September 20, 2024
          ಸಂಕ್ರಾಂತಿ ಹಬ್ಬ ಬಂದಿದೆ. ಎಲ್ಲೆಡೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ದಿನ ಎಳ್ಳು ಬೆಲ್ಲವನ್ನು ಮನೆ ಮನೆಗೆ ನೀಡುವುದು ಹಬ್ಬದ ವಿಶೇಷತೆ. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು ಎಂಬುವುದು ಪುರಾತನ ಕಾಲದಿಂದಲೂ ಕೇಳಿ ಬರುವ ಘೋಷ ವ್ಯಾಕ್ಯ. ಧಾನ್ಯ ಲಕ್ಷ್ಮೀ ಮನೆಗೆ ಬರುವ(ಸುಗ್ಗಿ) ಸಂದರ್ಭ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತವೂ ಹೌದು. ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಗಳಲ್ಲಿ ಒಂದಾದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ನಿರಯಣ ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿಯಾಗುತ್ತದೆ. 
          ಈ ದಿನ ಮನೆಗಳಲ್ಲಿ ಎಳ್ಳನ್ನು ತಯಾರಿಸಿ ಸುತ್ತಮುತ್ತಲಿನ ಮನೆಗಳಿಗೆ ಎಳ್ಳು ಬೀರುವುದು ಮತ್ತು ಸ್ನೇಹಿತರು, ಸಂಬಂಧಿಕರೊಂದಿಗೆ ಶುಭಾಶಯ ಹಂಚಿಕೊಳ್ಳುವುದು ಸಂಕ್ರಾಂತಿ ಹಬ್ಬದ ಸಂಪ್ರದಾಯ. ಕೇರಳದಲ್ಲಿ ಮಕರ ಸಂಕ್ರಾಂತಿಯಂದು ಶಬರಿಮಲೆಯಲ್ಲಿ ಕಾಣುವ ಮಕರ ಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವ್ರತಧಾರಿಗಳು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನ ಪಡೆದರೆ ಸಾರ್ಥಕವಾಗುವುದೆಂಬ ನಂಬಿಕೆಯಿಂದ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಸನ್ನಿಧಾನಕ್ಕೆ ಆಗಮಿಸುತ್ತಾರೆ. 
          ಇಂದಿನ ಅಂತರ್ಜಾಲ, ಮೊಬೈಲ್ ಜಮಾನದಲ್ಲಿ ನಿಜವಾದ ಸ್ನೇಹ, ಪ್ರೀತಿ ಎಲೆ ಮರೆಯ ಕಾಯಿಯಂತಾಗಿದೆ. ಸಂಬಂಧಗಳಲ್ಲಿ ಆತ್ಮೀಯತೆ ದೂರವಾಗಿದೆ. ಟಿ.ವಿ ಪರದೆಯೇ ಎಲ್ಲರ ಬದುಕಿನ ಜೀವಾಳವಾಗಿದೆಯೇ ಹೊರತು ಅತಿಥಿಗಳ ಸತ್ಕಾರ ಮಾಡುವ ಸಮಧಾನ, ಆಚರಣೆ ಕಣ್ಮರೆಯಾಗುತ್ತಿರುವ ಈ ಸಮಾಜದಲ್ಲಿ ಜನರು ಸಂಸ್ಕೃತಿಯತ್ತ ತಲೆ ಎತ್ತಿ ನೋಡುವಂತಾಗಲಿ. ಏನೇ ವೈಮನಸ್ಸು ಇದ್ದರೂ ಮರೆತು ಒಂದಾಗಿ ಕೂಡಿ ಬಾಳುವಂತಹ ಸಮಾಜ ನಮ್ಮದಾಗಲಿ. ಛಲವಾದಿಗಳಾಗಿ ಭಂಡಾರಿ ಸಮಾಜವು ಯಾರಿಗೂ ಕಮ್ಮಿ ಇಲ್ಲದಂತೆ ಸತತವಾಗಿ ಪ್ರಗತಿಯತ್ತ ಸಾಗಲಿ. ಮಕರ ಸಂಕ್ರಮಣವು ಎಲ್ಲರಿಗೂ ಹುಮ್ಮಸ್ಸನ್ನು ನೀಡಲಿ. 
ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು.
– ಚಿತ್ರಾ ಮೋಹನ್ ಚಂದ್ರ, ಸೋಮಂತಡ್ಕ

Leave a Reply

Your email address will not be published. Required fields are marked *