ಸಾಗರ ತಾಲೂಕು ಹೆಗ್ಗೋಡು ಗ್ರಾಮದ ಶ್ರೀಯುತ ರವಿಪ್ರಕಾಶ್ ಭಂಡಾರಿ ಯವರು ಸಾಗರ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಮಾಜ ಮುಖಿ ಕೆಲಸಗಳಲ್ಲಿ ಸದಾ ಸಕ್ರಿಯರಾಗಿರುವ ರವಿ ಪ್ರಕಾಶ್ ಭಂಡಾರಿಯವರು ಈ ಮೊದಲು ಸಾಗರ ತಾಲೂಕು ಸವಿತಾ ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ತಾಲೂಕು ಸವಿತಾ ಸಮಾಜದ ಸಲಹಾ ಸಮಿತಿಯ ಸದಸ್ಯರಾಗಿ, ಭಂಡಾರಿ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಅಪಾರ ಅನುಭವವನ್ನು ಹೊಂದಿದ್ದಾರೆ. ಸಾಗರ ತಾಲೂಕು ಸ್ವರಾಜ್ ಅಭಿಯಾನದ ತಾಲೂಕು ಅಧ್ಯಕ್ಷರಾಗಿ, ಹೆಗ್ಗೋಡಿನ ಗಜಾನನ ಯುವಕ ಸಮಿತಿಯ ಸಂಸ್ಥಾಪಕ ಸದಸ್ಯರಾಗಿ ಸುಮಾರು ಇಪ್ಪತ್ತೈದು ವರ್ಷಗಳ ಸೇವೆಯನ್ನು ನೀಡಿರುವ ಇವರು ಜನಸ್ನೇಹಿಯಾಗಿ ಗುರುತಿಸಿಕೊಂಡಿದ್ದಾರೆ.
ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ಇವರು ಹೆಗ್ಗೋಡಿನ ಶ್ರೀ ಮಂಜುನಾಥ ಭಂಡಾರಿ ಮತ್ತು ಶೀಲಾ ಮಂಜುನಾಥ್ ಭಂಡಾರಿ ದಂಪತಿಯ ಪುತ್ರರಾಗಿದ್ದಾರೆ. ಸಮಾಜವಾದಿ ಚಿಂತನೆಯ ಹೆಗ್ಗೋಡು ಮಂಜುನಾಥ ಭಂಡಾರಿಯವರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಶ್ರೀಯುತರು ಹೆಗ್ಗೋಡು ಸಹಕಾರಿ ಸಂಘದ ಅಧ್ಯಕ್ಷರಾಗಿ, ಸಾಗರ ತಾಲ್ಲೂಕು ಸವಿತಾ ಸಮಾಜದ ಸಂಸ್ಥಾಪಕ ಅಧ್ಯಕ್ಷರಾಗಿ, ನಂತರದ ದಿನಗಳಲ್ಲಿ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದರು. ಭೀಮನಕೋಣೆ ಪಿ ಎಲ್ ಡಿ ಬ್ಯಾಂಕಿನ ಉಪಾಧ್ಯಕ್ಷರಾಗಿ, ಸಾಗರ ತಾಲ್ಲೂಕು ವ್ಯವಸಾಯ ಸಹಕಾರಿ ಸಂಘದ ಸರ್ಕಾರಿ ನಾಮನಿರ್ದೇಶಿತ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಇಂತಹ ಸಾಮಾಜಿಕ ಕಳಕಳಿಯ ವ್ಯಕ್ತಿತ್ವದ ಶ್ರೀಯುತ ಹೆಗ್ಗೋಡು ಮಂಜುನಾಥ ಭಂಡಾರಿಯವರ ಪುತ್ರರಾದ ಶ್ರೀಯುತ ರವಿಪ್ರಕಾಶ್ ಭಂಡಾರಿಯವರು ಸಾಗರ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.
ಅದೇ ರೀತಿಯಲ್ಲಿ ಸಾಗರ ತಾಲ್ಲೂಕು ಸವಿತಾ ಸಮಾಜದ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಾದ ಹನುಮಂತಪ್ಪ ತ್ಯಾಗರ್ತಿ ಗೌರವಾಧ್ಯಕ್ಷರಾಗಿ, ಆನಂದ ಭಂಡಾರಿ ಉಪಾಧ್ಯಕ್ಷರಾಗಿ ,ಶೋಭ ರಾಮನಾಥ ಉಪಾಧ್ಯಕ್ಷರಾಗಿ, ಪ್ರಕಾಶ್ ಬಾಣಿಗ ಕಾರ್ಯದರ್ಶಿಯಾಗಿ, ನಿರ್ಮಲ್ ಖಜಾಂಚಿಯಾಗಿ ಹಾಗೂ ನಿರ್ದೇಶಕರಾಗಿ ಗಣಪತಿ ಭಂಡಾರಿ,ಪ್ರವೀಣ್, ರಾಜು, ಗೋಪಾಲ್, ಮಂಜುನಾಥ್ ಇವರೆಲ್ಲರೂ ಆಯ್ಕೆಗೊಂಡಿದ್ದಾರೆ.
ಸಾಗರ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ರವಿಪ್ರಕಾಶ್ ಭಂಡಾರಿ ಹೆಗ್ಗೋಡು ಅವರಿಗೂ ಹಾಗೂ ಸಾಗರ ತಾಲ್ಲೂಕು ಸವಿತಾ ಸಮಾಜದ ನೂತನ ಕಾರ್ಯಕಾರಿಣಿಯ ಸದಸ್ಯರೆಲ್ಲರಿಗೂ ಭಂಡಾರಿ ಕುಟುಂಬದ ಮನೆ ಮನೆಯ ಮಾತು “ಭಂಡಾರಿ ವಾರ್ತೆ” ಯು ಹಾರ್ದಿಕವಾಗಿ ಶುಭಕೋರುತ್ತದೆ.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ