
ಪುರಾಣ ನೀತಿ
(ಹೆಜ್ಜೆ- 4)
ಹಿಂದಿನ ಸಂಚಿಕೆಯಿಂದ
ಪ್ರಾಣಿಹಿಂಸೆಯೇ ಮುಖ್ಯವೆಂದು ಕಾಣುವ ಈ ಸರ್ಪಯಾಗದಲ್ಲಿ ಜ್ಞಾನನಿಧಿಗಳಾದವರು ಹೀಗೆ ಸಹಭಾಗಿಗಳಾದುದು ಕೌತುಕವೇ ಸರಿ. ಅವರು ಯಾಕೆ ಹೀಗೆ ಮಾಡಿದರು..? ಏನೋ ಇರಬಹುದು. ಆದುದರಿಂದ ಈ ಯಾಗದಲ್ಲಿ ಹೋಮಿಸಲ್ಪಡುವವುಗಳ ಕರ್ಮದೋಷವೇ ಇದಕ್ಕೆ ಹೇತುವಾಗಿರಬಹುದೆಂದು ಸಮಾಧಾನ ಪಡಬಹುದೋ ಏನೋ.? ಏನು ಆ ಸರ್ಪಗಳ ಪ್ರಾರಬ್ಧ..?

ಹಿಂದೊಮ್ಮೆ ಕಶ್ಯಪನ ಪತ್ನಿಯರಾದ ಕದ್ರು ಮತ್ತು ವಿನತೆಯರಲ್ಲಿ “ಇಂದ್ರನ ಉಚ್ಚೈಶ್ರವ”ವೆಂಬ ಶ್ವೇತಾಶ್ವದ ನೈರ್ಮಲ್ಯದ ಕುರಿತು ಭಿನ್ನಾಭಿಪ್ರಾಯವೆದ್ದಿತು. ಅದು ವಾದದಲ್ಲಿ ಬೆಳೆದು ಪಂಥವೂ ಆಗಿ ಪರಿಣಮಿಸಿತು. ಕುದುರೆಯ ಮೈಬಣ್ಣವು ಪೂರ್ಣವಾಗಿ ಬಿಳಿಯೆಂದು ವಿನತೆಯೂ, ಬಾಲದ ಕಡೆಯಲ್ಲಿ ಸ್ವಲ್ಪ ಕಪ್ಪಿದೆಯೆಂದು ಕದ್ರುವೂ ವಾದಿಸಿದ್ದರು. ಅದೇ ಪಂಥದಲ್ಲಿ ಸೋತವರು ಗೆದ್ದವರಿಗೆ ದಾಸಿಯಾಗಬೇಕಂದು ಪಣವನ್ನೂ ನಿರ್ಣೈಸಿಕೊಂಡರು. ಆದರೆ ಕದ್ರುವಿಗೆ ತಾನೆಲ್ಲಾದರೂ ಸೋತು ಹೋದರೆ ಎಂಬ ಸಂದೇಹವುಂಟಾಗಿ ಅವಳು ತನ್ನ ಮಕ್ಕಳಾದ ಸರ್ಪಗಳನ್ನು ಗುಟ್ಟಾಗಿ ಕರೆದು ಕೆಲವರು ಹೋಗಿ ಆ ಕುದುರೆಯ ಬಾಲವನ್ನು ಕಚ್ಚಿಕೊಂಡು ಕಪ್ಪಾಗಿ ಕಾಣಿಸಬೇಕೆಂದು ಹೇಳಿದಳು. ಅದನ್ನು ಕೆಲವು ಸರ್ಪಗಳು ಆಕ್ಷೇಪಿಸಿದವು ಹಾಗೂ ಇದಕ್ಕೆ ಸಮ್ಮತಿಸಿರಲಿಲ್ಲ. ಕೆಲವು ಮಾತ್ರ ಒಪ್ಪಿ ಹಾಗೆ ಮಾಡಿದವು. ವಿನತೆಯು ಮೋಸದಿಂದ ಸೋತು ಕದ್ರುವಿನ ದಾಸಿಯಾಗಬೇಕಾಯಿತು. ಕಾಲಾಂತರದಲ್ಲಿ ವೈನತೇಯನಾದ ಗರುತ್ಮಂತನು ಕದ್ರುವಿನ ಇಚ್ಛೆಯಂತೆ ಅಮೃತ ಕಲಶವನ್ನು ತಂದಿಟ್ಟು ತನ್ನ ತಾಯಿಯ ದಾಸ್ಯವನ್ನು ಪರಿಹರಿಸಿಕೊಟ್ಟನು.

ಆದರೆ ಕದ್ರುವು ಅಂದು ತನ್ನ ಮಾತು ಕೇಳದ ಕೆಲವು ಸರ್ಪಗಳಿಗೆ ಕ್ರುದ್ದಳಾಗಿ ಆ ಎಲ್ಲರೂ ಸಂತತಿಸಹಿತವಾಗಿ ಯಾಗಾಗ್ನಿಯಲ್ಲಿ ಬಿದ್ದು ಸಾಯಿರಿ ಎಂದು ಶಪಿಸಿದ್ದಳು. ಹಾಗಾಗಿ ಕೆಲವು ಸರ್ಪಗಳು ಸಂತತಿ ಸಂತತಿಯೊಂದಿಗೆ ಯಜ್ಞದಲ್ಲಿ ಬಿದ್ದು ಸುಟ್ಟೇ ಸಾಯಬೇಕು ಅದು ಆ ಶಾಪದ ಕಾರಣದಿಂದ ಅನಿವಾರ್ಯ. ಕದ್ರುವು ಸರ್ಪಗಳ ತಾಯಿಯಾಗಿದ್ದು ಮುನಿದುಕೊಂಡು ಸಿಟ್ಟಿನಿಂದ ಶಾಪವನ್ನು ನೀಡಿದುದರಿಂದ ಅವುಗಳು ಯಾಗಾಗ್ನಿಯಲ್ಲಿ ಸುಟ್ಟೇ ಸಾಯಬೇಕಾದುದು ಅನಿವಾರ್ಯವಾಗಿತ್ತು.

ಉತ್ತಮವಾದ ಯಜ್ಞಗಳಲ್ಲಿ ಸರ್ಪಗಳು ಬಿದ್ದು ಸತ್ತರೆ ಯಜ್ಞವೇ ಕೆಟ್ಟು ಹೋಗುತ್ತದೆ. ಆದರೆ ಈ ಯಜ್ಞವೇ ಕದ್ರುವಿನ ಶಾಪ ಈಡೇರಲು ಇರಬಹುದು. ಕದ್ರುವಿನ ಶಾಪ ಫಲಿಸಬೇಕಾದರೆ ಎಂದಾದರೂ ಎಲ್ಲಿಯಾದರೂ “ಪನ್ನಗಾಧ್ವರ”ವೇ ನಡೆಯ ಬೇಕು. ಹಿಂದೆ ಅಂಥ ಯಾಗ ನಡೆಯಲಿಲ್ಲ.ಕಾಲವೂ ಎಷ್ಟು ದೂರ ಸಾಗುವುದೋ ಅಷ್ಟೇ ಆ ಸಂತತಿಯು ಮುಂದೊಂದು ದಿನ ಯಾಗಾಗ್ನಿಯಲ್ಲಿ ಬಿದ್ದು ಸಾಯುವುದಕ್ಕಾಗಿಯೇ ಬೆಳೆಯುವುದು ಸ್ವಾಭಾವಿಕ. ಅಂತೆಯೇ ಸರ್ಪಗಳೆಲ್ಲಾ ಬಹುಸಂಖ್ಯೆಯಲ್ಲಿ ಬೆಳೆದು ಹೆಚ್ಚಿಕೊಂಡಿದ್ದುವು.ಕರ್ಮ ಧರ್ಮ ಸಂಯೋಗ ಎನ್ನುವಂತೆ ಉತ್ತಂಕನು ಪುಂಗಿಯನ್ನೂದಿದನು, ಜನಮೇಜಯನು ತಲೆಯನ್ನಾಡಿಸಿದನು. ಸರ್ಪ ಯಾಗವು ಪ್ರಾರಂಭವಾಯಿತು.

ಋತ್ವಿಜರ ಮಂತ್ರಕ್ಕೆ ಅಧೀನವಾಗಿ ಸರ್ಪಗಳು ಒಂದೊಂದಾಗಿ ಬಂದು ಬೀಳತೊಡಗಿದವು. ಹಾಗೆ ಬರುವುದಕ್ಕೆ ಅವಕ್ಕಾದರೂ ಹೇಗೆ ಮನಸ್ಸು ಬಂದೀತು..? ಆದರೂ ಮಂತ್ರಕ್ಕೆ ಕಟ್ಟು ಬಿದ್ದು ಸರ್ಪಗಳು ಬರಲೇಬೇಕಾಯಿತು. ಮಾತೃಕೋಪವೂ ಆ ಸರ್ಪಗಳಿಗೆ ಮುತ್ತಿಕೊಂಡಿದ್ದರಿಂದ ಹುತ್ತಗಳಿಂದ, ಬಿಲದಿಂದ, ಮರದೆಡೆಯಿಂದ, ಕಲ್ಲಸಂದಿನಿಂದ, ಇನ್ನೆಲ್ಲೋ ನೆಲೆಸಿದ್ದ ಹಾವುಗಳೆಲ್ಲಾ ಒಂದೊಂದಾಗಿ ಬಂದು ಹೊರಳಿ ನರಳಿ ಮತ್ತೆ ನಿರ್ವಾಹವಿಲ್ಲದೇ “ಸ್ವಾಹಾ” ಗೊಂಡು ಸಪ್ತಾರ್ಚಿಯ ರಸನೆಯನ್ನೇರಿ ಪಟ ಪಟ ಸದ್ದಿನೊಂದಿಗೆ ಬೆಂದು ಒಂದೊಂದಾಗಿ ಆಹುತಿಯಾದವು. ಅಷ್ಟೊಂದು ಸರ್ಪಗಳು ಬಂದು ಆಹುತಿಯಾದರೂ ಬೇಗನೆ ಮುಗಿಯದ ಸರ್ಪಸಂತತಿಯದು. ಉತ್ತಂಕನು ಮಹೋಲ್ಲಾಸಭರಿತನಾಗಿ ಅದನ್ನೇ ನೋಡುತ್ತಾ ನಕ್ಕು ತಲೆಯಾಡಿಸುತ್ತಿದ್ದನು.

ಸಹಸ್ರಾರು ಸಂಖ್ಯೆಯಲ್ಲಿ ಮಹೋರಗಗಳು ಹೋಮಿಸಲ್ಷಡುತ್ತಿದ್ದುವು. ಇದರ ಬಿಸಿಯು ಪಾತಾಳದವರೆಗೂ ವ್ಯಾಪಿಸಿತು. ತಕ್ಷಕನೂ ಆತನ ಅನುಚರರೂ ಕಂಗೆಟ್ಟರು, ಸರ್ಪ ಜಾತಿಯೇ ತತ್ತರಿಸಿದವು. ಇದನ್ನೆಲ್ಲಾ ಅರಿತ ಸರ್ಪರಾಜನಾದ ವಾಸುಕಿಯು ಬಹುವಾಗಿ ಆಲೋಚಿಸಿ ಒಂದು ನಿರ್ಧಾರಕ್ಕೆ ಬರುತ್ತಾನೆ.ಯಾಗ ತಡೆಯಲು ವಾಸುಕಿ ಯಾರನ್ನು ಕಳುಹಿಸುತ್ತಾನೆ.?
ಮುಂದಿನ ಸಂಚಿಕೆಯಲ್ಲಿ….

ಉತ್ತಮ ಬರಹ ವಂದನೆಗಳು ಬಂಗಾಡಿ ಯವರಿಗೆ