ಸಾಲಿಯಾ , ಸಾಲಿ , ಚಾಲಿಯನ್ , ಸಾಲ್ಯಾನ್ ಮುಂತಾದ ಹೆಸರುಗಳುಳ್ಳ ಈ ಸಮುದಾಯವು ತುಳುನಾಡು, ಕನ್ನಡನಾಡು, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಉತ್ತರಭಾರತ, ಶ್ರೀಲಂಕಾ ಮತ್ತು ಬ್ರಿಟನ್ ಜರ್ಮನಿಗಳಲ್ಲೂ ಈ ಹೆಸರುಗಳುಳ್ಳ ವಂಶಗಳು ಕಂಡು ಬರುತ್ತವೆ. ಸಾಲ್ಯಾನ್ ಬರಿ ತುಳುನಾಡಿನ ಅತಿಪ್ರಾಚೀನ ಬರಿಯಾಗಿದ್ದು, ತುಳುವಿನಲ್ಲಿ ಸಾಲಿಯಾ ಅಥವಾ ತಾಲಿಯಾ ಎಂದರೆ ಜೇಡ ಎಂದರ್ಥ. ಜೇಡ ಎಂದರೆ ಬಲೆ ಹೆಣೆಯುವ ಕೀಟವಾಗಿದೆ. ಬಲೆ ಹೆಣೆಯುವುದಕ್ಕೂ ನೇಯ್ಗೆಗೂ ಸಾಮ್ಯತೆಯಿದೆ. ಸಾಲಿಯನಂತೆ ನೇಯ್ಗೆ ಮಾಡುವ ವೃತ್ತಿಯ ಜನಾಂಗವು ಸಾಲಿಯ / ಸಾಲ್ಯಾನ್ ಎಂದು ಗುರುತಿಸಿಕೊಂಡಿದೆ. ಪ್ರಾಚೀನ ನೇಕಾರರನ್ನು ಸಾಲಿಯರು ಎನ್ನುತ್ತಿದ್ದರು.
ಬಟ್ಟೆ ನೇಯುವ ನೇಕಾರರು ಮತ್ತು ಜೇಡನ ಸಂಕೇತ ಹೊಂದಿರುವ ಬುಡಕಟ್ಟು ಜನಾಂಗ ಕೂಡಾ ಸಾಲಿಯಾ ಹೆಸರಿನ ವಂಶವಾಗಿರುವ ಸಾಧ್ಯತೆಯಿದೆ. ದಕ್ಷಿಣಭಾರತದಲ್ಲಿ ಸಾಲಿಯರು ‘ಸಾಲ್ ‘ ಎಂಬ ಜಾತಿಯ ಹತ್ತಿ ಮರದಿಂದ ಬಟ್ಟೆ ತಯಾರಿಸುತ್ತಿದ್ದರು. ಈ ‘ಸಾಲ್’ ಎಂಬ ಮರ ಆ ಕಾಲದಲ್ಲಿ ಪವಿತ್ರ ಮರವಾಗಿತ್ತು. ಪ್ರಾಚೀನ ಭಾರತದ ಮೂಲ ಜನಾಂಗವಾದ ಮುಂಡ ಜನಾಂಗೀಯರು ಈ ಮರವನ್ನು ಪೂಜಿಸುತ್ತಿದ್ದರು.
ರೋಮನ್ ದೇಶವನ್ನು ಮಧ್ಯಯುಗದ ಅಂತ್ಯದಲ್ಲಿ ಆಳಿದ ನಾಲ್ಕು ರಾಜರು ಸಾಲ್ಯಾನ್ ವಂಶದವರಾಗಿದ್ದರು. ಇವರು ಜರ್ಮನ್ ದೇಶದವರಾಗಿದ್ದರು.
ಕೆಲವು ಇತಿಹಾಸ ತಜ್ಞರ ಪ್ರಕಾರ ವಿಜಯನಗರ ಸಾಮ್ರಾಜ್ಯವನ್ನಾಳಿದ ಸಾಲ್ವರು ಸಾಲಿಯ ವಂಶಕ್ಕೆ ಸೇರಿದವರು ಮೂಲತಃ ಸಾಲ್ಯಾನ್ನರು ಎಂಬ ಅಭಿಪ್ರಾಯವಿದೆ.
ಈ ವಂಶವಾಹಿ ಹೆಸರು ತುಳುನಾಡಿನ ಎಲ್ಲ ಜಾತಿಗಳಲ್ಲಿ ಕಂಡುಬರುತ್ತದೆ. ಕೇರಳದ ಕೆಲವು ಜಾತಿಗಳು ತಮಿಳುನಾಡಿನ ಜಾತಿಗಳಲ್ಲೂ ಈ ಗೋತ್ರ ಕಂಡುಬರುತ್ತದೆ.
ಮುಂದಿನ ಸಂಚಿಕೆಯಲ್ಲಿ ಪುತ್ರನ್ ಬರಿಯ ಬಗ್ಗೆ ತಿಳಿಯೋಣ