
ಈಗಂತೂ ಎಲ್ಲಿ ನೋಡಿದರೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಕ್ಕಳ ಪ್ರತಿಭೆಗೆ ಒರೆ ಹಚ್ಚುವ,ಎಲೆಮರೆಯ ಕಾಯಿಯಂತಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮ ಪ್ರತಿಭಾ ಕಾರಂಜಿ ಯದ್ದೇ ಸದ್ದು.ಹಾಡು, ನೃತ್ಯ,ಗಾಯನ,ರಸಪ್ರಶ್ನೆ,ಚರ್ಚಾಸ್ಪರ್ಧೆ,ಛದ್ಮವೇಷ ಸ್ಪರ್ಧೆ,ಚಿತ್ರಕಲಾ ಸ್ಪರ್ಧೆ… ಹೀಗೆ ಹತ್ತು ಹಲವು ಸ್ಪರ್ಧೆಗಳು ಮಕ್ಕಳ,ಉಪಾಧ್ಯಾಯರ ಮತ್ತು ಪೋಷಕರ ಭಾಗವಹಿಸುವಿಕೆಯೊಂದಿಗೆ ಶಾಲಾ ಆವರಣದಲ್ಲಿ ಒಂದು ರೀತಿಯ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ.
ಇಂತಹ ಸಮಯದಲ್ಲಿ ಶಿವಮೊಗ್ಗ ಜಿಲ್ಲೆಯ ಬಹುತೇಕ ಶಾಲೆಯವರಿಗೆ, ಮಕ್ಕಳಿಗೆ,ಪೋಷಕರಿಗೆ ಕೂಡಲೇ ನೆನಪಾಗುವುದು ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ಬಹುಮುಖ ಪ್ರತಿಭೆಯ ಕಲಾವಿದ ರತ್ನಾಕರ್ ಭಂಡಾರಿ ಶಿರಾಳಕೊಪ್ಪ. ಮಕ್ಕಳ ನೃತ್ಯಕ್ಕೆ ಮೇಕಪ್ ಮಾಡಲು,ಅವರ ವೇಷ ಭೂಷಣಗಳಿಗೆ ಪ್ರಾಪರ್ಟೀಸ್ ತಯಾರಿಸಲು,ಚಿತ್ರಕಲಾ ಸ್ಪರ್ಧೆಗೆ ಮಕ್ಕಳನ್ನು ತಯಾರು ಮಾಡಲು,ಛದ್ಮವೇಷ ಸ್ಪರ್ಧೆಗೆ ಮಕ್ಕಳನ್ನು ಸಿದ್ಧಗೊಳಿಸಲು ಎಲ್ಲದಕ್ಕೂ ಸಲ್ಲುವ ಪ್ರತಿಭೆ ಈ ರತ್ನಾಕರ್ ಭಂಡಾರಿ ಶಿರಾಳಕೊಪ್ಪ.

ಇತ್ತೀಚಿನ ಮೂರ್ನಾಲ್ಕು ವರ್ಷಗಳಿಂದ ಇವರ ಕೈಚಳಕದಿಂದ ಅರಳಿದ ಪ್ರತಿಭೆಗಳು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡು ತಮ್ಮ ತಮ್ಮ ಶಾಲೆಗಳಿಗೆ ಹೆಸರು,ಗೌರವ ತಂದುಕೊಟ್ಟಿವೆ.ಛದ್ಮವೇಷ ತಯಾರಿಯಲ್ಲಿಯಂತೂ ರತ್ನಾಕರ್ ದಾಖಲೆಯನ್ನೇ ಬರೆದಿದ್ದಾರೆ. 2016 ರಲ್ಲಿ ಇವರ ಕೈಯಲ್ಲರಳಿದ ನ್ಯಾಯ ದೇವತೆ ಮತ್ತು ಉಗ್ರ ನರಸಿಂಹ ಛದ್ಮವೇಷಗಳು ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತಿ ಪಡೆದವು.





2017 ರಲ್ಲಿ ಇವರ ಸೃಷ್ಠಿಗಳಾದ ಶ್ರೀ ವೆಂಕಟೇಶ್ವರ ಮತ್ತು ಮಹಾತ್ಮ ಗಾಂಧೀಜಿಯವರ ಛದ್ಮವೇಷಗಳು ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತಿ ಪಡೆದು ಹೆಸರು ತಂದುಕೊಟ್ಟವು.

2018 ರಲ್ಲಿ ಇವರ ಕೈಯಲ್ಲಿ ಜೀವ ಪಡೆದ ಛದ್ಮವೇಷಗಳು ಮೋಹಿನಿ,ದರ್ಪಣ ಸುಂದರಿ ಮತ್ತು ಕಾವೇರಿ ತಾಯಿ.ಶಿರಾಳಕೊಪ್ಪ ಮತ್ತು ತಾಳಗುಂದ ಕ್ಲಸ್ಟರ್ ಮಟ್ಟದಿಂದ ತಾಲ್ಲೂಕು ಮಟ್ಟಕ್ಕೆ ಏರಿರುವ ಈ ಛದ್ಮವೇಷಗಳಿಗೆ ಮಾರುಹೋಗಿ ಹೊಸನಗರ ತಾಲೂಕಿನ ನಗರದ ನಿಲ್ಸ್ ಕಲ್ ನ ಶ್ರೀ ರಾಘವೇಂದ್ರ ಭಂಡಾರಿ ಮತ್ತು ಶ್ರೀಮತಿ ಪ್ರಭಾವತಿ ರಾಘವೇಂದ್ರ ಭಂಡಾರಿಯವರು ತಮ್ಮ ಮಗ ದರ್ಶನ್ ನಿಗೆ ಛದ್ಮವೇಷ ಸ್ಪರ್ಧೆಗೆ ಸಹಕರಿಸಲು ಅವಕಾಶ ಮಾಡಿಕೊಟ್ಟರು.ದರ್ಶನ್ ಗಾಗಿ ಮಾಡಿಕೊಟ್ಟ ಶ್ರೀ ಗರುಡ ದೇವರು ನಗರ ಕ್ಲಸ್ಟರ್ ಹಂತದಲ್ಲಿ ಜಯಗಳಿಸಿ,ಹೊಸನಗರದ ತಾಲ್ಲೂಕು ಮಟ್ಟಕ್ಕೆ ತೇರ್ಗಡೆ ಹೊಂದಿದೆ.
ಇತ್ತೀಚಿಗೆ ಸೊರಬ ತಾಲೂಕಿನ ಚಂದ್ರಗುತ್ತಿಯ ಶಾಲೆಯೊಂದರ ಮಗುವಿಗೆ ತಯಾರು ಮಾಡಿದ “ರೋಬೋಟ್” ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಸೊರಬ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ. ರತ್ನಾಕರ್ ಭಂಡಾರಿ ಬಹುಮುಖ ಪ್ರತಿಭೆಯ ವ್ಯಕ್ತಿ.ಮದುವೆಗೆ ಫ್ಲವರ್ ಡೆಕೋರೇಷನ್, ಸ್ಟೇಜ್ ಡೆಕೋರೇಷನ್, ಬಲೂನ್ ಡೆಕೋರೇಷನ್, ವಾಲ್ ಪೇಂಟಿಂಗ್,ಟ್ಯಾಟೂ ಆರ್ಟಿಸ್ಟ್, ಟ್ಯಾಬ್ಲೋ ಆರ್ಟಿಸ್ಟ್, ಕ್ಯಾರಿಕೇಚರ್ (ವ್ಯಂಗ್ಯಚಿತ್ರ) ಆರ್ಟಿಸ್ಟ್…. ಹೀಗೆ ಕಲೆಯ ಎಲ್ಲಾ ಪ್ರಕಾರಗಳನ್ನು ಜಾಲಾಡಿರುವ ಇವರು ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ.
ಇತ್ತೀಚೆಗೆ ಇವರು ಕೊಡಗು ನೆರೆ ಸಂತ್ರಸ್ತರ ನೆರವಿಗಾಗಿ ಆರು ಗಂಟೆಗಳ ಕಾಲ ನಿರಂತರವಾಗಿ ವ್ಯಂಗ್ಯಚಿತ್ರ ಬರೆದು ಒಟ್ಟು ಹದಿನಾಲ್ಕು ಸಾವಿರ ಸಂಗ್ರಹಿಸಿ ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ದೇಣಿಗೆಯಾಗಿ ಕೊಟ್ಟು ದಾಖಲೆ ಬರೆದಿದ್ದನ್ನು ನಮ್ಮ ಭಂಡಾರಿವಾರ್ತೆ ವರದಿ ಪ್ರಕಟಿಸಿತ್ತು.
ಇಷ್ಟೆಲ್ಲಾ ಕಲಾಪ್ರಕಾರಗಳೊಂದಿಗೆ ಪ್ರತಿಭೆಯ ಗಣಿಯೆನಿಸಿರುವ ಶ್ರೀ ರತ್ನಾಕರ್ ಭಂಡಾರಿಯವರು ಇನ್ನಷ್ಟು ಸಾಧನೆಗಳನ್ನು ಮಾಡಲಿ,ತನ್ಮೂಲಕ ಭಂಡಾರಿ ಸಮಾಜಕ್ಕೆ ಒಳ್ಳೆಯ ಹೆಸರು ತಂದುಕೊಡಲಿ ಎಂಬುದಷ್ಟೇ ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯ ಶುಭ ಹಾರೈಕೆ.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.
Bahumukha prathibe all the best
Phone number sir
8867782136