
ಸದಾ ಹೊಸತನದ ತುಡಿತದೊಂದಿಗೆ ನಿಸ್ವಾರ್ಥ ಸಮಾಜಸೇವೆಯೇ ಭಗವಂತನ ಸೇವೆಯೆಂದು ಅರಿತು ಕಾರ್ಯ ನಿರ್ವಹಿಸುತ್ತಿರುವ ಭಂಡಾರಿ ವಾರ್ತೆ ಹಾಗೂ ಭಂಡಾರಿ ಯೂತ್ ವಾರಿಯರ್ಸ್ ಇದೀಗ ಮತ್ತೊಂದು ಸಮಾಜಮುಖಿ ಕಾರ್ಯದ ಮೂಲಕ ಸುದ್ದಿಯಾಗಿದೆ. ಈ ಬಾರಿ ತನ್ನ ಸೇವಾ ಕಾರ್ಯದಲ್ಲಿ ಆಯ್ಕೆ ಮಾಡಿಕೊಂಡದ್ದು, ಮಂಗಳೂರು ನಗರದ ಮಣ್ಣುಗುಡ್ಡೆ ಬರ್ಕೆಯ ವೈಟ್ ಡೌವ್ಸ್(ರಿ) ಮಹಿಳಾ ಸೇವಾಶ್ರಮವನ್ನು.
ಸಾಮಾನ್ಯವಾಗಿ ಸೇವಾಶ್ರಮಗಳು ಸಂಘಸಂಸ್ಥೆಗಳ ಸಹಾಯಧನದ ಮೂಲಕವೇ ನಡೆಯುತ್ತದೆ. ಈ ನಿಟ್ಟಿನಲ್ಲಿ ಅಲ್ಲಿಗೆ ಯಾವುದೇ ಕೊಡುಗೆ ನೀಡಿದರೂ ಅದು ಅಲ್ಲಿರುವ ದೀನರಿಗೆ ದೊಡ್ಡ ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ ಭಂಡಾರಿ ವಾರ್ತೆ ಹಾಗೂ ಯೂತ್ ವಾರಿಯರ್ಸ್ ನ ನಮ್ಮ ಕಾರ್ಯಕರ್ತರು ಜನವರಿ 9 ರ ಮಂಗಳವಾರ ವೈಟ್ ಡೌವ್ಸ್(ರಿ)ಮಹಿಳಾ ಅಬಲಾಶ್ರಮದಲ್ಲಿರುವ ಅಶಕ್ತ,ನಿಸ್ಸಹಾಯಕ ಮಹಿಳೆಯರ ಕೇಶಕರ್ತನ ಮಾಡುವ ಮೂಲಕ ತಮ್ಮ ಸಹಾಯಹಸ್ತ ಚಾಚಿದ್ದಾರೆ.ಆಬಲಾಶ್ರಮದಲ್ಲಿ ಆಶ್ರಯ ಪಡೆದಿರುವ ಸುಮಾರು ಎಪ್ಪತ್ತಕ್ಕಿಂತಲೂ ಹೆಚ್ಚಿನ ಮಾನಸಿಕ ವಿಶೇಷ ಚೇತನ ಮಹಿಳೆಯರಿಗೆ ಯಾವೊಂದು ಭೇದಭಾವವಿಲ್ಲದೇ, ಕೊಂಚವೂ ಬೇಸರಿಸಿಕೊಳ್ಳದೇ ಕೇಶಕರ್ತನ ಮಾಡುವ ಮೂಲಕ ಅವರ ಮುಖದಲ್ಲಿ ನಗು ಮೂಡಿಸಿದ್ದಾರೆ. ಬೆಂದೂರ್ ನ ಸಂತ ಆ್ಯಗ್ನೇಸ್ ಕಾಲೇಜಿನ ಮುಂಭಾಗದ ಹೆಸರಾಂತ ಬ್ಲಂಟ್ ಹೇರ್ ಡ್ರೆಸ್ಸಸ್ ನ ಪ್ರಫುಲ್, ರುದ್ರೇಶ್ ಹಾಗೂ ದರ್ಶನ್ ಅವರ ನೇತೃತ್ವದಲ್ಲಿ ಕೇಶಕರ್ತನ ಕಾರ್ಯ ನಡೆದಿದೆ.
ಭಂಡಾರಿ ವಾರ್ತೆಯ ಕಾನೂನು ಸಲಹೆಗಾರ ,ಭಂಡಾರಿ ಯೂತ್ ವಾರಿಯರ್ಸ್ ನ ಸಂಸ್ಥಾಪಕ ಮಂಗಳೂರಿನ ಖ್ಯಾತ ನ್ಯಾಯವಾದಿ ಶ್ರೀ ಮನೋರಾಜ್ ರಾಜೀವ್ ಇದರ ಮುಂದಾಳತ್ವ ವಹಿಸಿದ್ದರು. ಬಳಿಕ ಆಶ್ರಮದ ಎಲ್ಲರಿಗೂ ನ್ಯಾಯವಾದಿ ಮನೋರಾಜ್ ಅವರು ಹಣ್ಣು ಹಂಪಲು ವಿತರಿಸಿದರು.ಆಶ್ರಮದ ಮಹಿಳೆಯರು ಇವರು ಮಾಡಿದ ಸೇವೆಗೆ ಸ್ಪಂದಿಸಿದ ರೀತಿ ನಿಜಕ್ಕೂ ಭಾವನಾತ್ಮಕವಾಗಿತ್ತು.ನಮ್ಮ ಕಾರ್ಯಕರ್ತರ ಮುಖದಲ್ಲಿಯೂ ಧನ್ಯತಾಭಾವ ಮನೆಮಾಡಿತ್ತು.ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಕೋರಿನ್ ಎ.ರಸ್ಕಿನ್ಹಾ ಹಾಗೂ ನಿರ್ದೇಶಕ ವೈಟಸ್ ಅವರು ಉಪಸ್ಥಿತರಿದ್ದು, ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಕಳೆದ 23 ವರ್ಷಗಳಿಂದ ಆಶ್ರಮ ನಡೆಸುತ್ತಿರುವ ಇವರಿಗೆ ಭಂಡಾರಿ ಬಳಗದ ಈ ಸೇವಾ ಕಾರ್ಯ ತೃಪ್ತಿ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ನಿರ್ಗತಿಕರಿಗಾಗಿ ಸೇವಾಶ್ರಮ ನಡೆಸುತ್ತಿರುವ ವೈಟ್ ಡೌವ್ಸ್(ರಿ) ಮೂರು ಶಾಖೆಗಳನ್ನು ಹೊಂದಿದ್ದು ಸುಮಾರು 160 ಮಂದಿಗೆ ಮರು ಜೀವ ನೀಡಿದ ತೃಪ್ತಿ ಹೊಂದಿದೆ. ಇಂತಹ ಸಮಾಜಮುಖಿ ಸಂಸ್ಥೆಗೆ ನೆರವಾಗುವ ಮೂಲಕ ಭಂಡಾರಿ ವಾರ್ತೆ ಹಾಗೂ ಯೂತ್ ವಾರಿಯರ್ಸ್ ನ ಸದಸ್ಯರು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಸೇವಾ ಕಾರ್ಯದಲ್ಲಿ ಭಂಡಾರಿ ಯೂತ್ ವಾರಿಯರ್ಸ್ ಸದಸ್ಯರಾದ ಸಂಪತ್ ಬೋಂದೆಲ್, ಕೃಷ್ಣಾನಂದ ಶಕ್ತಿನಗರ, ಅವಿನಾಶ್ ಪಂಪುವೆಲ್, ಗುರು ಮರೋಳಿ, ಪ್ರದೀಪ್ ಕುಂಪಲ ಮುಂತಾದವರು ಕೈ ಜೋಡಿಸಿದ್ದಾರೆ.ಸ್ವಇಚ್ಛೆಯಿಂದ ಈ ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳ ಬಯಸುವವರು ಪ್ರಫುಲ್ ಅವರನ್ನು ಸಂಪರ್ಕಿಸಬಹುದು.ಪ್ರಫುಲ್ ರ ದೂರವಾಣಿ ಸಂಖ್ಯೆ: 9663633568.
ಆಶ್ರಮದ ಆಡಳಿತ ಮಂಡಳಿ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಅಭಿನಂದನೆ ಸಲ್ಲಿಸಿದೆ. ಭಂಡಾರಿವಾರ್ತೆ ಕಾನೂನು ಸಲಹೆಗಾರರೂ,ಭಂಡಾರಿ ಯೂತ್ ವಾರಿಯರ್ಸ್ ಸಂಸ್ಥಾಪಕರೂ ಆಗಿರುವ ಶ್ರೀ ಮನೋರಾಜ್ ರಾಜೀವ್ ಮತ್ತು ಸಂಗಡಿಗರು ಕೈಗೊಂಡ ಈ ಸಮಾಜಸೇವಾಕಾರ್ಯವನ್ನು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಮುಕ್ತಕಂಠದಿಂದ ಶ್ಲಾಘಿಸುತ್ತದೆ ಮತ್ತು ಇನ್ನಷ್ಟು ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಭಗವಂತನು ನಿಮಗೆ ಶಕ್ತಿ ಸಾಮರ್ಥ್ಯ ನೀಡಲಿ ಎಂದು ಹಾರೈಸುತ್ತದೆ.
–ಭಂಡಾರಿವಾರ್ತೆ