
“ಭವತಿ ಭಿಕ್ಷಾಂದೇಹಿ” ಎಂದು ಶಿವನು ಭಿಕ್ಷಾಟನೆ ಮಾಡಿದ್ದು ಯಾಕೆ…?
ಪುರಾಣ ನೀತಿ.
(ಹೆಜ್ಜೆ-16)
ಹಿಂದಿನ ಸಂಚಿಕೆಯಿಂದ….

ಬ್ರಹ್ಮಕಪಾಲವು ಶಿವನ ಹಸ್ತದಲ್ಲಿದ್ದು ರಕ್ತವನ್ನು ತೃಪ್ತಿಯಿಲ್ಲದೆ ಹೀರತೊಡಗಿತು. ಅದರಿಂದ ನೊಂದ ಶಿವನು ಕೈಕೊಡಹಿದನು. ಮೈನೆತ್ತರೇ ಆರತೊಡಗಿತಲ್ಲದೆ ಕಪಾಲವು ಕೈಯನ್ನು ಬಿಡಲಿಲ್ಲ.ನೋವು ಅತಿಯಾಯಿತು ಶಿವನು ಘರ್ಜಿಸಿದನು. ಆದರೂ ಹಿಡಿದ ಕಪಾಲವು ಬಿಡಲಿಲ್ಲ.ಆದರೆ ವಾಣೀ ಹಿರಣ್ಯಗರ್ಭನು ಒಮ್ಮೆ ಭೀತರೇ ಆಗಿದ್ದರೂ ಮತ್ತೆ ಹೋದ ತಲೆಗಾಗಿ ಹೆಚ್ಚು ದುಃಖಿಸಲಿಲ್ಲ.ಚತುರ್ಮುಖನಿಗೆ ಸರಸ್ವತಿಯೇ ಬೇರೊಂದು ಮುಖವಾಗಿ ಹೊಂದಿ ಕೂಡಿಕೊಂಡುದರಿಂದ ಮತ್ತೇನೂ ಆಗಲಿಲ್ಲ.
ಕೆಲವೇ ಸಮಯದ ಮೊದಲು ನೃತ್ಯ ಲೀಲಾ ನಿರತನಾಗಿ ಶಿವನು ಪೂರ್ಣಾನಂದವನ್ನು ಹೊಂದಿ ಇನ್ನಿತರರಿಗೂ ಅದನ್ನೇ ನೀಡುತ್ತಿದ್ದನು.ಈಗ ಮಾತ್ರ ಯಾರಿಗೂ ಬರಬಾರದ ಪಾಡುಬಂದು ಅವನು ಅತ್ಯಂತ ದುಃಖಿಯೇ ಆದನು. ಏನೊಂದೂ ಬೇಡವಾಯಿತು. ಅವನು ಮತ್ತೆ ಕೈಲಾಸಕ್ಕೂ ಹೋಗಲಿಲ್ಲ, ಪ್ರಮಥರನ್ನೂ ಕಾಣಲಿಲ್ಲ. ಕಾಣುವುದಕ್ಕೂ ಆಗಲಿಲ್ಲ. ಲೋಕಲೋಕಗಳನ್ನೆಲ್ಲಾ ಸುತ್ತಿದನು. ಭಿಕ್ಷುವೇ ಆಗಿ ಊರೂರು ಅಲೆದನು, ಬೇಡಿದನು. “ಭವತಿ ಭಿಕ್ಷಾಂದೇಹಿ ದೇಹಿ ಭಿಕ್ಷಾಂದೇಹಿ” ಎಂದೇ ಬೇಡಿದನು.
ಶಿವನು ಊರೂರು ಅಲೆದಲೆದು ಬೇಡಿದರೂ… ಆ ಭವನು ಬೇಡಿದುದೇನು.? ಅನ್ನವನ್ನೇ.? ವಸ್ತ್ರವನ್ನೇ.? ಅಥವಾ ಮುತ್ತು ರತ್ನ ಸುವರ್ಣಾದಿ ಸಂಪತ್ತನ್ನೇ.? ಒಂದನ್ನೂ ಅಲ್ಲ.ಸ್ಮಶಾನವಾಸಿಗೆ ಅನ್ನವೇಕೆ.? ದಿಗಂಬರನಿಗೆ ವಸ್ತ್ರವೇಕೆ.? ರುಂಡಮಾಲನಿಗೆ ರತ್ನಾದಿ ಆಭರಣಗಳೇಕೆ.? ಶಿವನು ಅದ್ಯಾವೂದೂ ಬಯಸಲಿಲ್ಲ. ಬ್ರಹ್ಮ ಕಪಾಲವು ರಕ್ತ ಕುಡಿಯದಿದ್ದರೆ ಸಾಕು, ಕುಡಿದರೂ ನೋವಾಗದಿದ್ದರೆ ಸಾಕು, ನೋವಾದರೂ ಕಡಿಮೆ ನೋವಾಗಲಿ ಎಂದು ಶಿವನು ಬೇಡಿದನು. ಭಿಕ್ಷಾಂದೇಹಿ, ನೋವಿನಿಂದ ನೊಂದ ಹೃದಯಕ್ಕೆ ಆನಂದದ ಭಿಕ್ಷೆಯನ್ನೇ ನೀಡಿ ಹೇಗಾದರೂ ಕೊಡಿ.. ಕೊಡಿ… ಹಾಡಿಕೊಡಿ ಕೊಂಡಾಡಿಕೊಡಿ. ಎಂದು ಬೇಡಿದನು.

ಕೊಟ್ಟವರುಂಟೋ.? ಕೊಂಡವರುಂಟೋ.? ಸ್ವರ್ಗದಲ್ಲಿ ದೇವತೆಗಳಿಗೆ ದೈತ್ಯರ ಹಾವಳಿ, ಮರ್ತ್ಯಲೋಕದಲ್ಲಿ ಅವರವರದೇ ಗೋಳು, ಪಾತಾಳದ ಉರಗರಿಗೆ ಗರುಡನ ಭೀತಿ. ಅವರೆಲ್ಲ ಏನು ಕೊಟ್ಟಾರು.? ಲೋಕಲೋಕಗಳನ್ನೆಲ್ಲಾ ಸುತ್ತಾಡಿ ಬೇಡಿ ನೋಡಿದ ಶಿವನು ಕಂಡುದೇನನ್ನು.? ಎಲ್ಲಿ ನೋಡಿದರೂ ಸುಖವಿಲ್ಲ, ಶಾಂತಿಯಿಲ್ಲ, ಆದರೆ ಪರಮಶಿವನಿಗೆ ನಿಂತಲ್ಲಿ ನಿಲ್ಲಲು ವ್ಯವಧಾನವೂ ಇಲ್ಲ ಅವನು ಬಳಲಿ ಬೆಂಡಾದನು. ಕಟ್ಟ ಕಡೆಗೆ ವೈಕುಂಠಕ್ಕೆ ನಡೆದನು. ಅಲ್ಲಿ ಒಂದೇ ಸವನೆ ಪ್ರಾರ್ಥಿಸಿದನು.
ಮಹಾವಿಷ್ಣುವು ಮೈದೋರಿ ಹರನ ಪರಿಭವವನ್ನು ನೋಡಿ ಮರುಗಿದನು. ವಿಚಾರವನ್ನರಿತು ಮುಗುಳ್ನಕ್ಕನು ಹಾಗೆಯೇ ಬ್ರಹ್ಮ ಕಪಾಲವನ್ನು ಕುರಿತು ” ಹೇ ಬ್ರಹ್ಮಶಿರವೇ ರುದ್ರರಕ್ತವನ್ನು ಹೀರಿ ಹೀರಿ ಹಿಗ್ಗಿರುವೆ ಇನ್ನೂ ಅಲ್ಲಿ ಏನಿದೆ? ಇಲ್ಲಿ ಬಾ.? ನನ್ನ ಕೈಗೆ ನೆಗೆದು ಬಾ ಮುಂದೆ ನದಿಯಂತೆ ಹರಿಯುವ ರಕ್ತಸ್ರೋತವಿದೆ ಕುಡಿ. ಕುಡಿಕುಡಿದು ಸಂತೃಪ್ತನಾಗು ” ಎಂದು ಕೈ ನೀಡಿದನು. ಆ ಕಪಾಲಕ್ಕೆ ಇನ್ನೇನು ಕಂಡಿತೋ ಹರನ ಹಸ್ತದಿಂದ ನೆಗೆಯಿತು. ಹರಿಯು ನೀಡಿದ ತನ್ನ ಕೈಯನ್ನು ಹಿಂದೆ ಸೆಳೆದುಬಿಟ್ಟನು. ಬ್ರಹ್ಮ ಶಿರವು ದೊಪ್ಪೆಂದು ಬಿತ್ತು ಉರುಳುರುಳಿ ಭೂಮಿಗೇ ಇಳಿಯಿತು.ಅಲ್ಲಿಯೂ ಭೂಮಿಯ ಗಂಧಶಕ್ತಿಯನ್ನು ಹೀರತೊಡಗಿತು.
ಶ್ರೀಹರಿಯು “ಎಲಾ ಮೆದುಳಿಲ್ಲದ ತಲೆಯೇ,ರಕ್ತ ಕುಡಿಯುವುದನ್ನು ಬಿಟ್ಟು ಈಗ ಮಣ್ಣನ್ನೇ ತಿನ್ನತೊಡಗಿರುವೆಯಾ? ತಡೆ ಚಿಂತಿಸಬೇಡ, ಮುಂದೆ ಕಾಲಾಂತರದಲ್ಲಿ ನಿನಗೆ ತೃಪ್ತಿಯಾಗುವಷ್ಟು ನೆತ್ತರನ್ನು ನಾನೇ ಒದಗಿಸಿಕೊಡುತ್ತೇನೆ, ಸದ್ಯ ತೆಪ್ಪಗಿರು” ಎಂದು ನುಡಿದು ಬ್ರಹ್ಮ ಕಪಾಲವನ್ನು ಸಂತೈಸಿದನು. ಶಿವನು ಶ್ರೀಹರಿಯನ್ನು ಕೊಂಡಾಡಿ ಮತ್ತೆ ಕೈಲಾಸವನ್ನು ಸೇರಿದನು.
ಭೃಗುಮಹರ್ಷಿಯ ಕೋಪ ಎಂತದ್ದು ನೋಡೋಣ. ಮುಂದಿನ ಸಂಚಿಕೆಯಲ್ಲಿ…..
