
ಶ್ರಾವಣ ಮಾಸವೆಂದರೆ ಹಬ್ಬಹರಿದಿನಗಳ ಪರ್ವ ಕಾಲ. ಶ್ರಾವಣ ಹುಣ್ಣಿಮೆಯ ದಿನ ಸಹೋದರ ಸಹೋದರಿಯರು ರಕ್ಷಾಬಂಧನವನ್ನು ಆಚರಿಸಲು ಉತ್ಸುಕರಾಗಿರುತ್ತಾರೆ.ಈ ಹಬ್ಬವನ್ನು ಅನಾದಿ ಕಾಲದಿಂದಲೂ ಆಚರಿಸಲಾಗುತ್ತಿದೆ.ಕೇಸರಿ ಕೆಂಪು ಹಳದಿ ಬಣ್ಣದ ರೇಷ್ಮೆ ನೂಲಿನಿಂದ ಮಾಡಲ್ಪಡುವ ದಾರವನ್ನು ಸಹೋದರಿಯರು ಸಹೋದರರಿಗೆ ಸದಾ ರಕ್ಷಣೆ ಸಿಗಲೆಂದು ಕಟ್ಟುವರು ಹಾಗೆಯೇ ಸಹೋದರರು ಸಹೋದರಿಯರಿಗೆ ಸದಾ ಬೆಂಗಾವಲಾಗಿರುವೆನೆಂದು ಕಟ್ಟಿಸಿಕೊಳ್ಳುವರು.
ಒಡಹುಟ್ಟಿದ ಅಕ್ಕ ತಂಗಿಯಂದಿರ ಮೇಲೆ ಇರುವ ಪ್ರೀತಿ, ಗೌರವ,ಅಕ್ಕರೆ ನಿಸ್ವಾರ್ಥದಿಂದ ಕೂಡಿರುತ್ತದೆ,ಅದೇ ಪ್ರೀತಿ,ಗೌರವ ಸಮಾಜದ ಇತರ ಹೆಣ್ಣುಮಕ್ಕಳ ಮೇಲೆ ಸಹೋದರರು ತೋರಿದರೆ ರಕ್ಷಾಬಂಧನ ಹಬ್ಬದ ಆಚರಣೆಗೊಂದು ನಿಜವಾದ ಅರ್ಥ ಸಿಕ್ಕಂತಾಗುವುದು.
ಈ ರಕ್ಷಾಬಂಧನದ ಅರ್ಥ ಮತ್ತು ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಂಡು ಅನುಸರಿಸಿದರೆ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯವನ್ನು ನಿಯಂತ್ರಿಸ ಬಹುದು.
ಒಂದು ದಿನ ಕೈಗೆ ರಕ್ಷಾಬಂಧನದ ದಾರ ಕಟ್ಟಿಸಿ ಮೆರೆಯುವ ಬದಲು ಅನುದಿನವೂ ಸಮಾಜದ ಪ್ರತೀ ಹೆಣ್ಣುಮಕ್ಕಳ ಬಗ್ಗೆ ಪ್ರೀತಿ, ಕಾಳಜಿ,ಗೌರವವನ್ನು ಉದಾರ ಮನದಿಂದ ತೋರಿದರೆ ರಕ್ಷಣೆ ಎಂಬ ಊರುಗೋಲಿನ ಆಧಾರ ಸಿಕ್ಕಂತಾಗಿ ಸಮಾಜ ಉದ್ಧಾರವಾಗುವುದರಲ್ಲಿ ಎರಡು ಮಾತಿಲ್ಲ.ಒಟ್ಟಾರೆ ಹೇಳಬೇಕೆಂದರೆ ಈ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಸಹೋದರರ ಮೇಲೆ ಪ್ರೀತಿ ಗೌರವ ಸಹೋದರಿಯರ ರಕ್ಷಣೆ ನಿರಂತರ ನಡೆಯುತ್ತಿರಲಿ.
✍️ಪೂರ್ಣಿಮಾ ಅನಿಲ್ ಭಂಡಾರಿ,ಮಣಿಪಾಲ