
ಮಧುವಿನ ಮೇದಸ್ಸು ಬಿದ್ದ ಸ್ಥಳ ಏನಾಯಿತು?
ಪುರಾಣ ನೀತಿ
(ಹೆಜ್ಜೆ- 9)
ಹೀಗೊಂದು ಸೃಷ್ಟಿ, ಅದರ ಸ್ಥಿತಿ, ಅದರ ಲಯ ಹೀಗೆ ಈ ಬ್ರಂಹ್ಮಾಂಡದ ರಚನೆ, ಯಾರಿಂದ? ಹೇಗೆ? ಯಾಕೆ? ಎಂದು ಅದರ ಅನ್ವೇಷಣೆಗೆ ಒಳಹೊಕ್ಕರೆ ನಮಗೆ ಅನೇಕ ಪುರಾಣ ನೀತಿ ಕಥೆಗಳನ್ನು ತಿಳಿಯಬಹುದು, ಹೌದು ಈ ಕಥೆಗಳು ಪುರಾಣಗಳಾಗಿ ಉಳಿದಿಲ್ಲ, ನಮ್ಮ ಜೀವನದ ಮೌಲ್ಯವನ್ನು ತಿಳಿಸುತ್ತವೆ.

ಮೊದಲೊಮ್ಮೆ ಸರ್ವವೂ ಜಲಮಯವಾಗಿದ್ದ ಒಂದು ಕಾಲದಲ್ಲಿ ಸಣ್ಣ ಶಿಶುವೊಂದು ಅತ್ಯಂತ ತೇಜಸ್ವಿಯಾಗಿ ಒಂದು ಆಲದ ಎಲೆಯ ಮೇಲೆ ಪವಡಿಸಿಕೊಂಡು ತನ್ನ ಕಾಲ ಹೆಬ್ಬೆರಳನ್ನು ಎತ್ತಿ ಬಾಯಿಗಿಟ್ಟು ಸೀಪುತ್ತಾ ಆ ನೀರಿನ ಮೇಲೆ ತೇಲುತ್ತಿತ್ತಂತೆ. ಆ ಶಿಶುವು ತನ್ನ ಕೈಬೆರಳಿನಿಂದ ತನ್ನ ಕಿವಿಯಲ್ಲಿನ ಮಲವನ್ನು ತೆಗೆದು ಹೊರಹಾಕಿದನಂತೆ. ಕೂಡಲೇ ಅತ್ಯಂತ ಘೋರ ಸ್ವರೂಪಿಗಳಾದ ಇಬ್ಬರು ಆ ನೀರಿನಿಂದ ಮೇಲೆ ಬಂದು ಒಬ್ಬರನೊಬ್ಬರು ನೋಡಿಕೊಂಡು ಆ ಶಿಶುವಿನಲ್ಲಿ ನೀನಾರು? ಎಂದು ಘರ್ಜಿಸಿದರಂತೆ.
ಆಗ ವಟಪತ್ರಶಾಯಿಯು “ನನ್ನ ಕಿವಿಯ ಕಲ್ಮಶದಿಂದಲೇ ನೀವು ಹುಟ್ಟಿಕೊಂಡಿರುವುದರಿಂದ ನಾನು ನಿಮ್ಮನ್ನು ಸೃಷ್ಟಿಸಿದ ತಂದೆ” ಎಂದನಂತೆ. ಅವರು “ಎಲಾ ಇಷ್ಟು ಚಿಕ್ಕವನು ನೀನು, ನೀನು ನಮ್ಮ ತಂದೆಯೇ.? ಆಗಿದ್ದರೂ ಈಗೇಕೆ ಸುಮ್ಮನೆ ಮಲಗಿರುವೆ ಏನಾದರೂ ತಿನ್ನಲುಕೊಡು” ಎಂದು ಗುಡುಗಿದರಂತೆ.

ಮಕ್ಕಳೇ ನಾನು ಸರ್ವಶಕ್ತನಾದ ನಾರಾಯಣನು, ಎಲ್ಲಕ್ಕೂ ಮೂಲ ಪುರುಷನೂ, ನನ್ನನ್ನೇ ಅನಾದಿ ಎನ್ನುವರು. ನನ್ನಿಂದ ಸೃಷ್ಟಿಸಲ್ಪಟ್ಟ ಮೊದಲಜೀವಿಗಳಾದ ನೀವುಗಳು ಬಹಳ ಪರಾಕ್ರಮಿಗಳಾಗಿರುವಿರಿ. ನಿಮ್ಮಲ್ಲಿ ಒಬ್ಬನು “ಮಧು” ಇನ್ನೊಬ್ಬ “ಕೈಟಭ” ಎಂದು ನಾಮಕರಣ ಮಾಡಿ, ನಿಮಗೆ ಬೇಕಾದ ಆಹಾರವನ್ನು ನೀವೇ ತಯಾರಿಸಿಕೊಳ್ಳಬೇಕು ಎಂದು ನಗುತ್ತಾ ನುಡಿದನಂತೆ. “ಹಾಗಾದರೆ ನಾವೇ ಹುಡುಕಿ ಕೊಳ್ಳುತ್ತೇವೆ, ಉಪಯೋಗಕ್ಕೆ ಬೀಳದ ಅಪ್ಪ ನೀನು ಇದ್ದರೇನು..? ಇಲ್ಲದಿದ್ದರೇನು ..? ನಿನ್ನನ್ನೇ ತಿಂದು ತೇಗುತ್ತೇವೆ ನೀನೇ ನಮ್ಮ ಮೊದಲ ತುತ್ತು ” ಎಂದು ಮಧು ಕೈಟಭರು ಘರ್ಜಿಸಿದರಂತೆ. ಆಗ ನಾರಾಯಣನು “ಭಲೇ ಮಕ್ಕಳೇ ನಿಮ್ಮ ಸಾಹಸಕ್ಕೆ ಮೆಚ್ಚಿದೆನು ಬೇಕಾದ ವರವನ್ನು ಕೇಳಿ” ಎಂದನು. ಆಗ ಆ ರಾಕ್ಷಸರು ಕೆಟ್ಟ ಅಹಂಕಾರದಿಂದ ಉಬ್ಬಿ ನೀನು ಏನು ವರವನ್ನು ಕೊಡಬಲ್ಲೇ? ನಿನ್ನಿಂದ ಏನಾದೀತು? ನಿನಗೆ ಏನು ಬೇಕು ಕೇಳು ನಾವೇ ಕೊಡುತ್ತೇವೆ. ಎಂದು ನಾರಾಯಣನ ಬಳಿ ಹೇಳಿದರು.
ಆಗ ನಾರಾಯಣನು ಮುಗುಳ್ನಗೆಯನ್ನು ಬೀರಿ “ಸರಿ ನಾನೇ ಕೇಳುತ್ತೇನೆ ನೀವೇ ಕೊಡುವಿರಂತೆ ಆದರೆ ಕೊಟ್ಟ ಮಾತಿಗೆ ತಪ್ಪುವವರು ನೀವು ಅಲ್ಲ ಅಂದುಕೊಂಡಿದ್ದೇನೆ.” ಆಗ ಮಧು ಕೈಟಭರು “ಸರಿ ಏನು ಬೇಕಾದರೂ ಕೇಳು ತಪ್ಪದೇ ಕೊಡುತ್ತೇವೆ” ಎಂದರು. ಆಗ ನಾರಾಯಣನು “ನಿಮ್ಮ ಪ್ರಾಣವನ್ನೇ ಕೊಡಿ” ಎಂದನು.

ಮಾತಿಗೆ ತಪ್ಪಲಾರದೇ ಸರಿ ಎಂದರು, ಆದರೆ ಈ ಚಿಕ್ಕ ಜೀವಿಯನ್ನು ಉಪಾಯದಿಂದಲೇ ಸೋಲಿಸೋಣ ಎಂದು ಇಬ್ಬರೂ ತೀರ್ಮಾನ ಮಾಡಿಕೊಂಡು ನಾರಾಯಣನ ಬಳಿ ಒಂದು ಪಣವನ್ನು ಇಟ್ಟರು “ನೀರಿಲ್ಲದ ಸ್ಥಳದಲ್ಲಿ ನಮ್ಮ ಪ್ರಾಣವನ್ನು ಪಡೆದುಕೊಳ್ಳಬೇಕು” ಆಗ ನಾರಾಯಣನು “ಸರಿ ಹಾಗೇ ಆಗಲಿ” ಎಂದು ನುಡಿದು ಮಧುವನ್ನೆತ್ತಿಕೊಂಡು ಬೃಹದ್ರೂಪವನ್ನು ತಳೆದು ತನ್ನ ತೊಡೆಯ ಮೇಲೆಯೇ ಇಟ್ಟು ಅವನ ಪ್ರಾಣವನ್ನು ತೆಗೆದನು. ಅಲ್ಲದೆ ಮಧುವಿನ ಮೇದಸ್ಸನ್ನು ತೆಗೆದೊಗೆದು ಮೈತೊಗಲನ್ನು ನೀರಿನ ಮೇಲೆ ಹಾಸಿ ಅಲ್ಲಿ ಕೈಟಭನನ್ನೂ ಸಂಹರಿಸಿ ಬಿಟ್ಟನಂತೆ.
ಶ್ರೀಮನ್ನಾರಯಣನ ಕಿವಿಯ ಕಲ್ಮಶದಿಂದ ಹುಟ್ಟಿದ ಆ ಮಧು ಕೈಟಭರಿಗೆ ಕಲುಷಿತವಾದ ಬುದ್ದಿಯೇ ಬಂದು, ಕೂಡಲೇ ಸಾವೂ ಸಂಭವಿಸಿತು. ಮಧುವಿನ ಮೇದಸ್ಸು ಬಿದ್ದೆಡೆಯಲ್ಲಿಯೇ “ಮೇದಿನಿ” ಯನ್ನು ನಿರ್ಮಿಸಿದನು ಆ ನಾರಾಯಣನು, ಅದುವೇ ಈ ಭೂಮಿಯಂತೆ. ಮಧುವಿನ ಅಹಂಕಾರವೇ ಅವನಿಗೆ ಮೃತ್ಯುವಾಯಿತು. ಅದೇ ಮೇದಿನಿಯಲ್ಲಿ ಜನಿಸಿದವರಿಗೆ ಅಂತಹುದೇ ಅಹಂಕಾರ ಬರುವುದು ಸಹಜ ಅಲ್ಲವೇ, ಆದ್ದರಿಂದ ಮೇದಿನಿಯಲ್ಲಿ ಜನಿಸಿದ ಕೆಲವರಿಗಾದರೂ ನಾರಾಯಣನಿಗೆ ವರವನ್ನಿತ್ತ ಔದಾರ್ಯವೂ, ಮರಣಕ್ಕೆ ಅಂಜದ ಧೈರ್ಯವು ಬಂದಿರಬಹುದು.
ಈ ಪುರಾಣದಲ್ಲಿ ನಾವು ತಿಳಿದು ಕೊಳ್ಳುವ ಮೌಲ್ಯವೇನು? ಎಂದರೆ ಮನುಷ್ಯ ತಾನು ಬಂದ ದಾರಿ ಹೇಗೆ ಇರುತ್ತದೆಯೋ ಅದೇ ರೀತಿ ತನ್ನಲ್ಲಿರುವ ಗುಣಗಳನ್ನು ವೃದ್ಧಿಪಡಿಸಿಕೊಳ್ಳುತ್ತಾನೆ ಎಂದು ಹೇಳುತ್ತಾ ಮುಂದಿನ ಸಂಚಿಕೆಯತ್ತ ಹೋಗೋಣ…..
