January 18, 2025
shrikrishna-janmashtami-visheshanka-scaled

  ಜಗತ್ಪಾಲಕನಾದ ಶ್ರೀವಿಷ್ಣುವಿನ ಎಂಟನೇ ಅವತಾರವೇ ಶ್ರೀಕೃಷ್ಣನ ಅವತಾರ. ದೈವಿಕ ರೂಪವಾದ ಶ್ರೀಕೃಷ್ಣ ಸೃಷ್ಟಿಯಲ್ಲಿರುವ ದುಷ್ಟರಿಗೆ ಶಿಕ್ಷೆ ಹಾಗೂ ಶಿಷ್ಟರ  ಪಾಲನೆಗಾಗಿ ಅವತರಿಸಿ ಬಂದು ಭಾದ್ರಪದ ಮಾಸದ ಕೃಷ್ಣ ಪಕ್ಷದ ಎಂಟನೆಯ ದಿನ ಕೃಷ್ಣನ ಜನನವಾಗುತ್ತದೆ. ಇದೇ ದಿನದಂದು ಶ್ರೀಕೃಷ್ಣಜನ್ಮಾಷ್ಟಮಿ ಎಂದು ಆಚರಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಶ್ರಾವಣ ಮಾಸದಲ್ಲಿ ಜನಿಸಿದ ಎಂದು ಹೇಳಲಾಗುತ್ತದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಮಾಸಗಳ ವ್ಯತ್ಯಾಸವಿದೆ.  ಆದರೆ ಕೃಷ್ಣ ಜನ್ಮಾಷ್ಟಮಿಯನ್ನು ಒಂದೇ ದಿನ ಆಚರಿಸಲಾಗುತ್ತಿದೆ 

 


             ಮಥರಾ ರಾಜನಾದ ಕಂಸನು ದಬ್ಬಾಳಿಕೆಯ ರೂಪದಲ್ಲಿ ಆಳ್ವಿಕೆ ನಡೆಸುತ್ತಿದ್ದ.ಅವನ ದಬ್ಬಾಳಿಕೆಯಿಂದ ಜನರು ಆತಂಕದಿಂದ ಜೀವನ ನಡೆಸುತ್ತಿದ್ದರು. ಕಂಸ ತನ್ನ ತಂಗಿ ದೇವಕಿಯನ್ನು ತುಂಬಾ ಪ್ರೀತಿಸುತ್ತಿದ್ದ. ನಂತರ ಅವನು ದೇವಕಿಯನ್ನು ವಸುದೇವನ ಜೊತೆ ವಿವಾಹ ಮಾಡಿಸುತ್ತಾನೆ. ನಂತರ ದಂಪತಿಯನ್ನು ವಸುದೇವನ ಮನೆಗೆ ಕರೆದುಕೊಂಡು ಹೋಗುವಾಗ “ಹೇ ಮೂರ್ಖ ಕಂಸ ಸಾವಧಾನ,  ದೇವಕಿಯ ಎಂಟನೆ ಪುತ್ರ ನಿನ್ನ ಸಾವಿಗೆ ಕಾರಣನಾಗುವನು ಎಂದು ಅಶರೀರವಾಣಿಯೊಂದು ಕೇಳುತ್ತದೆ. ಇದನ್ನು ಕೇಳಿದ ಕಂಸ ಕ್ರೋಧಿತನಾಗಿ ದಂಪತಿಯನ್ನು  ಕಾರಾಗೃಹಕ್ಕೆ  ತಳ್ಳುತ್ತಾನೆ ನಂತರ ದೇವಕಿ ಹಾಗೂ ವಸುದೇವನಿಗೆ ಹುಟ್ಟುವ ಎಲ್ಲಾ ಮಕ್ಕಳನ್ನು ಕೊಲ್ಲಲು ನಿರ್ಧರಿಸುತ್ತಾನೆ. ಸಮಯ ಕಳೆದಂತೆ ದೇವಕಿ ಹಾಗೂ ವಸುದೇವನಿಗೆ ಮೊದಲ ಮಗು ಹುಟ್ಟಿತು.ಈ ವಿಷಯ ತಿಳಿದ ಕಂಸ  ಕಾರಾಗೃಹಕ್ಕೆ ಬಂದು ದೇವಕಿಯ ಮಗುವನ್ನು ನೋಡಿದ. ಆ ಮಗುವನ್ನ ಕೊಂದ. ಇದೇರೀತಿ ಕಂಸ ದೇವಕಿಯ ಏಳು ಮಕ್ಕಳನ್ನು ಕೊಂದು ಹಾಕಿದ. ಕಾರಾಗೃಹದಲ್ಲಿ ದೇವಕಿ ವಸುದೇವ ದಂಪತಿಗಳಿಗೆ ಎಂಟನೇ ಮಗು ಜನಿಸಿತು. ಆ ಮಗು ನೋಡಲು ಸುಂದರ ಹಾಗೂ ಮುಗ್ಧವಾಗಿತ್ತು. ಆ ಮಗುವಿನ ಕಣ್ಣು ತೇಜದಿಂದ ಕೂಡಿತ್ತು.         

             ಮುಗ್ಧವಾದ ಮಗುವನ್ನು ನೋಡಿದ ವಸುದೇವ ಈ ಮಗುವನ್ನು ಉಳಿಸಲೇ ಬೇಕೆಂದು ವಿಷ್ಣುವನ್ನು ಧ್ಯಾನಿಸಿದ. ವಸುದೇವ ಧ್ಯಾನಿಸುತ್ತಿದ್ದಂತೆ ಕಾರಾಗೃಹದ ಬಾಗಿಲು ತೆರೆಯಿತು.ಇದರಿಂದ ದೇವಕಿ ಹಾಗೂ ವಸುದೇವನಿಗೆ ಆಶ್ಚರ್ಯವಾಗುತ್ತದೆ. ತಕ್ಷಣವೇ ವಸುದೇವ ಮಗುವನ್ನು ಎತ್ತಿಕೊಂಡು ನಗರದ ಹೊರಗೆ ಹೊರಡಲು ತಯಾರಾದ. ಕಾರಾಗೃಹದಿಂದ ಹೊರಗೆ ಬಂದ ವಸುದೇವ ಗೋಕುಲದ ಕಡೆಗೆ ಹೋಗಲು ನಿರ್ಧರಿಸಿದ. ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲೇ ನಡೆದುಬಂದ ವಸುದೇವ ಯಮುನಾ ನದಿ ತೀರಕ್ಕೆ ತಲುಪುತ್ತಾನೆ. ಪೂಜೆಗಾಗಿ ತಯಾರಿಸಿದ ಬುಟ್ಟಿಯನ್ನು ನೋಡಿದ ನಂತರ ಬುಟ್ಟಿಯಲ್ಲಿ ಬಾಲಕನನ್ನು ಇಟ್ಟು ತಲೆಯ ಮೇಲೆ ಹೊತ್ತು ನದಿ ದಾಟಲು ಮುಂದಾದ.ನದಿ ದಾಟುತ್ತಿರುವಾಗ ನೀರು ವಸುದೇವನ ಮೂಗಿನವರಿಗೆ ತಲುಪಿತು. ಆಗ ಬುಟ್ಟಿಯಲ್ಲಿದ್ದ ಬಾಲ ರೂಪಿ ಭಗವಂತ ತನ್ನ ಬಲಗಾಲನ್ನು ನೀರಿಗೆ ಸ್ಪರ್ಶಿಸಿದ ಯಮುನೆಗೆ ಪಾದಸ್ಪರ್ಶವಾಗುತ್ತದೆ.ನೀರು ತನ್ನಷ್ಟಕ್ಕೆ ಕೆಳಗಿಳಿಯಿತು. ನಂತರ ವಸುದೇವ ಮುಂದೆ ಸಾಗಿದಾಗ ಅವನ ಹಿಂದೆ ಶೇಷನಾಗ ಬಂದಿತ್ತು. ತನ್ನ ಹೆಡೆಯಿಂದ ಬುಟ್ಟಿಯ ಮೇಲೆ ಛತ್ರದ ರೂಪದಲ್ಲಿ ವಸುದೇವನ ಹಿಂದೆ ಸಾಗಿತ್ತು. ಇದರಿಂದ ಬಾಲಕನ ಮೇಲೆ ಮಳೆಯ ಸ್ಪರ್ಶ ವಾಗಲಿಲ್ಲ.ನಂತರ ವಸುದೇವ ಯಮುನಾ ನದಿ ದಾಟಿದ.

 

 

     ಇತ್ತ ಗೋಕುಲದಲ್ಲಿ ಯಶೋದೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಆಗ ಗೋಕುಲ ತಲುಪಿದ ವಸುದೇವನಿಗೆ ಮಗು ಅಳುವುದರ ಶಬ್ದ ಕೇಳಿತು. ಆಗ ವಸುದೇವ ಅಳುವಿನ ಧ್ವನಿಯನ್ನು ಹಿಂಬಾಲಿಸಿ ನಂದನ ಮನೆಗೆ ಹೋದ. ನಿದ್ರಾವಸ್ಥೆಯಲ್ಲಿದ್ದ ಯಶೋಧೆ ಮತ್ತು ಅವಳ ಹೆಣ್ಣು ಮಗುವನ್ನು ನೋಡಿದ. ನಂತರ ವಸುದೇವ, ಕಂಸನು ಹೆಣ್ಣು ಮಗುವನ್ನು ಕೊಲ್ಲುವುದಿಲ್ಲ ಎಂದು ಯೋಚಿಸಿ ತನ್ನ ಮಗುವನ್ನು ಯಶೋದೆಯ ಬಳಿಯಲ್ಲಿ,  ಅವಳ ಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು ಕಾರಾಗೃಹ ತಲುಪಿದ. ಕಾರಾಗೃಹ ಬರುತ್ತಿದ್ದಂತೆ ಕಾರಾಗೃಹದ ಎಲ್ಲಾ ಬಾಗಿಲುಗಳು ಮುಚ್ಚಿದ್ದವು.  ಕೆಲ ಸಮಯದ ನಂತರ ಕಂಸನಿಗೆ ದೇವಕಿಯ ಎಂಟನೆ ಮಗುವಿನ ಮಗುವಿನ ಜನ್ಮದ ವಿಷಯ ತಿಳಿಯುತ್ತದೆ.ಆಗ ಅವನು ಕಾರಾಗೃಹಕ್ಕೆ  ಧಾವಿಸುತ್ತಾನೆ. ಕಂಸನನ್ನು ನೋಡಿ ವಸುದೇವ,  “ಇದು ಹೆಣ್ಣು ಮಗು ನಿನಗೆ ಹಾನಿ ಮಾಡಲು ಸಾಧ್ಯವಿಲ್ಲ. ಇದನ್ನು ಬಿಟ್ಟುಬಿಡು ಕಂಸ” ಎಂದು ಬೇಡಿಕೊಂಡ. ಆದರೆ ಕಂಸ ಮಗುವನ್ನು ಎತ್ತಿಕೊಂಡು ಗೋಡೆಗೆ ಹೊಡೆಯಲು ಮುಂದಾದಾಗ ಅವನ ಕೈಯಿಂದ ತಪ್ಪಿಸಿಕೊಂಡು ಆಕಾಶಕ್ಕೆ ಹಾರಿತು. ನಂತರ ಆ ಮಗು ಹೆಣ್ಣು ರೂಪತಾಳಿ  ಹೇ  ದುಷ್ಟ ಕಂಸ ನಿನ್ನ ನಾಶಮಾಡುವ ಬಾಲಕ ಗೋಕುಲದಲ್ಲಿ ಸುರಕ್ಷಿತವಾಗಿದ್ದಾನೆ ಎಂದು ಹೇಳಿ ಮಾಯವಾಗುತ್ತಾಳೆ. ಇತ್ತ ನಂದ ಹಾಗೂ ಯಶೋದೆ ಆ ಬಾಲ ರೂಪಿ ಭಗವಂತನನ್ನು ಕೃಷ್ಣ ಎಂದು ನಾಮಕರಣ ಮಾಡುತ್ತಾರೆ. ಅದೇ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ. ಜನ್ಮಾಷ್ಟಮಿಯಂದು ಜನರು ಹಣ್ಣು ಮತ್ತು ನೀರು ಕುಡಿಯುವುದರ ಬದಲಾಗಿ ಉಪವಾಸ ಮಾಡುತ್ತಾರೆ.ಕೃಷ್ಣನಿಗೆ ಹಾಲು ತುಪ್ಪ ಜೇನುತುಪ್ಪ ಹಾಗೂ ನೀರಿನಿಂದ ಸ್ನಾನ ಮಾಡಿಸುತ್ತಾರೆ. ಕೃಷ್ಣಾಷ್ಟಮಿಯ ಮರುದಿನ ಜನರು ಮೊಸರಿನಿಂದ ತುಂಬಿದ ಮಡಕೆಯನ್ನು ಒಡೆಯುತ್ತಾರೆ.  ಇದುವೇ ಶ್ರೀಕೃಷ್ಣಜನ್ಮಾಷ್ಟಮಿಯ ಮಹತ್ವ.

-ಶ್ರೀನಿಧಿ ಶಶಿಧರ್ ಕಾರ್ಕಳ 

Leave a Reply

Your email address will not be published. Required fields are marked *