸದೆ ಮತ್ತೆಲ್ಲರನ್ನೂ ಬರಹೇಳಿ ಒಂದು ನಿರೀಶ್ವರ ಯಾಗವನ್ನು ಕೈಗೊಂಡನು.
ದೇವತೆಗಳೂ, ಋಷಿಗಳೂ ಎಲ್ಲರೂ ಹೋದರು ಬಹುಮಂದಿ ಬ್ರಾಹ್ಮಣರೂ ಹೋದರು. ಇದನ್ನು ಕಂಡ ಸತಿ ದೇವಿಯು ಬ್ರಾಹ್ಮಣರನ್ನು ವಿಚಾರಿಸಿದಾಗ ದಕ್ಷನು ಆಯೋಜಿಸಿದ್ದ ಯಾಗದ ಬಗ್ಗೆ ತಿಳಿಯುತ್ತದೆ. ಸತಿದೇವಿಗೆ ತನಗೂ ತನ್ನ ತವರುಮನೆಗೆ ಹೋಗಬೇಕು ಯಾಗದಲ್ಲಿ ಪಾಲ್ಗೊಳ್ಳಬೇಕೆಂದು ಆಸೆಯಾಗುತ್ತದೆ.
ಈ ವಿಚಾರವನ್ನು ಶಿವನಲ್ಲಿ ತಿಳಿಸಲು ಶಂಕರನು “ನಿನ್ನ ತಂದೆಯು ನನ್ನನ್ನು ಅವಮಾನಿಸುವುದಕ್ಕಾಗಿಯೇ ಮಾಡುವ ಯಜ್ಞವಿದು. ಈ ಯಜ್ಞದಲ್ಲಿ ರುದ್ರಭಾಗವಿಲ್ಲ, ಹಾಗಾಗಿ ನಾವು ಅಲ್ಲಿಗೆ ಹೋಗಬಾರದು” ಎಂದು ನುಡಿದನು. ಆದರೆ ಸತಿಯ ಮನಸ್ಸು ಕೇಳಲಿಲ್ಲ. ತಂದೆಯ ಮನೆಗೆ ಹೋಗಲೇಬೇಕು, ಅವರ ಬಳಿ ವಿಷಯ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಯೋಚಿಸಿ ಮತ್ತೊಮ್ಮೆ ಶಿವನಲ್ಲಿ ಅಂಗಲಾಚಿದಳು. ಶಿವನು “ವಿಚಾರವನ್ನು ನಿನಗೆ ತಿಳಿಸಿದ್ದೇನೆ. ನಾನಂತೂ ಬರುವುದಕ್ಕೆ ಸಾಧ್ಯವಿಲ್ಲ, ಬರುವುದು ಇಲ್ಲ ” ಎಂದನು. ಸತಿದೇವಿಯೂ ತಾನೊಬ್ಬಳೇ ಹೋಗಿ ಬರುತ್ತೇನೆ ಎಂದು ಶಿವನಲ್ಲಿ ಪ್ರಾರ್ಥಿಸಿ ಅಲ್ಲಿಂದ ತವರು ಮನೆಗೆ ಹೊರಟಳು.
ತವರು ಮನೆಯಲ್ಲಿ ಯಾಗಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳೂ ನಡೆದಿದ್ದವು ಯಾಗವು ಪ್ರಾರಂಭವಾಗಿತ್ತು,ಸಂಬಂಧಿಕರು ಎಲ್ಲರೂ ನೆರೆದಿದ್ದರು.ದೇವಾದಿ ದೇವತೆಗಳೂ,ಋಷಿಗಳೂ, ಬ್ರಾಹ್ಮಣರೂ ಬಹುಸಂಖ್ಯೆಯಲ್ಲಿ ಸೇರಿದ್ದರು. ವಿಷ್ಣು ಮತ್ತು ಬ್ರಹ್ಮರು ಮಾತ್ರ ಬಂದಿರಲಿಲ್ಲ. ಶಿವನ ಪತ್ನಿಯು ಅಲ್ಲಿ ಪ್ರವೇಶಿಸಿದಾಗ ಯಾರೊಬ್ಬರೂ ಆದರವನ್ನು ತೋರಲಿಲ್ಲ, ಮಾತನ್ನೂ ಆಡಲಿಲ್ಲ. ಆ ಕುರಿತು ಮೊದಲೇ ದಕ್ಷನು ಪೂರ್ವ ಸಿದ್ಧತೆಯನ್ನು ಮಾಡಿದಂತಿತ್ತು.ದಾಕ್ಷಾಯಿಣಿಯು ಅದೆಲ್ಲವನ್ನೂ ಕ್ಷಣಮಾತ್ರದಲ್ಲಿ ಅರಿತು ಕೊಂಡಳು,ತುಂಬಾ ಮನನೊಂದಳು. ಮಹದೇವನ ಮಾತು ಕೇಳದೆ ತಪ್ಪು ಮಾಡಿಬಿಟ್ಟೆ, ನಾನು ಇಲ್ಲಿಗೆ ಬರಲೇಬಾರದಿತ್ತು.
ಹೀಗೆ ಅವಳಿಗಾದ ಅಪಮಾನದಿಂದ ಕ್ರುದ್ಧಳಾಗಿ ದಕ್ಷನನ್ನು ಉದ್ದೇಶಿಸಿ “ಎಲಾ! ನೀನು ನನಗೆ ತಂದೆಯು, ವಂದ್ಯನು. ಆದರೂ ನೀನು ಶಿವದ್ರೋಹವನ್ನೇ ಮಾಡಿರುವೆ. ಧರ್ಮ ಕಾರ್ಯದಲ್ಲಿಯೂ ನಿನಗೆ ಮಹಾದೇವನಲ್ಲಿ ಅಭಿಮಾನವಿಲ್ಲದೇ ಹೋಯಿತು. ನಾನು ನಿನ್ನ ಮಗಳು ಆದರೆ ಪರಮಶಿವನ ಪತ್ನಿಯು ಅದನ್ನೂ ನೀನು ಗಮನಿಸಲಿಲ್ಲ. ತಂದೆಗೆ ಮಗಳ ಮೇಲೆ ಮಮತೆಯಿಲ್ಲ, ದೇವ ದೇವನಾದ ಸದಾಶಿವನ ಕುರಿತು ಗೌರವವಿಲ್ಲ, ಮೇಲಾಗಿ ದ್ರೋಹ ಚಿಂತನೆಯನ್ನೇ ಕೈಗೊಂಡಿರುವೆ. ಮದಾಂಧತೆಯಿಂದ ಕೆಟ್ಟು ಹೋದ ನೀನು ಹತ್ತು ಮಂದಿಗೆ ಒಬ್ಬ ಮಗನಾಗಿ ಹುಟ್ಟು ನಿನಗೂ ಹಿರಿಯರ ಪ್ರೀತಿಯ ಬೆಲೆಯು ತಿಳಿದೀತು.” ಎಂದು ಶಾಪವನ್ನು ಕೊಟ್ಟು ಯಜ್ಞ ಮಧ್ಯದ ಯಾಗಾಗ್ನಿಯಲ್ಲಿ ಹಾರಿ ದಗ್ಧಳಾಗಿ ಹೋದಳು.
ಸತಿಯು ನೀಡಿದ ಶಾಪ ಫಲಿಸುವುದೇ…..?
ಮುಂದಿನ ಸಂಚಿಕೆಯಲ್ಲಿ …..