January 29, 2025
Shrikrishna janmashtami visheshanka (4)

ಕೃಷ್ಣ ಎಂದರೆ ಏನೋ ಮನಸ್ಸಿಗೆ ಉಲ್ಲಾಸ. ತನ್ನ ಬದುಕಿನುದ್ದಕ್ಕೂ ನಾನಾ ಲೀಲೆಗಳನ್ನು ತೋರಿಸಿದ ಮಹಾನ್ ಸಾಧಕ. ಜಗತ್ತಿನ ಉದ್ಧಾರಕ್ಕಾಗಿ ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ಮಾಡಿದ ಜಗದ್ದೋರಕ. ವಾಸುದೇವನ ಪತ್ನಿ ದೇವಕಿಯ ಅಷ್ಟಮ ಗರ್ಭದಲ್ಲಿ, ಮಥುರೆಯ ಕಾರಾಗೃಹದಲ್ಲಿ ಜನಿಸಿದ ವಾಸುದೇವ ಆದರೆ ಜನ್ಮ ಕೊಟ್ಟ ತಂದೆ ತಾಯಿಯ ಜೊತೆ ಬೆಳೆಯದೆ, ನಂದ ಗೋಕುಲದಲ್ಲಿ ನಂದಗೋಪ- ಯಶೋದೆಯರ ಮಗನಾಗಿ ಬೆಳೆದಿದ್ದು ಜಗತ್ ನಿಯಾಮಕನ ನಿಯಮವೇ ಆಗಿದೆ. ಅಲ್ಲಿಂದ ನಂದ ಗೋಪಾಲ ನಾದ. ರಾಜವಂಶದಲ್ಲಿ ಹುಟ್ಟಿದರೂ ತನ್ನ ಬಾಲ್ಯವನ್ನು ಗೋಪಾಲಕನಾಗಿ ನಂದ ಗೋಕುಲದಲ್ಲಿ ಕಳೆದ. ಬಾಲ್ಯದ ತುಂಟಾಟ ಜೊತೆಗೆ ತನ್ನ ಹಾಗೂ ತನ್ನವರ ಶತ್ರುಗಳನ್ನು ನಾಶ ಮಾಡುತ್ತಾ ಜನರಿಗಾಗಿ, ತನ್ನವರಿಗಾಗಿ ಬಾಳಿದ.

 

ಕೃಷ್ಣನ ಜೀವನದತ್ತ ಕಣ್ಣು ಹಾಯಿಸಿದರೆ ನಾವು ಕಲಿಯಬೇಕಾದ ಎಷ್ಟೋ ಅಂಶಗಳು ಅಡಕವಾಗಿದೆ. ಮನುಷ್ಯ ಕಷ್ಟ, ಸುಖಗಳೊಡನೆಯೇ ಬಾಳುತ್ತಾನೆ. ಕೆಲವೊಮ್ಮೆ ಜೀವನ ಸುಖದ ಸುಪ್ಪತ್ತಿಗೆಯಾದರೆ, ಮಗದೊಮ್ಮೆ ಕಷ್ಟಗಳ ಸರಮಾಲೆಯೇ ಎದುರಾಗುತ್ತದೆ. ಕೃಷ್ಣನ ಬದುಕು ಇದಕ್ಕೆ ಹೊರತಾಗಿಲ್ಲ, ಮಾವ ಕಂಸನಿಂದಾಗಿ ಕಾರಾಗೃಹದಲ್ಲಿ ಜನಿಸಿದರೂ ಧರ್ಮ ಸಂಸ್ಥಾಪನೆಗಾಗಿ ಹಾಗೂ ದುಷ್ಟ ಸಂಹಾರಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ. ಶಿಷ್ಟರ ರಕ್ಷಣೆಗಾಗಿ ಪಣ ತೊಟ್ಟ. ಪುಟ್ಟ ಮಗು ಬಾಲ ಕೃಷ್ಣ ಹುಟ್ಟಿದ ಘಳಿಗೆಯಲ್ಲಿ ರಭಸದಿಂದ ಭೋರ್ಗರೆಯುತ್ತಾ ಹರಿಯುವ ಯಮುನೆಗೆ ತನ್ನ ಪಾದ ಸ್ಪರ್ಶದಿಂದ ಆರ್ಶೀವಾದ ನೀಡಿದ. ಮಕ್ಕಳಿಲ್ಲದೆ ಪರಿತಪಿಸುತ್ತಿದ್ದ ಮಾತೆ ಯಶೋಧೆಗೆ ಮಗುವಾಗಿ ನೋವನ್ನು ನಿವಾರಿಸಿದ. ತನ್ನ ಬಾಲ ಲೀಲೆಗಳಿಂದ ಬೆರಗುಗೊಳಿಸುತ್ತಾ ಮಣ್ಣು ತಿಂದ ಬಾಯಲಿ ತಾಯಿಗೆ ಬ್ರಹ್ಮಾಂಡ ತೋರಿಸಿದ. ತಂದೆ, ತಾಯಿಯ ಇಷ್ಟಾರ್ಥ ನೇರವೇರಿಸುತ್ತಾ ಮುದ್ದಿನ ಮಗನಾದ. ಮುಂದೆ ಕಂಸ ಕಳುಹಿಸಿದ ಪೂತನಿ, ಬಕ, ತೃಣಾವರ್ತ, ಶಕಟಾ , ಧೇನುಕ ಮುಂತಾದ ರಾಕ್ಷಸರನ್ನು ನಾಶ ಮಾಡುತ್ತಾ ತನ್ನವರನ್ನು ರಕ್ಷಿಸುತ್ತಾನೆ. ಅದಕ್ಕೆ ಕೃಷ್ಣನಿಗೆ ಪುರುಷೊತ್ತಮ ಎಂಬ ಹೆಸರು ಬಂದಿರಬೇಕು. ಒಬ್ಬ ಪುರುಷನು ತನ್ನ ಸಂಸಾರವನ್ನು ಕಾಪಾಡಲು ಏನೆಲ್ಲಾ ಮಾಡುತ್ತಾನೆ ಅದೆಲ್ಲವನ್ನೂ ಶ್ರೀಕೃಷ್ಣ ತನ್ನ ಜೀವನದುದ್ದಕ್ಕೂ ಮಾಡುತ್ತಾನೆ. ಸಾಕು ಮಗನಾಗಿ ನಂದ ಗೋಕುಲದಲ್ಲಿ ಗೋಪಾಲಕರ ರಕ್ಷಣೆ ಮಾಡಲು ತನ್ನ ಕಿರು ಬೆರಳಿನಿಂದ ಗೋವರ್ಧನ ಗಿರಿಯನ್ನು ಎತ್ತಿ ಗೋವರ್ಧನ ಗಿರಿಧಾರಿ ಯಾದ.

ಸಾಮಾನ್ಯವಾಗಿ ಮಕ್ಕಳು ಬಾಲ್ಯದಲ್ಲಿ ಕದ್ದು ತಿನ್ನುವುದು ಸಹಜ. ಕೃಷ್ಣನೂ ತನ್ನ ಬಾಲ್ಯವನ್ನು ಹಾಲು, ಮೊಸರು ಬೆಣ್ಣೆ ಕದ್ದು ತಿನ್ನುತ್ತಾ ಗೋಪಿಕೆಯರನ್ನೂ, ಅಮ್ಮನನ್ನು ಗೋಳಾಡಿಸುತ್ತಿದ್ದ. ಇವನು ಉಪಟ ತಡೆಯದೆ ಒಂದು ದಿನ ಯಶೋದೆ ಒರಳು ಕಲ್ಲಿಗೆ ಕೃಷ್ಣನನ್ನು ಕಟ್ಟಿ ಹೋದರೆ ಅಲ್ಲಿಂದಲೂ, ಆ ಕಲ್ಲನ್ನು ಉರುಳಾಡಿಸುತ್ತಾ ಹೋಗಿ ಶಾಪಗ್ರಸ್ತರಾಗಿ ಮರದ ರೂಪದಲ್ಲಿದ್ದ ನಳಕೂಟ ಹಾಗೂ ಮಣಿಗ್ರೀವರಿಗೆ ಶಾಪ ವಿಮೋಚನೆ ಮಾಡಿದ ಮುಕುಂದ.
ಮುರಳಿಯನ್ನು ಸದಾ ನುಡಿಯುತ್ತಾ ಗೋವುಗಳ, ಗೋಪಾಲಕರ ಪ್ರೀತಿ ಗಳಿಸಿದ ಮುರಾರಿ ಸಾಮಾನ್ಯ ಮನುಜರಂತೆ ರಾಧೆಯ ಮೋಹಕ್ಕೆ ಒಳಗಾಗಿ ರಾಧಾಲೋಲ ನಾದ. ಕರ್ತವ್ಯದ ಕರೆಗೆ ಓಗೊಟ್ಟು, ತಾಯಿ ಯಶೋದೆಯ ಮನಸ್ಸು ನೋಯಿಸಲಾಗದೆ, ರಾಧೆಗೆ ಸತ್ಯದ ಅರಿವು ಮೂಡಿಸಿ ತನ್ನ ಪ್ರೀತಿಯ ಸಂಕೇತವಾಗಿ ಕೊಳಲನ್ನು ನೀಡಿ ತಾನು ಎಂದೆಂದಿಗೂ ನಿನ್ನ ಪ್ರಿಯತಮ. ಸದಾ ನೀನು ನನ್ನ ಮನದಲ್ಲಿ ಜೊತೆಯೇ ಇರುವೆ ಎಂದ ಮುರಳಿ ಮುಂದೆಂದೂ ಕೊಳಲನ್ನು ಹಿಡಿಯಲೇ ಇಲ್ಲ ವೇಣು ಗೋಪಾಲ. ಎಷ್ಟೇ ಪ್ರೀತಿ ಪಾತ್ರರಾದರೂ ತನಗಾಗಿ ಹಗಲಿರುಳು ಕಷ್ಟ ಪಡುವ ತಂದೆ ತಾಯಿಯ ಮನ ನೋಯಿಸಬಾರದು ಎಂಬ ಮಾತು ಪಾಠ ಈ ಮೂಲಕ ಬೋಧಿಸಿದನೋ ಏನೋ……

ದುಷ್ಟನಾದ ಮಧು ಎಂಬ ರಾಕ್ಷಸನನ್ನು ಕೊಂದು ಮಧುಸೂದನ ನೆಂಬ ಹೆಸರು ಗಳಿಸಿದ. ಕಪ್ಪು ಎಂದರೆ ಹೀಗಳೆಯುವವರೇ ಹೆಚ್ಚು. ಗಂಡಾಗಲಿ ಹೆಣ್ಣಾಗಲೀ ಶ್ಯಾಮ ವರ್ಣದಲ್ಲಿ ಇದ್ದರೆ ಹೆಚ್ಚಿನ ಮನುಜರು ಮೂಗೆಳೆಯುವರು. ಆದರೆ ನಮ್ಮ ಈ ಶ್ಯಾಮ ಮೋಹಕ ರೂಪದಿಂದ ಎಲ್ಲಾ ಗೋಪಿಕೆಯರ ಮನಕದ್ದು ಘನ ಶ್ಯಾಮ ನಾದ. ರುಕ್ಮಿಣಿ, ಸತ್ಯಭಾಮೆ, ಜಾಂಬವತಿ, ಕಾಳಿಂದಿ, ಮಿತ್ರಾವಿಂದ, ನಾಗನಜತಿ, ಭದ್ರಾ,ಲಕ್ಷ್ಮಣ ಎಂಟು ಜನ ಪಟ್ಟದ ರಾಣಿಯರು ಜೊತೆಗೆ ನರಕಾಸುರನಿಂದ ರಕ್ಷಿಸಲ್ಪಟ್ಟ 16100 ಹೆಣ್ಣು ಮಕ್ಕಳನ್ನು ಮದುವೆಯಾದ ಮಾಧವ. ಇಂದ್ರೀಯವನ್ನು ಹಿಡಿದಿಡುವ ಬಗ್ಗೆ ಜನರಿಗೆ ಬೋಧಿಸಿದ ಹೃಷಿಕೇಶ. ದುರ್ಯೋಧನ ಆಣತಿಯಂತೆ ದುಶ್ಯಾಸನ ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡಲು ಮುಂದಾದಾಗ ಅಕ್ಷಯಾಂಬರವನ್ನು ದಯಾಪಾಲಿಸಿ , ಹೆಣ್ಣಿನ ಮಾನ ಪ್ರಾಣ ರಕ್ಷಣೆ ಮಾಡಬೇಕು ಎಂಬ ನೀತಿಯನ್ನು ಕಲಿಯುವಂತೆ ಮಾಡಿದ. ದ್ರೌಪದಿಯು ಹಿಂದೆ ತನ್ನ ರಕ್ಷಣೆಗಾಗಿ ಕೈಗೆ ಕಟ್ಟಿದ ಸಾರಿಯ ತುಂಡು ಮುಂದೆ ಅವಳ ಅಣ್ಣನಾಗಿ ರಕ್ಷಣೆ ಮಾಡಿದ ಕೇಶವ. ರಕ್ಷಾಬಂಧನದಂದು ರಾಖಿ ಕಟ್ಟಿ ಅಣ್ಣಾ ಎಂದು ಕರೆಯದವ ಎಂದೂ ಅವಳ ಬಗ್ಗೆ ಬೇರೆ ಯೋಚಿಸಬಾರದು ಎಂಬ ನೀತಿ ಪಾಠ ಕೃಷ್ಣ ದ್ವಾಪರದಲ್ಲಿಯೇ ಜಗತ್ತಿಗೆ ನೀಡಿದ್ದಾನೆ.

ಕುಂತಿಯ ಕರೆಗೆ ಓಗೊಟ್ಟು ಪಾಂಡವರ ರಕ್ಷಣೆಗೆ ನಿಂತ ಜಗನ್ನಾಥ. ಸದಾ ಸಜ್ಜನರ ಪರವಾಗಿ ಕೆಲಸ ಮಾಡಬೇಕು ಎಂಬುದನ್ನು ತಿಳಿಸಿದ ಆಗಿರಬಹುದು ಅಲ್ಲವೇ.. ಬಾಲ್ಯದ ಗೆಳೆಯ ಕುಚೇಲನಿಂದ ಪುಡಿ ಅವಲಕ್ಕಿಯನ್ನು ಮೃಷ್ಟಾನ್ನ ಎಂದು ತಿಂದು ಸುಧಾಮನ ಕಷ್ಟ ನೀಗಿಸಿದಲ್ಲದೆ , ಗೆಳೆತನದ ಮಹತ್ವ ಜಗತ್ತಿಗೆ ಸಾರಿದ. ದಾನಶೂರ ವಿಧುರ ಮನೆಯಲ್ಲಿ ಹಾಲು ಕುಡಿದು ಹಾಲಿನ ಹೊಳೆಯನ್ನೇ ಹರಿಸಿದ. ಬಡವರು, ಶ್ರೀಮಂತರು, ದೊಡ್ಡದು, ಸಣ್ಣದು ಎಂಬ ಭೇದ ಸಲ್ಲದು ಎಂದು ಜಗತ್ತಿಗೆ ಸಾರಿದ ದ್ವಾರಕಾದೀಶ. ಸತ್ತ ಮಗುವಿಗೆ ಜನ್ಮ ನೀಡಿ ಕರುಳು ಕಿತ್ತು ಬರುವಂತೆ ರೋದಿಸುವ ಉತ್ತರೆಯ ಮಗು ಪರೀಕ್ಷೀತನನ್ನು ಬದುಕಿಸಿ ಮಾತೆಯ ದುಃಖ ಶಮನ ಮಾಡಿದ. ಕಷ್ಟ ಎಂದು ಕೂಗಿದವರ ಬಳಿಗೆ ಓಡಿ ಹೋಗಿ ಕಷ್ಟವನ್ನು ನೀಗಿಸುವ ವಿಠಲ. ಚಕ್ರ(ಸುರ್ದಶನ)ವನ್ನು ಕೈಯಲ್ಲಿ ಹಿಡಿದು ಸಾವಿರಾರು ದುಷ್ಟರ ಸಂಹಾರ ಮಾಡಿದ ಚಕ್ರಧಾರಿ. ಯೋಗಿಗಳಿಗೆಲ್ಲಾ ಸ್ವಾಮಿಯಾದ ಯೋಗ್ವೇಶ್ವರ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ಮಾದರಿಯಾದ.

ಜಗತ್ ಪಾಲಕ ಶ್ರೀ ಕೃಷ್ಣನ ಪ್ರತಿಯೊಂದು ಹೆಸರೂ ಬೇರೆ ಬೇರೆ ಅರ್ಥದಿಂದ ಕೂಡಿದೆ. ಅಚ್ಯುತ ಎಂದರೆ ಯಾವುದೇ ದೋಷ ಇಲ್ಲದವನು. ಜೀವನದಲ್ಲಿ ಹುಟ್ಟಿನಿಂದ ಸಾವಿನ ವರೆಗೂ ಶಿಷ್ಟರಿಗೆ ರಕ್ಷಕನಾಗಿ, ದುಷ್ಟರ ನಾಶ ಮಾಡುತ್ತಾ ಬದುಕಿದ. ಅಹಂಕಾರದಿಂದ ಮೆರೆದವರ ಅಹಂಕಾರವನ್ನು ಮುರಿದು ಧರ್ಮ ಸಂಸ್ಥಾಪಕನಾದ. ತನ್ನ ವಂಶದವರಾದ ಯಾದವರು ಅಹಂಕಾರದಿಂದ ಸಪ್ತ ಋಷಿಗಳಿಗೆ ಸಾಂಬಾ (ಜಾಂಬವತಿ ಕೃಷ್ಣನ ಮಗ) ನ ಮೂಲಕ ಅವಮಾನ ಮಾಡಿದಾಗ ಶಾಪ ಗ್ರಸ್ಥರಾಗಿ ಒನಕೆಯಿಂದ ನಾಶ ಹೊಂದುತ್ತಾರೆ. ಅದೇ ಒನಕೆಯ ಉಳಿದ ತುಂಡು ನದಿಗೆ ಎಸೆಯಲ್ಪಟ್ಟದ್ದು ಮುಂದೆ ಬೇಡನ ಕೈಯಲ್ಲಿ ಬಾಣವಾಗಿ ಕೃಷ್ಣನ ಕಾಲಿಗೆ ಚುಚ್ಚಿ ಕೃಷ್ಣನ ಅವಸಾನವಾಗುತ್ತದೆ. ಎಂತವನನ್ನೂ (ದೇವ ಮಾನವ ನನ್ನೂ) ಮಾಡಿದ ಪಾಪ ಬೆನ್ನು ಬಿಡದೆ ನಾಶ ಮಾಡುತ್ತದೆ ಎಂಬುದು ಇದರಿಂದ ಜಗತ್ತಿಗೆ ಸಾರಿದ. ಅಷ್ಟೇ ಅಲ್ಲದೆ ಗಾಂಧಾರಿ ತನ್ನ ಕುರುವಂಶದ ನಾಶದ ದುಃಖದಿಂದ ಕೃಷ್ಣನಿಗೆ ನಿನ್ನ ವಂಶವೂ ಇದೇ ತರಹ ನಾಶವಾಗಲಿ ಎಂಬ ಶಾಪವೂ ಇಲ್ಲಿ ಫಲಿಸಿತು ಎಂಬುದಂತೂ ಸತ್ಯ. ಜೀವನದಲ್ಲಿ ಹಿರಿಯರು, ಗುರುಗಳಿಂದ ಶಾಪ ಪಡೆಯ ಬಾರದು ಎಂಬ ನೀತಿಯನ್ನೂ ಕೃಷ್ಣನ ಬದುಕಿನಿಂದ ನಾವೂ ಕಲಿಯಬಹುದು.

ಶ್ರೀಕೃಷ್ಣ ರಾಜನಾಗಿ ಮೆರೆದರೂ ಜೀವನದುದ್ದಕ್ಕೂ ಏರುಪೇರುಗಳ ಅನುಭವಿಸಿ ಬಾಳಿದ. ಬಾಲ್ಯದ ಚೇಷ್ಟೆ, ತುಂಟಾಟಗಳು ಒಂದೆಡೆಯಾದರೆ, ಮುಂದೆ ಕಂಸನ ಅವಸಾನದ ಬಳಿಕ ರಾಜನಾಗಿ ಕರ್ತವ್ಯ ನಿರ್ವಹಿಸಿ, ಉತ್ತಮ ರಾಜನು ಹೇಗಿರಬೇಕೆಂಬ ಪಾಠ ಮಾಡಿದ. ಗೆಳೆಯನಾಗಿ, ಸಖನಾಗಿ ಪಾಂಡವರ ರಕ್ಷಣೆಗೆ ನಿಂತು ಜಗತ್ತಿಗೆ ಅರ್ಜುನನ ಮೂಲಕ ಭಗವದ್ಗೀತೆ ಬೋಧಿಸಿದ. ಉತ್ತಮ ಜೀವನದ ಸೂತ್ರಗಳೆಲ್ಲಾ ಅದರಲ್ಲಿ ಅಡಕವಾಗಿ, ಇಂದು ಅದು ಜನರಿಗೆ ದಾರಿದೀಪವಾಗಿದೆ ಎಂಬುದು ಸುಳ್ಳಲ್ಲ. ತಾನೇ ತನ್ನಿಂದಲೇ ಎಲ್ಲಾ ಎಂಬ ಅಹಂಕಾರದಿಂದ ಮೆರೆದ ಸುರ್ದಶನ, ಭೀಮ ,ಅರ್ಜುನ ಮುಂತಾದವರಿಗೆ ಬದುಕಿನ ಪಾಠ ಕಲಿಸಿದ. ಮನುಜನು ನಿಮಿತ್ತ ಮಾತ್ರ. ಎಲ್ಲವೂ ದೇವರ ಇಚ್ಛೆ. ಅವನು ಇಚ್ಛೆ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲುಗಾಡದು ಎಂಬ ಸತ್ಯವನ್ನು ತಿಳಿಸಿದ ಪರಬ್ರಹ್ಮ ಪಾಂಡುರಂಗ ನಿಗೆ ವಂದಿಸುತ್ತೇನೆ. ಜಗತ್ತಿನ ಸೂತ್ರಧಾರಿಯಾದ ಜಗನ್ನಾಥ ಎಲ್ಲರಿಗೂ ಸಂನ್ಮಂಗಳವನ್ನು ನೀಡಲಿ.🙏🏽

ನನ್ನೆಲ್ಲಾ ಓದುಗರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಕಾರ್ಯಗಳು 🙏🏽

 

 

 

 

-ಸುಮಾ ಭಂಡಾರಿ ಸುರತ್ಕಲ್

1 thought on “ಶ್ರೀ ಕೃಷ್ಣ ಕಲಿಸಿದ ಬದುಕಿನ ಪಾಠಗಳು-ಸುಮಾ ಭಂಡಾರಿ ಸುರತ್ಕಲ್

  1. ಸುಮಾ ಸುರತ್ಕಲ್ ಅವರ ಲೇಖನ ತುಂಬಾ ಚೆನ್ನಾಗಿದೆ

Leave a Reply

Your email address will not be published. Required fields are marked *