ದೀಪಾವಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಪಾತ್ರ
ಅಂಧಕಾರವನ್ನು ಓಡಿಸಿ ಬೆಳಕಿನ ದೀವಿಗೆಯನ್ನು ಹಚ್ಚಿ, ಜ್ಞಾನದ ಬೆಳಕನ್ನು ಸುತ್ತಲೂ ಹರಿಸುವ ಹಬ್ಬವೆಂದರೆ ಅದು ದೀಪಾವಳಿ.ಒಂದು ಪುಟ್ಟ ಮೇಣವು ಕೂಡ ಕತ್ತಲನ್ನು ಓಡಿಸಿ ಬೆಳಕನ್ನು ಚೆಲ್ಲುವಂತೆ. ನಾವು ನಮ್ಮ ಮನದೊಳಗಿರುವ ಅಹಂಕಾರವನ್ನು ಓಡಿಸಿದಾಗ ದಯೆ, ಕರುಣೆ,ಪ್ರೀತಿ, ಸ್ನೇಹವೆಂಬ, ಸದ್ಗುಣಗಳ ದರ್ಶನವಾಗುತ್ತದೆ.ಅಂತೆಯೇ ದೀಪಾವಳಿ ಹಬ್ಬ ಕೇವಲ ಹಿಂದೂಗಳ ಹಬ್ಬವಲ್ಲ ಎಲ್ಲಾ ಧರ್ಮದವರು ಜಾತಿ, ಲಿಂಗ, ಭೇದ ಮರೆತು ಒಂದಾಗಿ ಆಚರಿಸುವ ನಾಡಹಬ್ಬ.
ದೀಪಾವಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಪಾತ್ರ ಅಪಾರವಾದದ್ದು,ಏಕೆಂದರೆ ಹೆಣ್ಣೆ ಮನೆಯ ಬೆಳಕು, ಹೆಣ್ಣಿಲ್ಲದ ಮನೆಯಲ್ಲಿ ಬೆಳಕಿಗೆ ಜಾಗವಿಲ್ಲ, ಹಾಗೆ ದೀಪಾವಳಿ ಎಂದರೆ ಬೆಳಕಿನ ಹಬ್ಬ,ಅದು ಹೆಣ್ಣು ಮಕ್ಕಳ ಹಬ್ಬ ಹಬ್ಬದ ಹಿಂದಿನ ದಿನವೇ ನೀರಿನ ಹಂಡೆಯನ್ನು ಶುಚಿಗೊಳಿಸಿ,ಅದಕ್ಕೆ ಹೂವಿನ ಮಾಲೆಯನ್ನು ಕಟ್ಟಿ, ನೀರನ್ನು ತುಂಬಿಸಿಟ್ಟು, ಬೆಳಿಗ್ಗೆ ಮನೆಯ ಹಿರಿಯರು, ಕಿರಿಯರು ಎಲ್ಲರೂ ಅಭ್ಯಂಜನ ಸ್ನಾನ ಮಾಡಿ, ಹೊಸ ಬಟ್ಟೆಯನ್ನು ಧರಿಸಿ ಮನೆ ತುಂಬಾ ಓಡಾಡಿಕೊಳ್ಳುವ ಪುಟಾಣಿ ಮಕ್ಕಳನ್ನು ನೋಡುವುದೇ ಕಣ್ಣಿಗೆ ಹಬ್ಬ.. ಇನ್ನು ಮನೆಯ ಹೆಣ್ಣು ಹೊಸ ಸೀರೆ ಉಟ್ಟುಕೊಂಡು ಹಬ್ಬದ ತಯಾರಿ ನಡೆಸುವುದನ್ನು ನೋಡುವುದೇ ಅಂದ.
ನರಕಚತುರ್ದಶಿಯಿಂದ ಮೊದಲ್ಗೊಂಡು ಬಲಿ ಪಾಡ್ಯಮಿ ತನಕ ಹೆಣ್ಣು ಮಕ್ಕಳದ್ದೇ ಕಾರುಬಾರು, ರುಚಿ ರುಚಿಯಾದ ತಿಂಡಿ ತಿನಿಸು, ವಿವಿಧ ಬಗೆಯ ಸಿಹಿ ತಿನಿಸು, ಹಲವು ಬಗೆಯ ಪಲ್ಯ, ಪದಾರ್ಥಗಳು, ನೆನೆಸಿಕೊಂಡಾಗ ಬಾಯಲ್ಲಿ ನೀರೂರುತ್ತದೆ ,ಇನ್ನು ಮಕ್ಕಳು ಸಂಜೆಯಾಗುವುದನ್ನೇ ಕಾಯುತ್ತ ಇರುತ್ತಾರೆ,ಯಾವಾಗ ಪಟಾಕಿ ಬಿಟ್ಟು ಸಂಭ್ರಮ ಪಡುವುದೆಂದು..
ದೀಪಾವಳಿ ಮಕ್ಕಳು ಮಹಿಳೆಯರಿಗೆ ಎಲ್ಲರಿಗೂ ಸಂತಸ ತರುವ ಹಬ್ಬ, ಮನೆಯ ಎಲ್ಲ ನೋವು, ಕಷ್ಟಗಳನ್ನು ಮರೆಸಿ ನಗುವ ಹೊತ್ತು ತರುವ ಹಬ್ಬ, ದೀಪಾವಳಿ ವಿಜಯದ ಹಬ್ಬ, ನಮ್ಮ ನಿಮ್ಮೆಲ್ಲರ ಹಬ್ಬ…
✍️ ಶ್ರೀಮತಿ ನಾಗಶ್ರೀ. ಎಸ್. ಭಂಡಾರಿ ಮೂಡುಬಿದಿರೆ