
ಋತ್ವಿಜರು “ಸೇಂದ್ರಾಯ ತಕ್ಷಕಾಯ” ಎಂದು ಆಜ್ಯವನ್ನೆತ್ತಿದ್ದದಾರೂ ಏಕೆ..?
ಪುರಾಣ ನೀತಿ
(ಹೆಜ್ಜೆ- 6)
ಹಿಂದಿನ ಸಂಚಿಕೆಯಿಂದ

ಸರ್ಪಯಾಗದ ಯಜ್ಞ ಶಾಲೆಯನ್ನು ಸುಲಭವಾಗಿ ಪ್ರವೇಶಿಸುವುದಕ್ಕೆ ಸಾಧ್ಯವಿರಲಿಲ್ಲ. ಉತ್ತಂಕನ ಸೂಚನೆಯಂತೆ ಅರಸನು ಭದ್ರವಾದ ಕಾವಲನ್ನಿರಿಸಿದ್ದನು. ಆಸ್ತೀಕನು ಮುಂದೆ ಹೋಗಲು ಸಾಧ್ಯವಾಗದೆ ಕ್ಷಣಹೊತ್ತು ಅಲ್ಲಿಯೇ ನಿಂತನು. ಯಜ್ಞ ಕಾರ್ಯದಲ್ಲಿ ಸರ್ಪಗಳನ್ನು ಹೋಮಿಸುವ ಮಂತ್ರಗಳು ಅವನ ಕಿವಿಗೆ ಬೀಳುತ್ತಿದ್ದವು. ಅದನ್ನು ಕೇಳಿ ಅವನಿಗೆ ಸಹಿಸಲಾರದ ವೇದನೆ ಉಂಟಾಯಿತು. ಆಸ್ತೀಕನು ಅದೊಂದನ್ನೂ ತೋರಗೊಡದೆ ಮೊದಲಾಗಿ ದ್ವಾರಪಾಲಕರ ಕಾರ್ಯಗೌರವವನ್ನೂ ಪ್ರಶಂಸಿಸಿ, ಯಾಗದೀಕ್ಷಿತನಾದ ಮಹಾರಾಜನನ್ನೂ, ಋತ್ವಿಜರನ್ನೂ ಛಂದೋಬದ್ಧವಾದ ಸುಂದರ ಕಾವ್ಯದಂತೆ ಸಲ್ಲಕ್ಷಣವಾದ ಮೃದು ಮಧುರ ವಾಕ್ಯಗಳಿಂದ ಗಂಭೀರವಾಗಿ ಹೊಗಳತೊಡಗಿದನು.
ಸರ್ಪಯಾಗದಲ್ಲಿ ಎಷ್ಟೆಷ್ಟೋ ಸರ್ಪಗಳೆಲ್ಲಾ ಬಂದು ಹೋಮಿಸಲ್ಷಟ್ಟಿದ್ದರೂ ಆವರೆಗೆ ತಕ್ಷಕನು ಬಂದಿರಲಿಲ್ಲ. ಉತ್ತಂಕನು ಇನ್ನೂ ತಕ್ಷಕನು ಬಂದಂತಿಲ್ಲ ಬರಲಿ ಬರಲಿ ಬಂದು ಹೋಮಿಸಲ್ಪಡಲಿ ಎಂದು ಅಡಿಗಡಿಗೆ ಪ್ರಚೋದಿಸುತ್ತಿದ್ದನು. ಇತ್ತ ತಕ್ಷಕನು ಮರಣ ಭಯದಿಂದ ಇಂದ್ರನ ಬಳಿ ಹೋಗಿ ಆಶ್ರಯಿಸಿದ್ದನು. ತಕ್ಷಕನನ್ನು ಸೆಳೆಯುವ ಮಂತ್ರವು ಮಂತ್ರಿಸಲ್ಪಟ್ಟಿತು. ಆದರೆ ಮಂತ್ರಕ್ಕೆ ವಶನಾಗಲಿಲ್ಲ. ಎಲ್ಲರಿಗೂ ಆಶ್ಚರ್ಯವಾಯಿತು. ಏನು? ಯಾಕೆ? ಎಂಬ ಗೊಂದಲ ಸೃಷ್ಟಿಯಾಯಿತು. ಋತ್ವಿಜರು ಕೂಡ ಕ್ಷಣ ಕಾಲ ಮೌನ ತಳೆದರು. ಉತ್ತಂಕನು ಯೋಚಿಸುತ್ತ ರಾಜನ ಕಡೆ ನೋಡುತ್ತಾ ನಿಂತನು.

ಅದೇ ಹೊತ್ತಿಗೆ ಹೊರಬಾಗಿಲಲ್ಲಿ ನಿಂತು ಕೊಂಡಾಡುತ್ತಿದ್ದ ಆಸ್ತೀಕನ ಮಾತುಗಳು ಕೇಳಿ ಬಂದವು. ರಾಜನು ಕುತೂಹಲದಿಂದ ಆಸ್ತೀಕನನ್ನು ಕರೆಸಿಕೊಂಡನು.ಅಷ್ಟರಲ್ಲಿ ಋತ್ವಿಜರು ತಮ್ಮ ದಿವ್ಯದೃಷ್ಟಿಯಿಂದ ತಕ್ಷಕನು ಇಂದ್ರನ ಆಶ್ರಯ ಪಡೆದಿರುವುದನ್ನು ತಿಳಿದು ರಾಜನಿಗೆ ವಿಷಯ ತಿಳಿಸಲು, ಉತ್ತಂಕನು ಇಂದ್ರನ ಜೊತೆಯಾಗಿಯೇ ತಕ್ಷಕನು ಬರಲಿ ಎಂದು ರಾಜನ ಮುಖ ನೋಡಲು ಅರಸನು ಅದನ್ನೇ ಪುಷ್ಟೀಕರಿಸಿದಂತೆ ತಲೆಯಾಡಿಸಿದನು. ಋತ್ವಿಜರು “ಸೇಂದ್ರಾಯ ತಕ್ಷಕಾಯ” ಎಂದು ಆಜ್ಯವನ್ನೆತ್ತಿದರು. ತಕ್ಷಕನೊಂದಿಗೆ ಇಂದ್ರನೇ ಮಂತ್ರಕ್ಕೆ ಅಧೀನನಾಗಿ ಬರಬೇಕಾಯಿತು – ಬಂದನು, ಇಂದ್ರನು ಮಧ್ಯದಲ್ಲೇ ತಪ್ಪಿಸಿಕೊಂಡನು. ತಕ್ಷಕನು ತತ್ತರಿಸಿ ಹೋದನು. ಅದೇ ಸಮಯದಲ್ಲಿ ಆಸ್ತೀಕನನ್ನು ಸತ್ಕರಿಸುತ್ತಾ ಮಹಾರಾಜನು “ಆಭೀಷ್ಟವನ್ನು ಅಪ್ಪಣೆ ಕೊಡಿಸಬೇಕು ” ಎಂದು ಪ್ರಾರ್ಥಿಸಿದನು. ಆಗ ಆಸ್ತೀಕನು “ಕೂಡಲೇ ಈ ಸರ್ಪಯಾಗವನ್ನು ನಿಲ್ಲಿಸು, ಅದೇ ನನ್ನ ಅಭೀಷ್ಟ ಅದನ್ನೇ ಪೂರೈಸಿಕೊಡು ” ಎಂದು ನುಡಿದನು. ಮಾತಿಗೆ ಕಟ್ಟು ಬಿದ್ದ ಅರಸನು ಋತ್ವಿಜರಿಗೆ ಯಾಗವನ್ನು ನಿಲ್ಲಿಸಲು ಸೂಚಿಸಿದನು. ಋತ್ವಿಜರು ತಟಸ್ಥರಾದರು. ತಕ್ಷಕನು ತಪ್ಪಿಸಿಕೊಂಡು ಓಡಿ ಹೋದನು. ಉತ್ತಂಕನು ಸಹಿಸದೆ ಮುಖ ತಿರುಗಿಸಿಕೊಂಡನು. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಇಷ್ಟೆಲ್ಲಾ ನಡೆದು ಹೋಯಿತು. ಎಲ್ಲರೂ ಬಂದಿದ್ದ ಆಸ್ತೀಕನನ್ನೇ ನೋಡುತ್ತಿದ್ದರು.
ಪೊರೆ ಕಳಚಿದ ಮಹಾನಾಗನಂತೆ ಮೈಯೆಲ್ಲ ವಿಶೇಷ ಕಾಂತಿಯಿಂದ ಹೊಳೆಯುತ್ತಿದ್ದ ಆಸ್ತೀಕನು, ಬ್ರಹ್ಮ ತೇಜಸ್ಸು, ಆತ್ಮ ಶಕ್ತಿಯ ಸಾತ್ವಿಕ ಧೈರ್ಯ, ದಯಾಪೂರಿತವಾದ ಹೃದಯಭಾವ ಮುಂತಾದವುಗಳು ತುಂಬಿ ಬಿಂಬಿಸುತ್ತಿದ್ದಂತೆಯೇ, ಕೃತಜ್ಞತಾ ಪೂರ್ವಕವಾಗಿ ಅಲ್ಲಿದ್ದ ಋಷಿಮುನಿಗಳಿಗೆಲ್ಲಾ ವಂದಿಸಿ , ಯಜ್ಞ ಕುಂಡಕ್ಕೆ ಕೈಮುಗಿದು, ಮಹಾರಾಜನನ್ನು ಕುರಿತು ದಿವ್ಯಾಶೀರ್ವಾದದಿಂದ ಹರಸಿದನು. ಮಾತ್ರವಲ್ಲದೆ ಅರಸನಾದ ಜನಮೇಜಯನನ್ನು ಉದ್ದೇಶಿಸಿ ಅಲ್ಲಿದ್ದ ಎಲ್ಲರೂ ಕೇಳುವಂತೆ ಗಂಭೀರವಾಗಿ “ಅಯ್ಯಾ… ಮಹಾರಾಜ ! ಉತ್ತಮ ಕುಲಪ್ರಸೂತನಾದ ನೀನು ನನ್ನ ಬಿನ್ನಪವನ್ನು ಮನ್ನಿಸಿದೆ ನಿನಗೆ ಉತ್ತರೋತ್ತರವಾಗಲಿ, ನಿನ್ನ ಪಿತೃಗಳು ಸದ್ಗತಿಯನ್ನು ಸಂತತಿಯವರೆಲ್ಲಾ ಸೌಭಾಗ್ಯವನ್ನು ಪಡೆಯಲಿ.ನಿನ್ನ ಪ್ರಜಾ ಪರಿವಾರದವರಿಗೆಲ್ಲಾ ಸುಖಸಂತೋಷಗಳು ಪ್ರಾಪ್ತಿಸಲಿ, ನಿನ್ನಿಂದ ಉಪಕೃತನೂ ಕೃತಕೃತ್ಯನೂ ಆಗಿರುವ ನಾನು ನಿನಗೆ ಅತ್ಯಂತ ಋಣಿಯೇ ಆಗಿರುವೆನು, ಯಾವುದೋ ಆಗಂತುಕವಾದ ಕಾರಣದಿಂದ ಕೆರಳಿದ್ದ ನೀನು ಈ ಸರ್ಪಯಾಗವನ್ನು ಕೈಗೊಂಡೆ.

ಅಯ್ಯಾ, ಯಾವ ತಪ್ಪನ್ನೂ ಮಾಡದ ಎಷ್ಟೆಷ್ಟೋ ಸರ್ಪಗಳು ಇಲ್ಲಿ ಈ ಸರ್ಪಯಾಗದಲ್ಲಿ ಬಲಿಯಾದವು.ಈ ಕಾರ್ಯ ಸಜ್ಜನರಿಗೆ ತಕ್ಕುದಲ್ಲ. ಯಾವನೊಬ್ಬನ ಶ್ರೇಯಸ್ಸಿಗೂ ಕಾರಣವಲ್ಲ.ಯಾಕೋ ನಡೆಯಿತು. ನಮ್ಮೆಲ್ಲರ ಸುದೈವದಿಂದ ಈಗಲಾದರೂ ನಿಂತಿತಲ್ಲ ಅದೇ ದೊಡ್ಡದು.ನನಗೆ ತಿಳಿದ ಪ್ರಕಾರ ನಿನಗೆ ವೈರತ್ವವಿದ್ದುದು ತಕ್ಷಕನ ಮೇಲೆ ಆದರೇನಾಯಿತು? ಅವನು ಬದುಕಿಯೇ ಉಳಿದನು.ಇದೇ ದೈವ ಸಂಕಲ್ಪ,ಹಾಗಾದರೇ ಕೈಗೊಂಡ ಸರ್ಪಯಾಗದಿಂದ ನೀನು ಸಾಧಿಸಿದ್ದೇನು.?. ನನ್ನ ಮಾತನ್ನು ಮನ್ನಿಸಿ, ಅಭೀಷ್ಟವನ್ನು ಸಲ್ಲಿಸಿ ಅಷ್ಟಕ್ಕೆ ಯಾಗವನ್ನು ನಿಲ್ಲಿಸಿದ್ದರಿಂದ ನೀನು ಪಡೆಯುವ ಕೀರ್ತಿಯು ಎಷ್ಟು ಘನವಾದದ್ದು..? ಅದೇ ಮುಂದೆ ನಿನ್ನ ಶ್ರೇಯಸ್ಸಿಗೂ ಕಾರಣವಾಗುವುದು.ಉತ್ತಮ ಭೂಪಾಲಕನಿಗೆ ಸಹನೆಯೇ ಮುಖ್ಯ ಲಕ್ಷಣವು.
ಅಯ್ಯಾ ನಾನು ಅನ್ಯನೇನೂ ಅಲ್ಲ, ನಿನ್ನ ಪೂರ್ಣ ಹಿತೈಷಿಯು ಸರ್ಪ ರಾಜನಾದ ವಾಸುಕಿಯ ಅಳಿಯನು ಶ್ರೇಷ್ಠವಾದ ಭೃಗು ವಂಶದಲ್ಲಿ ಯಾಯಾವರರ ಪೀಳಿಗೆಯಲ್ಲಿ ಹುಟ್ಟಿರುವ ನನ್ನನ್ನು ಆಸ್ತೀಕನೆಂದು ಕರೆಯುತ್ತಾರೆ.ನರರಿಗೂ ನಾಗರಿಗೂ ಸಮಾನ ಬಂಧುವಾದ ನಾನು ನಿನ್ನಿಂದ ಉಪಕೃತನಾದವನು.ನಿನ್ನ ಕರುಣೆಯಿಂದ ನನ್ನ ಮಾತೃ ವರ್ಗದ ಬಂಧುಗಳು ಬದುಕಿಕೊಂಡರು. ಇದರಿಂದ ಲೋಕಕ್ಕೇ ಕ್ಷೇಮ ಉಂಟಾಗಲಿ ನಿನಗೆ ಉತ್ತರೋತ್ತರವಾಗಲಿ.” ಎಂದು ನುಡಿದು ಮತ್ತೊಮ್ಮೆ ಅಲ್ಲಿ ನೆರೆದ ಮಂದಿಗೆಲ್ಲಾ ಕೈ ಮುಗಿದು ಅಲ್ಲಿಂದ ಹೊರಟು ಹೋದನು.
ದುಡುಕಿ ಕೈಗೊಂಡ ಸರ್ಪಯಾಗದಿಂದ ಬಂದಂತಹ ದೋಷ ಪರಿಹಾರಕ್ಕೆ ಜನಮೇಜಯನು ಕೈಗೊಂಡ ತೀರ್ಮಾನವೇನು …?
ಮುಂದಿನ ಸಂಚಿಕೆಯಲ್ಲಿ…..
