September 20, 2024

ಜನಮೇಜಯನು ಕೈಗೊಂಡ ಯಾಗವಾದರೂ ಯಾವುದು…?

ಪುರಾಣ ನೀತಿ

ಹೆಜ್ಜೆ- 3

ಹಿಂದಿನ ಸಂಚಿಕೆಯಿಂದ…

                    ಕಾಶ್ಯಪನೆಂಬ ಮಾಂತ್ರಿಕನನ್ನು ಪರೀಕ್ಷಿಸಲು ಹೊರಟ ತಕ್ಷಕನು ಸಮೀಪದಲ್ಲೇ ಬೆಳೆದು ನಿಂತಿದ್ದ ಬಹುದೊಡ್ಡ ಆಲದ ಮರವೊಂದನ್ನು ಕಚ್ಚಿದನು. ತಕ್ಷಕನ ವಿಷದ ಉರಿಯಿಂದ ಆ ಮರವು ಕರಗತೊಡಗಿತು. ಬ್ರಾಹ್ಮಣನು ಕೂಡಲೇ ಮಂತ್ರೋದಕವನ್ನು ಸಿಂಪಡಿಸಿದನು. ಮರವು ಮತ್ತೆ ಹಸಿಯೇರಿ ಚಿಗುರತೊಡಗಿತು. ಅದನ್ನು ಕಂಡ ತಕ್ಷಕನಿಗೆ ಅಚ್ಚರಿಯೇ ಉಂಟಾಯಿತು ಕೊಲ್ಲುವವನಿಗಿಂತಲೂ ರಕ್ಷಿಸುವವನು ದೊಡ್ಡವನು ಎಂದು ಅನ್ನಿಸಿತು. ಈ ಬ್ರಾಹ್ಮಣನಿಂದ ತನ್ನ ಪ್ರತಿಷ್ಠೆಯು ಕುಂದಿ ಗೌರವ ಹಾನಿಯಾಗಬಹುದು ಎಂದು ಕಂಡಿತು. ಅಂತೆಯೇ ಅವನು ಆ ಬ್ರಾಹ್ಮಣನಿಗೆ ಹೇರಳ ದ್ರವ್ಯವನ್ನಿತ್ತು ಆತನನ್ನು ಹಿಂದೆ ಕಳುಹಿಸಿಬಿಟ್ಟನು. ಆ ಮಾಂತ್ರಿಕನಿಗೆ ಒಬ್ಬ ಮಹಾರಾಜನು ಬದುಕಿ ಉಳಿಯುವುದಕ್ಕಿಂತಲೂ, ಆ ಮೂಲಕ ಪ್ರಾಪ್ತವಾಗತಕ್ಕ ಕೀರ್ತಿಗಿಂತಲೂ, ಮಾತ್ರವಲ್ಲ ಅಮೋಘವಾದ ತನ್ನ ಮಂತ್ರ ಶಕ್ತಿಯ ಗೌರವಕ್ಕಿಂತಲೂ ದ್ರವ್ಯದಾಶೆಯು ಬಲವತ್ತರವಾಗಿ ಹೋಯಿತು. ಲೋಕೋಪಯುಕ್ತಗಳಾದ ಇಂಥಹ ವೈಶಿಷ್ಟ್ಯವುಳ್ಳ ಮಂತ್ರಗಳು ಕುತ್ಸಿತರಿಗೆ ಸಿಕ್ಕಿದರೆ ಅಷ್ಟೇ ಅಲ್ಲದೆ ಮತ್ತೇನಾದಿತು..? ದಾರಿದ್ರ್ಯವು ಎಂತಹುದನ್ನೂ ಮಾಡಿಸುತ್ತದೆ. ನಿನ್ನ ತಂದೆಯು ತಕ್ಷಕನಿಗೆ ಯಾವ ಅಪಕಾರವನ್ನೂ ಮಾಡಿರಲಿಲ್ಲ. ಆದರೂ ಕಚ್ಚಿ ಕೊಲ್ಲುವುದಕ್ಕಾಗಿಯೇ ಬರುತ್ತಿದ್ದನು.ಶೃಂಗಿಯ ಶಾಪದಂತೆ ಕಚ್ಚಿದರೆ ಸಾಕಲ್ಲವೇ..? ಬದುಕಿಸುವ ಮಾಂತ್ರಿಕನನ್ನು ಹಿಂದಕ್ಕಟ್ಟಿ ಅರಸನನ್ನು ಕೊಂದೇ ತೀರಬೇಕೆಂಬ ಹಠವು ಯಾಕೆ..?.

                       ತಕ್ಷಕನು ತನಗಿದ್ದ ವಿಘ್ನವನ್ನು ನಿವಾರಿಸಿಕೊಂಡು ಪರೀಕ್ಷಿತ ರಾಜನು ಇದ್ದ ಸ್ಥಳಕ್ಕೆ ಬಂದನು, ಆದರೆ ಅವನ ಬಳಿ ಹೋಗಲು ಯಾವ ಆಸ್ಪದವೂ ಇರಲಿಲ್ಲ. ಆದ್ದರಿಂದ ಕುತಂತ್ರವನ್ನೇ ಮಾಡಿದನು. ಸೂರ್ಯಾಸ್ತದ ವೇಳೆ ಸನ್ನಿಹಿತವಾಗುತ್ತಿದ್ದಂತೆಯೇ ತಕ್ಷಕನ ಸಂಗಡಿಗರು ಕೆಲವರು ಬ್ರಾಹ್ಮಣರಾಗಿ ಕಾಣಿಕೆಯ ಹಣ್ಣನ್ನು ಹಿಡಿದು ಮಹಾರಾಜನನ್ನು ಹೊಗಳುತ್ತ ಹೊರಟರು. ತಕ್ಷಕನು ಆ ಹಣ್ಣೊಂದರಲ್ಲಿ ಯಾರಿಗೂ ಕಾಣಿಸದಂತೆ ಸೂಕ್ಷ್ಮಾತಿ ಸೂಕ್ಷ್ಮ ಕ್ರಿಮಿಯಾಗಿ ಸೇರಿಕೊಂಡನು. ಬ್ರಾಹ್ಮಣ್ಯದ ಹಿರಿಮೆಯ ಗೌರವದಿಂದ ಮಾನ್ಯರಾಗಿ ಮೇಲೇರಿ ಮಹಾರಾಜನ ಸನ್ನಿಧಿ ಸೇರಿಕೊಂಡರು. ಈ ತಂದೆಗೆ ಮಾತೃಗರ್ಭದಲ್ಲಿದ್ದಾಗ ಯಾವುದೋ ವಿಶೇಷವಾದ ದೈವೀ ಶಕ್ತಿಯೊಂದು ಅವನನ್ನು ರಕ್ಷಿಸುತ್ತಿತ್ತಂತೆ – ಆಗಲೇ ಅದೇನು ಎಂದು ಪರೀಕ್ಷಿಸುತ್ತಿದ್ದನಂತೆ ಅಂತೆಯೇ ಅವನಿಗೆ ಪರೀಕ್ಷಿತನೆಂದು ಹೆಸರು ಬಂದಿತ್ತಂತೆ. ಗರ್ಭದಲ್ಲಿದ್ದಾಗಲೇ ಇದ್ದ ಆ ಪರೀಕ್ಷಿಸುವ ಬುದ್ಧಿಯು ಪಾಪ ಅವನ ಕಡೆಗಾಲಕ್ಕೆ ಇಲ್ಲದೇ ಹೋಯಿತು. ವಿಷಮಸ್ಥಿತಿಯಲ್ಲಿ ಬ್ರಾಹ್ಮಣರನ್ನು ಪರೀಕ್ಷಿಸುವುದು ದೂಷ್ಯವೆನ್ನಿಸಲಾರದು. ಆದರೂ ನಿನ್ನ ತಂದೆಯಾಗಲಿ ಅವನ ಅನುಚರರಾಗಲಿ ಅದನ್ನು ಮಾಡಲಿಲ್ಲ. ನಿನ್ನ ತಂದೆ ಬಂದ ಬ್ರಾಹ್ಮಣರನ್ನು ಆದರಿಸಿ ಅವರಿತ್ತ ಕಾಣಿಕೆಯ ಹಣ್ಣನ್ನು ಸ್ವೀಕರಿಸಿ ಅವರೊಂದಿಗೆ ಮಾತಾಡುತ್ತ ಆ ಹಣ್ಣನ್ನು ಕೈಯಲ್ಲೆತ್ತಿಕೊಂಡನು. ಹೊತ್ತು ಮುಳುಗುವ ಹೊತ್ತು, ಅರಸನ ಎಣಿಕೆಯಂತೆ ವಿಪತ್ತು ದೂರವಾಗುವ ಹೊತ್ತು, ಮನಸ್ಸು ಹಗುರವಾಗಿರಬೇಕು. ಮಹಾರಾಜನು ಕೈಯ ಹಣ್ಣನ್ನು ಎತ್ತಿ ಆಘ್ರಾಣಿಸುವುದಕ್ಕಾಗಿ ಮೂಗಿನ ಬಳಿ ಹಿಡಿದನು. ಅಷ್ಟರಲ್ಲೇ ಆ ಧೂರ್ತ ತಕ್ಷಕನು ನೊರಜಾಗಿ ಹಣ್ಣೊಂದರಲ್ಲಿ ಸೇರಿದ್ದವನು ಥಟ್ಟನೇ ನೆಗೆದು ಆ ನಿನ್ನ ಜನಕನನ್ನು ಕಚ್ಚಿಯೇ ಬಿಟ್ಟನು.

                       ತಕ್ಷಕನ ಘೋರ ವಿಷಕ್ಕೆ ಮಹಾರಾಜನ ಸಹಿತ ಮಂದಿರವೇ ವಿಷದುರಿಯಿಂದ ಕರಗಿ ಹೋಯಿತು.ಯಾವ ಮಾಂತ್ರಿಕನಿಂದಲೂ ವಿಷವನ್ನು ತಡೆಗಟ್ಟಲಾಗಲಿಲ್ಲ.ಶೃಂಗಿಯ ಶಾಪ ಪಲಿಸಿಯೇ ಬಿಟ್ಟಿತು. ಮಹಾರಾಜನನ್ನು ಕಳೆದುಕೊಂಡ ದೇಶವು ಪೂರ್ಣವಾಗಿ ದುಃಖ ತಪ್ತವಾಯಿತು.ಅತ್ತತ್ತು ಗೋಳಾಡಿದರು ಕಡೆಗೆ ಒಬ್ಬರಿಗೊಬ್ಬರು ದುಃಖಿಸುತ್ತಲೇ ಧೈರ್ಯ ಹೇಳಿ ಮುಂದಿನಕಾರ್ಯಗಳನ್ನೆಲ್ಲಾ ವಿಧಿವತ್ತಾಗಿ ಮಾಡಿ

                      ಶೋಕದ ದಿನಗಳು ಕಳೆದ ಮೇಲೆ ತೀರಾ ಚಿಕ್ಕವನಾಗಿದ್ದ ನಿನ್ನನ್ನು ಪಟ್ಟದಲ್ಲಿ ಕುಳ್ಳಿರಿಸಿ ಮಂತ್ರಿಗಳು ನಿನ್ನ ಹೆಸರಿನಲ್ಲಿ ರಾಜಕಾರ್ಯಗಳನ್ನು ನಡೆಸುತ್ತಿದ್ದರಂತೆ. ಅವರು ಯಾರೂ ತಕ್ಷಕನಿಗಾಗಲೀ ಅವನ ಕಡೆಯವರಿಗಾಗಲಿ ಶಿಕ್ಷೆಯನ್ನು ಮಾಡಲಿಲ್ಲ. ದೊಡ್ಡವನಾದ ಮೇಲೆ ಆ ಕುರಿತಾಗಿ ಯಾರು ತಿಳಿಯ ಹೇಳಲಿಲ್ಲ. ಶೃಂಗಿಯ ಶಾಪದಂತೆ ನಿನ್ನ ತಂದೆಗೆ ಮರಣವುಂಟಾಯಿತು ಎಂದಷ್ಟೇ ತಿಳಿದಿರಬೇಕು. ತಕ್ಷಕನು ಮಾಡಿದ ಅನ್ಯಾಯವು ಸಾಮಾನ್ಯವಾದುದೇನೂ ಅಲ್ಲ ಅವನು ನನಗೂ ಬಹಳಷ್ಟು ಕಷ್ಟಗಳನ್ನು ಕೊಟ್ಟನು. ಸಮರ್ಥನಾದ ನಿನ್ನಂಥವರೇ ಆ ನೀಚನ ಅನ್ಯಾಯವನ್ನು ಶಿಕ್ಷಿಸದ ಮೇಲೆ ನನ್ನಂಥವರಾದರೂ ಏನು ಮಾಡುವುದಕ್ಕೆ ಸಾಧ್ಯವಾದೀತು…? ಅಪರಾಧಿಗಳನ್ನು ಹಿಡಿದು ದಂಡಿಸಬೇಕಾದುದು ಮಹಾರಾಜರಾದವರ ಕರ್ತವ್ಯ. ಆ ನೀಚನಿಗೆ ತಕ್ಕುದಾದ ಶಾಸ್ತಿಯನ್ನು ಮಾಡಿದರೆ ಗತಿಸಿ ಹೋಗಿರುವ ನಿನ್ನ ತಂದೆಗೂ ಅದರಿಂದ ಸಂತೃಪ್ತಿಯಾಗಬಹುದು. ನಾನು ನಿನ್ನನ್ನು ಹುರಿದುಂಬಿಸುವುದಲ್ಲ ದುಷ್ಟ ಶಿಕ್ಷಣಕ್ಕೆ ಪ್ರಚೋದಿಸುವುದು ಮಾತ್ರ. ಆ ದ್ರೋಹಿಗಳನ್ನೆಲ್ಲಾ ಹಿಡಿ ಹಿಡಿದು ಶಿಕ್ಷಿಸಿದರೆ ಲೋಕಕ್ಕೇ ಕ್ಷೇಮ. ಆ ಹಾಳು ಸರ್ಪ ಜಾತಿಯೇ ಸಜೀವವಾಗಿ ಬೆಂಕಿಯಲ್ಲಿ ಬಿದ್ದು ಸಾಯಬೇಕು.ರಾಜೇಂದ್ರಾ! ನೀನು ಎಷ್ಟೆಷ್ಟೋ ದೊಡ್ಡ ದೊಡ್ಡ ಯಜ್ಞ ಯಾಗಾದಿಗಳನ್ನು ಮಾಡಿದವನು – ತುಂಬಾ ಪುಣ್ಯ ಸಂಚಯವುಳ್ಳವನು ಆದರೆ ಮಾಡಲೇ ಬೇಕಾದ ಗುರುತರವಾದ ಕರ್ತವ್ಯವೊಂದಿದೆ. ಆದುದರಿಂದ ಅತ್ಯಂತ ಕೌತುಕಪ್ರದವಾದ ಒಂದು “ಸರ್ಪಯಾಗ”ವನ್ನು ಮಾಡು ಸರ್ಪ ಜಾತಿಯ ಜೀವಜಂತುಗಳೆಲ್ಲಾ ಅದರಲ್ಲಿ ಹೋಮಿಸಲ್ಷಡಲಿ. ಊರಿಗೂ ಸುಖ,ನಿನಗೂ ಕೀರ್ತಿ ಜತೆಯಲ್ಲಿ ನನಗೂ ಒಂದು ತೃಪ್ತಿಯ ನೆಮ್ಮದಿ.ದಯವಿಟ್ಟು ಅದನ್ನು ನಡೆಸಿಕೊಡು ಅದೇ ನನ್ನ ಪ್ರಾರ್ಥನೆ” ಎಂದು ನುಡಿದು ಅರಸನಾದ ಜನಮೇಜಯನನ್ನು ಪ್ರೋತ್ಸಾಹಿಸಿದನು.  

                     ಉತ್ತಂಕನ ಉಪದೇಶದಿಂದ ಕೆರಳಿದ ಜನಮೇಜಯನು “ಸರ್ಪಯಾಗ” ಮಾಡಲು ಸಂಕಲ್ಪಿಸುತ್ತಾನೆ. ಅಷ್ಟಕ್ಕೂ ಸರ್ಪ ಸಂತತಿ ಯಾಗದಲ್ಲಿ ಬಲಿಯಾಗಲು ನಿಜವಾದ ಕಾರಣವಾದರೂ ಏನು …?

ಮುಂದಿನ ಸಂಚಿಕೆಯಲ್ಲಿ…

✍🏻 ಎಸ್ ಕೆ ಬಂಗಾಡಿ

Leave a Reply

Your email address will not be published. Required fields are marked *