January 18, 2025
purana-1

ಸರಮೆಯು ನೀಡಿದ ಶಾಪವಾದರೂ ಏನು..?

ಪುರಾಣ ನೀತಿ

(ಹೆಜ್ಜೆ- 7)

ಹಿಂದಿನ ಸಂಚಿಕೆಯಿಂದ

  ಆಸ್ತೀಕನ ಮಾತುಗಳನ್ನು ಪೂರ್ಣವಾಗಿ ಕೇಳಿದ ಜನಮೇಜಯನಿಗೆ ಅಯ್ಯೋ ಅನಿಸಿತು. ಹೀಗೂ ಆಯಿತೆ? ಆನೇಕ ಯಜ್ಞಗಳನ್ನು ಮಾಡಿ ಪೂರೈಸಿದ್ದ ತಾನು ಆಸ್ತೀಕನ ಅಭೀಷ್ಟ ಪೂರೈಕೆಗಾಗಿ ಅರ್ಧದಲ್ಲೇ ನಿಲ್ಲಿಸಬೇಕಾಗಿ ಬಂದಿತಲ್ಲಾ ಎಂದು ಚಿಂತಿಸಿದನು. ಆದರೆ ಆಸ್ತೀಕ ಮಹಾಮುನಿಯ ಮಾತಿನಲ್ಲಿದ್ದ ಸಹಜವೂ ಸತ್ಯವೂ ಆದ ವಿಚಾರಗಳು ಮತ್ತೊಂದೆಡೆಯಿಂದ ಅರಸನ ವಿವೇಕದ ಕಣ್ಣನ್ನೇ ತೆರೆಯಿಸಿದವು. ಅಯ್ಯೋ ತಾನೇನು ಮಾಡಿಬಿಟ್ಟೆ ಎಂದು ಪಶ್ಚಾತ್ತಾಪವುಂಟಾಯಿತು. ಅವನು ದುಃಖದಿಂದ ಅಲ್ಲಿ ನೆರೆದಿದ್ದ ಋಷಿಸ್ತೋಮಕ್ಕೆ ಕೈ ಮುಗಿದು “ಮಹಾತ್ಮರೇ ಏನೆನೋ ಆಗಿಹೋಯಿತು. ಆಸ್ತೀಕ ಮುನಿಯ ಮಾತುಗಳು ಸರಿಯೆಂದೇ ಅನಿಸುತ್ತಿದೆ. ನಾನು ಮಾಡಬಾರದ್ದನ್ನು ಮಾಡಿದಂತಾಯಿತು. ತಕ್ಷಕನ ಮೇಲಿನ ಕೋಪದಿಂದ ಈ ಯಾಗವನ್ನು ಮಾಡಿ ದುಡುಕಿ ಬಿಟ್ಟೆ. ಉತ್ತಮರಲ್ಲಿ ವಿಚಾರವನ್ನೂ ಮಾಡಲಿಲ್ಲ. ಇದರಿಂದ ನನಗೆ ವಿಮೋಚನೆಯಿದ್ದೀತೇ..? ಪರಮ ಕರುಣಾಳುಗಳಾದ ತಾವೆಲ್ಲ ವಿಚಾರಮಾಡಿ ದಯವಿಟ್ಟು ನನ್ನನ್ನು ರಕ್ಷಿಸಿರಿ” ಎಂದು ಪ್ರಾರ್ಥಿಸುತ್ತಾ ಉದ್ದಂಡವಾಗಿ ನಮಸ್ಕರಿಸಿದನು.

ಯಾಗದ ಬ್ರಹ್ಮತ್ವದಲ್ಲಿ ಸನ್ನಿಹಿತರಾಗಿದ್ದ ಅಂಗಿರಸರು ಯಜ್ಞವು ಮಧ್ಯದಲ್ಲೇ ನಿಲ್ಲಿಸಲ್ಪಟ್ಟುದರಿಂದ ಪರಿಹಾರಾರ್ಥವಾಗಿ ಬೇರೆ ಬೇರೆ ಪ್ರಾಯಶ್ಚಿತ್ತರೂಪವಾದ ಹವನಗಳನ್ನು ಮಾಡಿ ಕೊನೆಯಲ್ಲಿ ಸರ್ವಶಾಂತಿಯ ಕುರಿತು ನಿರ್ದಿಷ್ಟವಾದ ಶಾಂತಿಯಜ್ಞವನ್ನು ಮಾಡಿ ಪೂರೈಸುವುದರ ಮೂಲಕ ಈ ಕಾಮ್ಯಕರ್ಮದ ದೃಷ್ಟಾದೃಷ್ಟ ರೂಪವಾದ ಯಾವತ್ತು ಲೋಪದೋಷಗಳು ನಿವೃತ್ತಿಗೊಳ್ಳಬಹುದು ಸರ್ಪನಾಶದ ಪಾಪಶಂಕೆಗೆ ಬಲ್ಲವರಿಂದಲೇ ನಿವೃತಿಯ ಅಪ್ಪಣೆಯಾಗಬೇಕು.ಆ ಎಲ್ಲವೂ ಪೂರಯಿಸಲ್ಪಡುವವರೆಗೆ ಇದೇ ಅಗ್ನಿಯಲ್ಲಿ ದೇವತಾ ಪ್ರೀತ್ಯರ್ಥವಾದ ನಿತ್ಯ ಹವನಗಳು ಎಡೆಬಿಡದೆ ನಡೆಯುತ್ತಿರಲಿ ಎಂದು ನಿರೂಪಿಸಿದರು.

ಯಾಗದಲ್ಲಿ ಸದಸ್ಯರಾಗಿದ್ದ ಶ್ವೇತಕೇತು ಎಂಬವರು. “ಆದದ್ದು ಆಗಬೇಕಾದಂತೆಯೇ ಆಗಿದೆ ಆದರೂ ಮಹಾರಾಜನ ಮನಸ್ಸಿಗೆ ಶಾಂತಿಯುಂಟಾಗಬೇಕಾದುದು ಮುಖ್ಯ.ಕದ್ರುವಿನ ಶಾಪದಂತೆ ಸರ್ಪಗಳು ಹೋಮಿಸಲ್ಪಟ್ಟವು- ಉತ್ತಂಕನು ಪ್ರೇರಕನಾದನು- ಆಸ್ತೀಕನು ನಿವೃತ್ತಿಕಾರಕನಾದನು- ಮಹಾರಾಜನು ನಿಮಿತ್ತಕನಾಗಿಯೇ ಯಜಮಾನನಾದನು- ಎಲ್ಲಕ್ಕೂ ಅದೃಷ್ಟವಾದ ಬೇರೆ ಬೇರೆ ಕಾರಣಗಳೇ ಇರುತ್ತವೆ. ಹಾಗೆಯೇ ಅರಸನಿಗೆ ಪಾಪಭೀತಿಯು ಪ್ರಾಪ್ತಿಸಿದೆ. ಹಿಂದೊಮ್ಮೆ ಈ ಮಹಾರಾಜನ ತಮ್ಮಂದಿರು ದೇವಲೋಕದ ನಾಯಿಯಾದ ಸರಮೆಯ ಮರಿಯನ್ನು ಕುರುಕ್ಷೇತ್ರದಲ್ಲಿ ಹೊಡೆದು ನೋಯಿಸಿದ್ದರು.ಅದಕ್ಕಾಗಿ ಈ ಅಣ್ಣ ತಮ್ಮಂದಿರಿಗೆ ಅದೃಷ್ಟವಾದ ಪಾಪಭೀತಿಯುಂಟಾಗಲಿ ಎಂದು ಆ ಸರಮೆಯು ಶಪಿಸಿತ್ತು ಅಂತೆಯೇ ಹೀಗಾಗಿದೆ.ಇಂಥಾ ಭಯಪಾತಕಗಳನ್ನೆಲ್ಲಾ ಭಗವದ್ಭಕ್ತಿಯ ಪ್ರಭಾವದಿಂದ ಪರಿಹರಿಸಿಕೊಳ್ಳುವುದು ಯುಕ್ತ.ಆ ವಿಧಾನವು ಬಲ್ಲವರಿಂದ ನಿರೂಪಿಸಲ್ಪಡಬೇಕು ” ಎಂದು ನುಡಿದರು.

ಆಗ ಪೂಜ್ಯರಾದ ನಾರದರು “ಇದು ಕಲಿಯುಗವು ಆ ಪ್ರಭಾವವು ಇದಕ್ಕೆಲ್ಲ ಸೂಕ್ಷ್ಮ ಕಾರಣವೆಂದರೂ ಅನ್ನಬಹುದು.ಕಲಿಕಾಲದಲ್ಲಿ ತಪಸ್ಸಾಗಲೀ, ಯಜ್ಞಗಳಾಗಲೀ ನಡೆಯುವುದು ಕಷ್ಟ. ಆದುದರಿಂದ ಪಾಪಪರಿಹಾರಕ್ಕೂ ಪುಣ್ಯ ಸಂಚಯಕ್ಕೂ ಭಗವದ್ಭಕ್ತಿಯೇ ವಿಶಿಷ್ಟವಾದ ಸಾಧನೆಯೆಂದು ತಿಳಿದವರು ಹೇಳಿದ್ದಾರೆ. ಭಗವಲ್ಲೀಲಾ ವಿಷಯಕಗಳಾದ ನಾನಾ ಪುರಾಣೇತಿಹಾಸಗಳ ಶ್ರವಣ ಮನನಗಳಿಂದ ಅವುಗಳನ್ನು ಸಾಧಿಸಬಹುದು. ಇದೂ ಒಂದು ರೀತಿಯ ಯಜ್ಞವೆಂದೇ ಅನ್ನಬಹುದು.” ಕಥನಗಾರಿಕೆಯಿಂದ “ಅಧ್ವರ್ಯು” ವಾಗಿಯೂ, ತತ್ವೋಪದೇಶದಿಂದ ” ಹೋತೃ” ವಾಗಿಯೂ, ಸಚ್ಚಾರಿತ್ರ್ಯ ನಿರೂಪಣೆಯಿಂದ “ಬ್ರಹ್ಮ” ನಾಗಿಯೂ, ಒಬ್ಬನೇ ಆಗಿರುವ ಪ್ರವಚನಕಾರನು ಋತ್ವಿಜನಾಗುತ್ತಾನೆ. ಅವನು ಸದ್ಭಾವನೆಗಳೆಂಬ ಸಮಿಧೆಗಳಿಂದಲೂ, ರಸವಿಶೇಷಗಳೆಂಬ ಆಜ್ಯದಿಂದಲೂ, ಧರ್ಮಮಾರ್ಗ, ದೈವಭಕ್ತಿ, ಸತ್ಯನಿಷ್ಠೆ ಇವೇ ಮುಂತಾದವುಗಳ ವಿವಿಧ ರೀತಿಯ ನಿರೂಪಣೆಗಳೆಂಬ ಬಹು ವಿಧದ ದ್ರವ್ಯಗಳಿಂದಲೂ ನಿರ್ದಿಷ್ಟವಾದ ಕ್ರಮದಿಂದ ನಿತ್ಯ ವಿನೂತನವೂ, ಸನಾತನವೂ, ಆಗಿರುವ “ಪರಮಾತ್ಮ” ತತ್ವವೆಂಬ ಪ್ರಧಾನ ದೇವತೆಯನ್ನು ವಿಧ್ಯುಕ್ತವಾಗಿ ಅರ್ಚಿಸಿ, ಸುಮನಸರನ್ನು ಸಂತುಷ್ಟಿ ಪಡಿಸುತ್ತಾನೆ. ಅಂತೆಯೇ ಇದನ್ನು ವಾಜ಼್ಮಾಯಯಜ್ಞವೆಂದು ಕರೆಯಬಹುದು.ಇಲ್ಲಿ ಹೇಗೆ ಪ್ರವಚನಕಾರನು ಋತ್ವಿಜನಾಗುತ್ತಾನೋ ಹಾಗೆಯೇ ಶ್ರಾವಕನು ಯಜಮಾನನಾಗುತ್ತಾನೆ. ಯಜ್ಞ ಫಲವಾದ “ಅಪೂರ್ವ”ವು ಲೋಕ ಹಿತಕ್ಕಾಗಿ ಸಂಗ್ರಹವಾಗುತ್ತದೆ. ಶ್ರೇಯಸ್ಸಿನ ದಾರಿಯಲ್ಲಿ ಬೆಳಕನ್ನು ಚೆಲ್ಲುವ ಅಮರ ಜ್ಯೋತಿಯಾಗಿ ಪರಿಣಮಿಸುತ್ತದೆ.ಸದ್ಯದ ಸ್ಥಿತಿಯಲ್ಲಿ ಮಹಾರಾಜನು ಕಾಮ್ಯಾರ್ಥವಾಗಿಯೇ ಕೈಗೊಂಡ ಈ ಸರ್ಪಯಾಗದ ಲೋಪದೋಷಗಳು ಹೃದಯ ಸಂಸ್ಕಾರಕಾರಕವಾದ ಇಂಥಾ ಯಾವುದಾದರೊಂದು ಮಹಾವಿಷ್ಣು ಪ್ರೀತ್ಯರ್ಥವಾದ ವಾಜ಼್ಮಾಯಯಜ್ಞದಿಂದ ಪರಿಹರಿಸಲ್ಪಡಲಿ” ಎಂದು ನುಡಿದರು.

ಆಗ ಋಷಿಮುನಿಗಳೆಲ್ಲಾ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಮತ್ತೆ ಎಲ್ಲರೂ ಯಾರ ಕಡೆ ನೋಡಿದರು…?

ಮುಂದಿನ ಸಂಚಿಕೆಯಲ್ಲಿ…..

✍🏻 ಎಸ್ ಕೆ ಬಂಗಾಡಿ

Leave a Reply

Your email address will not be published. Required fields are marked *