January 18, 2025
WhatsApp Image 2022-01-22 at 19.36.59

ಕೃಷಿ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ರೈತರನ್ನು ಗುರುತಿಸಿ ಪುರಸ್ಕರಿಸುವ ವಿಜಯ ಕರ್ನಾಟಕ ಪತ್ರಿಕೆಅನುಪಮಾ ಕಾರ್ಯಕ್ರಮ ವಿಕ ಸೂಪರ್ ಸ್ಟಾರ್ ಪುರಸ್ಕಾರ ಪ್ರದಾನ ಸಮಾರಂಭ ಶುಕ್ರವಾರ ಮಂಗಳೂರು ಹೊರವಲಯದ ಒಡ್ಡೂರು ಫಾರ್ಮ್ಸ್ ನಲ್ಲಿ ನಡೆಯಿತು. ರೈತ ಕೃಷಿ ಪ್ರಯೋಗದಲ್ಲಿ ಅಂತಾರಾಷ್ಟ್ರೀಯ ಪ್ರಮಾಣಪತ್ರ ಪಡೆದಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಒಡ್ಡೂರು ಫಾರ್ಮ್ಸ್ ಪ್ರಕೃತಿ ರಮಣೀಯ ಕೃಷಿ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಒಂಬತ್ತು ಸಾಧಕ ರೈತರಿಗೆ ವಿಕ ಸೂಪರ್ ಸ್ಟಾರ್ ರೈತ ಪುರಸ್ಕಾರ ಪ್ರದಾನ ಮಾಡಲಾಯಿತು. ಇವರಲ್ಲಿ ಸಾವಯವದ ಪ್ರಗತಿಪರ ಕೃಷಿಕ ಪುತ್ತೂರು ತಾಲ್ಲೂಕು ಬೆಳ್ಳಿಪಾಡಿ ಕೈಪ ಕೇಶವ ಭಂಡಾರಿ ಅವರಿಗೆ ಪುರಸ್ಕಾರ ಪ್ರದಾನ ಮಾಡಿದ್ದು ಭಂಡಾರಿ ಸಮಾಜಕ್ಕೆ ನಿಜಕ್ಕೂ ಸಂತಸದ ವಿಚಾರ.

ಸೆಲೆಬ್ರಿಟಿಗಳನಷ್ಟೇ ಸ್ಟಾರ್ ಗಳೆಂದು ಆರಾಧಿಸುವ ಕಾಲಘಟ್ಟದಲ್ಲಿ ರೈತರೇ ನಿಜವಾದ ಸೆಲೆಬ್ರಿಟಿಗಳು, ಅವರೇ ನಿಜವಾದ ಸೂಪರ್ ಸ್ಟಾರ್ ಗಳು ಎಂಬುದನ್ನುಈ ಕಾರ್ಯಕ್ರಮ ಸಾಬೀತುಪಡಿಸಿದೆ.

ವಿಜಯ ಕರ್ನಾಟಕ ಕಳೆದ ಮೂರು ವರ್ಷಗಳಿಂದ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆದಿದ್ದು ಇದೀಗ ನಾಲ್ಕನೇ ಆವೃತ್ತಿಯಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮ ಸಂಪನ್ನಗೊಂಡಿತು.

 

ಕೋವಿಡ್ ನಿಯಮಾವಳಿಗಳ ಪ್ರಕಾರ ಸರಳವಾಗಿ ನಡೆದ ಸಮಾರಂಭದಲ್ಲಿ ಗೋಪೂಜೆ ಕೃಷಿ ಪರಿಕರಗಳ ಪೂಜೆಯ ಮೂಲಕ ಇಡೀ ಕಾರ್ಯಕ್ರಮಕ್ಕೆ ಧನಾತ್ಮಕವಾದ ಚಾಲನೆ ಸಿಕ್ಕಿತು. ಸೂಪರ್ ಸ್ಟಾರ್ ರೈತರನ್ನು ಚೆಂಡೆ ವಾದನದ ಮೂಲಕ ಆಕರ್ಷಕ ಮೆರವಣಿಗೆಯಲ್ಲಿ ಸಭಾ ವೇದಿಕೆಗೆ ಕರೆತರಲಾಯಿತು. ರೈತ ಪುರಸ್ಕಾರದ ವಸ್ತುಗಳನ್ನು ಅಲಂಕೃತ ಪಲ್ಲಕ್ಕಿಯಲ್ಲಿಟ್ಟು ಹೊತ್ತು ತರುವ ಮೂಲಕ ಮಣ್ಣಿನ ಮಕ್ಕಳಿಗೆ ಮೇರು ಗೌರವ ಸಲ್ಲಿಸಿತು.

ಗೋಪೂಜೆ ಪಲ್ಲಕ್ಕಿಯಲ್ಲಿ ಸಾಗಿತು ಪುರಸ್ಕಾರ ಕಾರ್ಯಕ್ರಮದ ಆರಂಭದಲ್ಲಿ ಗೋ ಪೂಜೆ ಸಲ್ಲಿಸಲಾಯಿತು ಮಂಗಳೂರಿನ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಏಕಮ್ಯಾನಂದಜಿ ಅವರು ಗೋಪೂಜೆ ನೆರವೇರಿಸಿದರು. ಮೊದಲಿಗೆ ಗೋವಿನ ಕಾಲಿಗೆ ನೀರೆರೆದರು. ನಂತರ ಅವಲಕ್ಕಿ ಬೆಲ್ಲ ದೋಸೆಗಳನ್ನು ತಿನ್ನಿಸಿ ಕುಂಕುಮವಿಟ್ಟು ಆರತಿ ಬೆಳಗಲಾಯಿತು .
ಮಂಗಳೂರು ಶ್ರೀ ರಾಮಕೃಷ್ಣ ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕೃಷಿ ದೇಶದ ಬೆನ್ನೆಲುಬು ಇದರ ಪುನರುತ್ಥಾನ ಅಗತ್ಯ ಯಾರೂ ಕೃಷಿಯಿಂದ ವಿಮುಖರಾಗ ಬಾರದು. ಇತ್ತೀಚಿನ ದಿನಗಳಲ್ಲಿ ಜನ ಕೃಷಿಯತ್ತ ಮರಳುತ್ತಿರುವುದು ಸಂತಸದ ಸಂಗತಿ ಎಂದರು.

ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ ಎನ್ ರಾಜೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ‘ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕರಾದ ಡಾ॥ ಸೀತಾ ಎಂ.ಸಿ., ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಎಚ್.ಆರ್. ನಾಯ್ಕ್ ಮುಖ್ಯ ಅತಿಥಿಯಾಗಿದ್ದರು. ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕ ಯು. ಕೆ. ಕುಮಾರನಾಥ್ ಪ್ರಾಸ್ತಾವಿಕ ಮಾತನಾಡಿದರು. ರೆಸ್ಪಾನ್ಸ್ ವಿಭಾಗದ ಉಪ ಮಹಾಪ್ರಬಂಧಕ ರಾಮಕೃಷ್ಣ ಡಿ .
ಆರ್. ಎಂ. ಡಿ. ವಿಭಾಗದ ಮುಖ್ಯ ಪ್ರಬಂಧಕ ನಾರಾಯಣ್ ಉಪಸ್ಥಿತರಿದ್ದರು.

ಬೆಳ್ಳಿಪಾಡಿ ಕೈಪ ಕೇಶವ ಭಂಡಾರಿ ಅವರ ಪರಿಚಯ.

ಬೆಳ್ಳಿಪಾಡಿ ಕೈಪ ಮಾಂಕು ಭಂಡಾರಿಯವರ ಮತ್ತು ಪೂವಕ್ಕ ಭಂಡಾರಿ ಪುತ್ರನಾಗಿ ಜನಿಸಿದ ಕೇಶವ ಭಂಡಾರಿ ತನ್ನ ಬಾಲ್ಯ ಜೀವನದಿಂದಲೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಕಳೆದ ಐವತ್ತು ವರ್ಷಗಳಿಂದ ಸಾವಯವ ಕೃಷಿ ಗಳಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿಕೊಂಡು ಜೊತೆಗೆ ತಮ್ಮ ಹಿರಿಯರ ಕಾಲದಿಂದಲೂ ಕಂಬಳದ ಕೋಣಗಳನ್ನು ಸಾಕಿ ಕಂಬಳದಲ್ಲಿ ಕೋಣಗಳನ್ನು ಸ್ಪರ್ಧಿಸುವ ಹವ್ಯಾಸವನ್ನು ಇಂದಿಗೂ ಮುನ್ನಡೆಸುತ್ತಿದ್ದು ಕಂಬಳದಲ್ಲಿ ಸ್ಪರ್ಧಿಸಿ ಪ್ರಶಸ್ತಿಗಳನ್ನು ಪಡೆದು ಮನೆತನದ ಹೆಸರನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಭೂಮಸೂದೆಯಿಂದ ಬಂದ ಸುಮಾರು 15 ಎಕ್ರೆ ಜಾಗದಲ್ಲಿ ಹಲವಾರು ತಳಿಯ ಭತ್ತ ಕೃಷಿಯನ್ನು ಮಾಡುತ್ತಿರುವ ಇವರು ನಾಲ್ಕು ಸಾವಿರ ಅಡಿಕೆ ಮರ ಮತ್ತು ತೆಂಗಿನ ಮರ ,ಹನ್ನೆರಡು ಜಾತಿಯ ಹಲಸಿನ ಮರ, ಒಂದು ಸಾವಿರ ರಬ್ಬರ್ ಗಿಡ, ಕೋಕೋ, ಕಾಳುಮೆಣಸು , ಚಿಕ್ಕು’ ರಕ್ತಚಂದನ ,ನೇರಳೆ ಮರ ,ಶ್ರೀಗಂಧ , ಬಿರಿಂಡ , ಹೆಬ್ಬಲಸು ಹಾಗೂ ಔಷಧೀಯ ಗುಣವುಳ್ಳ ಕಾಡುತ್ಪತ್ತಿ ಮರಗಳು ಪರ್ಫ್ಯೂಮ್ ತಯಾರಿಕೆಯಲ್ಲಿ ಬಳಕೆ ಮಾಡುವ ಅಗರ್ ವುಡ್ ಗಿಡ ಬೆಳೆಸುತ್ತಾ ಬಂದಿದ್ದಾರೆ ನರ್ಸರಿಯನ್ನು ಮಾಡುತ್ತಿದ್ದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಕೃಷಿಗೆ ರಾಸಾಯನಿಕ ಗೊಬ್ಬರ ಅವಲಂಬಿಸದೆ ಸುಡುಮಣ್ಣು ಹಟ್ಟಿಗೊಬ್ಬರವನ್ನು ಅಧಿಕವಾಗಿ ಬಳಸುತ್ತಿದ್ದಾರೆ.

ಕಳೆದ ಇಪ್ಪತ್ತೇಳು ವರ್ಷಗಳಿಂದ ಇವರ ನೇತೃತ್ವದಲ್ಲಿ ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿದ ಬಳಿಕ ಇವರ ಕೋಣಗಳು 26 ಪ್ರಶಸ್ತಿಗಳನ್ನು ಪಡೆದಿರುವುದು ಅಲ್ಲದೆ ಉಡುಪಿ ಇಡು ಬೆಟ್ಟುವಿನಲ್ಲಿ ನಡೆದ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ದಾಖಲೆಯೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಂಬಳದಲ್ಲಿ ಬಹುಮಾನವಾಗಿ ದೊರೆತ ಚಿನ್ನವನ್ನು ದೇವಸ್ಥಾನಕ್ಕೆ ಅರ್ಪಿಸುವುದು ಇವರ ವಿಶೇಷವಾಗಿದೆ ಹಾಗೂ ಕೃಷಿಯಲ್ಲಿ ಬಂದ ಆದಾಯದಲ್ಲಿ ಒಂದಂಶವನ್ನು ಸಂಘಸಂಸ್ಥೆಗಳು ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ತನ್ನ ಸಮುದಾಯಕ್ಕೆ ಜೊತೆಗೆ ಸಮಾಜಕ್ಕೆ ಮೀಸಲಿಡುತ್ತಾ ನಿರಂತರ ಕೃಷಿಯನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ .


ಸಮಾಜ ಸೇವೆಯಲ್ಲಿ ನಿರಂತರವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಕೇಶವ ಭಂಡಾರಿ ಯವರು ಪುತ್ತೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾಗಿ , ಬೆಳ್ಳಿಪ್ಪಾಡಿ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾಗಿ , ದಕ್ಷಿಣ ಕನ್ನಡ ಉಡುಪಿ ಕಾಸರಗೋಡು ಜಿಲ್ಲೆಯನ್ನೊಳಗೊಂಡ ಕಂಬಳ ಸಮಿತಿಯ ಉಪಾಧ್ಯಕ್ಷರಾಗಿ , ಮಟಂದಬೆಟ್ಟು ಮಹಿಷಮರ್ದಿನಿ ದೇವಸ್ಥಾನ , ಬೆಳ್ಳಿಪ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನ, ಬೆಳ್ಳಿಪ್ಪಾಡಿ ವನಸ್ತಾನ ಅಯ್ಯಪ್ಪ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ , ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿ ಉತ್ಸವ ಸಮಿತಿಯ ಉಪಾಧ್ಯಕ್ಷರಾಗಿ , ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅನ್ನ ಚತ್ರ ವ್ಯವಸ್ಥಾಪನ ಸಮಿತಿಯ ಸಂಚಾಲಕರಾಗಿ ಹಾಗೂ ಹಲವಾರು ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಸಂಘ ಸಂಸ್ಥೆ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಕಂಬಳ ಕ್ಷೇತ್ರದಲ್ಲಿ ಮತ್ತು ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ತಾಲ್ಲೂಕು ಮಟ್ಟದ ಮಟ್ಟದ ಕೃಷಿ ಇಲಾಖೆ ,ಕಂಬಳ ಸಮಿತಿ, ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಸಂಘ ಸಂಸ್ಥೆಗಳಲ್ಲಿ ಪ್ರಶಸ್ತಿ ಮತ್ತು ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಸನ್ಮಾನದ ಜೊತೆಗೆ ಬಂದ ಮೊತ್ತವನ್ನು ಕೂಡಾ ಸಮಾಜಕ್ಕೆ ಅರ್ಪಣೆ ಮಾಡುವುದು ಕೇಶವ ಭಂಡಾರಿ ಅವರ ವಿಶೇಷವಾಗಿದೆ.

ರಾಜ್ಯದ ಅತ್ಯಧಿಕ ಓದುಗರನ್ನು ಹೊಂದಿರುವ ವಿಜಯ ಕರ್ನಾಟಕ ಪತ್ರಿಕೆ ತನ್ನ ಸಾಧನೆಯನ್ನು ಗುರುತಿಸಿ ವಿಕ ಸೂಪರ್ ಸ್ಟಾರ್ ರೈತ ಪುರಸ್ಕಾರ ನೀಡಿದ್ದರಿಂದ ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವಂತೆ ನನ್ನ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ಎನ್ನುತ್ತಾರೆ ಕೇಶವ ಭಂಡಾರಿ.

ಕೃಷಿ ಕ್ಷೇತ್ರದಲ್ಲಿ ಮತ್ತು ಕಂಬಳದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶ ಬೆಳ್ಳಿಪ್ಪಾಡಿ ಕೈಪ ಕೇಶವ ಭಂಡಾರಿ ಅವರ ಪಾಲಿಗೆ ಒದಗಿ ಬರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆ.

ಕೇಶವ ಭಂಡಾರಿಯವರನ್ನು ಅಭಿನಂದಿಸಲು ಇಚ್ಚಿಸುವವರು ಅವರ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು 9901543389 & 8762923390.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *