ಮಂಗಳೂರು ಕಮಿಷನರೇಟ್ 2010 ರಲ್ಲಿ ಪ್ರಾರಂಭವಾಗಿದ್ದು ಕಳೆದ 11 ವರ್ಷಗಳಲ್ಲಿ ದಕ್ಷಿಣ ಕನ್ನಡದ ಅಭ್ಯರ್ಥಿಗಳು ಪೊಲೀಸ್ ಹುದ್ದೆಗಳಿಗೆ ಆಯ್ಕೆಯಾಗಿದ್ದು ಶೇಕಡಾ 10 ಕ್ಕಿಂತಲೂ ಕಡಿಮೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ 30 ದಿನಗಳ ತರಬೇತಿ ಕಾರ್ಯಾಗಾರವೊಂದನ್ನು ಅಭ್ಯರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ .
ಈ ತರಬೇತಿ ಕಾರ್ಯಾಗಾರದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಅಥವಾ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿರುವ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ.ಕಡ್ಡಾಯವಾಗಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರಬೇಕು ಮತ್ತು ಮುಂದಿನ ಹಂತದ ಪರೀಕ್ಷೆಯ ನಿರೀಕ್ಷೆಯಲ್ಲಿರಬೇಕು.
ಈ ತರಬೇತಿ ಕಾರ್ಯಾಗಾರದಲ್ಲಿ 100 ಅಭ್ಯರ್ಥಿಗಳಿಗೆ ಮಿತಿಯನ್ನು ಹಾಕಿಕೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಮೊದಲ ಆದ್ಯತೆ ನೀಡಲಾಗಿದೆ. ಒಂದು ವೇಳೆ ದಕ್ಷಿಣ ಕನ್ನಡ ಜಿಲ್ಲೆಯಿಂದ ನಿರೀಕ್ಷಿತ ಅಭ್ಯರ್ಥಿಗಳು ಹಾಜರಾಗದೆ ಇದ್ದಲ್ಲಿ ಉಡುಪಿ , ಚಿಕ್ಕ ಮಗಳೂರು ಹಾಗೂ ಉತ್ತರ ಕನ್ನಡದ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.
30 ದಿನಗಳ ಈ ಕಾರ್ಯಾಗಾರದಲ್ಲಿ 100 ಅಭ್ಯರ್ಥಿಗಳಿಗೆ ಅವಕಾಶವಿದ್ದು ತರಬೇತಿ ,ಊಟ ,ವಸತಿ ಉಚಿತವಾಗಿರುತ್ತದೆ. ತರಗತಿ ಮತ್ತು ಉಳಿದುಕೊಳ್ಳಲು ಹಾಸ್ಟೆಲ್ ವ್ಯವಸ್ಥೆಯನ್ನು ಸಂತ ಅಲೋಸಿಯಸ್ ಕಾಲೇಜು ಮೂಲಕ ಹಾಗೂ ಊಟದ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಭರಿಸಲಿದೆ. ಒಂದು ತಿಂಗಳು ತರಬೇತಿಯ ಸ್ಥಳದಲ್ಲೇ ಉಳಿದುಕೊಳ್ಳಬೇಕು. ತರಬೇತಿ ಅಥವಾ ತರಗತಿ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ನಡೆಯಲಿದೆ.ಅವಶ್ಯಕ ಹೆಚ್ಚುವರಿ ಸಾಮಗ್ರಿಗಳು ಬೇಕಿದ್ದಲ್ಲಿ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಿಂದ ಭರಿಸಬೇಕು .
ಈ ತರಬೇತಿಗೆ ನೋಂದಣಿ ಕಾರ್ಯ ಆಗಸ್ಟ್ 9 ರಿಂದ ಮಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರಾರಂಭಗೊಳ್ಳಲಿದೆ. ಅಭ್ಯರ್ಥಿಗಳು ತಮ್ಮ ವಿಳಾಸ ಪ್ರಮಾಣ ಮಾತ್ರ ಮತ್ತು ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವುದರ ಪ್ರಮಾಣ ಪತ್ರವನ್ನು ನೋಂದಾವಣೆಯ ಸಮಯದಲ್ಲಿ ಸಲ್ಲಿಸಬೇಕು.
ಅವಶ್ಯಕತೆ ಇದ್ದಲ್ಲಿ ಪೂರ್ವಭಾವಿ ಪರೀಕ್ಷೆಯನ್ನು ಏರ್ಪಡಿಸಲಾಗುವುದು .
ದಕ್ಷಿಣ ಕನ್ನಡ ಜಿಲ್ಲೆಯಿಂದ ಹೆಚ್ಚು ಹೆಚ್ಚು ಜನ ಪೊಲೀಸ್ ಇಲಾಖೆಗೆ ಆಯ್ಕೆಯಾಗಿ ಕೆಲಸ ಮಾಡಬೇಕು ಎಂಬ ಇರಾದೆ ಇಟ್ಟುಕೊಂಡು ಇತ್ತೀಚಿನ ತಂಡಗಳಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡಿರುವ ನುರಿತ ಅಧಿಕಾರಿಗಳಿಂದ ತರಬೇತಿ ಕೊಡಲಾಗುವುದು.
ಈ ಸದವಕಾಶವನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಂಡು ಮುಂದಿನ ದಿನಗಳಲ್ಲಿ ಜಿಲ್ಲೆಯಿಂದ ಅತೀ ಹೆಚ್ಚಿನ ಜನರು ಪೊಲೀಸ್ ಇಲಾಖೆಯಲ್ಲಿ ಸೇವೆ ನೀಡುವಂತಾಗಲಿ ಎಂದು ಮಂಗಳೂರು ಸಿಟಿ ಪೊಲೀಸ್ ಆಯುಕ್ತರಾಗಿರುವ ಎನ್.ಶಶಿಕುಮಾರ್ ತಿಳಿಸಿದ್ದಾರೆ .
ಭಂಡಾರಿ ಸಮಾಜದ ಹೆಚ್ಚಿನ ಜನರು ಈ ತರಬೇತಿಯಲ್ಲಿ ಭಾಗವಹಿಸುವ ಮೂಲಕ ಮುಂದಿನ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡು ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವಂತಾಗಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಆಶಯ.
-ಭಂಡಾರಿ ವಾರ್ತೆ