
ಕಾಯಕವೇ ಕೈಲಾಸವೆಂದು ತಮ್ಮ ಜೀವನವನ್ನೇ ಅಜಲು ಕ್ಷೌರಿಕ ವೃತ್ತಿಗಾಗಿ ಮುಡಿಪಾಗಿಟ್ಟ ಅಲೆವೂರು ಗುಡ್ಡೆ ಅಂಗಡಿ ಪ್ರಗತಿನಗರದ ಹಿರಿಯ ಕ್ಷೌರಿಕ ಬಂಧು ಶ್ರೀ ವಿಠಲ ಭಂಡಾರಿಯವರಿಗೆ ಉಡುಪಿ ಜಿಲ್ಲೆಯ ಅಲೆವೂರು ರಾಮಪುರದ ಅಲೆವೂರು ಯುವಕ ಸಂಘ (ರಿ.) ಮತ್ತು ಅಲೆವೂರು ಮಹಿಳಾ ಸಂಘದವರು ಗುರುತಿಸಿ ಗೌರವಪೂರ್ವಕವಾಗಿ ಸನ್ಮಾನಿಸಿದರು.


ಉಡುಪಿ ತಾಲ್ಲೂಕು ಅಲೆವೂರು ಗ್ರಾಮದ ಗುಡ್ಡೆ ಅಂಗಡಿ ನಿವಾಸಿಗಳಾದ ದಿವಂಗತ ಶೀನ ಭಂಡಾರಿ ಮತ್ತು ದಿವಂಗತ ಕಮಲ ಭಂಡಾರಿ ದಂಪತಿಗಳ ಪುತ್ರರಾದ ಶ್ರೀ ವಿಠಲ ಭಂಡಾರಿಯವರು ಹಲವು ವರ್ಷಗಳಿಂದ ಅಲೆವೂರು ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ತಮ್ಮ ಅಜಲು ಕ್ಷೌರಿಕ ವೃತ್ತಿಯನ್ನು ನಿರ್ವಹಿಸಿಕೊಂಡು,ಸಮಸ್ತರಿಂದಲೂ ಪ್ರೀತಿಯಿಂದ ವಿಠ್ಠಲಣ್ಣ ಎಂದೇ ಕರೆಸಿಕೊಂಡು, ತಮ್ಮ ಸ್ವಾರ್ಥರಹಿತ ಸೇವೆಯನ್ನು ಸಲ್ಲಿಸುತ್ತಾ ವೃತ್ತಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಇವರ ಸೇವೆಯನ್ನು ಗುರುತಿಸಿದ ಅಲೆವೂರು ಯುವಕ ಸಂಘ ಮತ್ತು ಅಲೆವೂರು ಮಹಿಳಾ ಸಂಘದ ಅಧ್ಯಕ್ಷರು, ಸರ್ವ ಸದಸ್ಯರು, ಅಭಿಮಾನಿಗಳು, ಹಿತೈಷಿಗಳು ಹಾಗೂ ಗಣ್ಯರು ಓಡಗೂಡಿಕೊಂಡು ತಮ್ಮ ಸಂಘದ 38 ನೇ ವರ್ಷದ ವಾರ್ಷಿಕೋತ್ಸವದ ಸುಸಂದರ್ಭವಾದ ಜನವರಿ 20,2019 ರ ಭಾನುವಾರ ಅವರನ್ನು ಸನ್ಮಾನಿಸಿ ಗೌರವಿಸಿದೆ.

ಅಲೆವೂರು ಸುಭೋದಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿವರೆಗೆ ವ್ಯಾಸಂಗ ಮಾಡಿ ನಂತರ ಬಡತನದ ಕಾರಣದಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ತಂದೆಯಿಂದ ಬಳುವಳಿಯಾಗಿ ಬಂದ ಕುಲಕಸುಬಾದ ಕ್ಷೌರಿಕ ವೃತ್ತಿಯನ್ನು ಮುಂದುವರಿಸಿಕೊಂಡು ಸಂಸಾರದ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬಂದ ವಿಠಲ ಭಂಡಾರಿಯವರ ಧರ್ಮಪತ್ನಿ ಉಡುಪಿ ತಾಲ್ಲೂಕು ಹಿರೇಬೆಟ್ಟು ಶೇಖರ ಭಂಡಾರಿ ಮತ್ತು ಪುಟ್ಟು ಭಂಡಾರಿ ದಂಪತಿಯ ಪುತ್ರಿಯಾದ ಶ್ರೀಮತಿ ರತಿ ವಿಠಲ ಭಂಡಾರಿ. ಇವರಿಗೆ ಎರಡು ಹೆಣ್ಣು ಎರಡು ಗಂಡು ಒಟ್ಟು ನಾಲ್ಕು ಜನ ಮಕ್ಕಳು.


ಈ ಇಳಿವಯಸ್ಸಿನಲ್ಲಿಯೂ ಕರ್ತವ್ಯದಲ್ಲಿ ದೇವರನ್ನು ಕಾಣು ಎಂಬ ನಾಣ್ನುಡಿಯಂತೆ ಅಭಿಮಾನಿಗಳು ಬಯಸಿದಾಗ ಮನೆ ಮನೆಗೆ ತೆರಳಿ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಅಜಲು ಸೇವಾ ಕ್ಷೌರಿಕ ಕರ್ತವ್ಯವನ್ನು ನಿರ್ವಹಿಸಿಕೊಂಡು ಬರುತ್ತಿರುವ ಶ್ರೀ ವಿಠ್ಠಲ ಭಂಡಾರಿಯವರಿಗೂ ಅವರ ಧರ್ಮಪತ್ನಿಯವರಿಗೂ, ಮಕ್ಕಳಿಗೂ, ಮೊಮ್ಮಕ್ಕಳಿಗೂ, ಅವರ ಕುಟುಂಬಸ್ಥರೆಲ್ಲರಿಗೂ ಇಷ್ಟ ದೇವರುಗಳು ಸದಾ ಉತ್ತಮ ಆಯುಷ್ಯ ಆರೋಗ್ಯಾಧಿ ಭಾಗ್ಯಗಳನ್ನು ಕರುಣಿಸಿ ತುಂಬು ಹೃದಯದಿಂದ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರೈಸುತ್ತದೆ.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.