January 18, 2025
purana-1

ಊರ್ವಶಿಯ ಸೃಷ್ಟಿ ಹೇಗಾಯಿತು …?

ಪುರಾಣ ನೀತಿ.

(ಹೆಜ್ಜೆ-21)

ಪಾಲನಾ ಕರ್ತನಾದ ಶ್ರೀಮಹಾವಿಷ್ಣುವು ಒಮ್ಮೆ ಮನೋಗತವಾಗಿ ಏನನ್ನೋ ವಿಚಾರ ಮಾಡಿಕೊಂಡು ತನ್ನಂಶದಿಂದ ‘ನರ’ ‘ನಾರಾಯಣ’ ರೆಂಬ ಇಬ್ಬರು ಋಷಿಗಳನ್ನು ಸೃಷ್ಟಿಸಿದನು.ನರನೂ ನಾರಾಯಣರಿಬ್ಬರೂ ನಾರಾಯಣರೇ ಇದೇ ಆ ಸೃಷ್ಟಿಯ ಕೌತುಕವು.

ನರ ನಾರಾಯಣರು ಹುಟ್ಟಿನಿಂದಲೇ ಋಷಿಗಳು ಆದರೂ ಅವರು ಮತ್ತೆ ತ್ರಿಮೂರ್ತಿಗಳನ್ನು ತಪಸ್ಸಿನಿಂದ ಮೆಚ್ಚಿಸಿ ಅವರ ಬೇರೆ ಬೇರೆ ಅಂಶಗಳ ಶಕ್ತಿಯ ಅನುಗ್ರಹವನ್ನು ಪಡೆದುಕೊಂಡು ಭಗವದಾಜ್ಞೆಯಂತೆ ಬದರಿಕಾಶ್ರಮಕ್ಕೆ ಬಂದು ಒಂದು ಕಡೆ ತಪೋನಿರತರಾದರು.

ಯಾರೋ ಹೊಸಬರು ತಪೋಮಗ್ನರಾಗಿರುವರೆಂದು ಚಾರಣರಿಂದ ತಿಳಿದ ಇಂದ್ರನು ಅವರನ್ನು ಪರೀಕ್ಷಿಸಲು ಅತ್ಯಂತ ರೂಪಲಾವಣ್ಯವತಿಯರಾದ ವಿಲಾಸಿನಿಯರನ್ನು ಕಳುಹಿಸಿದನು. ಅವರು ತಮ್ಮ ಬೆಡಗು ಬಿನ್ನಾಣಗಳಿಂದ ಋಷಿಗಳ ಚಿತ್ತಸ್ಥೈರ್ಯವನ್ನು ಕಲಕಲು ಪ್ರಯತ್ನಿಸಿದರು.ಆಗ ನಾರಾಯಣ ಋಷಿಯು ತನ್ನ ತೊಡೆಯನ್ನು ಗೀರಿ ಒಬ್ಬ ಲೋಕೋತ್ತರ ಸುಂದರಿಯನ್ನು ಸೃಷ್ಟಿಸಿದರು.

ಅವಳನ್ನು ಕಂಡ ದೇವವಿಲಾಸಿನಿಯರು ಅವಳ ಮೋಹಜಾಲದಲ್ಲೇ ತಾವೂ ಬಿದ್ದುಬಿಟ್ಟರು.ಅಂತೆಯೇ ಇಂದ್ರನಲ್ಲಿ ಬಿನ್ನೈಸಿಕೊಂಡರು.ಇಂದ್ರನು ಬಂದು ಋಷಿಗಳನ್ನು ಕಂಡು ಅಪರಾಧವಾಯಿತೆಂದು ಪ್ರಾರ್ಥಿಸಿದನು. ಸುಪ್ರೀತರಾದ ಋಷಿಗಳು ತಮ್ಮಿಂದಲೇ ಸೃಷ್ಟಿಗೊಂಡವಳನ್ನು “ಊರ್ವಶಿ” ಎಂದು ಹೆಸರನ್ನಿಟ್ಟು ಇಂದ್ರನಿಗೆ ಒಪ್ಪಿಸಿ ತಪೋನಿರತರಾದರು. ಇಂದ್ರನೂ ಅವಳನ್ನು ಪಡೆದು ಸ್ವರ್ಗದಲ್ಲಿ ಅವಳಿಗೆ ವಿಶೇಷವಾದ ಸ್ಥಾನವನ್ನಿತ್ತು ಪತಿಕರಿಸಿದನು.

ಮುಂದುವರಿಯುವುದು…

✍🏻 ಎಸ್ ಕೆ ಬಂಗಾಡಿ.

Leave a Reply

Your email address will not be published. Required fields are marked *