ವಿಷ್ಣುವು ತನ್ನೆದೆಯಲ್ಲಿ “ಭೃಗುಲಾಂಛನ”ವೆಂದು ಏನನ್ನು ಧರಿಸಿಕೊಳ್ಳುತ್ತಾನೆ.?
ಪುರಾಣ ನೀತಿ
(ಹೆಜ್ಜೆ-18)
ಹಿಂದಿನ ಸಂಚಿಕೆಯಿಂದ…
ನಾರಾಯಣನ ಒಳಮಂದಿರವನ್ನು ಹೊಕ್ಕ ಭೃಗು ಮಹರ್ಷಿಗಳು ಶ್ರೀ ಹರಿಯು ನಿದ್ರಾಸಕ್ತನಾಗಿ ಪವಡಿಸಿದ್ದುದನ್ನು ಕಂಡು ಕುಪಿತಗೊಂಡು ಶ್ರೀ ಹರಿಯ ಬಳಿ ಒಮ್ಮೆ ‘ಹೂಂ’ ಕರಿಸಿದರು. ದೇವ ದೇವನಿಗೆ ಎಚ್ಚರವಾಗಲಿಲ್ಲ. ಕೋಪದಿಂದ ಉರಿಯುತ್ತಲೇ ಇದ್ದ ಋಷಿಗಳು ಮತ್ತೆ ಸಹಿಸದೆ ಬಲಗಾಲನ್ನೆತ್ತಿ ಮಹಾವಿಷ್ಣುವಿನ ವಕ್ಷಸ್ಥಲವನ್ನು ಒದ್ದೇ ಒದ್ದು ಬಿಟ್ಟರು.
ಇದರಿಂದ ಥಟ್ಟನೇ ಎಚ್ಚರಗೊಂಡ ಶ್ರೀ ಹರಿಯು ಎದ್ದು ಭೃಗು ಋಷಿಗಳ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡು “ಸರ್ವಾಪರಾಧವನ್ನೂ ಕ್ಷಮಿಸಬೇಕು. ಸವಾರಿಯು ಇತ್ತ ಬರುವುದನ್ನು ಅರಿತಿರಲಿಲ್ಲ. ನಾನು ನಿದ್ದೆಯಲ್ಲಿದ್ದುದರಿಂದ ಇಲ್ಲಿ ಇರಬೇಕಾದವರು ಒಬ್ಬರೂ ಇರಲಿಲ್ಲ.ಎದ್ದು ಬಂದು ಉಪಚರಿಸಬೇಕಾಗಿತ್ತು ಅಪಚಾರವನ್ನು ಮನ್ನಿಸಬೇಕು” ಎಂದು ಮುಂತಾಗಿ ನುಡಿದು ಪೀಠಾದಿಗಳನ್ನಿತ್ತು ಸತ್ಕರಿಸಿದನು. ಋಷಿಗಳು ಸುಪ್ರೀತರಾದರು. ಸಿಟ್ಟೆಲ್ಲ ಇಳಿಯಿತು, ಸಂತಸವೂ ಮೂಡಿತು. ಹಾಗೆಯೇ ನಡೆದುದೆಲ್ಲವನ್ನೂ ವಿವರಿಸಿ “ಹರಿಯೇ ಸರ್ವೋತ್ತಮನೆಂದು ತಿರ್ಮಾನಿಸಿದೆ” ಎಂದು ನುಡಿದರು.
ಹೀಗೆ ಒಂದೆರಡು ಯೋಗ ಕ್ಷೇಮಗಳ ಕುರಿತು ಮಾತಾಡಿ ಋಷಿಗಳು ತನ್ನ ಕೆಲಸವು ಪೂರೈಸಿತೆಂದು ಮೇಲೆದ್ದು ದೇವಲೋಕಕ್ಕೆ ತೆರಳಲು ಸಿದ್ಧರಾದರು. ಆದರೆ ಮೊದಲಿನಂತೆ ನಡೆಯಲು ಸಾಧ್ಯವಾಗಲಿಲ್ಲ. ಏಕೆಂದು ಯೋಚಿಸಿ ಶ್ರೀ ಹರಿಯನ್ನೊದ್ದ ತನ್ನ ಪಾದವನ್ನು ನೋಡಿದರು. ಅಲ್ಲಿದ್ದ ಆ ದಿವ್ಯ ನೇತ್ರವು ಮಾಯವಾಗಿತ್ತು. ಅವರು ನಿಟ್ಟುಸಿರನ್ನು ಸೂಸಿ ಶ್ರೀ ಹರಿಯತ್ತ ದಿಟ್ಟಿಸಿದರು. ಆ ನೇತ್ರವು ಶ್ರೀಹರಿಯ ವಕ್ಷಸ್ಥಲದಲ್ಲಿ ಮಿನುಗುತ್ತಿತ್ತು. ಋಷಿಗಳು ದುಃಖದಿಂದ ಅತಿಯಾಗಿ ಮರುಗಿ ಕಣ್ಣೀರನ್ನೇ ಸುರಿಸಿದರು.
ಶ್ರೀಹರಿಯು ನಗುತ್ತಾ “ಮಹಾತ್ಮರಾದ ಭೃಗು ಮಹರ್ಷಿಗಳೇ ನೀವೂ ಹೀಗೆ ಅಚಾತುರ್ಯವನ್ನು ಮಾಡುವುದೇ..? ತ್ರಿಮೂರ್ತಿಗಳಲ್ಲಿ ಭೇದವಿಲ್ಲವೆಂದು ಈ ಮೊದಲೇ ವಿದಿತವಾಗಿದೆ. ಮತ್ತೇಕೆ ನಿಮಗೆ ಅದನ್ನು ಪರೀಕ್ಷಿಸುವ ಕೆಲಸ. ಹೇಳುವವರು ಏನೂ ಹೇಳಬಹುದು ನಿಮ್ಮಂಥವರು ಅದಕ್ಕೆಲ್ಲ ಕಿವಿಗೊಡುವುದೇ? ಯಾರೇ ಆಗಲಿ ನಮ್ಮನ್ನು ಪರೀಕ್ಷಿಸಲು ಹೊರಟವರು ಇದ್ದುದನ್ನು ಕಳೆದುಕೊಳ್ಳುವುದಲ್ಲದೆ ಪಡೆಯುವುದೇನೂ ಇಲ್ಲ.
ನಿಮ್ಮ ಪಾದದ ಆ ದಿವ್ಯ ನೇತ್ರವು, ನಿಮ್ಮ ಘನವಾದ ಈ ಕಾರ್ಯಸಾಧನೆಯ ಸಫಲತಾ ರೂಪದ ಕುರುಹಾಗಿ ನನ್ನೆದೆಯಲ್ಲಿರಲಿ. ನಾನು ಅದನ್ನು “ಭೃಗುಲಾಂಛನ”ವೆಂದು ಗೌರವದಿಂದ ಧರಿಸಿಕೊಳ್ಳುತ್ತೇನೆ. ಕಾಲಿನಲ್ಲೇ ಕಣ್ಣಿದ್ದರೂ ಜ್ಞಾನದ ಕಣ್ಣು ಮಸುಕಾಗಿದ್ದರೆ ಹೀಗೇ ಆಗುತ್ತದೆಂಬುದನ್ನು ಲೋಕ ತಿಳಿಯಲಿ. ನಿಮಗೆ ನಷ್ಟವಾದರೂ ಲೋಕಕ್ಕೆ ಲಾಭವಾಯಿತು ಪ್ರಸನ್ನ ಚಿತ್ತರಾಗಿ ಮುಂದೆ ಪಾದಬೆಳೆಸೋಣಾಗಲಿ ” ಎಂದು ನುಡಿದು ಕಳುಹಿಸಿ ಕೊಟ್ಟನು.
ನಡೆದ ವಿಚಾರವನ್ನು ಭೃಗು ಮಹರ್ಷಿ ಮಡದಿ ಖ್ಯಾತಿಯಲ್ಲಿ ತಿಳಿಸಿದಾಗ ಆಕೆ ಮಾಡಿದ್ದಾದರೂ ಏನು …?
ಮುಂದಿನ ಸಂಚಿಕೆಯಲ್ಲಿ….