September 20, 2024

ಶಿವನಿಗೆ ಬ್ರಹ್ಮ ಕಪಾಲ ಪ್ರಾಪ್ತವಾಗಿದ್ದು ಹೇಗೆ…?

ಪುರಾಣ ನೀತಿ

(ಹೆಜ್ಜೆ-15)

ಹಿಂದಿನ ಸಂಚಿಕೆಯಿಂದ…

ಸರಸ್ವತಿದೇವಿಗೆ ವಿದ್ಯಾಧಿಕಾರವನ್ನು ನಿಯೋಜಿಸುವಾಗಲೇ ಬ್ರಹ್ಮ ದೇವನಿಗೆ ಬಹುದಿನಗಳಿಂದಲೂ ಕಾಡುತ್ತಿದ್ದ ಆಕಾಂಕ್ಷೆಯೊಂದು ಥಟ್ಟನೆ ಅವನಲ್ಲಿ ಮೂಡಿ ಬಂತು. ಜಗತ್ತಿನಲ್ಲಿ ಹೆಣ್ಣು ಗಂಡುಗಳ ಸಂಯೋಗದಿಂದಲೇ ಪ್ರಜಾ ಸಮೃದ್ಧಿಯಾಗಬೇಕು ಎನ್ನುವುದೇ ಅವನ ಆಶಯವು.

ಅದೇ ಹೊತ್ತಿಗೆ ಸರಿಯಾಗಿ ಮನ್ಮಥನೂ ತನ್ನ ಪ್ರಭಾವವನ್ನು ಬೀರಿದನು, ಅದು ಸೃಷ್ಟಿಕರ್ತನಲ್ಲೇ ಮೊದಲು ಪರಿಣಾಮಗೊಂಡಿತು. ಬ್ರಹ್ಮ ದೇವನ ಮನಸ್ಸು ತಿರುಗಿತು. ಇದು ಮದನನ ಆಟವೇ ಆಗಿರಬಹುದು, ಬ್ರಹ್ಮ ದೇವನು ಸರಸ್ವತಿಯ ಮುಂದೆ ತನ್ನ ಮನದಿಂಗಿತವನ್ನು ತೋಡಿಕೊಂಡನು. ಇತ್ತ ಸರಸ್ವತಿಯ ಮೇಲೆಯೂ ಮದನನ ಪ್ರಭಾವ ಬೀರಿತ್ತು ಅನಿಸುತ್ತದೆ. ಸರಸ್ವತಿ ಲಜ್ಜೆಯನ್ನು ವ್ಯಕ್ತಪಡಿಸಿದಳು. ಹಿರಣ್ಯಗರ್ಭನು ಶಾರದೆಯ ಕರಗ್ರಹಣ ಮಾಡಿದನು. ಸಕಲ ವಿದ್ಯಾದಿ ದೇವತೆಯೇ ಆಗಿದ್ದರೂ ಅವಳು ವಿಧಿಯನ್ನು ಮೀರಲಾರದೆ ತಂದೆಯನ್ನೇ ವರಿಸಬೇಕಾಯಿತು. ಸೃಷ್ಟಿಕರ್ತನೇ ಆದರೂ ಬ್ರಹ್ಮ ದೇವನು ಮಗಳ ಗಂಡನಾಗಬೇಕಾಯಿತು.

ವಿಷಯ ಶಿವನ ಬಳಿ ಪಸರಿಸಿತು, ಆ ಕ್ಷಣವೇ ಶಿವನು ಸತ್ಯಲೋಕ ಪ್ರವೇಶಿಸಿದನು. ವಾಣಿಯು ಚತುರ್ಮುಖನ ಒಂದೊಂದೇ ಮುಖವನ್ನೇರಿ ಕ್ರಿಡಿಸುತ್ತಿದ್ದಳು. ಮಹಾರುದ್ರನು ಏನಿದು..? ಎಂದು ಗುಡುಗಿದನು. ಬ್ರಹ್ಮ ದೇವನು ಶಿವನನ್ನು ಸ್ವಾಗತಿಸಿ ವಿಷಯವನ್ನೆಲ್ಲಾ ಬಿನ್ನೈಸಿಕೊಂಡನು. ಮಗಳನ್ನು ಮದುವೆಯಾದುದು ತಪ್ಪು- ತಪ್ಪಿಗೆ ಶಿಕ್ಷೆಯೂ ಅನಿವಾರ್ಯವು. ಲಯಾಧಿಕಾರಿಯೇ ಶಿಕ್ಷಾಕರ್ತನು ಅದನ್ನೇ ಬ್ರಹ್ಮನಲ್ಲಿ ಶಿವನು ಸೂಚಿಸಿದನು.

ಆಗ ಪರಮೇಷ್ಠಿಗೆ ತನ್ನನ್ನು ಆಕ್ಷೇಪಿಸಲು ಇವನಾರು? ಎಂದು ಕ್ಷಣಕಾಲ ಅಹಂಕಾರವೇ ಮೇಲೆದ್ದು, ಅದರ ದ್ಯೋತಕವಾಗಿ ಮತ್ತೊಂದು ತಲೆಯೂ ಮೂಡಿಕೊಂಡಿತು. ಆದರೆ ತಕ್ಷಣವೇ ಅಹಂಕಾರವು ಹರಿದು ವಿನೀತನಾದನು. ಹಾಗೆಯೇ ಶಿಕ್ಷೆ ಅನುಭವಿಸಲೇ ಬೇಕಾದರೂ, ಮಾಡುವ ಕೆಲಸವನ್ನು ಮಾಡಲೇಬೇಕಾದುದು ಅನಿವಾರ್ಯ. ಅದನ್ನು ಮಾಡಿ ಪೂರೈಸಿ ಶಿಕ್ಷೆ ಅನುಭವಿಸಬೇಕು ಎಂದು ನಿವೇದಿಸಿಕೊಂಡನು. ಆಗ ಶಿವನೂ “ನಾನು ಶಿಕ್ಷಿಸದಿರಲು ಸಾಧ್ಯವಿಲ್ಲ ಶಿರಛ್ಛೇದನ ಮಾಡಲೇಬೇಕು ಎಂದನು. ಆಗ ಬ್ರಹ್ಮ ದೇವನು ನೀನು ಶಿರವನ್ನು ಛೇದಿಸಿದಲ್ಲಿ ಬ್ರಹ್ಮ ದ್ವೇಷಕ್ಕೆ ಗುರಿಯಾಗಲೇ ಬೇಕು ಎಂದನು.

ಇಬ್ಬರೂ ಅವರವರ ಕರ್ತವ್ಯವನ್ನು ಮಾಡಿ ಅದರಿಂದ ಪ್ರಾಪ್ತವಾಗುವ ಹಾನಿಯನ್ನು ಅನುಭವಿಸಲು ಸಿದ್ಧರಾದರು. ಅಹಂಕಾರದ ದ್ಯೋತಕವಾಗಿ ಮೂಡಿದ್ದ ಬ್ರಹ್ಮನ ಐದನೇ ತಲೆಯನ್ನು ಶಿವನು ಕೈಯಿಂದ ಒತ್ತಿ ಮುರಿದನು. ಆದರೆ ಬ್ರಹ್ಮನ ಶಿರವು ಆಗಲೇ ಶಿವನ ಕೈಯನ್ನು ಒತ್ತಿ ಹಿಡಿದಿತ್ತು. ಲಯಾಧಿಕಾರಿಯೇ ಆಗಿದ್ದರೂ ಮಹಾರುದ್ರನು ಬ್ರಹ್ಮಕಪಾಲದ ಹಿಡಿತಕ್ಕೆ ತುತ್ತಾಗಬೇಕಾಗಿ ಬಂತು.

ಬ್ರಹ್ಮಕಪಾಲವನ್ನು ಹಿಡಿದ ಶಿವನು ಮಾಡಿದ್ದಾದರೂ ಏನು…?

ಮುಂದಿನ ಸಂಚಿಕೆಯಲ್ಲಿ…..

✍🏻 ಎಸ್ ಕೆ ಬಂಗಾಡಿ.

Leave a Reply

Your email address will not be published. Required fields are marked *