
“ಬ್ರಹ್ಮನಿಗೆ ಪೂಜೆ ಇಲ್ಲದಿರಲಿ” ಎಂದು ಭೃಗು ಮಹರ್ಷಿಗಳು ಶಪಿಸಿದ್ದಾದರೂ ಏಕೆ..?
ಪುರಾಣ ನೀತಿ.
(ಹೆಜ್ಜೆ- 17)
ಹಿಂದಿನ ಸಂಚಿಕೆಯಿಂದ….
ಒಂದೊಮ್ಮೆ ದೇವತೆಗಳೂ, ಋಷಿಗಳೂ ಕೂಡಿದ್ದ ಕಡೆ ತ್ರಿಮೂರ್ತಿಗಳ ಶ್ರೇಷ್ಠತೆಯ ಕುರಿತು ವಾದವೆದ್ದಿತು. ಆಗ ನಾರದರು ವೃಥಾ ವಾದವೇಕೆ.? ಪರೀಕ್ಷಿಸಿಯೇ ನೋಡೋಣ ಬ್ರಹ್ಮ ಮಾನಸ ಪುತ್ರರಾದ ಭೃಗು ಮಹರ್ಷಿಗಳು ಸರ್ವಸಮರ್ಥರು. ಅವರಿಗೆ ಮನೋವೇಗದ ಹಾಗೂ ಕಾಮಗಮನದ ಪ್ರಭಾವವನ್ನೊಳಗೊಂಡ ಕಣ್ಣೊಂದು ಅವರ ಬಲದ ಪಾದದಲ್ಲಿದ್ದು ಹೆಚ್ಚಿನ ಶಕ್ತಿಯೂ ಸಂಪ್ರಾಪ್ತವಾಗಿದೆ. ಅವರು ಮನಸ್ಸು ಮಾಡಿದರೆ ಅದೇನೂ ದೊಡ್ಡ ಕೆಲಸವಲ್ಲ ಎಂದು ನುಡಿದು ಭೃಗು ಮಹರ್ಷಿಗಳನ್ನು ಹುರಿದುಂಬಿಸಿದರು. ಅವರಿಗೂ ತಾನು ಇನ್ನಿತರರಿಂದ ಮೇಲೆಂಬ ಭಾವವೂ ಬೆಳೆಯಿತು. ಅಂತೆಯೇ ಹೊರಟು ಮೊದಲು ಸತ್ಯಲೋಕಕ್ಕೆ ನಡೆದರು.

ಅಲ್ಲಿ ಚತುರ್ಮುಖನಾದ ಬ್ರಹ್ಮದೇವನು ಶಾರದಾ ಸಮೇತನಾಗಿ ಓಲಗಗೊಟ್ಟಿದ್ದನು. ಮಹರ್ಷಿಗಳು ಸಮೀಪಕ್ಕೆ ನಡೆದರು. ಹಿರಣ್ಯಗರ್ಭನು ವಾಣಿಯೊಂದಿಗೆ ಏಕಾಸನ ಮಂಡಿತನಾಗಿ ಆ ಗೋಷ್ಠಿಯಲ್ಲೇ ನಿರತನಾಗಿದ್ದನು. ಋಷಿಗಳಿಗೆ ನೋಡಿ ಸಹಿಸಲಾಗಲಿಲ್ಲ. ಅವರನ್ನು ಅಲ್ಲಿ ಯಾರೂ ಆದರಿಸಿಲಿಲ್ಲ ಕೋಪವೇ ಬಂತು “ಬ್ರಹ್ಮನಿಗೆ ಮುಂದೆ ಪೂಜೆಯೆ ಇಲ್ಲದಿರಲಿ” ಎಂದು ಶಪಿಸಿ ಹೊರಟು ನೆಟ್ಟಗೆ ಕೈಲಾಸಕ್ಕೆ ಹೊರಟರು.

ಅಲ್ಲಿ ಸದಾಶಿವನು ಸಪತ್ನೀಕನಾಗಿ ಓಲಗವಿತ್ತಿದ್ದನು. ದಿಗಂಬರನಾಗಿ ತನ್ನ ಅರ್ಧಾಂಗಿಯನ್ನು ತೊಡೆಯ ಮೇಲೆಯೇ ಕುಳ್ಳಿರಿಸಿಕೊಂಡು ಏನನ್ನೋ ಚಿಂತಿಸುತ್ತಿದ್ದನು. ಋಷಿಗಳು ಸ್ವಲ್ಪ ಹೊತ್ತು ನೋಡಿದರು. ಮತ್ತೆ ನೋಡುವುದಕ್ಕೂ ಆಗಲಿಲ್ಲ. ಅವರನ್ನು ಯಾರು ಆದರಿಸಿಲಿಲ್ಲ, ಉಪಚರಿಸಲಿಲ್ಲ. ಕೋಪವೇ ಮೇಲೆದ್ದು ವಿಜೃಂಭಿಸಿತು “ಲಜ್ಜೆಗೇಡಿಯಾದ ಶಿವನ ಲಿಂಗವನ್ನೇ ಎಲ್ಲರೂ ಪೂಜಿಸಲಿ” ಎಂದು ಶಾಪವನ್ನು ಕೊಟ್ಟು ಹೊರಟು ಹೋದರು. ಹಾಗೆ ಹೋದವರು ವೈಕುಂಠವನ್ನು ಸೇರಿದರು.
ವೈಕುಂಠದಲ್ಲಿ ಯಾರೂ ಭೃಗುಋಷಿಗಳ ಕಣ್ಣಿಗೆ ಬೀಳಲಿಲ್ಲ. ನಾರಾಯಣನ ಒಳಮಂದಿರವನ್ನು ಹೊಕ್ಕರು. ಅಲ್ಲಿಯೂ ಒಬ್ಬನೇ ಒಬ್ಬನಿಲ್ಲ. ಎಲ್ಲೋ ಒಂದು ಮೂಲೆಯಲ್ಲಿ ಶ್ರೀಹರಿಯು ಮಾತ್ರ ನಿದ್ರಾಸಕ್ತನಾಗಿ ಪವಡಿಸಿದ್ದುದು ಕಂಡು ಬಂತು. ಋಷಿಗಳನ್ನು ಮತ್ತೆ ಮಾತಾಡಿಸುವವರಾರು..? ಮೊದಲೇ ಸತ್ಯಲೋಕದಲ್ಲಿ ಬಂದಿಸಿಟ್ಟು ಕೈಲಾಸದಲ್ಲಿ ಮತ್ತಷ್ಟು ಉಲ್ಬಣಿಸಿತ್ತು.ಮತ್ತೆ ವೈಕುಂಠದಲ್ಲಿ ಕೇಳುವುದೇನು..? ಮಹಾವಿಷ್ಣುವಿನ ಅಕಾಲ ನಿದ್ರೆಯೂ ಕೂಡಿ ಭೃಗುಋಷಿಗಳನ್ನು ಮತ್ತಷ್ಟು ಕೆರಳಿಸಿತು.
ಕೋಪಗೊಂಡ ಭೃಗುಮಹರ್ಷಿಯೂ ಮಾಡಿದುದ್ದಾದರೂ ಏನು..?
ಮುಂದಿನ ಸಂಚಿಕೆಯಲ್ಲಿ……
