January 18, 2025
purana-1

ಪುರಾಣ ನೀತಿ

(ಹೆಜ್ಜೆ – 2) 

ಶೃಂಗಿಯು ನೀಡಿದ ಶಾಪವಾದರೂ ಏನು..?

ಹಿಂದಿನ ಸಂಚಿಕೆಯಿಂದ…..

                   ಹೀಗೆ ಉತ್ತಂಕನು ತನ್ನ ಪರಿಚಯವನ್ನು ಮುಂದುವರಿಸುತ್ತ. ಮಹಾರಾಜ ನಾನು ಗುರುವಿನ ಋಣದಿಂದ ವಿಮುಕ್ತನಾದರೂ, ನನಗೆ ತಕ್ಷಕನಿಂದ ಆದಂತಹ ಅನ್ಯಾಯ ಮರೆಯಾಗಲಿಲ್ಲ ಅವನ ಮೇಲಿನ ಕ್ರೋಧವು ಆರಲಿಲ್ಲ. ಅದು ಹೆಚ್ಚುತ್ತಲೇ ಇತ್ತು. ಅವನಿಗೆ ಏನಾದರೂ ಮಾಡಲೇಬೇಕೆಂದು ಊರೆಲ್ಲ ಸುತ್ತುತ್ತಿದ್ದೆ. ಏನು ಮಾಡೋದು ನಾನೊಬ್ಬ ಬಡ ಬ್ರಾಹ್ಮಣ, ನನ್ನಿಂದ ಏನು ಮಾಡಲು ಸಾಧ್ಯ..? ಅಲ್ಲದೆ, ನನಗೋಸ್ಕರ ಯಾರು..? ಯಾಕೆ..? ಆ ದುಷ್ಟ ಸರ್ಪದ ಹಗೆಯನ್ನು ಕಟ್ಟಿಕೊಳ್ಳುತ್ತಾರೆ. ಅವನ ಅನ್ಯಾಯಕ್ಕೆ ಶಿಕ್ಷೆ ನೀಡುವವರಾರು ಎಂದು ಸುತ್ತುತ್ತಿದ್ದೆ ನನಗೆ ನನ್ನ ಸುದೈವದಿಂದ ಸರ್ವಸಮರ್ಥನೂ ಮಹಾರಾಜನೂ ಆದ ನಿನ್ನ ಖ್ಯಾತಿಯ ಕುರಿತು ತಿಳಿದು ಬಂತು. ಮಾತ್ರವಲ್ಲ ಆ ನೀಚ ತಕ್ಷಕನು ನಿನ್ನಂಥವರಿಗೆ ದ್ರೋಹಮಾಡಿ ದಕ್ಕಿಸಿಕೊಂಡನಂತೆ. ಅವನು ನಡೆಸಿದ ಅಪರಾಧ ಅದು ಎಷ್ಟೊ ವರ್ಷಗಳ ಹಿಂದಿನ ವಿಚಾರ ಅದು ಅನೇಕರಿಗೆ ಮರೆತೇ ಹೋಗಿದೆ. ನಿನ್ನ ತಂದೆಯ ಮರಣದ ವೃತ್ತಾಂತವನ್ನು ನೀನು ಅರಿಯದೆ ಹೋಗುವುದು ಸರಿಯಲ್ಲ. ರಾಜೇಂದ್ರ ನಿನಗೆ ತಾಳ್ಮೆಯಿದ್ದರೆ ನಿನ್ನ ಪಿತೃವಧಾವೃತ್ತಾಂತದ ರಹಸ್ಯವನ್ನು ನಿನಗೆ ತಿಳಿಸಲು ಅನುಮತಿಯನ್ನು ನೀಡು.

                ನಿನ್ನ ತಂದೆಯಾದ ಪರೀಕ್ಷಿತ ಮಹಾರಾಜನನ್ನು ನಾನು ನೋಡಲಿಲ್ಲ ಆದರೆ, ಉತ್ತಮೋತ್ತಮನೂ, ಭೂಪಾಲಕನೂ ಆದ ಅವನ ಬಗ್ಗೆ ಕೇಳಿ ತಿಳಿದಿಹೆನು. ಒಂದು ದಿನ ಬೇಟೆಗಾಗಿ ಹೋಗಿದ್ದವನು ಜಿಂಕೆಯ ಮರಿಯೊಂದನ್ನು ಅಟ್ಟುತ್ತಾ ಮುಂದೆ ಮುಂದೆ ತಾನೊಬ್ಬನೇ ಸಾಗಿದ್ದನಂತೆ. ಬೇಟೆಯೂ ಸಿಗದೆ ದಿಕ್ಕೂ ತಿಳಿಯದೇ ಹಾಗೆ ನಿಂತು ಬಿಟ್ಟನಂತೆ. ಅಲ್ಲಿ ಶಮಿಕನೆಂಬ ಋಷಿಯೊಬ್ಬನು ತಪಸ್ಸು ಮಾಡಿದ್ದನಂತೆ. ಪರೀಕ್ಷಿತನು ಜಿಂಕೆಯ ಕುರಿತಾಗಿ ಅವನಲ್ಲಿ ಕೇಳಲು ಅವನು ಅದಕ್ಕೆ ಉತ್ತರಿಸದೆ ಧ್ಯಾನದಲ್ಲಿ ನಿರತನಾಗಿದ್ದನಂತೆ. ರಾಜನಿಗೆ ಬೇಟೆಯಾಡಿದ್ದ ಬಳಲಿಕೆ, ಬೇಟೆಯೂ ಸಿಗದ ದುಃಖ, ಋಷಿಯ ಮೌನ ಒಟ್ಟಾಗಿ ಒಂದು ರೀತಿಯ ಜಿಗುಪ್ಸೆ ರೋಷ ತಲೆದೋರಿರಬೇಕು, ಅದು ಯಾರಿಗೇ ಆದರೂ ಸ್ವಾಭಾವಿಕ. ಹೀಗೆ ರೋಷದಲ್ಲಿ ಪಕ್ಕದಲ್ಲಿ ಇದ್ದ ಹಾವಿನ ಪೊರೆಯನ್ನು ಋಷಿಯ ಕೊರಳಿಗೆ ಹಾಕಿ ರಾಜಧಾನಿಗೆ ಹೊರಟು ಹೋದನಂತೆ.

                 ಸ್ವಲ್ಪ ಹೊತ್ತಿನಲ್ಲಿಯೇ ಶಮಿಕನ ಮಗನಾದ ಶೃಂಗಿಯು ತಂದೆಯಿದ್ದಲ್ಲಿಗೆ ಬಂದು ಕೋಪದಲ್ಲಿ ತನ್ನ ತಂದೆ ಧ್ಯಾನದಲ್ಲಿ ಇದ್ದಾಗ ಅವರ ಕೊರಳಿಗೆ ಹಾವಿನ ಪೊರೆಯನ್ನು ಹಾಕಿದವ ಯಾರೆ ಆದರೂ ಏಳು ದಿನದೊಳಗಾಗಿ ತಕ್ಷಕನಿಂದ ಕಚ್ಚಿ ಕೊಲ್ಲಲ್ಪಡಲಿ ಎಂದು ಶಾಪವಿಟ್ಟನು. ನಿಜವಾಗಿ ನೋಡು ಎಂಥಾ ಪಿತೃ ಭಕ್ತಿ. ಹಾವಿನ ಪರೆಯನ್ನು ಎತ್ತಿ ಅವನ ತಂದೆಯ ಕೊರಳಿಗೆ ಹಾಕಿದ್ದರಿಂದಲೇ ಶೃಂಗಿಯು ನಿನ್ನ ತಂದೆಗೆ ಶಾಪವಿಟ್ಟನು. ಮತ್ತೆ ಬಹಿರ್ಮುಖನಾದ ಶಮಿಕನೂ ಎಲ್ಲವೂ ಜ್ಞಾನದಿಂದ ತಿಳಿದು ಬಹುವಾಗಿ ಮರುಗಿದನು. ಪರೀಕ್ಷಿತ ನಂತಹ ಮಹಾರಾಜನಿಗೆ ತನ್ನ ಮಗ ಶಾಪವನ್ನಿತ್ತನಲ್ಲಾ , ಕ್ಷಮೆಯೂ ದಯೆಯೂ ತಪಸ್ವಿಗಳಿಗೆ ಭೂಷಣವು ಅಂತರದಲ್ಲಿ, ನನ್ನ ಮಗ ಈ ರೀತಿ ಶಾಪವನ್ನಿತ್ತನಲ್ಲಾ ಎಂದು ದುಃಖಿಸಿದನು. ಅಂತೆಯೇ ಶಮಿಕನೂ ತನಗೆ ತಾನೇ ಆಲೋಚಿಸಿ ತನ್ನ ಶಿಷ್ಯನಾದ ಗೌರಮುಖನ ಮೂಲಕ ಪರೀಕ್ಷಿತ ಮಹಾರಾಜನಿಗೆ ಶಾಪ ನೀಡಿರುವ ವಿಚಾರವನ್ನು ತಿಳಿಸಿ ರಕ್ಷಿಸಿಕೊಳ್ಳುವಂತೆ ಪೂರ್ವಸೂಚನೆಯನ್ನು ನೀಡಿದನಂತೆ.
                 ಶಾಪವೃತ್ತಾಂತವನ್ನು ತಿಳಿದು ಭೀತನಾದ ನಿನ್ನ ಪಿತ ತಾನೇ ಏನು ಮಾಡಲು ಸಾಧ್ಯ..? ಆದರೂ ಅವನು ಒಂದೇ ಕಂಬವುಳ್ಳ ಎತ್ತರವಾದ ಮಂಟಪವೊಂದನ್ನು ಕಟ್ಟಿಸಿ ಸುತ್ತಲೂ ಬೇಕಾದ ರಕ್ಷಣೆಯನ್ನಿಟ್ಟು ಅದರ ಮೇಲೊಂದು ವಸತಿಯನ್ನು ಕಲ್ಪಿಸಿಕೊಂಡನಂತೆ, ಅಲ್ಲದೆ ಜೊತೆಗೆ ಮಾಂತ್ರಿಕರನ್ನೂ, ವೈದ್ಯರನ್ನೂ ಬಳಿಯಲ್ಲಿರಿಸಿಕೊಂಡನಂತೆ. ಸಜ್ಜನನಾದ ಶಮಿಕನೂ ಮನಸ್ಸಿನಲ್ಲಿ ತಕ್ಷಕನಿಂದ ಅರಸನಿಗೆ ಏನೂ ಆಗದಿರಲಿ, ಒಂದು ವೇಳೆ ಕಚ್ಚಿದರೂ ವಿಷವೇರದಿರಲಿ, ವಿಷವೇರಿದರೂ ವೈದ್ಯರು ಪರಿಹರಿಸಲಿ. ಹೇಗಾದರೂ ಮಹಾರಾಜ ಆ ವಿಪತ್ತಿನಿಂದ ಪಾರಾಗಲಿ ಎಂಬ ಸದ್ಬಾವನೆಯಿಂದ ಇದ್ದನು. ಇತ್ತ ಮಹಾರಾಜನು ಪ್ರಾಣಭಯದಿಂದ ಆರು ದಿನಗಳನ್ನು ಕಳೆದು ಏಳನೇ ದಿನದತ್ತ ನೋಡುತ್ತಿದ್ದ. ನಿರಾಸೆಯಲ್ಲಿಯೂ ಆಸೆಯ ಕುಡಿಯೊಂದು ಮೊಳೆಯುತ್ತಿತ್ತು.

                 ಆ ಏಳನೇ ದಿನ ಬಂದೆ ಬಿಟ್ಟಿತು, ಕಾಶ್ಯಪನೆಂಬ ಬಹುದೊಡ್ಡ ಮಾಂತ್ರಿಕನೊಬ್ಬನು ಮಹಾರಾಜನ ಪ್ರಾಣಭಯವನ್ನು ಹೋಗಲಾಡಿಸಿ ಅವರನ್ನು ವಿಪತ್ತಿನಿಂದ ಪರಿಹರಿಸಿ ಏನಾದರೂ ಹಿರಿದಾದ ಪ್ರತಿಫಲವನ್ನು ಪಡೆಯುವ ಆಸೆಯಿಂದ ರಾಜನಿದ್ದಲ್ಲಿಗೆ ಬರುತ್ತಿದ್ದನು. ಇತ್ತ ತಕ್ಷಕನು ಅರಸನನ್ನು ಕಚ್ಚಿ ಕೊಲ್ಲುವುದಕ್ಕಾಗಿ ಬರುತ್ತಿದ್ದನು. ಇಬ್ಬರೂ ದಾರಿಯಲ್ಲಿ ಒಂದಾದರು, ಮಾತಾಡಿಕೊಂಡರು.

                 ತಕ್ಷಕನಿಗೆ ಈ ಬ್ರಾಹ್ಮಣ ಮಂತ್ರವಾದಿಯ ಮಂತ್ರ ಶಕ್ತಿಯನ್ನು ಪರೀಕ್ಷಿಸಬೇಕು ಎಂದು ಅನ್ನಿಸಿತು. ಅದಕ್ಕಾಗಿ ತಕ್ಷಕನು ಮಾಡಿದ್ದಾದರೂ ಏನು..?

ಮುಂದಿನ ಸಂಚಿಕೆಯಲ್ಲಿ……….

✍🏻 ಎಸ್ ಕೆ ಬಂಗಾಡಿ

 

Leave a Reply

Your email address will not be published. Required fields are marked *