September 20, 2024

ಸಾಧಿತ ಭಂಡಾರಿ – 5

(ಸಾಧಿತ ಭಂಡಾರಿಗಳ ಸಂದರ್ಶನ ಮಾಲಿಕೆ)
ತುಳುನಾಟಕರಂಗದಲ್ಲಿ ನಟನೆ, ನಿರ್ದೇಶನ ಮತ್ತು ನಾಟಕ ರಚನೆಯಲ್ಲಿ ತನ್ನ ಅದ್ಬುತ ಪ್ರತಿಭೆಯನ್ನು ತುಳುನಾಡಿನಾದ್ಯಂತ ಪಸರಿಸಿ ಸದಾ ಸಕ್ರಿಯರಾಗಿ ತುಳುನಾಟಕರಂಗಕ್ಕೆ  ತನ್ನದೇ ಆದ ಕೊಡುಗೆಯನ್ನು ನೀಡಿರುವ, ನೀಡುತ್ತಿರುವ ಭಂಡಾರಿ ಸಮಾಜದ ಪ್ರತಿಭೆ ತುಳು ನಾಟಕರಂಗ ಕಲಾವಿದ “ಕಥೆತ ಬೀರೆ- ಕಲಾ ಸಿಂಧು” ಶ್ರೀ ದಿನಕರ್ ಭಂಡಾರಿ ಕಣಜಾರ್ ಎಂಬ ಸಾಧಕರನ್ನು ಭಂಡಾರಿವಾರ್ತೆ ಸಾಧಿತ ಭಂಡಾರಿ ಸಂಚಿಕೆಗೆ ಆಯ್ಕೆ ಮಾಡಿ ಮಾತಿಗಿಳಿಸಿದಾಗ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಸಂತೋಷದಿಂದ ಹಂಚಿಕೊಂಡರು. ಕಣಜಾರು ವೆಂಕಪ್ಪ ಭಂಡಾರಿ ಮತ್ತು ಶ್ರೀಮತಿ ಗುಲಾಬಿ ಭಂಡಾರಿಯವರ ಸುಪುತ್ರರಾದ ಇವರು 21/05/1979 ರಂದು ಜನಿಸಿದರು ಬಾಲ್ಯದ ವಿಧ್ಯಾಭ್ಯಾಸವನ್ನು ಲ್ಯೂರ್ಡ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದ ಇವರು ಪ್ರಸ್ತುತ ತುಳುರಂಗ ಭೂಮಿಯಲ್ಲಿ ಪ್ರಖ್ಯಾತ ಕರ್ತರಾಗಿದ್ದಾರೆ. ಅವರ ಸಾಧನೆಯ ಪುಟಗಳನ್ನೂ ಅವರ ಮಾತಿನಲ್ಲೇ ಕೇಳೋಣ.
  •  ತುಳುನಾಡು, ಮಲೆನಾಡು, ಬೆಂಗಳೂರು, ಮುಂಬೈ, ದುಬೈ ಇಲ್ಲೆಲ್ಲಾ ದಿನಕರ ಭಂಡಾರಿಯವರ ಹೆಸರು ತುಳುನಾಟಕ ರಂಗ ಪ್ರೇಮಿಗಳಿಗೆ ಚಿರಪರಿಚಿತ. ಹಬ್ಬ ಹರಿದಿನಗಳು , ಉತ್ಸವಗಳು ಆರಂಭವಾಯಿತೆಂದರೆ ಸಾಕು ದಿನಕರಣ್ಣ ಬ್ಯುಸಿಯಾಗುತ್ತಾರೆ ಎಂಬ ಮಾತಿದೆ . ಹೇಗಿದೆ ಸರ್ ನಿಮ್ಮ ಕಲಾ ಬದುಕು? 
DBK: ಚೆನ್ನಾಗಿದೆ. ತುಳುನಾಟಕರಂಗದಲ್ಲಿನ ಕಲಾ ಅನುಭವ ಅದ್ಬುತವಾಗಿದೆ. ಈವರೆಗೆ ಒಟ್ಟು 16 ತುಳುನಾಟಕ ರಚಿಸಿದ್ದೇನೆ,  ಒಟ್ಟು 1800 ಪ್ರಯೋಗಗಳನ್ನು ಕಂಡಿದೆ. ನಾನು ಸುಮಾರು 500 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ಸಂತೋಷದಿಂದ ಕಲಾಸೇವೆ ಮಾಡುತ್ತಿದ್ದೇನೆ.
  • ನೀವು ಬರೆದ ನಿಮ್ಮ ಅಚ್ಚುಮೆಚ್ಚಿನ ನಾಟಕ ಯಾವುದು? 
DBK: ಪಿರಬನ್ನಗ ಎಂಬ ತುಳು ನಾಟಕ 
  • ನೀವು ಅಭಿನಯಿಸಿದ ಅಚ್ಚುಮೆಚ್ಚಿನ ಪಾತ್ರಗಳು ಮತ್ತು ಅವುಗಳಲ್ಲಿ ಮರೆಯಲಾಗದ ಪಾತ್ರ.
 DBK: ” ಒಟ್ರಾಸಿ ಮಂಡೆಬೆಚ್ಚ ನಾಟಕದಲ್ಲಿ ಕ್ಯಾಟರಿಂಗ್ ಧನಿಯ ಪಾತ್ರ 
“ಅಂಚಿ ಇಂಚಿ ತೂವಡೆ” ನಾಟಕದಲ್ಲಿ ಮ್ಯೂಸಿಕ್ ಡೈರೆಕ್ಟರ್ ಪಾತ್ರ 
“ಪಿರಬನ್ನಗ” ನಾಟಕದಲ್ಲಿ ತಲ್ವಾರ್ ತಬುರನ ಪಾತ್ರ ಈ ಮೂರು ಪಾತ್ರಗಳು ನಾನು ಅಭಿನಯಿಸಿದ ಅಚ್ಚುಮೆಚ್ಚಿನ ಪಾತ್ರಗಳು. 
ಇತ್ತೀಚೆಗೆ ನನ್ನ ಊರಾದ ಕಣಂಜಾರಿನಲ್ಲಿ ಪಿರಬನ್ನಗ ನಾಟಕ ನಡೆಯಿತು. ಅಲ್ಲಿವರೆಗೆ ನನ್ನ ತಾಯಿಯವರು ನನ್ನ ಅಭಿನಯ ನೋಡಿಯೇ ಇರಲಿಲ್ಲ! ಆ ದಿನ ನನ್ನ ತಾಯಿ ಮುಂದೆ ಕುಳಿತುಕೊಂಡು ನಾಟಕ ವೀಕ್ಷಿಸಿದ್ದು , ನನ್ನ ಹಾಸ್ಯ ಪಾತ್ರವೊಂದಕ್ಕೆ ತುಂಬಾನೆ ನಕ್ಕಿದ್ದು. ಅವರ ಉಪಸ್ಥಿತಿಯಲ್ಲಿ ಅವರನ್ನು ನೋಡುತ್ತಾ ನಾತು ಎಂಬ ಹಾಸ್ಯಪಾತ್ರ ಮಾಡಿದ್ದು ಮರೆಯಲಾಗದ ಪಾತ್ರವಾಗಿ ಸ್ಥಾನ ಪಡೆದಿದೆ.
  •  ನಿಮ್ಮ ಕಲಾಬದುಕಿನಲ್ಲಿ ಅತಿಥಿ ಕಲಾವಿದರು/ಮೇರು ಕಲಾವಿದರೊಂದಿಗೆ ನಟಿಸಿದ ಬಗ್ಗೆ  ತಿಳಿಸಿ.
DBK: ನಾಟಕರಂಗದ ದಿಗ್ಗಜರಾದ ಶಿವಪ್ರಕಾಶ್  ಪೂಂಜ, ರಮೇಶ್ ರೈ ಕುಕ್ಕುವಳ್ಳಿ, ಲೀಲಾಧರ ಶೆಟ್ಟಿ ಕಾಪು ಮತ್ತು ಇತ್ತೀಚಿನ ಜನಪ್ರಿಯ ಕಲಾವಿದರಾದ ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಶೆಟ್ಟಿ ಬೈಲೂರು , ಮರ್ವಿನ್ ಶಿರ್ವ ಇವರೊಂದಿಗೆ ನಟಿಸಿದ್ದೇನೆ. 
  •   ಕಲಾಸೇವೆಯಲ್ಲಿ ಅತಿ ಹೆಚ್ಚು ಸಂತೃಪ್ತಿ ಸಿಗುವ ಕ್ಷಣ ಯಾವುದು?
DBK: ಕಲಾವಿದನಿಗೆ ಕಲಾಭಿಮಾನಿಗಳ ಚಪ್ಪಾಳೆ ಮತ್ತು ಪ್ರೋತ್ಸಾಹಕ್ಕಿಂತ ಸಂತೃಪ್ತಿ ಬೇರೆ ಇಲ್ಲ. 
  •  ತುಳು ನಾಟಕರಂಗ ನಿಮಗೇನು ನೀಡಿದೆ?
DBK: ಮಾನಸಿಕ ನೆಮ್ಮದಿ ಮತ್ತು ಗೌರವದೊಂದಿಗೆ ಸಮಾಧಾನಕರ ಆದಾಯ ಕೂಡಾ ದೊರೆಯುತ್ತಿದೆ.
  •  ನೀವು ಬಾಲ್ಯದಿಂದಲೇ ತುಳುನಾಟಕರಂಗಕ್ಕೆ ಕಾಲಿಟ್ಟಿರುವಿರಿ ಎಂದು ತಿಳಿಯಿತು. ಹೇಗಿತ್ತು ಬಾಲ್ಯದ ಬದುಕು ? 
DBK:  ಹೌದು ಬಾಲ್ಯದಲ್ಲೇ ನಾಟಕ ಕಲೆಯ ಬಗ್ಗೆ ವಿಪರೀತ ಹುಚ್ಚು ಇತ್ತು. ಹೇಗಾದರೂ ನಾನೊಬ್ಬ ನಾಟಕ ನಟನಾಗಬೇಕೆಂಬ ಗುರಿ ಇತ್ತು 
ಶಾಲಾ ದಿನಗಳಲ್ಲಿ ಚಿಕ್ಕ ಚಿಕ್ಕ ನಾಟಕಗಳು , ಪ್ರಹಸನಗಳನ್ನು ನಾನೇ ಬರೆದು ನನ್ನ ತಂಡದೊಂದಿಗೆ ಮಾಡುತ್ತಿದ್ದೇವು. ಬಾಲ್ಯ ಸ್ನೇಹಿತರೊಂದಿಗೆ ನಾಟಕ ವೀಕ್ಷಿಸುತ್ತಾ ‘ಮುಂದೆ ನಾನು ಕೂಡಾ ಇವರಂತೆ ಆಗುತ್ತೇನೆ’ ಎಂದು ಹೇಳಿಕೊಂಡದ್ದು ಇದೆ. ನನ್ನ ಬಾಲ್ಯದ ದಿನಗಳು ಬಹಳ ಕಷ್ಟಕರವಾಗಿದ್ದ ಕಾರಣ ನನ್ನ ವಿಧ್ಯಾಬ್ಯಾಸ 7ನೇ ತರಗತಿಗೆ ಕೊನೆಗೊಂಡಿತು.
  •  ತಂದೆ ತಾಯಿಗಳ ಬಗ್ಗೆ ಒಂದಿಷ್ಟು ಹೇಳಬಹುದೇ? ಮತ್ತು ನಿಮ್ಮ ಪ್ರತಿಭೆಗೆ ಅವರ ಪ್ರೊತ್ಸಾಹ ಹೇಗಿತ್ತು?
DBK: ತಾಯಿಯವರು ಬೀಡಿ ಕಟ್ಟುವ ವೃತ್ತಿ ಮಾಡಿಕೊಂಡು ಬಹಳ ಕಷ್ಟದಿಂದ ನಮ್ಮನ್ನು ಸಾಕಿದ್ದರು. ತಂದೆಯ ಜೀವನ ಕುಡಿತದಿಂದಲೇ ಕೊನೆಗೊಂಡಿತು. ಬಡತನದಲ್ಲೂ ತಾಯಿ ನನ್ನ ಪ್ರತಿಭೆಗೆ ಪ್ರೋತ್ಸಾಹ ನೀಡಿದ್ದರು. 
  •  ನಿಮ್ಮ ಪ್ರತಿಭೆಯನ್ನು ಬೆಳೆಸಿದ ಗುರುಗಳು ಯಾರು? 
DBK: ನನಗೆ ನಾಟಕರಂಗದಲ್ಲಿ ನಿರ್ದಿಷ್ಟ ಗುರುಗಳು ಯಾರೂ ಇಲ್ಲ. ಮೇರು ಕಲಾವಿದರ ನಟನೆಗಳನ್ನು ನೋಡಿ ಬಾಲ್ಯದಿಂದಲೇ ನನಗೆ ನಟನೆ ಕರಗತವಾಗಿತ್ತು. ನನಗೆ ಮೊದಲಬಾರಿ ನಾಟಕ ನಿರ್ದೇಶನ ನೀಡಿದವರು ರಜನಿಕಾಂತ್ ಶಿರ್ವ. 
  •  ತುಳುನಾಟಕ  ರಚನೆಯ ಆಸಕ್ತಿ ಆರಂಭವಾಗಿದ್ದು ಯಾವಾಗ ? ಮೊದಲ ಪ್ರಯತ್ನ ಹೇಗಿತ್ತು? 
DBK: ಬಾಲ್ಯದಿಂದಲೇ ನಾಟಕ ರಚನೆಯಲ್ಲಿ ಆಸಕ್ತಿ ಇತ್ತು ಪ್ರಹಸನಗಳನ್ನು ಬರೆಯುತ್ತಿದ್ದೆ. ನಾಟಕಗಳ ರಚನೆಯಲ್ಲಿ ಮೊದಲ‌ ಪ್ರಯತ್ನದಲ್ಲೆ ಸಫಲನಾದೆ. ದೇವರ ದಯೆಯಿಂದ ಏಳುಮಾತ್ರ ಬೀಳು ಇಲ್ಲ. ಕೆಲವೊಮ್ಮೆ Script  ಸ್ವಲ್ಪ ಗೊಂದಲ ಅಥವಾ ಸರಿಯಿಲ್ಲವೆನಿಸಿವುದಿದೆ ಹೀಗಾದಾಗ ಇನ್ನೊಮ್ಮೆ ಸರಿಪಡಿಸಿ ಬರೆಯುತ್ತಿದ್ದೆ.
  •  ನಿಮ್ಮ ಸಾಮಾಜಿಕ ನಾಟಕ ರಚನೆಯಲ್ಲಿ ಹೆಚ್ಚು ಯಾವುದಕ್ಕೆ ಆಧ್ಯತೆ ನೀಡುತ್ತೀರಿ? 
DBK: ಹಾಸ್ಯ (ಕಾಮಿಡಿ)ಕ್ಕೆ ಮೊದಲ ಆಧ್ಯತೆ , ಪ್ರೇಮ ಪ್ರಣಯ ಮತ್ತು ಕೌಟುಂಬಿಕ ವಿಚಾರ ಸಾಮಾನ್ಯ ಆದ್ಯತೆಯಾಗಿರುತ್ತದೆ. 

 

  •  ನಿಮ್ಮ ವೃತ್ತಿ ಬದುಕಿನ ಬಗ್ಗೆ ಒಂದಿಷ್ಟು ತಿಳಿಸಿ.
DBK: ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ನಾನು ನಂತರ ಅಂದರೆ 19 ವರ್ಷದ  ಊರಿಗೆ ಬಂದು ಉಡುಪಿ ತಾಲೂಕಿನ ಮೂಡುಬೆಳ್ಳೆಯ ನಾಲ್ಕುಬೀದಿಯಲ್ಲಿ ಸೆಲೂನ್ ಆರಂಬಿಸಿದೆ. ಈಗ ಹೇರ್ ಡ್ರೆಸ್ಸಿಂಗ್ ನನ್ನ ಪ್ರಮುಖ ವೃತ್ತಿಯಾಗಿದೆ.
  • ಕ್ಷೌರಿಕ ವೃತ್ತಿಯೊಂದಿಗೆ ನಾಟಕ ರಚನೆಕಾರನಾಗಿ ನಿರ್ದೇಶಕನಾಗಿ, ನಟನಾಗಿ ದಿನಕರ ಭಂಡಾರಿಯವರ ದಿನಚರಿ ಹೇಗಿದೆ? 
DBK: ಬೆಳಗ್ಗೆ ಬೇಗ ಎದ್ದು ಯೋಗ ಮಾಡಿ , ನಿತ್ಯಕರ್ಮಗಳನ್ನು ಮುಗಿಸಿ ನಂತರ ಸೆಲೂನ್ ಅಂಗಡಿಯಲ್ಲಿ ಕೆಲಸ ಆರಂಭಿಸುತ್ತೇನೆ. ಕೆಲಸದ ಬಿಡುವಿನ ವೇಳೆಯಲ್ಲೂ ನಾನು ನಾಟಕ ರಚನೆ ಅಥವಾ ಅದಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ರಾತ್ರಿ 8 ಗಂಟೆಗೆ ಅಂಗಡಿಗೆ ಬಾಗಿಲು ಹಾಕಿ ಮನೆಗೆ ಬಂದು ನಾಟಕ ಇದ್ದರೆ ನಾಟಕ ನಡೆಯುವ ಸ್ಥಳಕ್ಕೆ ತೆರಳುತ್ತೇನೆ. ಕೆಲವೊಮ್ಮೆ ಒತ್ತಡ ಎನಿಸಿದರೂ ಸರಿದೂಗಿಸುತ್ತಾ ಇದೇ ದಿನಚರಿಯನ್ನು ಪಾಲಿಸುತ್ತೇನೆ.
  •  ನಿಮ್ಮ ಇತರ ಹವ್ಯಾಸಗಳೇನು?
DBK: ರಜಾದಿನಗಳಲ್ಲಿ ತುಳು ಸಿನಿಮಾ ವೀಕ್ಷಣೆ ಮತ್ತು ಮಕ್ಕಳ ಜೊತೆ ಕ್ರಿಕೆಟ್ ಆಟ. 
  • ನಿಮ್ಮ ಈ ಎಲ್ಲ ಸಾಧನೆಗಳಿಗೆ ಬೆಂಬಲವಾಗಿರುವ ಮುಖ್ಯ ವ್ಯಕ್ತಿ ಯಾರು? ಮುಖ್ಯ ಪ್ರೇರಣೆ ಯಾರು?
DBK: ನನ್ನ ಪತ್ನಿ ಮತ್ತು ನನ್ನ ಗೆಳೆಯರು.
  •  ದಿನಕರ ಭಂಡಾರಿಯವರು ವಿವಾಹಿತರು ಎಂದು ತಿಳಿಯಪಟ್ಟೆ. ಹೇಗಿದೆ ದಾಂಪತ್ಯ ಜೀವನ. ಹೆಂಡತಿ ಮಕ್ಕಳ ಬಗ್ಗೆ .. ಅವರ ಕಲಾ ಆಸಕ್ತಿ ಹವ್ಯಾಸ ಮತ್ತು ಪ್ರೋತ್ಸಾಹದ ಬಗ್ಗೆ
DBK: ದಾಂಪತ್ಯ ಜೀವನ ಸೊಗಸಾಗಿದೆ. ಪತ್ನಿ ದಿವ್ಯ ಭಂಡಾರಿ, ದೊಡ್ಡ ಮಗ ದಿವೀಶ್ ಭಂಡಾರಿ 5ನೇ ತರಗತಿಯಲ್ಲಿ ಓದುತ್ತಿದ್ದಾನೆ. ಚಿಕ್ಕ ಮಗ ದಿಶಾನ್ ಭಂಡಾರಿ 2ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇಬ್ಬರೂ ಶ್ರಿ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಪಡುಬೆಳ್ಳೆಯಲ್ಲಿ ಕಲಿಯುತ್ತಿದ್ದಾರೆ. ಚಿಕ್ಕವನಿಗೆ ಅಭಿನಯದಲ್ಲಿ ಹೆಚ್ಚು ಆಸಕ್ತಿಯಿದೆ. ದೊಡ್ಡವನಿಗೆ ಚಿತ್ರಕಲೆಯಲ್ಲಿ ಆಸಕ್ತಿಯಿದೆ. ನನ್ನ ಕಲಾಸೇವೆಗೆ ಕುಟುಂಬದ ಎಲ್ಲರ ಪ್ರೋತ್ಸಾಹ ದೊರೆತಿದೆ.
  •  ತುಳು ನಾಟಕ ರಂಗದ ದಿಗ್ಗಜರಲ್ಲಿ ಯಾರ ಸ್ನೇಹ ಸಂಪಾಧಿಸಿದ್ದೀರಿ?
DBK: ತುಳು ನಾಟಕರಂಗದ ಎಲ್ಲ ಕಲಾವಿದರೂ ನನಗೆ ಚಿರಪರಿಚಿತರು. ಚಿತ್ರನಟ ಸಂದೀಪ್ ಶೆಟ್ಟಿಯವರು ನನ್ನ ಶಿಷ್ಯ. ನಾನು ಬರೆದ ನಾಟಕ ಅವನ ಕಲಾಜೀವನದ ಮೊದಲ ನಾಟಕ. ಬಲೆ ತೆಲಿಪಾಲೆ ಖ್ಯಾತಿಯ ಚಿತ್ರನಟ ಸಂದೀಪ್ ಶೆಟ್ಟಿ ಬೈಲೂರು ನನ್ನ ಬಾಲ್ಯ ಸ್ನೇಹಿತ. ಈಗಲೂ ಸ್ನೇಹಿತರಾಗಿಯೇ ಇದ್ದೇವೆ. ಇನ್ನೊಬ್ಬ ನಾಟಕ ಕಲಾವಿದ ಮತ್ತು ಚಿತ್ರನಟ ಉಮೇಶ್ ಮಿಜಾರ್ ಬಹಳ ಆತ್ಮೀಯರು. 
  •  ತುಳುನಾಟಕರಂಗದ ಬಗ್ಗೆ ನಿಮ್ಮ ಅಭಿಪ್ರಾಯಗಳು . ಬದುಕು ನೀಡಬಲ್ಲದೇ?
DBK: ತುಳು ನಾಟಕರಂಗ ಈಗ ಹವ್ಯಾಸಿ ಕಲಾವಿದರನ್ನು ಅವಲಂಬಿಸಿದೆ. ನಾಟಕವನ್ನೆ ನಂಬಿ ಜೀವನ ನಡೆಸಲೂ‌ ಸಾಧ್ಯವಿಲ್ಲ. ಜೀವನೋಪಯೋಗಕ್ಕಾಗಿ ಬೇರೆ ಉದ್ಯೋಗ ಬೇಕೇ ಬೇಕು. 
  •  ತುಳು ನಾಟಕರಂಗದ ನೂನ್ಯತೆಗಳು?
DBK: ಮೇಲ್ನೊಟಕ್ಕೆ ಎಲ್ಲ‌ ಸರಿಯಾಗಿ ಕಂಡರೂ ಒಳಗಿಂದೊಳಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗದು ಸಮನ್ವಯದ ಕೊರತೆ ತುಳು ನಾಟಕರಂಗದ ನೂನ್ಯತೆಯಾಗಿದೆ. 
  •  ತುಳುನಾಟಕ ರಂಗಕ್ಕೆ ನಿಮ್ಮ ಸಲಹೆಗಳೇನು?
DBK: ತುಳುನಾಟಕರಂಗದ ಕಲಾವಿದರು ಚಿತ್ರರಂಗದಲ್ಲಿ ಅವಕಾಶ ಸಿಕ್ಕ ಕ್ಷಣ ನಾಟಕರಂಗದಿಂದ ವಿಮುಖರಾಗಬಾರದು ತುಳು ನಾಟಕರಂಗವನ್ನು ಬೆಳೆಸಬೇಕು. 
  •  ತುಳು ನಾಟಕರಂಗಕ್ಕೆ ಸರ್ಕಾರದ ಪ್ರೋತ್ಸಾಹ ಇದೆಯೇ?
DBK: ಕನ್ನಡ ನಾಟಕರಂಗಕ್ಕೆ ಇರುವಷ್ಟು ಪ್ರೋತ್ಸಾಹ ತುಳು ನಾಟಕ ಕಲಾವಿದರಿಗೆ ಅಥವಾ ಕಲಾರಂಗಕ್ಕೆ ಇಲ್ಲದಿರುವುದು ಬೇಸರದ ಸಂಗತಿ.
  •  ತುಳುನಾಟಕ ರಂಗಕ್ಕೆ ತುಳುವರ ಪ್ರೋತ್ಸಾಹ ಇದೆಯೇ? 
DBK: ತುಳುನಾಡಿನಲ್ಲಿ ಸರ್ವ ಧರ್ಮದ ಸಹೃದಯಿ ಕಲಾಭಿಮಾನಿಗಳು ತುಳುನಾಟಕಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.
  • ಮಧ್ಯರಾತ್ರಿ ನಂತರ ನಡೆಯುವ ನಾಟಕಗಳಿಗೆ ಪ್ರೇಕ್ಷಕರ ಕೊರತೆಯಿದೆಯೇ?
DBK: ನಗರ ಪ್ರದೇಶಗಳಲ್ಲಿ ಪ್ರೇಕ್ಷಕರ ಕೊರತೆಯಿಲ್ಲ. ಗ್ರಾಮೀಣಪ್ರದೇಶಗಳಲ್ಲಿ ಕೆಲವು ಕಡೆ ಸ್ವಲ್ಪ ಪ್ರೇಕ್ಷಕರ ಕೊರತೆ ಕಂಡು ಬರುತಿದೆ. 
  •   ತುಳು ನಾಟಕ ರಂಗ ತುಳು ಸಿನಿಮಾರಂಗಕ್ಕೆ ಕಾಲಿಡಲು ಒಂದು ಪ್ರಯೋಗಶಾಲೆ ಎಂಬ ಮಾತು ತುಳುಚಿತ್ರರಂಗದ ವಿಶ್ಲೇಷಕರ ವಾದ . ಇದು ನಿಜವೇ?
DBK: ಖಂಡಿತವಾಗಿಯೂ ನಿಜ.
  •  ನಿಮಗೆ ಈವರೆಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆಯೇ?
DBK: ಅವಕಾಶಕ್ಕಾಗಿ ಅರಸಿ ಎಂದೂ ಹೋಗಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಈ ಬಗ್ಗೆ ಇನ್ನು ಯೋಚಿಸಿಲ್ಲ. 
  •  ಸಿನಿಮಾರಂಗದಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿರುವ ಕ್ಷೇತ್ರ ಯಾವುದು?  
DBK: ನಟನೆ.
  •   ನಿಮಗೆ ಒಲಿದು ಬಂದಿರುವ ಪ್ರಶಸ್ತಿ ಮತ್ತು ಸನ್ಮಾನಗಳ ಬಗ್ಗೆ ತಿಳಿಸಿ.
DBK: ‘ಕಥೆತ ಬೀರೆ’ , ‘ಕಲಾಸಿಂಧು’ ಎಂಬ ಎರಡು ಬಿರುದು ಸಿಕ್ಕಿರುವುದರ ಜೊತೆಗೆ ಮುನ್ನೂರಕ್ಕೂ ಅಧಿಕ ಕಡೆಗಳಲ್ಲಿ ಸನ್ಮಾನಗಳು ನಡೆದಿದೆ. ಎಲ್ಲ ಸಮಾಜದ ಬಂಧುಗಳಿಂದ ಗೌರವಿಸಲ್ಪಟ್ಟಿದ್ದೇನೆ. 

 

  •   ಭಂಡಾರಿ ಸಮಾಜದ ಬಗೆಗಿನ ನಿಮ್ಮ ಕಳಕಳಿ ಏನು? ಸ್ವತಃ ಕ್ಷೌರಿಕರಾಗಿ ನಿಮಗೆ ಕ್ಷೌರಿಕರ ಕಷ್ಟಗಳ ಬಗ್ಗೆ ವಿವರಿಸಬೇಕಿಲ್ಲ. ನಿಮ್ಮ ಅಭಿಪ್ರಾಯವೇನು?
DBK: ಭಂಡಾರಿಗಳು ಅಥವಾ ಕ್ಷೌರಿಕರೆಂಬ ಕೀಳರಿಮೆ ಬೇಡ. ಹಿಂದಿನ ಕಾಲದಲ್ಲಿದ್ದ ಕೀಳುಭಾವನೆ ಈಗ ಇಲ್ಲ. ಎಲ್ಲ ವೃತ್ತಿಗಳ ಜೊತೆ ನಮ್ಮ ವೃತ್ತಿಗೂ ಸಮಾನಾಗಿ ಪ್ರಾಮುಖ್ಯತೆಯಿದೆ. ಬೇಸರದ ಸಂಗತಿಯೆಂದರೆ ಭಂಡಾರಿ ಯುವಕರು ಕೀಳರಿಮೆಯಿಂದ  ವೃತ್ತಿಯ ಕಡೆ ಮುಖಮಾಡದೇ ಇರುವ ಪರಿಣಾಮ ಹೊರರಾಜ್ಯದ ಕ್ಷೌರಿಕರ ಸಂಖ್ಯೆ ದಿನದಿನೇ ಬೆಳೆಯುತಿದೆ. 
  •  ಕೊನೆಯದಾಗಿ, ಯುವ ಭಂಡಾರಿ ಕಲಾವಿದರಿಗೆ ನಿಮ್ಮ ಕಿವಿಮಾತು ಏನು?
DBK: ಕಲೆಗೆ ಭೇದಭಾವವಿಲ್ಲ. ಎಲ್ಲರಲ್ಲಿಯೂ ಒಂದಲ್ಲ ಒಂದು ಕಲೆ ಇದ್ದೆ ಇರುತ್ತದೆ. ಪ್ರತಿಯೊಬ್ಬರಲ್ಲಿಯೂ ಒಬ್ನ ಕಲಾವಿದ ಇರುತ್ತಾನೆ.  ಅವಕಾಶ ಸಿಕ್ಕಾಗ ಕೈ ಚೆಲ್ಲದೇ ನಿಮ್ಮ ಪ್ರತಿಭೆಯನ್ನು ತೋರಿಸಲು ಮುಂದೆ ಬನ್ನಿ. ವೇದಿಕೆಯನ್ನು ಬಳಸಿಕೊಳ್ಳಿ

  • ಇಷ್ಟು ಹೊತ್ತು ನಮಗಾಗಿ ಸಮಯ ಮೀಸಲಿರಿಸಿ ಸಂದರ್ಶನಲ್ಲಿ ಭಾಗವಹಿಸಿ ಸಾಧಿತ ಬದುಕಿನ ಪುಟಗಳನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು. ನಿಮ್ಮ ಕಲಾ ಸೇವೆ ಇನ್ನಷ್ಟು ಮುಂದುವರೆಯಲಿ . ಹೊಸ ಹೊಸ ಅವಕಾಶಗಳು ಒದಗಿ ಬಂದು ನಿಮ್ಮ ಕೀರ್ತಿ ಎಲ್ಲೆಡೆಯೂ ಪಸರಿಸಲಿ ಎಂದು ಭಂಡಾರಿ ವಾರ್ತೆ ಬೇಡುತ್ತದೆ. ಧನ್ಯವಾದಗಳು ಸರ್ ..
                                                                                                                                 
DBK: ಹೃದಯಪೂರ್ವಕ ಧನ್ಯವಾದಗಳು.
                                                                                                                           
ಸಂದರ್ಶಕರು: ಪ್ರಶಾಂತ್ ಭಂಡಾರಿ ಕಾರ್ಕಳ

Leave a Reply

Your email address will not be published. Required fields are marked *