
ಕರ್ನಾಟಕ ಸರ್ಕಾರದ ಮಾರ್ಗದರ್ಶನದಂತೆ ಈ ವರ್ಷ ಪ್ರಪ್ರಥಮ ಬಾರಿಗೆ ಆಚರಿಸಲ್ಪಡುತ್ತಿರುವ ಶ್ರೀ ಸವಿತಾ ಮಹರ್ಷಿಗಳ ಜಯಂತ್ಯುತ್ಸವ ಕಾರ್ಯಕ್ರಮ ಶಿಕಾರಿಪುರದಲ್ಲಿ ಫೆಬ್ರವರಿ 12,2019 ರ ಮಂಗಳವಾರ ಶಿಕಾರಿಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಹಶೀಲ್ದಾರ್ ಶ್ರೀ ಎಂ.ಪಿ.ಕವಿರಾಜ್ (ಅಧ್ಯಕ್ಷರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ.) ಶಿಕಾರಿಪುರ ಇವರ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ನೆರವೇರಿತು.

ಬೆಳಿಗ್ಗೆ 9 ಗಂಟೆಗೆ ಶಿಕಾರಿಪುರದಲ್ಲಿರುವ ಸವಿತಾ ಸಮಾಜದ “ಸವಿತಾ ವಿವಿಧೋದ್ದೇಶ ಸಹಕಾರಿ ಸಂಘ” ಮತ್ತು “ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ” ದ ಬಳಿ ಜಮಾಯಿಸಿದ ಶಿಕಾರಿಪುರ, ಶಿರಾಳಕೊಪ್ಪ ಮತ್ತು ಸುತ್ತಮುತ್ತಲ ಊರುಗಳ ಸವಿತಾ ಸಮಾಜದ ಬಂಧುಗಳು ಸವಿತಾ ಮಹರ್ಷಿಗಳ ಜಯಂತಿಯನ್ನು ಒಂದು ಹಬ್ಬದಂತೆ ಸಂಭ್ರಮಿಸಿದರು.ಅಲಂಕೃತಗೊಂಡ ವಾಹನದ ಮೇಲೆ ಇರಿಸಲಾಗಿದ್ದ ಶ್ರೀ ಸವಿತಾ ಮಹರ್ಷಿಗಳ ಭಾವಚಿತ್ರದ ಮೆರವಣಿಗೆಯಲ್ಲಿ ಸವಿತಾ ಸಮಾಜದ ಬಂಧುಗಳು, ಸ್ತ್ರೀಯರು ಮಕ್ಕಳು, ಹಿರಿಯರು, ಕಿರಿಯರು ಎಂಬ ಭೇದ ಭಾವವಿಲ್ಲದೆ ಎಲ್ಲರೂ ಭಾಗವಹಿಸಿ, ಕುಣಿದು ಕುಪ್ಪಳಿಸಿದರು.




ಮದ್ಯಾಹ್ನ 12 ಗಂಟೆಗೆ ಸರಿಯಾಗಿ ಶಿಕಾರಿಪುರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಶ್ರೀ ಸವಿತಾ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆಯನ್ನು ನೆರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಿಕಾರಿಪುರ ಸವಿತಾ ಸಮಾಜದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿಗಳಾದ ಶ್ರೀ ವಿ.ರಾಮಣ್ಣನವರು ವಿಶೇಷ ಉಪನ್ಯಾಸವನ್ನು ನೀಡಿದರು. ಇವರು ತಮ್ಮ ಉಪನ್ಯಾಸದಲ್ಲಿ ಶ್ರೀ ಸವಿತಾ ಮಹರ್ಷಿಗಳ ಹುಟ್ಟು, ಅವರ ಜನ್ಮ ಇತಿಹಾಸವನ್ನು ಪುರಾಣ ಗ್ರಂಥಗಳ ಉಲ್ಲೇಖದೊಂದಿಗೆ ಸಭಿಕರಿಗೆ ಮನಮುಟ್ಟುವಂತೆ ವಿವರಿಸಿದರು. ನಂತರ ವೇದಿಕೆಯ ಮೇಲಿದ್ದ ಅತಿಥಿ ಮಹೋದಯರು ಸಭೆಯನ್ನುದ್ದೇಶಿಸಿ ಮಾತನಾಡಿದರು.ವೇದಿಕೆಯ ಮೇಲೆ ಶಿಕಾರಿಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀ ಕೆ.ಎಸ್.ಸುಬ್ರಮಣ್ಯ, ಪುರಸಭೆ ಅಧ್ಯಕ್ಷರಾದ ಶ್ರೀಮತಿ ಪದ್ಮಾ ಗಜೇಂದ್ರ, ಈಸೂರು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಎನ್.ಆರ್.ಅರುಂಧತಿ ರಾಜೇಶ್, ಹೊಸೂರು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಮಮತಾ ಸಾಲಿ, ಶಿಕಾರಿಪುರ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀ ಎಸ್.ಪರಮೇಶ್,ಶಿರಾಳಕೊಪ್ಪ ಸವಿತಾ ಸಮಾಜದ ಗೌರವಾಧ್ಯಕ್ಷರಾದ ಶ್ರೀ ಜೋಗು ಭಂಡಾರಿಯವರು ಮುಂತಾದ ಗಣ್ಯರು ಉಪಸ್ಥಿತರಿದ್ದು, ಸಭೆಯನ್ನುದ್ದೇಶಿಸಿ ಮಾತನಾಡಿದರು.
ಶಿಕಾರಿಪುರ ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀ ಈಶ್ವರಪ್ಪನವರು ಸಭೆಯನ್ನು ನಿರೂಪಿಸಿ, ವಂದನಾರ್ಪಣೆ ಕಾರ್ಯಕ್ರಮ ನೆರವೇರಿಸಿದರು.


ನಂತರ ಸವಿತಾ ಸಮಾಜದ ವಾಣಿಜ್ಯ ಸಂಕೀರ್ಣದಲ್ಲಿರುವ ಸಭಾಂಗಣದಲ್ಲಿ ಉಪಸ್ಥಿತರಿದ್ದ ಸವಿತಾ ಸಮಾಜದ ಬಂಧುಗಳಿಗೆ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.