ಖ್ಯಾತಿಯು ಶ್ರೀಹರಿಗೆ ನೀಡಿದ ಶಾಪವೇನು..?
ಪುರಾಣ ನೀತಿ
(ಹೆಜ್ಜೆ-19)
ಹಿಂದಿನ ಸಂಚಿಕೆಯಿಂದ…
ಆಶ್ರಮಕ್ಕೆ ಬಂದ ಪತಿಯ ಮುಖಭಾವವನ್ನು ಕಂಡು ಭೃಗುಪತ್ನಿಯಾದ ಖ್ಯಾತಿಯು ಸಮಾಚಾರವನ್ನೆಲ್ಲ ತನ್ನ ಗಂಡನಿಂದ ತಿಳಿದು ಶ್ರೀಹರಿಯ ಕುರಿತಾಗಿ ಕ್ರುದ್ದಳೇ ಆದಳು. ಅಜ,ಭವರು ತನ್ನರಸನನ್ನು ಅನಾದರಿಸಿದರಲ್ಲದೆ ವಂಚಿಸಲಿಲ್ಲ. ಹರಿಯು ವಂಚಿಸಿಯೇ ಬಿಟ್ಟನು ಎಂದು ಎಣಿಸಿಕೊಂಡು ಕೋಪದಿಂದ ಮಹಾವಿಷ್ಣುವನ್ನು ಕುರಿತು “ನಾನಾ ಯೋನಿಮುಖಗಳಿಂದ ಹುಟ್ಟಿ ಹುಟ್ಟಿ ಪಾಡು ಪಡು” ಎಂದು ಶಪಿಸಿಯೇ ಬಿಟ್ಟಳು.ತ್ರಿಮೂರ್ತಿಗಳಲ್ಲಿ ಸದ್ಯ ಮೂರು ಮಂದಿಗೂ ಶಾಪವು ಪ್ರಾಪ್ತಿಸಿತು.ಅದರಲ್ಲಿಯೂ ಅವರೊಳಗೆ ಭೇದವಿಲ್ಲವೆಂದೇ ಪ್ರಸಿದ್ಧಿಯಾಯಿತು.
ಮಹಾತ್ಮನಾದ ಅಂಗಿರಸ ಮುನಿಯ ಮಗನಾದ ಬೃಹಸ್ಪತಿಯು ಸಕಲ ವಿದ್ಯಾವಿಶೇಷಗಳಿಂದ ಖ್ಯಾತನಾಗಿ ದೇವಗುರುವೆಂದೇ ಪ್ರಸಿದ್ಧನಾಗಿ ಗ್ರಹಾಧಿಪತ್ಯವನ್ನೂ ಪಡೆದಿದ್ದನು. ‘ತಾರೆ’ ಎಂಬವಳು ಇವನ ಪತ್ನಿ. ಹಿಂದೆ ಚಂದ್ರನೂ ಈ ಗುರುವಿನಲ್ಲಿ ವಿದ್ಯಾವ್ಯಾಸಂಗ ಮಾಡಿದ್ದನು. ಒಮ್ಮೆ ಬೃಹಸ್ಪತಿಯು ಕಾರ್ಯಂತರದಿಂದ ಎಲ್ಲೋ ದೂರ ಹೋಗಿದ್ದನು. ವಿರಹಸಂತಪ್ತೆಯಾದ
ತಾರೆಯು ಸ್ನಾನಕ್ಕಾಗಿ ಸರೋವರದ ಕಡೆಗೆ ಸಾಗಿ ಬಂದಳು. ಬರುತ್ತಾ ಆಕೆಗೆ ಚಂದ್ರನ ನೆನಪಾಯಿತು. ಅವನ ಲೋಕಮೋಹಕ ರೂಪವು ಸ್ಮರಣೆಗೆ ಬಂತು. ಕಾತುರವೂ ಹೆಚ್ಚಿತು. ಇನ್ನಾವ ಅದೃಷ್ಟದ ಕಾರಣವೋ? ಅಷ್ಟರಲ್ಲಿ ಚಂದ್ರನೂ ಅತ್ತ ಕಡೆಯಿಂದಲೇ ಬಂದನು.
ಇಬ್ಬರೂ ಒಬ್ಬರನ್ನೊಬ್ಬರು ನೋಡಿದರು. ಹೃದಯ ಭಾವವು ಮೊದಲೇ ಮುಖದಲ್ಲಿ ಮಿನುಗುತ್ತಿತ್ತು. ಎಂದೋ ಮೂಡಿ ಮುಗಿಯದ ಆಸೆಯದು ಅಂದು ಎಲ್ಲಾ ಬಂಧನಗಳನ್ನೂ ಹರಿದೊಗೆದು ಮೈಗೂಡಿತು. ತಾರಾ ಚಂದ್ರರು ಯಾವ ಭಯ ಲಜ್ಜೆ ಸಂಕೋಚಗಳೂ ಇಲ್ಲದೆ ದಿನ ಮಾಸದೆಣಿಕೆಯೂ ಇಲ್ಲದೆ ಬಹುಕಾಲ ಸುಖಿಸಿದರು.
ಸ್ವಲ್ಪ ಸಮಯದ ಮೇಲೆ ಬೃಹಸ್ಪತಿಯು ಬಂದನು ವಿಚಾರವನ್ನರಿತು ಮಾಡಿದ್ದಾದರೂ ಏನು…?
ಮುಂದಿನ ಸಂಚಿಕೆಯಲ್ಲಿ….