
“ಉಪ್ಪು ಕೇವಲ ಉಪ್ಪಲ್ಲ”
ಮಹಾತ್ಮ ಗಾಂಧೀಜಿಯ ಹೆಸರು ಕೇಳಿದಾಗ ನಮಗೆ ನೆನಪಾಗುವುದು ದಂಡಿ ಸತ್ಯಾಗ್ರಹ. ದಂಡಿ ಸತ್ಯಾಗ್ರಹ ಅಂದರೆ ಉಪ್ಪಿನ ಸತ್ಯಾಗ್ರಹ. ಸ್ವಾತಂತ್ರ್ಯ ಹೋರಾಟದಲ್ಲಿ ಉಪ್ಪಿನ ಸತ್ಯಾಗ್ರಹ ಅತ್ಯಂತ ಮಹತ್ವದ್ದಾಗಿತ್ತು.
“ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ” ಎಂಬ ಗಾದೆ ಮಾತನ್ನು ಕೇಳಿದ್ದೇವೆ. ಪ್ರತಿಯೊಬ್ಬರ ಜೀವನದಲ್ಲೂ ತಾಯಿಯ ಪಾತ್ರ ಹೇಗೆ ಬಹಳ ಮುಖ್ಯವೋ, ಅದೇ ರೀತಿ ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಉಪ್ಪಿನ ಪಾತ್ರವೂ ಬಹಳ ಪ್ರಾಮುಖ್ಯ.
ಉಪ್ಪಿನ ಬಳಕೆ ಬಹಳ ಹಿಂದಿನ ಕಾಲದಿಂದಲೂ ನಡೆಯುತ್ತಿದ್ದು, ಇದು ಸೋಡಿಯಂ ಕ್ಲೋರೈಡ್ ಅನ್ನು ಒಳಗೊಂಡಿದೆ.
ನಾವು ದಿನನಿತ್ಯ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುತ್ತೇವೆ. ಆದರೆ ಅವುಗಳಿಗೆಲ್ಲಾ ರುಚಿಯನ್ನು ಹೆಚ್ಚಿಸುವುದು ಉಪ್ಪು. ಉಪ್ಪು ಹಾಕದೆ ಯಾವುದೇ ವಿಶೇಷ ಅಡುಗೆಯನ್ನು ಮಾಡಿದರೂ ಅದು ವ್ಯರ್ಥ.
ಕೆಲವೊಂದು ಆಹಾರ ಪದಾರ್ಥಗಳನ್ನು ಕೆಡದಂತೆ ಉಪ್ಪಿನಲ್ಲಿ ಸಂಗ್ರಹಿಸಿಡುವ ಪದ್ಧತಿ ಇಂದೂ ಕಂಡು ಬರುತ್ತದೆ. ಉಪ್ಪು ಕೇವಲ ರುಚಿಯನ್ನು ಹೆಚ್ಚಿಸುವುದು ಮಾತ್ರ ಅಲ್ಲದೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ನಮ್ಮ ದೇಹಕ್ಕೆ ಅಯೋಡಿನ್ ಬಹಳ ಮುಖ್ಯ. ಅಯೋಡಿನ್ ಕೊರತೆಯಿಂದಾಗಿ ಗಳಗಂಡ ರೋಗ ಬರುತ್ತದೆ. ಈ ಅಯೋಡಿನ್ ಕೊರತೆಯನ್ನು ಉಪ್ಪು ನೀಗಿಸುತ್ತದೆ.
ಉಪ್ಪನ್ನು ತಯಾರಿಸುವ ರೀತಿಯೇ ಚಂದ. ದೊಡ್ಡ ದೊಡ್ಡ ಗದ್ದೆಗಳ ಸಮತಟ್ಟಾದ ಸ್ಥಳಗಳಿಗೆ ಸಮುದ್ರ ನೀರನ್ನು ಬಿಟ್ಟು ಅದನ್ನು ಆವಿಯಾಗಿಸಿ ಉಪ್ಪನ್ನು ತಯಾರಿಸಲಾಗುತ್ತದೆ.ಈ ರೀತಿ ಇನ್ನೂ ಅನೇಕ ವಿಧಾನಗಳಿಂದ ಉಪ್ಪನ್ನು ತಯಾರಿಸಲಾಗುತ್ತದೆ.
ಇಂದಿನ ದಿನಗಳಲ್ಲಿ ದೊರೆಯುವ ಪಾಸ್ಟ್ ಪುಡ್ ಅಥವಾ ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ದೊರೆಯುವ ವಿಶಿಷ್ಟ ಆಹಾರ ಖಾದ್ಯಕ್ಕೆ ರುಚಿ ಹೆಚ್ಚಿಸಲು ಅನೇಕ ವಿಧದ ಸಾಮಗ್ರಿಗಳನ್ನು ಬಳಸಿರಬಹುದು ಆದರೆ ಅವುಗಳಿಗೆ ಉಪ್ಪನ್ನೆ ಬಳಸದೆ ಇದ್ದರೆ ಆಹಾರದ ರುಚಿ ಕೆಡುತ್ತದೆ.
ಕೆಲವು ಸಲ ನಾವು ತಯಾರಿಸುವ ಅಡುಗೆಯಲ್ಲಿ ಉಪ್ಪು ಹೆಚ್ಚಾಗಿ ಬಿಟ್ಟರೆ ಅದು ತಿನ್ನಲು ಯೋಗ್ಯವೆನಿಸುವುದಿಲ್ಲ. ಕೆಲವೊಂದು ಆಹಾರ ಪದಾರ್ಥಗಳನ್ನು ತಯಾರಿಸುವಾಗಲೇ ಉಪ್ಪನ್ನು ಬಳಸಬೇಕು ಇನ್ನೂ ಕೆಲವನ್ನು ತಯಾರಿಸಿದ ಮೇಲೂ ಬಳಸಬಹುದು. ಉಪ್ಪು ಕಡಿಮೆಯಾಗಿಬಿಟ್ಟರೆ ಮತ್ತೆಯೂ ಬಳಸಬಹುದು ಆದರೆ ಹೆಚ್ಚಾಗಿ ಬಿಟ್ಟರೆ ಏನೂ ಮಾಡಲಾಗದ ಸ್ಥಿತಿಗೆ ಬಂದುಬಿಡುತ್ತದೆ.
ದಿನ ಬಳಕೆಯ ವಸ್ತುಗಳಲ್ಲಿ ಮಹತ್ತರ ವಹಿಸುವ ಉಪ್ಪು ಅಗ್ಗಕ್ಕೆ ಸಿಗುತ್ತದೆ ಎಂದ ಮಾತ್ರಕ್ಕೆ ಅಡುಗೆಯಲ್ಲಿ ಉಪ್ಪನ್ನೇ ಹೆಚ್ಚು ಬಳಸಲು ಸಾಧ್ಯವಿಲ್ಲ. ಅದಕ್ಕೆ ಅದರದ್ದೆ ಆದ ಬೆಲೆಯಿದೆ.
ಒಂದು ಸಣ್ಣ ಪಾತ್ರೆಗೆ ಹಾಗೂ ದೊಡ್ಡ ಪಾತ್ರೆಗೆ ಹಾಕಿದ ಉಪ್ಪು ಹೇಗೆ ಸಮಾನವಾಗಿ ವಿಸ್ತಾರಗೊಳ್ಳುತ್ತದೆಯೋ ಅದೇ ರೀತಿ ಮನುಷ್ಯನು ಕೂಡ ಎಲ್ಲರನ್ನು ಸಮಾನ ದೃಷ್ಠಿಯಿಂದ ಕಾಣಬೇಕು. ಹಾಗೂ ಎಲ್ಲರಿಗೂ ಅಗತ್ಯವಾಗಿ ಬೇಕಾದವನಾಗಿರಬೇಕು. ನಮ್ಮ ಜೀವನದಲ್ಲೂ ಕೆಲವೊಂದು ವಿಷಯಗಳನ್ನು ಉಪ್ಪಿನ ಹಾಗೆ ಇತಿ ಮಿತಿಯಾಗಿ ಬಳಸಬೇಕು.
-ವೈಶಾಲಿ ಭಂಡಾರಿ ಬೆಳ್ಳಿಪ್ಪಾಡಿ