ಸಾಧಿತ ಭಂಡಾರಿ – 6
ಭಂಡಾರಿ ಸಮಾಜದಲ್ಲಿ ಹಲವಾರು ಸಾಧಕರು ಇದ್ದಾರೆ. ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಹಿತ್ಯ, ಕಲಾತ್ಮಕ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹತ್ವದ ಸಾಧನೆ ಮಾಡಿದ ಹಲವು ಸಾಧಕರು ನಮ್ಮಲ್ಲಿದ್ದಾರೆ. ಅಂತಹ ಸಾಧಕರಲ್ಲನೇಕರು ಸಮಾಜಕ್ಕೆ ಅಪರಿಚಿತರಾಗಿಯೇ ಉಳಿದಿದ್ದಾರೆ. ಅಂತಹ ಸಾಧಕರನ್ನೂ ಹುಡುಕಿ ಸಮಾಜಕ್ಕೆ ಪರಿಚಯಿಸಬೇಕು. ಅವರ ಸಾಧನೆಯ ಅನಾವರಣವಾಗಬೇಕು ಎಂಬ ಉದ್ದೇಶದಿಂದ ಈ “ಸಾಧಿತ ಭಂಡಾರಿ” ಅಂಕಣ ರೂಪುಗೊಂಡಿದೆ. ಒಂದು ವಿಷಯವನ್ನು ಇಲ್ಲಿ ಸ್ಪಷ್ಟ ಪಡಿಸಲೇಬೇಕು, ಅದೇನೆಂದರೆ ಸಾಧಕರಿಗೆ ನಾವು ನೀಡುವ ಪ್ರಚಾರ ಬೇಕಿರುವುದಿಲ್ಲ. ಅವರು ಅದನ್ನು ಅಪೇಕ್ಷಿಸುವುದೂ ಇಲ್ಲ. ಆದರೆ ಈ ಅಂಕಣದ ಉದ್ದೇಶ ಅಂತಹ ಸಾಧಕರ ಸಾಧನೆಯ ಹಾದಿಯ ಮೇಲೆ ಬೆಳಕು ಚೆಲ್ಲುವುದು,ಅವರ ಸಾಧನೆಯ ಮೇಲ್ನೋಟವನ್ನಷ್ಟೇ ನಾವು ಪರಿಚಯಿಸುವುದಷ್ಟೇ ಆಗಿರುತ್ತದೆ. ನಮ್ಮ ಈ ಪ್ರಯತ್ನ ನಮ್ಮ ಸಮಾಜದ ಬೆರಳೆಣಿಕೆಯ ಯುವಕರಿಗೆ ಸ್ಪೂರ್ತಿಯಾದರೆ ನಮ್ಮ ಈ ಶ್ರಮ ಸಾರ್ಥಕವಾದಂತೆ.
ನಾವು ಈ ಸಂಚಿಕೆಯಲ್ಲಿ ಬೆಳಕು ಚೆಲ್ಲಹೊರಟಿರುವ ಸಾಧಕರು ನಮ್ಮ ನಿಮ್ಮಂತಯೇ ಒಬ್ಬ ಸಾಧಾರಣ ವ್ಯಕ್ತಿ.ಆದರೆ ಅವರು ಈಗಿರುವ ಸ್ಥಾನ, ಅವರಿಗೆ ಸಮಾಜದಲ್ಲಿರುವ ಬೆಲೆ ಅರಿತರೆ ಅವರನ್ನು ಗೌರವದಿಂದ ಕಾಣುವಂತೆ ಮಾಡುತ್ತದೆ. ಹಳ್ಳಿ ಹಳ್ಳಿ ತಿರುಗಿ ಕ್ಷೌರ ಮಾಡುತ್ತಿದ್ದ ವ್ಯಕ್ತಿ ಇಂದು ಪೂರ್ವಜರ ಸ್ವತ್ತಾದ ಆಯುರ್ವೇದ ವೈದ್ಯ ಪದ್ದತಿಯನ್ನು ರೂಡಿಸಿಕೊಂಡು ಹಲವಾರು ಚರ್ಮ ರೋಗಗಳಿಗೆ, ಕೂದಲು ಸಮಸ್ಯೆಗೆ, ಮೂಲವ್ಯಾಧಿ, ಸಕ್ಕರೆ ಕಾಯಿಲೆಗೆ ಮದ್ದು ಅರೆದು ಆಯುರ್ವೇದ ಪಂಡಿತರಾಗಿ ಬದಲಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ತಮ್ಮದೇ ಆದ ಸ್ವಂತಿಕೆಯನ್ನು ಗಳಿಸಿಕೊಂಡು, ಅರವತ್ತೈದರ ಆಸುಪಾಸಿನಲ್ಲಿಯೂ ಲವಲವಿಕೆಯಿಂದ ಇರುವ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ “ಶ್ರೀ ಜೋಗು ಭಂಡಾರಿಯವರು.” ಇವರು ಈ ನಮ್ಮ ಅಂಕಣದ ಈ ಸಂಚಿಕೆಯ ಅತಿಥಿ.ಬನ್ನಿ ಅವರ ಜೀವನದ ಪುಟಗಳನ್ನು ಅವರ ಕೈಯಾರೆ ತಿರುವಿ ಹಾಕಿಸುತ್ತಾ….ಮಾತಿಗೆಳೆಯೋಣ.
# ನಮಸ್ಕಾರಗಳು ಜೋಗು ಭಂಡಾರಿಯವರಿಗೆ…
ಜೋ : ನಮಸ್ಕಾರಗಳು.ಬನ್ನಿ ಬನ್ನಿ….
# ನಿಮ್ಮ ಹುಟ್ಟು, ಬಾಲ್ಯ,ತಂದೆ, ತಾಯಿ,ಒಡಹುಟ್ಟಿದವರು…..
ಜೋ : ನನ್ನ ತಂದೆ ದಿವಂಗತ ಮುತ್ತು ಭಂಡಾರಿ, ತಾಯಿ ದಿವಂಗತ ಸೀತಮ್ಮ ಭಂಡಾರಿ. ನಾನು ಹುಟ್ಟಿದ್ದು ಕುಂದಾಪುರ ತಾಲೂಕಿನ ಕೋಟ ಸಮೀಪದ ಗಿಳಿಯಾರು.ನಾವು ಒಟ್ಟು ಆರು ಜನ ಮಕ್ಕಳು.ಹಿರಿಯವರು ಅಕ್ಕ ಗುಲಾಬಿ ಮಹಾಬಲ ಭಂಡಾರಿ, ಅಣ್ಣಂದಿರು ಶ್ರೀ ನಾಗು ಭಂಡಾರಿ, ಶ್ರೀ ನಾರಾಯಣ ಭಂಡಾರಿ, ದಿವಂಗತ ರಾಜು ಭಂಡಾರಿ ಇವರೆಲ್ಲರೂ ಶಿರಾಳಕೊಪ್ಪದಲ್ಲಿಯೇ ಇದ್ದರೆ ಕೊನೆಯ ಅಣ್ಣ ಶ್ರೀ ಕುಶಲ್ ಕುಮಾರ್ ಭದ್ರಾವತಿಯ ವಿಐಎಸ್ಎಲ್ ಉದ್ಯೋಗಿ. ಇವರೆಲ್ಲರಿಗೂ ಕಿರಿಯವನೇ ನಾನು.
# ನಿಮ್ಮ ಕುಟುಂಬದ ಬಗ್ಗೆ ಹೇಳಿ…
ಜೋ : ನನ್ನ ಪತ್ನಿ ಶ್ರೀಮತಿ ವಸಂತಿ ಜೋಗು ಭಂಡಾರಿ ಮೂಲತಃ ಉಡುಪಿಯ ಬನ್ನಂಜೆಯವರು. ಮಗ ರಂಜನ್ ಭಂಡಾರಿ, ಸೊಸೆ ಸುನೀತಾ ರಂಜನ್ ಮೂಡುಬಿದಿರೆಯ ಕರಿಂಜೆ ಗ್ರಾಮದವರು, ಹಿರಿಯ ಮಗಳು ರೇಷ್ಮಾ ಪ್ರಕಾಶ್, ಅಳಿಯ ಪ್ರಕಾಶ್ ಚಿಕ್ಕಮಗಳೂರಿನ ಖ್ಯಾತ ವಕೀಲರು.ಎರಡನೇ ಮಗಳು ರಜಿತಾ ಮೋಹನ್ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಮೋಹನ್ ಇಂಜಿನಿಯರ್ ಉದ್ಯೋಗದಲ್ಲಿದ್ದು ಮೂಲತಃ ಪಡು ಪಣಂಬೂರಿನವರು.ಕಿರಿಯ ಮಗಳು ಸೌಮ್ಯ ವಿಶ್ವನಾಥ್, ಎನ್ ಆರ್.ಪುರದಲ್ಲಿ ನೆಲೆಸಿದ್ದು ಅಳಿಯ ವಿಶ್ವನಾಥ್ ಗ್ರಾಮ ಲೆಖ್ಖಾಧಿಕಾರಿ ಉದ್ಯೋಗದಲ್ಲಿದ್ದಾರೆ. ಏಳು ಜನ ಮೊಮ್ಮಕ್ಕಳು. ಇವಿಷ್ಟು ನನ್ನ ಕುಟುಂಬದ ವಿವರ.
# ದಕ್ಷಿಣ ಕನ್ನಡದ ನೀವು ಶಿರಾಳಕೊಪ್ಪಕ್ಕೆ ಬಂದು ನೆಲೆ ನಿಲ್ಲಲು ಕಾರಣ?
ಜೋ : ನಮ್ಮ ಅಕ್ಕನನ್ನು ಮದುವೆಯಾದ ಹಂಗ್ಳೂರು ಮಹಾಬಲ ಭಂಡಾರಿಯವರು ತೀರ ಬಡತನದಲ್ಲಿ ಬೆಳೆಯುತ್ತಿದ್ದ ನಮ್ಮನ್ನೆಲ್ಲಾ ಅವರೊಟ್ಟಿಗೆ ಕರೆದುಕೊಂಡು ಬಂದು, ನಮಗೆ ಪ್ರಾಥಮಿಕ ಶಿಕ್ಷಣ ಕೊಡಿಸಿ, ಕ್ಷೌರಿಕ ವೃತ್ತಿಯನ್ನು ಕಲಿಸಿಕೊಟ್ಟು ,ನಮ್ಮ ಬದುಕಿಗೆ ಬೆಳಕಾದರು.ಅವರ ಋಣವನ್ನು ನಾವು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ.
# ನಿಮ್ಮ ಆಯುರ್ವೇದ ಔಷಧ ಜ್ಞಾನದ ಬಗ್ಗೆ ಹೇಳಿ….
ಜೋ : ನಮ್ಮ ಹಿರಿಯರು ಮೊದಲಿನಿಂದಲೂ ನಾಟೀ ಮದ್ದುಗಳನ್ನು ತಯಾರಿಸುವುದರಲ್ಲಿ ಸಿದ್ಧಹಸ್ತರು.ಸರ್ವರಲಿ ಒಂದೊಂದು ನುಡಿ ಕಲಿತು ಸರ್ವಜ್ಞನಾದಂತೆ ಒಂದೊಂದೇ ಔಷಧಿಗಳನ್ನು ಕಲಿಯುತ್ತಾ,ಪ್ರಯೋಗಗಳನ್ನು ಮಾಡುತ್ತಾ ಅವುಗಳನ್ನು ಕರಗತ ಮಾಡಿಕೊಂಡೆ. ಹತ್ತಾರು ಚರ್ಮವ್ಯಾಧಿಗಳಿಗೆ, ತಲೆ ಕೂದಲು ಉದುರುವಿಕೆ ತಡೆಗಟ್ಟಲು,ನೋವು ನಿವಾರಕ ತೈಲ, ಮೂಲವ್ಯಾಧಿಗೆ, ಮೊಡವೆ ನಿವಾರಣೆಗೆ, ಶೀತ, ವಾತ ಜೊತೆಗೆ ಸಕ್ಕರೆ ಕಾಯಿಲೆಗೂ ಔಷಧ ಕಂಡುಕೊಂಡಿದ್ದೇನೆ.
# ಸಾಮಾಜಿಕ,ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಪಾತ್ರ….
ಜೋ : ಶಿರಾಳಕೊಪ್ಪ ಸವಿತಾ ಸಮಾಜದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇನೆ.ಶಿಕಾರಿಪುರ ತಾಲೂಕು ಸವಿತಾ ಸಮಾಜದ ಕಾರ್ಯಕಾರಿ ಮಂಡಳಿಯಲ್ಲಿ ಕೆಲಸ ಮಾಡಿದ್ದೇನೆ.ಸವಿತಾ ಸಮಾಜದ ಹಾಲಿ ಗೌರವಾಧ್ಯಕ್ಷನಾಗಿದ್ದೇನೆ.ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯನಾಗಿದ್ದೇನೆ.
ಶಿಕಾರಿಪುರ ತಾಲೂಕು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯನಾಗಿದ್ದು ಪಕ್ಷ ವಹಿಸಿದ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ.ನನ್ನ ಪತ್ನಿ ಶ್ರೀಮತಿ ವಸಂತಿ ಜೋಗು ಭಂಡಾರಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯಳಾಗಿ ಆಯ್ಕೆಯಾಗಿದ್ದು ಪಕ್ಷ ನಮ್ಮ ಮೇಲಿಟ್ಟಿರುವ ವಿಶ್ವಾಸದ ಸಂಕೇತವೆಂದು ಭಾವಿಸುತ್ತೇನೆ.
# ನಿಮಗೆ ದೊರೆತಿರುವ ಪ್ರಶಸ್ತಿ, ಸನ್ಮಾನಗಳು…
ಜೋ :ಈವರೆಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ.ಅವುಗಳಲ್ಲಿ ಪ್ರಮುಖವಾಗಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ವೇದಿಕೆಯಲ್ಲಿ ದೊರೆತ ಸನ್ಮಾನ ಮತ್ತು ತೀರ್ಥಹಳ್ಳಿಯಲ್ಲಿ ನಡೆದ ಭಂಡಾರಿ ಸ್ವಾಭಿಮಾನಿ ಸಮಾವೇಶದಲ್ಲಿ ದೊರೆತ ಸನ್ಮಾನ ಅತ್ಯಂತ ಖುಷಿಕೊಟ್ಟ ಸಂಗತಿಗಳು.
# ನಿಮ್ಮ ಇತರೆ ಹವ್ಯಾಸಗಳು,ಅಭಿರುಚಿಗಳು….
ಜೋ : ಈಗ ನನಗೆ ವರ್ಷ ಅರವತ್ತೈದರ ಆಸುಪಾಸು, ನಾನು ಈಗಲೂ ಕ್ಷೌರಿಕ ವೃತ್ತಿಯನ್ನು ಮಾಡುತ್ತೇನೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ದಿನವೂ ಯೋಗ ಮತ್ತು ವಾಕಿಂಗ್ ತಪ್ಪಿಸುವುದಿಲ್ಲ.
ದೇವರ ದಯೆಯಿಂದ ಹಸ್ತರೇಖಿ, ಹಸ್ತ ಸಾಮುದ್ರಿಕೆ, ಫೇಸ್ ರೀಡಿಂಗ್ ಸಿದ್ದಿಸಿದೆ. ಆದರೆ ಅವುಗಳನ್ನು ಉಪಯೋಗಿಸಿ ಹಣ ಮಾಡುವ ಉದ್ದೇಶವಿಲ್ಲ. ಆಸಕ್ತರಿಗೆ ಅಥವಾ ಆತ್ಮೀಯರಿಗೆ ಮಾತ್ರ ಉಚಿತವಾಗಿ ನನಗೆ ಗೋಚರಿಸಿದ್ದನ್ನು ಹೇಳಿದ್ದೇನೆ. ಹೆಚ್ಚಿನವರಿಗೆ ಒಳ್ಳೆಯದಾಗಿದೆ ಕೂಡಾ.
ಸಹಾಯ ಕೇಳಿಕೊಂಡು ಬಂದವರಿಗೆ ಕೈಲಾದಷ್ಟು ನೆರವಾಗಿದ್ದೇನೆ. ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ, ಸತ್ಕಾರ್ಯಗಳಿಗೆ ತಪ್ಪದೇ ದೇಣಿಗೆ ನೀಡುತ್ತಾ ಬಂದಿದ್ದೇನೆ.ಇನ್ನಷ್ಟು ಹೆಚ್ಚಿನ ಸಹಾಯ ಮಾಡುವ ಶಕ್ತಿಯನ್ನು ನೀಡೆಂದು ದೇವರಲ್ಲಿ ಬೇಡುತ್ತೇನೆ. ಜೀವನದಲ್ಲಿ ಯಾರಿಗೂ ಅಪಕಾರ ಮಾಡಿಲ್ಲ ಎಂಬ ಹೆಮ್ಮೆಯಂತೂ ಇದೆ.# ಕೊನೆಯದಾಗಿ ಈಗಿನ ಕಾಲಘಟ್ಟದಲ್ಲಿ ಭಂಡಾರಿ ಯುವಸಮೂಹಕ್ಕೆ ನಿಮ್ಮ ಕಿವಿಮಾತೇನು?
ಜೋ : ಈಗಿನ ಯುವಕರು ಬುದ್ದಿವಂತರಿದ್ದಾರೆ.ಯಾವುದು ಸರಿ?ಯಾವುದು ತಪ್ಪು? ಎಂಬ ಪರಿಜ್ಞಾನ ಅವರಿಗಿದೆ.ಆದರೂ ಕಷ್ಟಪಟ್ಟು ದುಡಿಯಿರಿ,ದುಶ್ಚಟಗಳಿಗೆ ಬಲಿಯಾಗಬೇಡಿ,ದುಂದುವೆಚ್ಚ ಮಾಡಬೇಡಿ, ಗುರುಹಿರಿಯರನ್ನು ಗೌರವಿಸಿ ಎಂದು ಹೇಳ ಬಯಸುತ್ತೇನೆ.
# ಧನ್ಯವಾದಗಳು ಜೋಗು ಭಂಡಾರಿಯವರಿಗೆ.ಇಷ್ಟು ಹೊತ್ತು ನಮ್ಮೊಂದಿಗೆ ನಿಮ್ಮ ಅಮೂಲ್ಯ ಸಮಯವನ್ನು ಕಳೆದುದಕ್ಕೆ...
ಜೋ : ನಿಮಗೂ ಧನ್ಯವಾದಗಳು. ಭಂಡಾರಿವಾರ್ತೆಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
ನೋಡಿದರಲ್ಲಾ ಬಂಧುಗಳೇ… ಸಹೃದಯಿ, ಮೆಲುದನಿಯ ಮಾತಿನ ಮೋಡಿಗಾರ, ರಾಜಕಾರಣಿ, ವೃತ್ತಿ ಬಾಂಧವರು,ಆಯುರ್ವೇದ ಪಂಡಿತರು,ಹಸ್ತ ಸಾಮುದ್ರಿಕೆ, ಉದಾರ ದಾನಿ….ಹೀಗೆ ಎಲ್ಲವೂ ಆಗಿದ್ದರು, ನಾನೇನೂ ಅಲ್ಲ. ಎಲ್ಲಾ ದೇವರ ಆಟ. ನಾನು ನಿಮಿತ್ತ ಮಾತ್ರ ಎಂದು ವಿನಮ್ರವಾಗಿರುವ ಶ್ರೀ ಜೋಗು ಭಂಡಾರಿಯವರಂತಹ ಜೀವನ ಈಗಿನ ಯುವ ಸಮುದಾಯಕ್ಕೆ ನಿಜಕ್ಕೂ ಮಾರ್ಗದರ್ಶಿ.ಪ್ರಚಾರ ಬಯಸದೇ, ವಿಜೃಂಭಣೆಯ ಬೆನ್ನು ಬೀಳದೇ ಸಾದಾಸೀದಾ ಜೀವನ ನಡೆಸುತ್ತಾ ಹಲವರಿಗೆ ಮಾದರಿಯಾಗಿರುವ ಇವರು ನಮ್ಮ ಭಂಡಾರಿ ಸಮಾಜದ ಹೆಮ್ಮೆ. ಇಂತಹವರ ಜೀವನದ ಮೇಲೆ ಬೆಳಕು ಚೆಲ್ಲುವುದೇ “ಸಾಧಿತ ಭಂಡಾರಿ” ಅಂಕಣದ ಉದ್ದೇಶ.
ಈ ಸಂಚಿಕೆಯಲ್ಲಿ ಅತಿಥಿಯಾಗಿರುವ ಸಾಧಕರ ಜೀವನಗಾಥೆ ನಮ್ಮ ಯುವ ಜನಾಂಗದ ಕೆಲವೇ ಕೆಲವು ಯುವಕರಿಗಾದರೂ ಸ್ಪೂರ್ತಿ ನೀಡಿದಲ್ಲಿ ನಮ್ಮ ಈ ಪ್ರಯತ್ನ ಸಾರ್ಥಕ.
9008523260
9845380243
ಉತ್ತಮ ಮಾಹಿತಿಯುಳ್ಳ ಮಾರ್ಗದರ್ಶಿ ಲೇಖನ. ನಾವು ಅವರೊಂದಿಗೆ ಬೆರೆತು ಇದ್ದರೂ ಕೆಲವು ಮಾಹಿತಿಗಳು ನಮ್ಮ ಗಮನಕ್ಜೆ ಬಂದಿರಲಿಲ್ಲ. ಶ್ರೀಯುತರು ಇನ್ನು ಬಹಳ ಕಾಲ ನಮ್ಮೊಂದಿಗೆ ಇದ್ದು ನಮಗೆ ಮಾರ್ಗದರ್ಶನ ನೀಡಲಿ. ಶ್ರೀ ದೇವರು ಅವರಿಗೆ ಆಯುಷ್ಯ, ಆರೋಗ್ಯ, ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ.