January 18, 2025
saadita

         “ಜ್ಯೋತಿಷ್ಯ ಜ್ಞಾನರತ್ನ, ಯಕ್ಷದೇವ ಶ್ರೀ ಅನಂತರಾಮ ಬಂಗಾಡಿಯವರು.”

       ಭಂಡಾರಿವಾರ್ತೆಯ ಸಾಧಿತ ಭಂಡಾರಿ ಅಂಕಣದಲ್ಲಿ ನಾವು ಈವರೆಗೆ ಭಂಡಾರಿ ಸಮಾಜದ ಹಲವು ಸಾಧಿತರನ್ನು ಮಾತಿಗೆಳೆದು, ಅವರ ಸಾಧನೆಯ ಹಾದಿಯ ಮೈಲುಗಲ್ಲುಗಳನ್ನು ನಮ್ಮ ಓದುಗರಿಗೆ ಪರಿಚಯಿಸಿಕೊಟ್ಟಿದ್ದೇವೆ. ಸಾಧಿತ ಭಂಡಾರಿ ಅಂಕಣದ ಉದ್ದೇಶ ನಮ್ಮ ಸಮಾಜದ ಸಾಧಕರು ತಮ್ಮ ಸಾಧನೆಯ ಹಾದಿಯಲ್ಲಿ ಎದುರಿಸಿದ ಅಡೆತಡೆಗಳೇನು? ಅವುಗಳನ್ನು ಅವರು ಪರಿಹರಿಸಿಕೊಂಡು ಗುರಿ ಮುಟ್ಟಿದ ಪರಿ ಏನು? ಎಂಬುದನ್ನು ವಿವರಿಸಿ, ಯುವಕರಲ್ಲಿ ಸ್ಪೂರ್ತಿ ತುಂಬುವುದೇ ಆಗಿದೆ.

           ಆ ನಿಟ್ಟಿನಲ್ಲಿ ಈ ಸಂಚಿಕೆಯಲ್ಲಿ ನಾವು ಆಯ್ದುಕೊಂಡ ಸಾಧಕರು ಅಪರೂಪದಲ್ಲಿ ಅಪರೂಪದ ವಿವಿಧ ವಿದ್ಯಾಪಾರಂಗತರು. ನೂರೈವತ್ತಕ್ಕೂ ಹೆಚ್ಚಿನ ಯಕ್ಷಗಾನ ಪ್ರಸಂಗಗಳ ರಚನಾಕಾರರು, ಜ್ಯೋತಿಷಿಗಳು, ಸಾಹಿತಿಗಳು, ಹರಿಕಥಾ ಪ್ರವಚನಕಾರರು, ನಾಟಕ ದಿಗ್ಧರ್ಶಕರು, ತೊಗಲು ಬೊಂಬೆಯಾಟ, ವರ್ಣಾಲಂಕಾರ, ವಸ್ತ್ರಾಲಂಕಾರ, ಪಾಡ್ದನ ಪರಿಣಿತರು… ಹೀಗೆ ಹತ್ತು ಹಲವು ವಿದ್ಯೆಗಳ ಆಗರವಾಗಿರುವ “ಶ್ರೀ ಕೆ ಅನಂತರಾಮ ಬಂಗಾಡಿಯವರು.” ಇವರೇ ನಮ್ಮ ಈ ಸಂಚಿಕೆಯ ಅತಿಥಿ.

ಬನ್ನಿ ಅವರ ಜೀವನದ ಯಶೋಗಾಥೆಯನ್ನು ಅವರ ಮಾತುಗಳಲ್ಲಿ ಕೇಳೋಣ….

ವ : ನಮಸ್ಕಾರಗಳು ಶ್ರೀಯುತ ಬಂಗಾಡಿಯವರಿಗೆ…
ಅ : ನಮಸ್ಕಾರ.

ವ : ಇತ್ತೀಚೆಗೆ “ಯಕ್ಷದೇವ” ಪ್ರಶಸ್ತಿಗೆ ಭಾಜನರಾಗಿದ್ದೀರಿ. ಭಂಡಾರಿವಾರ್ತೆಯ ಪರವಾಗಿ ಮತ್ತು ವೈಯುಕ್ತಿಕವಾಗಿ ಅಭಿನಂದನೆಗಳು…
ಅ : ಧನ್ಯವಾದಗಳು.

ವ : ನಿಮ್ಮ ಕುಟುಂಬದ ಬಗ್ಗೆ ಹೇಳಿ.
ಅ : ದಕ್ಷಿಣ ಕನ್ನಡದ ಬೆಳ್ತಂಗಡಿಯ ಬಂಗ ಮನೆತನದ ಅರಸುಗಳ ಶ್ವೇತಛತ್ರ ಹಿಡಿಯುತ್ತಿದ್ದ ಮಾಯಿಲ ಭಂಡಾರಿ ವಂಶದ ಕುತ್ರೊಟ್ಟು ಮಂಜು ಭಂಡಾರಿ ಮತ್ತು ಕಿನ್ಯಕ್ಕ ದಂಪತಿಗಳ ಎರಡನೆಯ ಮಗ ನಾನು. ಅಣ್ಣ ದಯಾನಂದ ಬಂಗಾಡಿ ಮತ್ತು ಅಕ್ಕ ಭವಾನಿ ದೈವಾಧೀನರಾಗಿದ್ದಾರೆ. ತಮ್ಮ ಕೇಶವ ಬಂಗಾಡಿ, ಮತ್ತೊಬ್ಬ ಅಕ್ಕ ಲೋಲಮ್ಮ ಮತ್ತು ತಂಗಿ ವಿಶಾಲ. ನನ್ನ ಪತ್ನಿ ಶ್ರೀಮತಿ ಸುಮತಿ. ನನಗಿಬ್ಬರು ಮಕ್ಕಳು. ಮಗಳು ಶ್ರೀಮತಿ ಸಂಧ್ಯಾ ಕೇಶವ ಹಿರೇಬೆಟ್ಟು, ಮಗ ಶ್ರೀ ಸಂದೇಶ್ ಕುಮಾರ್ ಬಂಗಾಡಿ, ಸೊಸೆ ಶ್ರೀಮತಿ ಶುಭ ಸಂದೇಶ್. ಇಬ್ಬರು ಮೊಮ್ಮಕ್ಕಳು. ಇದಿಷ್ಟು ನನ್ನ ಕುಟುಂಬದ ಸ್ಥೂಲ ಚಿತ್ರಣ.         

ವ : ನಿಮ್ಮ ಬಾಲ್ಯ, ವಿಧ್ಯಾಭ್ಯಾಸದ ಬಗ್ಗೆ ಹೇಳಿ.
ಅ : 1951 ರ ನವೆಂಬರ್ ಹದಿನಾಲ್ಕರಂದು ಜನಿಸಿದ ನಾನು, ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಬಂಗಾಡಿಯಲ್ಲಿ ಪೂರೈಸಿ, ಹೈಸ್ಕೂಲು ವಿದ್ಯಾಭ್ಯಾಸವನ್ನು ಹಾಸನದ ಹೆತ್ತೂರಿನಲ್ಲಿ ಆರಂಭಿಸಿ ಅಲ್ಲಿಯೇ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿದೆ.
ನಂತರ ಕವಿ ನೀಲಕಂಠ ಭಟ್ ಶಿರಾಲಿಪಾಲರ ಮಾರ್ಗದರ್ಶನದಲ್ಲಿ ಕನ್ನಡರತ್ನ ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ತೇರ್ಗಡೆ ಹೊಂದಿದೆ. ಸೀಮಂತೂರು ನಾರಾಯಣ ಶೆಟ್ಟರ ಮಾರ್ಗದರ್ಶನದಲ್ಲಿ ಯಕ್ಷಗಾನ ಛಂದಸ್ಸನ್ನು ಅಧ್ಯಯನ ಮಾಡಿದೆ.

ವ : ನಿಮ್ಮ ಯಕ್ಷಲೋಕದ ಪಯಣದ ಬಗ್ಗೆ ಹೇಳಿ.
ಅ : ಸಿಮಂತೂರು ನಾರಾಯಣ ಶೆಟ್ಟರ ಮಾರ್ಗದರ್ಶನದ ನೆರವಿನೊಂದಿಗೆ, ಸ್ವ ಅಧ್ಯಯನದ ಮುಖೇನ ಯಕ್ಷಗಾನ ಛಂದಸ್ಸನ್ನು ಕರಗತ ಮಾಡಿಕೊಂಡು ತುಳು ಯಕ್ಷಗಾನ ಪ್ರಸಂಗಗಳನ್ನು ರಚಿಸತೊಡಗಿದೆ. ಕಾಡ ಮಲ್ಲಿಗೆ, ಕಚ್ಚೂರ ಮಾಲ್ದಿ, ಬೊಳ್ಳಿ ಗಿಂಡೆ, ಪಟ್ಟದ ಪದ್ಮಲೆ ಮುಂತಾದ ಯಶಸ್ವಿ ಪ್ರಸಂಗಗಳನ್ನೊಳಗೊಂಡು ನೂರೈವತ್ತಕ್ಕೂ ಹೆಚ್ಚು ತುಳು ಕನ್ನಡ ಭಾಷೆಯ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದೇನೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮಾತ್ರವಲ್ಲದೆ ರಾಜ್ಯಾದ್ಯಂತ ಸಾವಿರಾರು ಪ್ರದರ್ಶನ ಕಂಡ ಪ್ರಸಂಗಗಳು ಯಕ್ಷಗಾನ ಪ್ರಿಯರ ಮನತಣಿಸಿವೆ. ಯಕ್ಷಗಾನಾಕಾಂಕ್ಷಿಗಳ ನಿರಂತರ ಪ್ರೋತ್ಸಾಹದಿಂದ ಯಕ್ಷಗಾನಲೋಕದಲ್ಲಿ ಛಾಪು ಮೂಡಿಸಲು ಸಾಧ್ಯವಾಯಿತು. ಜಾತಿ ಮತಧರ್ಮದ ಎಲ್ಲೆಯನ್ನು ಮೀರಿ ಕ್ರೈಸ್ತ ಸಂತರ ಕಥೆಗಳನ್ನು ಯಕ್ಷಗಾನಕ್ಕೆ ಅಳವಡಿಸಿದೆ. ಸಮಾನಮನಸ್ಕ ಸ್ನೇಹಿತರೊಡಗೂಡಿ “ಸೌಹಾರ್ದ ಕಲಾವಿದರು ಯಕ್ಷರಂಗ ಬಂಗಾಡಿ” ಎಂಬ ತಂಡ ಕಟ್ಟಿ ಸುಮಾರು ಹದಿನೈದು ವರ್ಷಗಳ ಕಾಲ ಯಕ್ಷಗಾನ ಕಲೆಯ ಗಂಧವನ್ನು ನಾಡಿನಾದ್ಯಂತ ಪಸರಿಸಲು ಶ್ರಮಿಸಿದೆವು.

ವ : ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಮ್ಮ ಸಾಧನೆಯೇನು?
ಅ : ಜ್ಯೋತಿಷ್ಯ ಕ್ಷೇತ್ರದಲ್ಲಿ ತುಳು ಜ್ಯೋತಿಷ್ಯ ಗ್ರಂಥವನ್ನು ಮೊತ್ತಮೊದಲ ಬಾರಿಗೆ ಬರೆದ ಸಂಶೋಧಕ ನಾನೆಂಬ ಹೆಮ್ಮೆ ನನಗಿದೆ. ಹಲವಾರು ಧಾರ್ಮಿಕ ನೆಲೆಗಳಲ್ಲಿ ಅಷ್ಠಮಂಗಲ ತಾಂಬೂಲ ಪ್ರಶ್ನೆಯನ್ನಿತ್ತು ಸೂಕ್ತ ಮಾರ್ಗದರ್ಶನ ನೀಡಿದ್ದೇನೆ. ಜ್ಯೋತಿಷ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಭಾರತೀಯ ಜ್ಯೋತಿಷ್ಯ ಸಂಸ್ಥೆ “ಜ್ಯೋತಿಷ್ಯ ಜ್ಞಾನರತ್ನ” ಬಿರುದು ನೀಡಿ, ಸನ್ಮಾನಿಸಿರುವುದು ನನ್ನ ಜೀವನದ ಅವಿಸ್ಮರಣೀಯ ಘಟನೆ.

ವ : ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಪಾತ್ರವೇನು?
ಅ : ಮೊದಲಿನಿಂದಲೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದ್ದೇನೆ. ನಮ್ಮ ಸೌಹಾರ್ದ ಕಲಾವಿದರ ಯಕ್ಷರಂಗ ಬಂಗಾಡಿ ತಂಡದಿಂದ ಶಾಲಾ ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ ಸಂದೇಶ ಸಾರಲು, ಪರಿಸರ ಜಾಗೃತಿ ಮೂಡಿಸಲು ಐವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದೆವು. ಫಿನ್ ಲ್ಯಾಂಡ್ ಮತ್ತು ಭಾರತದ ಜಾನಪದ ಅಧ್ಯಯನಕ್ಕಾಗಿ ಮತ್ತು ತುಳು ಶಬ್ದಕೋಶ ರಚನೆಗಾಗಿ ತುಳು ನಿಘಂಟು ಕಾರ್ಯಾಗಾರದಲ್ಲಿಯೂ ಸೇವೆ ಸಲ್ಲಿಸಿದ್ದೇನೆ.

ವ : ನಿಮಗೊಲಿದು ಬಂದ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಹೇಳಿ.
ಅ : ಭಾರತೀಯ ಜ್ಯೋತಿಷ್ಯ ಸಂಸ್ಥೆಯಿಂದ “ಜ್ಯೋತಿಷ್ಯ ಜ್ಞಾನರತ್ನ” ಪ್ರಶಸ್ತಿ, “ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ”, “ಕುಬೆಯೂರು ಪ್ರತಿಷ್ಠಾನ ಯಕ್ಷಗಾನ ಪ್ರಸಂಗ ಸಾಹಿತ್ಯ ಪ್ರಶಸ್ತಿ”, “ಕೊರಗಪ್ಪ ಪ್ರಶಸ್ತಿ ಪ್ರತಿಷ್ಠಾನ ಪುರಸ್ಕಾರ”, “ಗಣಪಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ”, “ಪುಳಿಂಚ ರಾಮಯ್ಯ ಶೆಟ್ಟಿ ಪ್ರತಿಷ್ಠಾನ ಪ್ರಶಸ್ತಿ”, “ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನ ಪ್ರಶಸ್ತಿ”, “ವಿಶ್ವ ತುಳು ಸಮ್ಮೇಳನ ಪ್ರಶಸ್ತಿ”, “ತುಳುನಾಡ ಸಿರಿ ಪ್ರಶಸ್ತಿ”, “ಸ್ಕಂದ ಪುರಸ್ಕಾರ” ಮತ್ತು ಇತ್ತೀಚಿಗೆ ದೊರೆತ “ಯಕ್ಷದೇವ ಪ್ರಶಸ್ತಿ”. ಜೊತೆಗೆ ನೂರಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಪುರಸ್ಕರಿಸಿದ್ದಾವೆ.

ವ : ಈ ಕಾಲಘಟ್ಟದಲ್ಲಿ ಭಂಡಾರಿ ಸಮಾಜದ ಯುವ ಸಮೂಹಕ್ಕೆ ನಿಮ್ಮ ಕಿವಿಮಾತೇನು?
ಅ : ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡು, ವಿದ್ಯಾವಂತರಾಗಿ ಕಲೆ, ಸಾಹಿತ್ಯ, ಸಮಾಜಸೇವೆ ಈ ನಿಟ್ಟಿನಲ್ಲಿ ಮುಂದುವರಿದು, ಅನ್ಯ ಸಮಾಜದವರಂತೆ ನಮ್ಮ ಯುವಕರು ಕೂಡ ಮುಂದುವರಿಯಬೇಕು

ವ : ಇಷ್ಟು ಹೊತ್ತು ನಿಮ್ಮ ಅಮೂಲ್ಯವಾದ ಸಮಯವನ್ನು ನಮಗಾಗಿ ಮೀಸಲಿಟ್ಟಿದ್ದಕ್ಕಾಗಿ ಧನ್ಯವಾದಗಳು….
ಅ : ನಿಮಗೂ ಧನ್ಯವಾದಗಳು. ನಮಸ್ಕಾರ.

             ನೋಡಿದಿರಲ್ಲಾ ಬಂಧುಗಳೇ…. ಅಪರೂಪದ ಸಾಧಕರ ಅನುರೂಪದ ಮಾತುಗಳನ್ನು. ನಮ್ಮ ವೃತ್ತಿಯಲ್ಲಿ ಸಾಧನೆ ಮಾಡುವುದು ಅಥವಾ ಒಂದು ಉದ್ಯಮದಲ್ಲಿ ಸಾಧನೆ ಮಾಡುವುದು ಅತಿಶಯೋಕ್ತಿಯೇನಲ್ಲ. ಆದರೆ ನಮಗೆ ಸಂಬಂಧವೇ ಪಡದ ಕ್ಷೇತ್ರದಲ್ಲಿ, ಅದೂ ಪುರೋಹಿತ ಷಾಹಿಗಳ ಏಕಸ್ವಾಮ್ಯದ ಜ್ಯೋತಿಷ್ಯ, ಪೌರೋಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿ, ಈಗ ಅರವತ್ತೆಂಟರ ಹರೆಯದಲ್ಲಿ ವಿಶ್ರಾಂತ ಜೀವನವನ್ನು ನಡೆಸುತ್ತಿರುವ ಭಂಡಾರಿ ಸಮಾಜದ ಹಿರಿಯರಾದ ಶ್ರೀ ಕೆ ಅನಂತರಾಮ ಬಂಗಾಡಿಯವರ ಈ ಯಶೋಗಾಥೆ ನಮ್ಮ ಸಮಾಜದ ಯುವಕರಲ್ಲಿ ಸ್ಪೂರ್ತಿಯ ಕಿಡಿ ಹೊತ್ತಿಸಲಿ. ಸಾಧನೆಯ ಹಾದಿಯಲ್ಲಿ ಈ ರೀತಿಯ ಸಾಧಕರು ಹಚ್ಚಿಟ್ಟ ಹಣತೆಗಳು ಭವಿಷ್ಯದಲ್ಲಿ ನಮ್ಮ ಸಮಾಜದ ಯುವಕರಿಗೆ ದಾರಿದೀಪಗಳಾಗಲಿ ಎಂದು ಹಾರೈಸೋಣ. ಶ್ರೀ ದೇವರು ಶ್ರೀ ಕೆ ಅನಂತರಾಮ ಬಂಗಾಡಿಯವರಿಗೆ ಆಯುರಾರೋಗ್ಯವನ್ನು ನೀಡಿ, ನೂರ್ಕಾಲ ಬಾಳುವಂತೆ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃದಯಪೂರ್ವಕವಾಗಿ ಹಾರೈಸುತ್ತದೆ.

ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

 

 

2 thoughts on “ಸಾಧಿತ ಭಂಡಾರಿ – 7

  1. ಇಂತಹ ಸಾಧಕರು ನಮ್ಮವರೆಂದು ಹೇಳಿಕೊಳ್ಳಲು ಸಂತೋಷ ವಾಗುತ್ತದೆ.

  2. First of all We great full to the Team of Bhandary Vaarthe for its development in different ways to support on Education, Job opportunity,Health, Marriage and more focus on bringing out of ” The Stars of our Peoples ” which are un known to our peoples itself and which are going to inspire our next Generation.

    All the way We CONGRATULATE the Team for its ACHIEVEMENTS and Wish for the further developments.

Leave a Reply

Your email address will not be published. Required fields are marked *