January 18, 2025
Bhandary Achievers copy

                ಸಂಖ್ಯೆಯ ದೃಷ್ಟಿಯಲ್ಲಿ ಭಂಡಾರಿ ಸಮಾಜವು ಸೀಮಿತವಾಗಿದ್ದರೂ ಸಾಧನೆಯಲ್ಲಿ ಸಾಕಷ್ಟು ಭಂಡಾರಿ ಬಂಧುಗಳಿದ್ದಾರೆ. ಇಂತಹ ಹತ್ತು ಹಲವು ಸಾಧಕರಲ್ಲಿ ವಿಕುಭ ಹೆಬ್ಬಾರಬೈಲು ಎಂದೇ ಪ್ರಸಿದ್ಧರಾಗಿರುವ ವಿಜಯಕುಮಾರ ಭಂಡಾರಿ ಹೆಬ್ಬಾರಬೈಲು ಕೂಡಾ ಒಬ್ಬರು. ತುಳು ಸಾಹಿತ್ಯ ಕ್ಷೇತ್ರ, ಪತ್ರಿಕೋದ್ಯಮದಲ್ಲಿ ಉನ್ನತ ಸಾಧನೆ ಮಾಡಿರುವ ಇವರು ಹತ್ತು ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಹೆಬ್ಬಾರಬೈಲು ನಿವಾಸಿ ಕೃಷಿಕ ದಿ.ಈಶ್ವರ ಭಂಡಾರಿ ಮತ್ತು ನಾಗಮ್ಮ ದಂಪತಿಯ ಪುತ್ರರಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣ ಮುಗಿಸಿ, ಬಳಿಕ ಬಾಲಕಾರ್ಮಿಕನಾಗಿ ಗ್ಯಾರೇಜೊಂದರಲ್ಲಿ ತನ್ನ ದುಡಿಮೆ ಆರಂಭಿಸಿದರು. ಬಳಿಕ ಪುತ್ತೂರು, ಮುಂಬಯಿಗಳಲ್ಲಿ ಮೆಕ್ಯಾನಿಕ್ ವೃತ್ತಿ ನಿರ್ವಹಿಸಿದ್ದರು. 1987 ರಲ್ಲಿ ವಿಟ್ಲದಲ್ಲಿ ವಿಜಯಾ ಮೋಟಾರ್ ಸರ್ವೀಸ್ ಗ್ಯಾರೇಜೊಂದನ್ನು ಪ್ರಾರಂಭಿಸಿದರು. ಪುತ್ತೂರಿನಲ್ಲಿ ದಾಸ್ತವೇಜು ಬರಹಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಇವರು ಪ್ರಸ್ತುತ ಪೂವರಿ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯ ಕ್ಷೇತ್ರದ ಕುರಿತು ವಿಶೇಷ ಒಲವು ಹೊಂದಿದ್ದ ಇವರು ಇಂದು ಪತ್ರಿಕೋದ್ಯಮ, ತುಳು ಸಾಹಿತ್ಯ ಕ್ಷೇತ್ರದ ಮೂಲಕ ನಾಡಿನಾದ್ಯಂತ ಚಿತಪರಿಚಿತರೆನಿಸಿಕೊಂಡಿದ್ದಾರೆ.
ಇವರ ಈ ಸಾಧನೆಯನ್ನು ಗಮನಿಸಿದ ಭಂಡಾರಿ ವಾರ್ತೆಯು ತನ್ನ ಸಾಧಿತ ಭಂಡಾರಿ ವಿಭಾಗದಿಂದ ಮಾತಾಡಿಸಿದಾಗ ಈ ರೀತಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

1. ತುಳು ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ನಿಮ್ಮದು, ಅದರ ಪ್ರವೇಶ ಹೇಗಾಯಿತು.?
ವಿಕುಭ: ನನಗೆ ಎಳವೆಯಿಂದಲೇ ಸಾಹಿತ್ಯ ಕ್ಷೇತ್ರದ ಕುರಿತು ವಿಶೇಷ ಒಲವು. ಅಂದಿನ ದಿನಗಳಲ್ಲಿ ಅವಕಾಶಗಳು ಇಂದಿನಷ್ಟಿರಲಿಲ್ಲ. ನಿರ್ದಿಷ್ಟವಾಗಿ ಹೇಳಬೇಕೆಂದರೆ, 1992ರಲ್ಲಿ ಮಂಗಳೂರಿನ ತುಳುವೆರೆಂಕ್ಲು ಕುಡ್ಲ ಕೂಟದಲ್ಲಿ ಗುರುತಿಸಿಕೊಂಡು “ತುಳುವೆರೆ ತುಡರ್” ಎಂಬ ವಾರಪತ್ರಿಕೆಯ ನಿರ್ದೇಶಕನಾದೆ. ಮುಂದೆ ನನ್ನ ಮೊದಲ ಕವಿತೆ “ಬಚ್ಚೆಲ್” ಅದರಲ್ಲೇ ಪ್ರಕಟಗೊಂಡಿತು. ಬಳಿಕ ಪುತ್ತೂರು, ವಿಟ್ಲದ ತುಳುಕೂಟದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರಿಂದ ತುಳು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಕೆಲಸ ಮಾಡಲು ಸಹಕಾರಿಯಾಯಿತು.

2. ನಿಮ್ಮ ಪತ್ರಿಕೋದ್ಯಮ ಕ್ಷೇತ್ರ.?
ವಿಕುಭ: ಸಾಮಾನ್ಯವಾಗಿ ಸಾಹಿತಿಗಳೆಂದರೆ ಪತ್ರಿಕೆಯೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತಾರೆ. ಅದೇ ರೀತಿ ನಾನು ಕೂಡ ಪತ್ರಕರ್ತರ ಸಂಪರ್ಕ ಹೊಂದಿ 1999ರಲ್ಲಿ ಮಂಗಳೂರು ಕೆನರಾ ಟೈಮ್ಸ್ ಬಳಗದ ಕನ್ನಡ ಜನಾಂತರಂಗ, ಕರಾವಳಿ ಆಲೆಯಲ್ಲಿ ಬರಹಗಾರನಾಗಿ, ವರದಿಗಾರನಾಗಿ ಸೇರಿಕೊಂಡೆ. ಮುಂದೆ ಕರಾವಳಿ ಮಾರುತ, ಕಾಸರಗೋಡಿನ ಕಾರವಲ್, ಉತ್ತರದೇಶಂ ಪತ್ರಿಕೆಗಳ ತಾಲೂಕು ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಿದೆ. ನನಗೆ ಈ ರಂಗಕ್ಕೆ ಬರಲು ಸ್ಪೂರ್ತಿ ಎಂದರೆ ಅದು ಪತ್ರ ಮೈತ್ರಿ. ಪ್ರಸ್ತುತ 2014ರಿಂದ “ಪೂವರಿ” ತುಳು ಮಾಸಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಈ ಪತ್ರಿಕೆಯು ತುಳು ಬರಹಗಾರರನ್ನು ಬೆಳೆಸುವ ಜತೆಗೆ ತುಳುಭಾಷೆಯ ಬೆಳವಣಿಗೆಗೂ ಕೆಲಸ ಮಾಡುತ್ತಿದೆ.

3. ನಿಮ್ಮ ಕೃತಿಗಳು, ಸಂಪಾದನೆಯ ಕುರಿತು ಏನು ಹೇಳುವಿರಿ.?
ವಿಕುಭ: ನಾನು ಈಗಾಗಲೇ ಅಪ್ಪೆಗ್ ಬಾಲೆದ ಓಲೆ, ಸಾಧನೆ, ಕೆಲಿಂಜ ಸೀತಾರಾಮ ಆಳ್ವೆರ್ ಕೃತಿಗಳನ್ನು ಹೊರತಂದಿದ್ದೇನೆ. ಪೂವರಿ-ಮಾಸ ಪತ್ರಿಕೆ ಪ್ರಕಟಗೊಳ್ಳುತ್ತಿದೆ. “ದಂಡಿಗೆ” ಎಂಬ ಕವನ ಸಂಕಲನ ಸಿದ್ಧಗೊಂಡಿದ್ದು, ಇನ್ನೂ ಪ್ರಕಟವಾಗಿಲ್ಲ. ಸಂಪಾದನೆಯ ಕುರಿತು ಹೇಳುವುದಾದರೆ, ನನ್ನ ಯಶಸ್ ಪ್ರಕಾಶನದಲ್ಲಿ ಹಣತೆ, ಕಲ್ಲಕಲೆಂಬಿ ಎಂಬ ಕೃತಿಗಳು ಪ್ರಕಟಗೊಂಡಿದೆ. ಜತೆಗೆ ಸೋಮೇಸ್ವರೊದ ಸಿರೆಕುಲು, ಮೋಕೆ ಮೊರಜ್ಜದ ಬಲ್ಲ್ ಎಂಬ ಕೃತಿಗಳು ನನ್ನ ಸಹಕಾರದಿಂದ ಹೊರಬಂದಿದೆ.

4. ಪ್ರಶಸ್ತಿ-ಗೌರವ ಸನ್ಮಾನಗಳಲ್ಲಿ ಪ್ರಮುಖವಾದವು ಯಾವುವು.?
ವಿಕುಭ: ಮುಖ್ಯವಾಗಿ ಹೇಳುವುದದರೆ ಆಪ್ಪೆಗ್ ಬಾಲೆದ ಓಲೆ ಎಂಬ ಕೃತಿಗೆ ತುಳು ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ 10ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಗೌರವ, ಸೋಮವಾರಪೇಟೆಯಲ್ಲಿ ನುಡಿಮುತ್ತು ಸಂಗ್ರಹ ಪ್ರಶಸ್ತಿ, ತುಳು ಲಿಪಿ ಹಾಗೂ ಹಸ್ತಪ್ರತಿಗಳ ಸಂರಕ್ಷಣಾ ತರಬೇತಿ ಪ್ರಮಾಣ ಪತ್ರ, ತುಳು ಸಾಹಿತ್ಯ ಅಕಾಡೆಮಿಯ ತುಳು ಶಿಕ್ಷಕರ ಕಾರ್ಯಗಾರ ತರಬೇತಿ ಪ್ರಮಾಣ ಪತ್ರ, ಬಂಟ್ವಾಳ ಚುಟುಕು ಸಾಹಿತ್ಯ ಪರಿಷತ್ ಚುಟುಕು ಕವಿಗೋಷ್ಠಿ ಪ್ರಮಾಣ ಪತ್ರ, ಸಾಹಿತ್ಯ ಕ್ಷೇತ್ರಕ್ಕೆ ಕಚ್ಚೂರು ಶ್ರೀ ನಾಗೇಶ್ವರ ದೇವಳದ ಉತ್ಸವದ ಸಂದರ್ಭದಲ್ಲಿ ಸಮ್ಮಾನ, ಬಂಟ್ವಾಳ ಪತ್ರಕರ್ತರ ಸಂಘದಿಂದ ಸಮ್ಮಾನ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗೌರವ, ಪುತ್ತೂರು ಗ್ಯಾರೇಜ್ ಮಾಲಕರಿಂದ ಗೌರವ, ಬೆಂಗಳೂರು ಭಂಡಾರಿ ಸಂಘದಿಂದ ಗೌರವ, ಬಾಂಬಿಲ ದೇವಳದಿಂದ ಶ್ರೀ ಅಗ್ನಿದುರ್ಗಾ ಪುರಸ್ಕಾರ, ಸಾಂಗ್ಲಿ-ಮೀರಜ್ ತುಳುನಾಡ್ ಸಂಘದಿಂದ ಸನ್ಮಾನ, ಅಡ್ಯಾರ್ ಹಾಗೂ ಬದಿಯಡ್ಕ ತುಳು ಸಮ್ಮೇಳನಗಳಲ್ಲಿ ಗೌರವ ಹೀಗೆ ಹತ್ತು ಹಲವು ಸಂಘ-ಸಂಸ್ಥೆಗಳು ಪ್ರಶಸ್ತಿ ಸನ್ಮಾನಗಳನ್ನು ನೀಡಿ ಗೌರವಿಸಿದೆ.

5. ಸಾಮಾಜಿಕ ಕ್ಷೇತ್ರದ ದುಡಿಮೆ ಬಗ್ಗೆ ಹೇಳುವುದಾದರೆ.?
ವಿಕುಭ: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಸಮಿತಿ ಸದಸ್ಯನಾಗಿ, ತುಳುವೆರೆಂಕ್ಲು ಕುಡಲದ ಸದಸ್ಯನಾಗಿ, ಅವಿಭಜಿತ ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ವಿಟ್ಲ ವಲಯದ ಅಧ್ಯಕ್ಷನಾಗಿ, ರಾಜ್ಯ ಮಂಗಳ ಕಲಾ ಸಾಹಿತ್ಯ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ವಿಟ್ಲ ಜೇಸಿಸ್ ಎಜ್ಯುಕೇಶನ್ ಸೊಸೈಟಿಯ ಸದಸ್ಯನಾಗಿ, ದ.ಕ.ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಸದಸ್ಯನಾಗಿ, ಬಂಟ್ವಾಳ ಹಾಗೂ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯನಾಗಿ, ಕಚ್ಚೂರು ದೇವಳದ ಉತ್ಸವ ಸಮಿತಿಯ ಪುತ್ತೂರು ಕಾರ್ಯದರ್ಶಿಯಾಗಿ, ದ.ಕ.ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸದಸ್ಯನಾಗಿ, ದ.ಕ.ಹಾಗೂ ಉಡುಪಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಸದಸ್ಯನಾಗಿ ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ದುಡಿದಿದ್ದೇನೆ. ಜತೆಗೆ “ಧರ್ಮಯೋಧರು” ಕನ್ನಡ ಚಲನಚಿತ್ರದಲ್ಲಿಯೂ ನಟನೆ ಮಾಡಿದ್ದೇನೆ.

6. ತುಳು ಭಾಷೆಯ ದುಡಿಮೆಗೆ ಸೂಕ್ತ ಸ್ಥಾನಮಾನ ದೊರಕಿದೆಯೇ.?
ವಿಕುಭ: ಸ್ಥಾನಮಾನದ ಅಪೇಕ್ಷೆ ಇಟ್ಟುಕೊಂಡು ನಾನು ಈ ಕ್ಷೇತ್ರದಲ್ಲಿ ದುದಿಯುವವನಲ್ಲ. ನಾನು ಕಳೆದ ಹಲವು ವರ್ಷಗಳಿಂದ ತುಳು ಸಾಹಿತ್ಯ, ಭಾಷಾ ಕ್ಷೇತ್ರದಲ್ಲಿ ದುಡಿಯುತ್ತಾ ಬಂದಿದ್ದೇನೆ. ತುಳುವನ್ನು ಸಂವಿಧಾನದ 8ನೇ ಪರಿಚ್ಚೇಧಕ್ಕೆ ಸೇರಿಸುವ ಕುರಿತು ದೆಹಲಿಗೆ ಹೋದ ನಿಯೋಗದಲ್ಲಿ ನಾನು ಒಬ್ಬ ಸದಸ್ಯನಾಗಿದ್ದೇನೆ. ಅದಕ್ಕಿಂತಲೂ ಮುಖ್ಯವಾಗಿ ಕಳೆದ 20 ವರ್ಷಗಳಿಂದ ನಮ್ಮ ಭಂಡಾರಿ ವರ್ಗಕ್ಕೆ ತುಳು ಅಕಾಡೆಮಿಯಲ್ಲಿ ಸ್ಥಾನಮಾನ ಸಿಕ್ಕಿಲ್ಲ. ಹೀಗಾಗಿ ಸದಸ್ಯರ ಆಯ್ಕೆ ಸಂದರ್ಭದಲ್ಲಿ ಸರಕಾರ ಸೂಕ್ತ ನಿಯಾವಳಿಗಳನ್ನು ಆನುಸರಿಸಬೇಕು ಎಂಬುದು ನನ್ನ ಮನವಿಯಾಗಿದೆ.

7. ಕುಟುಂಬದ ಕುರಿತು ಏನು ಹೇಳುತ್ತೀರಿ.?
ವಿಕುಭ: ನನ್ನ ಎಲ್ಲಾ ಸಾಮಾಜಿಕ, ಸಾಹಿತ್ಯ ಕ್ಷೇತ್ರದ ದುಡಿಮೆಗೆ ತಂದೆ, ತಾಯಿ, ಪತ್ನಿ, ಮಕ್ಕಳು ಉತ್ತಮ ಸಹಕಾರ ನೀಡಿದ್ದಾರೆ. ಕೌಟುಂಬಿಕ ಜೀವನದ ಕುರಿತು ಹೇಳುವುದಾದರೆ ಗಾಯತ್ರಿ ವಿ. ಅವರನ್ನು ವಿವಾಹವಾಗಿದ್ದು, ಯಶಸ್ ಹಾಗೂ ಅಮೃತ್ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದೇವೆ.

ಇವರ ಸಾಧನೆ ತುಳು ಭಾಷೆಯ ಮೇಲಿನ ಅಭಿಮಾನ ಎಲ್ಲರಿಗೂ ಮಾದರಿಯಾಗಲಿ, ಇವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂಬುದು ಭಂಡಾರಿ ವಾರ್ತಾ ತಂಡದ ಹಾರೈಕೆ

ಸಂದರ್ಶಕರು: ಕಿರಣ್ ಸರಪಾಡಿ

4 thoughts on “ಸಾಧಿತ ಭಂಡಾರಿ – 1

  1. ಗ್ಯಾರೇಜಿನಲ್ಲಿ ದುಡಿದ ಮೆಕ್ಯಾನಿಕ್ ಒಬ್ಬರು, ಸಾಹಿತ್ಯ ಕ್ಷೇತ್ರದಲ್ಲಿ ಈ ರೀತಿಯ ಅಸಾಧಾರಣ ಸಾಧನೆ ಮಾಡಿರುವುದು ನಿಜಕ್ಕೂ ಶ್ಲಾಘನಾರ್ಹ. ಅವರು ನಮ್ಮ ಸಮಾಜದ ಬಂಧುವಾಗಿರುವುದು ನಾವೆಲ್ಲರೂ ಹೆಮ್ಮೆ ಪಡುವ ಸಂಗತಿ. ಅವರನ್ನು ಸಮಾಜಕ್ಕೆ ಪರಿಚಯಿಸಿದ ಭಂಡಾರಿವಾರ್ತೆ ತಂಡಕ್ಕೆ ಹಾರ್ಧಿಕ ಅಭಿನಂದನೆಗಳು.

  2. ವಿಕುಭ ಅವರ ತಾಯ್ನುಡಿಯ ಬಗೆಗಿನ ಕಳಕಳಿ ಅಪ್ಪಟವಾದುದು. ಅವರ ಕಾಯಕಕ್ಕೆ ಸೂಕ್ತ ಮನ್ನಣೆ ದೊರೆಯಲಿ.

Leave a Reply

Your email address will not be published. Required fields are marked *