November 21, 2024
Bhandary Achievers copy
           ನಮ್ಮ ಭಂಡಾರಿ ಸಮಾಜದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ದಿಗ್ಗಜರು ಕಾಣಸಿಗುತ್ತಾರೆ. ಅಂತಹ ಸಾಧಕರ ಜೀವನಗಾಥೆ ನಮ್ಮ ಸಮಾಜದ ಯುವಕರಿಗೆ ದಾರಿದೀಪವಾಗಬೇಕು ಎಂಬ ಸದುದ್ದೇಶದಿಂದ ಭಂಡಾರಿವಾರ್ತೆ ಆರಂಭಿಸಿದ ಲೇಖನಮಾಲಿಕೆ “ಸಾಧಿತಭಂಡಾರಿ.” 
           ಈ ಸಂಚಿಕೆಯಲ್ಲಿ ನಾವು ಆಯ್ದುಕೊಂಡ ಸಾಧಕರು – ಕನ್ನಡ ಮತ್ತು ತುಳು ಚಿತ್ರರಂಗದ ಅನುಭವಿ ನಟ,ನಿರ್ದೇಶಕ, ನಿರ್ಮಾಪಕ, ಕಥೆಗಾರ,ಸಾಹಿತಿ, ಸಂಭಾಷಣೆಕಾರ,ಕಿರುತೆರೆಯ ನಟ,ನಿರ್ಮಾಪಕ, ನಿರ್ದೇಶಕ ಹಾಗೂ ನಾಟಕ ರಚನೆಗಾರ ,ಯಕ್ಷಗಾನ ಕಲಾವಿದ, ಉತ್ತಮ ಭಾಷಣಗಾರ,ವಾಗ್ಮಿ,ಪತ್ರಕರ್ತ- ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಮ್ಮ ಭಂಡಾರಿ ಕುಟುಂಬದ ಹೆಮ್ಮೆಯ ಶ್ರೀ ಸುಧಾಕರ ಬನ್ನಂಜೆಯವರು‌.
           ಕನ್ನಡ-ತುಳು ಚಿತ್ರರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿದವರಲ್ಲಿ  ಸುಧಾಕರ್ ಬನ್ನಂಜೆ ಅವರು ಕೂಡ ಒಬ್ಬರು. ನಟನೆಯಿಂದ ಹಿಡಿದು ಚಿತ್ರ ನಿರ್ಮಾಣದವರೆಗೂ ತನ್ನ ಸಾಧನೆ ಮೆರೆದಿದ್ದಾರೆ. ಇವರು ನಮ್ಮ ಭಂಡಾರಿ ಸಮಾಜದ ಬಂಧು ಎನ್ನುವುದು ನಮ್ಮೆಲ್ಲರ ಹೆಮ್ಮೆ. ಇಂತಹ ಅಪೂರ್ವ ಸಾಧಕನನ್ನು ಭಂಡಾರಿ ವಾರ್ತೆ ಮಾತನಾಡಿಸಿದಾಗ ತನ್ನ ಸಾಧನೆಯ ಮಜಲುಗಳನ್ನು ತೆರೆದಿಟ್ಟಿದ್ದಾರೆ.
1. ಮೂಲತಃ ಒಬ್ಬ ಬರಹಗಾರನಾಗಿರುವ ಬನ್ನಂಜೆಯವರು ಚಿತ್ರರಂಗಕ್ಕೆ ಹೇಗೆ ಪ್ರವೇಶ ಪಡೆದರು.?
     ನಾನು ಕೇವಲ ಬರಹಗಾರನಾಗಿರದೆ, ಒಬ್ಬ ಕಲಾವಿದನೂ ಆಗಿದ್ದೆ. ನಾನು ಮುಂಗಾರು, ಸಂಜೆವಾಣಿಯಲ್ಲಿ  ಪತ್ರಕರ್ತನಾಗಿ ದುಡಿದವನು. ಹೀಗಾಗಿ ಬರವಣಿಗೆಯ ಹುಚ್ಚು ಇದ್ದವರು ಮಾತ್ರ ಈ ಕ್ಷೇತ್ರಕ್ಕೆ ಬರುತ್ತಾರೆ. ನಾಟಕಗಳನ್ನು ಬರೆಯುತ್ತಿದ್ದೆ‌. ನಮ್ಮೊಳಗೆ ಒಬ್ಬ ಕಲಾವಿದನಿದ್ದಾಗ ಮಾತ್ರ ನಾಟಕ ಬರೆಯಲು ಸಾಧ್ಯವಾಗುತ್ತದೆ. ಬಳಿಕ ನನ್ನ ನಟನೆಯ ಆಸಕ್ತಿ ಸಿನಿಮಾದತ್ತ ಕೊಂಡೊಯ್ಯಿತು. ಹಲವಾರು ಧಾರಾವಾಹಿಗಳಲ್ಲೂ ಕೆಲಸ ಮಾಡಿದ್ದೇನೆ. ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದೇನೆ. ಜನತೆ ಪ್ರೋತ್ಸಾಹಿಸಿದ ಕಾರಣ ಈ ಮಟ್ಟಕ್ಕೆ ಬೆಳೆದಿದ್ದೇನೆ.
2. ಬನ್ನಂಜೆಯವರ ಸಾಹಿತ್ಯ ಬದುಕು ಹೇಗಿತ್ತು.?
      ನನಗೆ ಎಳವೆಯಿಂದಲೂ ಬರವಣಿಗೆಯ ಹುಚ್ಚು ಇತ್ತು. ಸಣ್ಣಪುಟ್ಟ ಕಥೆ ಕವನಗಳನ್ನು ಬರೆದು ಕಳುಹಿಸುತ್ತಿದ್ದೆ. ಅವುಗಳು ಅಲ್ಲಿ ಪ್ರಕಟಗೊಂಡಾಗ ಬಹಳ ಸಂತಸವಾಗುತ್ತಿತ್ತು. ಇದು ಮುಂದಿನ ಬರವಣಿಗೆ ಹಾಗೂ ಪತ್ರಕರ್ತನಾಗಿ ದುಡಿಯಲು ಪ್ರೇರೇಪಣೆಯನ್ನೂ ನೀಡಿತು. ಸುಮಾರು 64 ತುಳು ಹಾಗೂ 48 ಕನ್ನಡ ನಾಟಕಗಳನ್ನು ಬರೆದಿದ್ದೇನೆ. ಎರಡು ಸಣ್ಣ ಕಥೆಗಳ ಸಂಕಲನ ಬಿಡುಗಡೆಗೊಂಡಿದೆ. ದೇವೆರ್ ಕಾದಂಬರಿ ಹಾಗೂ ದ್ರಾವಿಡರ ಕುಲ ಪುರೋಹಿತರು ಭಂಡಾರಿಗಳು ಎಂಬ ಸಂಶೋಧನಾ ಕೃತಿಯನ್ನೂ ಬರೆದಿದ್ದೇನೆ.
3. ನಿಮ್ಮ ಕಿರುತೆರೆಯ ಪಯಣ ಹೇಗಿತ್ತು.?
      ನಾನು ಸಿನಿಮಾದ ಜತೆ ಜತೆಗೆ ಕಿರುತೆರೆ ಅಂದರೆ ಧಾರಾವಾಹಿಗಳಲ್ಲೂ ಕೆಲಸ ಮಾಡಿದವನು. ದೂರದರ್ಶನ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ನನ್ನ ನಿರ್ದೇಶನದ ಜತೆಗೆ ಕಥೆ, ಸಾಹಿತ್ಯ, ಸಂಭಾಷಣೆ, ನಟನೆ ಮಾಡಿರುವ ಧಾರಾವಾಹಿಗಳು ಪ್ರಸಾರಗೊಂಡಿವೆ. ಗುರುದೇವೋ ಭವ, ಅಪ್ಪನಗಂಟು, ನಾಗರಿಕ, ಭಾವನ, ಕನಸಿನ ಕನ್ಯೆ, ಮದುವೆ, ಕಂಜೂಸ್ ಕಮಂಗಿರಾಯ ಮೊದಲಾದ ದಾರಾವಾಹಿಗಳನ್ನು ನಿರ್ದೇಶನ ಮಾಡಿದ್ದೇನೆ.
4. ಯಕ್ಷಗಾನದ ಕಲಾವಿದನಾಗಿ‌ ನಿಮ್ಮ ಅನುಭವ.?
      ನಾನು ಮೂಲತಃ ಕರಾವಳಿ ಭಾಗದವನಾದ ಕಾರಣ ಯಕ್ಷಗಾನದ ಕುರಿತು ವಿಶೇಷ ಒಲವು ಇತ್ತು. ಬಾಲ್ಯದಲ್ಲಿಯೇ ಬಡಗು ಹಾಗೂ ತೆಂಕು ಎರಡೂ ಶೈಲಿಯನ್ನೂ ಅಭ್ಯಾಸ ಮಾಡಿದ್ದೇನೆ. ನನ್ನ 14 ನೇ ವಯಸ್ಸಿನಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಮನೆಯಲ್ಲಿ ಪ್ರದರ್ಶನ ನೀಡಿರುವುದು ವಿಶೇಷ ಅನುಭವವನ್ನು ನೀಡಿದೆ. ಹಲವು ಹೆಸರಾಂತ ಮೇಳಗಳಲ್ಲಿ ಅತಿಥಿ ಕಲಾವಿದನಾಗಿ ಬಣ್ಣ ಹಚ್ಚಿದ್ದೇನೆ.
5. ನಿಮ್ಮ ತಂದೆ-ತಾಯಿ ಕೌಟುಂಬಿಕ ಜೀವನದ ಕುರಿತು ಹೇಳುವುದಾದರೆ.?
      ನಾನು ಮೂಲತಃ ಉಡುಪಿ ಬನ್ನಂಜೆಯವನು. ತಂದೆ ಮುಲ್ಕಿ ತಿರುಮಲೆಗುತ್ತು ಅಚ್ಚಣ್ಣ ಭಂಡಾರಿ, ತಾಯಿ ಬನ್ನಂಜೆ ಸುಶೀಲಾ ಭಂಡಾರಿ. ಪ್ರಸ್ತುತ ಪತ್ನಿ ಮಮತಾ ಬನ್ನಂಜೆ ಹಾಗೂ ಮಕ್ಕಳಾದ ಪ್ರಾರ್ಥನ್ ಬನ್ನಂಜೆ, ಪ್ರೇರಣ್ ಬನ್ನಂಜೆಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದೇನೆ.
6. ನಿಮ್ಮ ಸಿನಿಮಾ ಕ್ಷೇತ್ರದ ಪಯಣ ಹೇಗಿತ್ತು.?
      ಭಂಡಾರಿ ಸಮಾಜದ ಪ್ರಥಮ ಸಿನಿಮಾ ನಟ, ನಿರ್ದೇಶಕ, ನಿರ್ಮಾಪಕ ಎಂಬ ಹೆಮ್ಮೆ ನನಗಿದೆ. 1986 ರಲ್ಲಿ ಪ್ರಥಮ ಬಾರಿಗೆ ಹೀಗೊಂದು ಪ್ರೇಮಕತೆ ಎಂಬ ಸಿನಿಮಾ ಮಾಡಿದೆ. ಬಳಿಕ ಧರ್ಮಯೋಧರು, ದೇವೆರ್, ನಾನು ಹೇಮಂತ್ ಅವಳು ಸೇವಂತಿ, ಪ್ರೇರಣೆ, ರಣರಣಕ ಚಿತ್ರ ನಿರ್ದೇಶನ ಮಾಡಿದ್ದು, ಪ್ರಸ್ತುತ ಗಂಟ್ ಕಲ್ವೆರ್ ತುಳುಚಿತ್ರ ಸಿದ್ಧಗೊಳ್ಳುತ್ತಿದೆ. ಇಂದ್ರಧನುಷ್, ತುಡಾರ್, ಬಂಗಾರ್ ಪಟ್ಲೇರ್, ಬದಿ, ಕಾಜಾರ್, ಪೊನ್ನಮ್ಮ, ಯಾರಿಗೂ ಹೇಳ್ಬೇಡಿ, ನೀ ಮುಡಿದ ಮಲ್ಲಿಗೆ, ಸ್ವಲ್ಪ ಎಜ್ಜೆಸ್ಟ್ ಮಾಡ್ಕೊಳ್ಳಿ, ಕೋಟಿಚೆನ್ನಯ, ಹಠವಾದಿ, ಮಲ್ಲ, ಕೊದಂಡರಾಮ, ಐದೊಂದ್ಲ ಐದು, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮೊದಲಾದ ಚಿತ್ರಗಳಿಗೆ ಸಂಭಾಷಣೆ, ಹಾಡು ಬರೆದು ಸಹನಿರ್ದೇಶನ ಮಾಡಿದ್ದೇನೆ.
7. ಯಾವ್ಯಾವ ಭಂಡಾರಿ ಪ್ರತಿಭೆಗಳನ್ನು ಪರಿಚಯಿಸಿದ್ದೀರಾ.?
       ಹಲವು ಭಂಡಾರಿ ಬಂಧುಗಳನ್ನು ಸಿನಿಮಾಕ್ಕೆ ತಂದು ನಟಿಸುವ ಅವಕಾಶ ನೀಡಿದ ಹೆಮ್ಮೆ ನನಗಿದೆ. ಕಾರ್ಕಳ ಶೇಖರ ಭಂಡಾರಿ, ಪ್ರಕಾಶ್ ಕುತ್ತೆತ್ತೂರು, ಸತ್ಯರಂಜನ್, ಯಾದವ ಮಣ್ಣಗುಡ್ಡ, ಸುರೇಶ್ ಕಾರ್ಕಳ, ಮಹೇಶ್ ಕಾರ್ಕಳ, ಮದನ್ ಮೋಹನ್
ಸಂಗೀತ ನಿರ್ದೇಶಕ ರು, ಬಿಂದು ಭಂಡಾರಿ, ಬ್ರಂದಾ, ಸಹನ ಭಂಡಾರಿ, ಉಷಾ ಭಂಡಾರಿ, ಮನೀಷ್ ಭಂಡಾರಿ, ನಂದಿನಿ ಹರಿಕಿರಣ್, ಸುಪ್ರೀತಾ ಭಂಡಾರಿ, ಅರುಣ್ ಭಂಡಾರಿ, ಪ್ರಶಾಂತ್ ಭಂಡಾರಿ,  ಪ್ರಾರ್ಥನ್ ,ಪ್ರೇರಣ್ ,ಆದಿತ್ಯ ಲಕ್ಷಣ್ ಕರಾವಳಿ,ನಿಧಿಶ್ರೀ, ಸಮೃದ್ಧಿ, ರಕ್ಷಾ ಭಂಡಾರಿ ಮೊದಲಾದ ಭಂಡಾರಿ ಬಂಧುಗಳಿಗೆ ಅವಕಾಶ ನೀಡಿದ್ದೇನೆ.
8. ನೀವು ಪರಿಚಯಿಸಿದ ಇತರ ಕಲಾವಿದರು.?
       ನನ್ನ ಕೈಕೆಳಗೆ ಪಳಗಿದ ನೂರಾರು ಕಲಾವಿದರು ಇಂದು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರನ್ನು ನೋಡುವಾಗ ಬಹಳ ಸಂತಸವಾಗುತ್ತದೆ. ಕನ್ನಡ ಚಿತ್ರರಂಗದ ದುರ್ಗಾ ಶೆಟ್ಟಿ, ನಂದಿತಾ, ಹರಿಪ್ರಿಯಾ, ರಜನೀಶ್, ಆರ್ಯನ್, ಹರ್ಷ ಶೆಟ್ಟಿ, ಸಂಭ್ರಮ, ಸ್ಮಿತಾ ಸುವರ್ಣ, ಶಶಿರಾಜ್, ಮಂಜುಳಾ ನಾಯ್ಡು, ಶ್ವೇತಾ ಭಟ್, ರಜತ್, ಲಹರಿ, ಸುಧೀರ್ ಕೊಟ್ಟಾರಿ, ಲೇಖಾಚಂದ್ರ ಮೊದಲಾದ ನಾಯಕ-ನಾಯಕಿಯರು ಸೇರಿದಂತೆ ನೂರಾರು ಪೋಷಕ ಪಾತ್ರಧಾರಿಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ತೃಪ್ತಿ ತನಗಿದೆ.
9. ನಿಮ್ಮ ಚಿತ್ರಗಳು ಹಾಗೂ ಸಾಧನೆಗೆ ಪ್ರೋತ್ಸಾಹ ಸಿಕ್ಕಿದೆಯೇ.?
      ಖಂಡಿತವಾಗಿಯೂ ಸಿಕ್ಕಿದೆ. ಕಲಾಭಿಮಾನಿಗಳ ಸಹಕಾರ ಇಲ್ಲದೇ ಇರುತ್ತಿದ್ದರೆ ನಾನು ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಜತೆಗೆ ಹಲವು ಪ್ರಶಸ್ತಿ, ಗೌರವ ಸಮ್ಮಾನಗಳೂ ಸಿಕ್ಕಿದೆ. ಒಟ್ಟಿನಲ್ಲಿ ಸಿನಿಮಾ ಕ್ಷೇತ್ರದ ಪ್ರಯಾಣ ತೃಪ್ತಿ ನೀಡಿದೆ ಎನ್ನಬಹುದು.
10. ಮುಂದಿನ ಯೋಚನೆ.?
      ಜನತೆಗೆ ಉತ್ತಮ ಸಿನಿಮಾಗಳನ್ನು ನೀಡುವುದೇ ನನ್ನ ಗುರಿ. ಈಗಾಗಲೇ ಇಬ್ಬರು ನಿರ್ಮಾಪಕರು ಸಂಪರ್ಕಿಸಿದ್ದಾರೆ. ಅದಕ್ಕಾಗಿ ಕಥೆ ಸಿದ್ಧವಾಗುತ್ತಿದೆ. ಶೀಘ್ರದಲ್ಲಿ ಅದು ಸೆಟ್ಟೇರುವ ಸಾಧ್ಯತೆ ಇದೆ.
       ಇಷ್ಟೆಲ್ಲಾ ಸಾಧನೆ ಮಾಡಿಯೂ ಸರಳ,ಸಜ್ಜನ,ಮಿತಭಾಷಿಯಾಗಿರುವ ಶ್ರೀ ಸುಧಾಕರ ಬನ್ನಂಜೆಯವರು‌ ನಮ್ಮ ಭಂಡಾರಿ ಯುವಕರಿಗೆ ಆದರ್ಶಪ್ರಾಯರಾಗಿದ್ದಾರೆ.ಇವರ ಸಾಧನೆಯ ಹಾದಿ ಹೂವಿನ ಹಾಸಿಗೆಯೇನಾಗಿರಲಿಲ್ಲ. ಆದರೂ ಛಲಬಿಡದೇ ತ್ರಿವಿಕ್ರಮನಂತೆ ಎದೆಯೊಡ್ಡಿ ನಿಂತು ಇಷ್ಟೆಲ್ಲಾ ಸಾಧನೆ ಮಾಡಿರುವ ಬನ್ನಂಜೆಯವರು‌ ಇನ್ನಷ್ಟು  ಮೈಲುಗಲ್ಲುಗಳನ್ನು ಸ್ಥಾಪಿಸಲಿ ತನ್ಮೂಲಕ ಭಂಡಾರಿ ಕುಟುಂಬಕ್ಕೆ ಹೆಚ್ಚಿನ ಗೌರವ ತಂದುಕೊಡಲಿ.ಆ ನಿಟ್ಟಿನಲ್ಲಿ ಭಗವಂತನು ಅವರಿಗೆ ಹೆಚ್ಚಿನ ಶಕ್ತಿ ಚೈತನ್ಯ ದ ಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಮನದುಂಬಿ ಶುಭ ಹಾರೈಸುತ್ತದೆ.
–ಭಂಡಾರಿವಾರ್ತೆ

2 thoughts on “ಸಾಧಿತ ಭಂಡಾರಿ – 2

  1. Sooper article…sudhakara uncle pramanika..magu manassina vyakthi…kevala group li parichaya agidda uncle namma manege bandhu namma maneyavra jothe beretha a galigeyanna mareyoke sadya illa…ondu olleya gowravavitha vyaktiyagiruva evaru tamma saralatheyin dale yellara mana geddavaru…evara bagge bareda article kooda sooper…nimma yella kelasagalalli yashassu sigali…

    1. Super Uncle…. For the first time you introduced me to cinema and television. I’ll always be grateful to you.

Leave a Reply

Your email address will not be published. Required fields are marked *