ಭಂಡಾರಿ ಸಮಾಜದ ಸಾಹಿತಿ, ಶಿಕ್ಷಕಿ, ಚಿತ್ರ ಕಲಾವಿದೆಯಾಗಿರುವ ಶ್ರೀಮತಿ ಸ್ಮಿತಾ ಅಶೋಕ್ ಭಂಡಾರಿ ಪರ್ಕಳ ಇವರು ರಾಜ್ಯ ಮಟ್ಟದ “ಹೆಮ್ಮೆಯ ಕನ್ನಡತಿ” ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ತಾರೀಕು 18 ಸೆಪ್ಟೆಂಬರ್ ನ ಭಾನುವಾರ ಸಮಾಚಾರ ಸೇವಾ ಸಂಘ ಗೋಕಾಕ ಬೆಳಗಾವಿ ಇವರು ಬೆಳಗಾವಿ ಜಿಲ್ಲೆಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಿದ್ದಗುರುವಂದನಾ ಸಮಾರಂಭದಲ್ಲಿ ಶೈಕ್ಷಣಿಕ ಮತ್ತು ಸಾಹಿತ್ಯ ಸೇವೆಗಾಗಿ ನಡೆದ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಡುಪಿ ಜಿಲ್ಲೆಯಿಂದ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಸೇವೆಗಾಗಿ ಶ್ರೀಮತಿ ಸ್ಮಿತಾ ಅಶೋಕ್ ಭಂಡಾರಿ ಪರ್ಕಳ ರವರಿಗೆ “ಹೆಮ್ಮೆಯ ಕನ್ನಡತಿ” ರಾಜ್ಯಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಸ್ಮಿತಾ ಅಶೋಕ್ ಭಂಡಾರಿ ಕಾರ್ಕಳ ತಾಲೂಕಿನ ವರಂಗದವರು. ಪ್ರಾಥಮಿಕ ಶಿಕ್ಷಣವನ್ನು ವರಂಗ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ ಹೈಸ್ಕೂಲ್ ಮತ್ತು ಕಾಲೇಜ್ ವಿದ್ಯಾಭ್ಯಾಸವನ್ನು ಪದವಿಪೂರ್ವ ಕಾಲೇಜ್ ಮುನಿಯಾಲ್ ನಲ್ಲಿ ಪಡೆದು, ಕಾರ್ಕಳದ ಕುಕ್ಕುಂದೂರು ಕಸ್ತೂರ್ಬ ಶಿಕ್ಷಕರ ತರಬೇತಿ ವಿದ್ಯಾಲಯದಲ್ಲಿ ಡಿ. ಎಡ್. ಪದವಿ ಮುಗಿಸಿ, ಕಾರ್ಕಳದಲ್ಲಿ ಒಂದು ವರ್ಷಗಳ ಕಾಲ ವಿಶೇಷ ಚೇತನ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಪತ್ತೊಂಜಿ ಕಟ್ಟೆ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಪೆರ್ವಾಜೆ ಮಹಾಂಕಾಳಿ ಯಕ್ಷಗಾನ ಕಲಾ ಮಂಡಳಿ ಇಲ್ಲಿ ತರಬೇತಿಯನ್ನು ಪಡೆದು ಯಕ್ಷಗಾನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಉಡುಪಿ ಎಂ. ಜಿ. ಎಂ ಕಾಲೇಜಿನಲ್ಲಿ ಮೈಸೂರು ಮುಕ್ತ ವಿಶ್ವ ವಿದ್ಯಾನಿಲಯದ ಮೂಲಕ ಬಿ. ಎ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಇವರು ತಮ್ಮ ಹೈಸ್ಕೂಲ್, ಕಾಲೇಜಿನ ದಿನಗಳಲ್ಲಿಯೇ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದು ಆಗಲೇ ಕತೆ ಕವನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ. ಹಲವಾರು ಬರಹಗಾರರ ಬಳಗದ ಸಾಹಿತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಹಿತ್ಯ ಪ್ರಕಾರಗಳನ್ನೂ ರಚಿಸುವ ಮೂಲಕ ಬರಹಗಾರರು ಎನಿಸಿಕೊಂಡಿದ್ದಾರೆ. ಇವರು ಕೇವಲ ಕತೆ ಕವನ ಮಾತ್ರವಲ್ಲ ವಿಮರ್ಶೆ, ಲೇಖನ, ಚಿತ್ರಕಲೆ, ಕ್ಲೇ ಮಾಡೆಲ್, ಕ್ರಾಫ್ಟ್, ಫೋಟೋಗ್ರಾಫಿ, ಪುಸ್ತಕ ಓದುವಿಕೆ, ನೃತ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೂಡ ಆಸಕ್ತಿಯನ್ನು ವಹಿಸಿ ಇದನ್ನೇ ಹವ್ಯಾಸವನ್ನಾಗಿಸಿ ರೂಢಿಸಿಕೊಂಡಿದ್ದಾರೆ. ಪ್ರಸ್ತುತ ಪ್ರಾಥಮಿಕ ಶಾಲೆ ಪರ್ಕಳದಲ್ಲಿ ಹನ್ನೊಂದು ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸ್ಮಿತಾ ಭಂಡಾರಿ ಪರ್ಕಳ ದ ಶ್ರೀ ಅಶೋಕ್ ಭಂಡಾರಿಯವರ ಪತ್ನಿ ಆಗಿದ್ದು ದಂಪತಿಯ ಒಬ್ಬನೇ ಪುತ್ರ
ಆರ್ಯ ಪ್ರಸಾದ್ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.
ಸ್ಮಿತಾ ಭಂಡಾರಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಿ ಇನ್ನೂ ಹೆಚ್ಚಿನ ಪ್ರಶಂಸೆ, ಪ್ರಶಸ್ತಿಗಳು ದೊರೆಯುವಂತಾಗಲಿ ಸಮಾಜಕ್ಕೆ , ಕುಟುಂಬಕ್ಕೆ ಕೀರ್ತಿ ತರಲಿ ಎಂದು ಭಂಡಾರಿ ವಾರ್ತೆ ಅಭಿನಂದಿಸಿ ಶುಭ ಹಾರೈಸುತ್ತದೆ.
Congratulations 💐💐💐