ಮಕರ ಸಂಕ್ರಾಂತಿ ಬಂದೇ ಬಿಟ್ಟಿದೆ.. ಎಲ್ಲೆಡೆ ಎಳ್ಳು – ಬೆಲ್ಲದ ಸಂಭ್ರಮ. ಮಕರ ಸಂಕ್ರಾಂತಿ ಎಂದರೆ ಸೂರ್ಯ ತನ್ನ ಪಥ ಬದಲಾಯಿಸುವ ಪರ್ವ ಕಾಲ. ಸಂಕ್ರಾಂತಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. 12 ಸೌರಮಾನ ಮಾಸಗಳಾದ ಮೇಷದಿಂದ ಮೀನಾದವರೆಗೂ ಸೂರ್ಯ ತನ್ನ ಪಥ ಬದಲಾಯಿಸುತ್ತಾನಾದರೂ ಧನುರ್ ಮಾಸದಿಂದ ಮಕರ ಮಾಸಕ್ಕೆ ಸೂರ್ಯ ಪಥ ಬದಲಾಯಿಸುವ ಪರ್ವ ಕಾಲವನ್ನು ಮಕರ ಸಂಕ್ರಾಂತಿ ಎಂದು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯಿಂದ ಉತ್ತರಾಯಣದ ಪುಣ್ಯಕಾಲ ಆರಂಭವಾಗುತ್ತದೆ. ಉತ್ತರಾಯಣದಲ್ಲಿ ಮರಣಿಸಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯು ಇದೆ.
ಇದೊಂದು ಸುಗ್ಗಿಕಾಲವೂ ಹೌದು, ರೈತರಿಗೆ ಫಸಲು ಬರುವ ಸಮಯ ಇದು. ರೈತರ ಹಿಗ್ಗಿನ ಹಬ್ಬ- ಸುಗ್ಗಿ ಹಬ್ಬ. ಆದ್ದರಿಂದ ಈ ಹಬ್ಬ ಸಮೃದ್ಧಿಯ ಸಂಕೇತವೆನ್ನಬಹುದು. ಮನೆ ಮನೆಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನಮ್ಮಲ್ಲಿ, ಅಂದರೆ ತುಳುನಾಡಿನಲ್ಲಿ ಮಕರ ಸಂಕ್ರಾತಿಯ ಆಚರಣೆ ಇಲ್ಲದಿದ್ದರೂ ಶಬರಿ ಮಲೆಯ ಮಕರ ಜ್ಯೋತಿ ನೋಡುವ ಸಲುವಾಗಿ ಸಾವಿರಾರು ಭಕ್ತರು ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ ವ್ರತ ಕೈಗೊಂಡು, ಶಬರಿ ಮಲೆಗೆ ಹೋಗುತ್ತಾರೆ. ಕರ್ನಾಟಕದ ಇತರ ಪ್ರದೇಶಗಳಲ್ಲಿ ಹಾಗೂ ದೇಶದಾದ್ಯಂತ ವಿಭಿನ್ನ ಶೈಲಿಯಲ್ಲಿ ಆಚರಿಸುತ್ತಾರೆ.ಹೊಸ ಬಟ್ಟೆ ತೊಟ್ಟು, ದೇವಸ್ಧಾನಕ್ಕೆ ಹೋಗಿ ಎಳ್ಳು,ಬೆಲ್ಲ,ಕಬ್ಬು ಇತ್ಯಾದಿಗಳನ್ನು ಪೂಜಿಸಿ ಅದನ್ನು ಹಂಚುವ ಆಚರಣೆಯಿದೆ.ಇದರೊಂದಿಗೆ ಹುರಿಕಡಲೆ,ಕೊಬ್ಬರಿ ,ಸಕ್ಕರೆ,ಬೆಲ್ಲ ಸೇರಿಸಿ ಬಂಧು- ಬಳಗ, ಸ್ನೇಹಿತರಿಗೆ ಹಂಚುತ್ತಾರೆ. ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.
ಇನ್ನು ಕೆಲವು ಕಡೆ,ಪುಣ್ಯ ನದಿಗಳಲ್ಲಿ ಸ್ನಾನ ಮಾಡುವುದರಿಂದ ಚರ್ಮ ರೋಗ ಗಳ ಪರಿಹಾರವಾಗುತ್ತದೆ ಎಂಬ ನಂಬಿಕೆಯಿಂದ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಪದ್ಧತಿಯೂ ಇದೆ…
ಮಕರ ಸಂಕ್ರಾಂತಿಯನ್ನು ಸಾಮಾನ್ಯವಾಗಿ ಎಲ್ಲೆಡೆ ಆಚರಿಸುತ್ತಾರೆ. ಆದರೆ ವಿವಿಧ ಪ್ರದೇಶದಲ್ಲಿ ವಿಭಿನ್ನ ಹೆಸರುಗಳಿಂದ ಆಚರಿಸುತ್ತಾರೆ. ತಮಿಳುನಾಡಿನಲ್ಲಿ ಪೊಂಗಲ್ – ಕೇರಳದಲ್ಲಿ – ಮಕರ ವಿಳಕ್ಕು, ಹರಿಯಾಣ ದಲ್ಲಿ – ಲೋಹರಿ ಹೀಗೆ ಅನೇಕ ಹೆಸರುಗಳಿಂದ ವಿಭಿನ್ನ ಶೈಲಿಯಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ.
ಮಕರ ಸಂಕ್ರಾಂತಿ ಬಂತೆಂದರೆ ಶುಭ ಕಾರ್ಯಗಳಿಗೆ ನಾಂದಿ ಎನ್ನುತ್ತಾರೆ… ಈ ಮಕರ ಸಂಕ್ರಾಂತಿ ಹಬ್ಬ ಎಲ್ಲರಿಗೂ ಆಯುರಾರೋಗ್ಯ ತರಲಿ ಎಂಬ ಶುಭ ಹಾರೈಕೆ ಯೊಂದಿಗೆ..
– ಪ್ರತಿಮಾ ಭಂಡಾರಿ ಕಾರ್ಕಳ