January 18, 2025
1

ಆರೋಗ್ಯದ ಸರದಾರ ಪಾಲಕ್ ಸೊಪ್ಪಿನ ಚಪಾತಿ

ನಿತ್ಯವೂ ತಿನ್ನುವ ಚಪಾತಿ, ರೊಟ್ಟಿಗಳೇ ಇಂದೂ ಇವೆ ಎಂದಾಗ ಮನೆಯವರ ಉತ್ಸಾಹ ಕೊಂಚ ಕಡಿಮೆಯಾಗುವುದನ್ನು ನೀವು ಗಮನಿಸಿರಬಹುದು. ಆದರೆ ಇದಕ್ಕೂ ಭಿನ್ನವಾದ ಅಡುಗೆ ಮಾಡೋಣವೆಂದರೆ ಹಿಂದಿನ ಹೊಸರುಚಿಗಳ ಪ್ರಯೋಗದಲ್ಲಿ ಆದ ಎಡವಟ್ಟು ನೆನಪಿಗೆ ಬಂದು ನಿರುತ್ಸಾಹ ಮೂಡಬಹುದು. ಅಥವಾ ಹೆಚ್ಚಿನ ಸಮಯ ಕಬಳಿಸುವ ಕಾರಣ ಮನಸ್ಸು ಒಪ್ಪದೇ ಇರಬಹುದು ಅಥವಾ ಅನಾರೋಗ್ಯಕರ ಎಂದಿರಬಹುದು. ಇವೆಲ್ಲವನ್ನೂ ಮೀರಿ, ಕಡಿಮೆ ಸಮಯದಲ್ಲಿ, ರುಚಿಯಾದ, ಆರೋಗ್ಯಕರವಾದ, ಮತ್ತು ಮನೆಯವರೆಲ್ಲರೂ ಒಪ್ಪುವಂತಹ ಪಾಲಕ್ ಚಪಾತಿಯನ್ನೇಕೆ ಮಾಡಬಾರದು?

ಮಕ್ಕಳಿಂದ ಹಿರಿಯರವರೆಗೂ ಮೆಚ್ಚುವ ಈ ಚಪಾತಿ ತರಕಾರಿಯನ್ನು ಮೆಚ್ಚದ ಮಕ್ಕಳಿಗೂ ಇಷ್ಟವಾಗುತ್ತದೆ. ಇದರೊಂದಿಗೆ ಬಟಾಣಿಯ ಪಲ್ಯ ಅಥವಾ ಸಾಗು ಅತ್ಯಂತ ಸೂಕ್ತವಾದ ಜೋಡಿಯಾಗಿದೆ. ಇದನ್ನು ತಯಾರಿಸಲು ಸಮಯವಿಲ್ಲದಿದ್ದರೆ ಸರಳವಾಗಿ ಮೊಸರಿನೊಂದಿಗೂ ತಿನ್ನಬಹುದು. ಜಾಮ್, ಜೋನಿಬೆಲ್ಲ, ಖರ್ಜೂರದ ನೀರು ಮೊದಲಾದವುಗಳೊಂದಿಗೂ ಸವಿಯಬಹುದು. ಬನ್ನಿ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ: ಮೃದುವಾದ, ಪೂರಿಯಂತೆ ಉಬ್ಬಿರುವ ಚಪಾತಿ

*ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು

*ಸಿದ್ಧತಾ ಸಮಯ: ಮೂವತ್ತು ನಿಮಿಷಗಳು

*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

*ಪಾಲಕ್ ಸೊಪ್ಪು : ಇನ್ನೂರು ಗ್ರಾಂ

*ಗೋಧಿ ಹಿಟ್ಟು: ಎರಡು ಕಪ್ *

ಬೆಳ್ಳುಳ್ಳಿ: ಮೂರರಿಂದ ನಾಲ್ಕು ಎಸಳು

*ಹಸಿರು ಮೆಣಸು: ನಾಲ್ಕರಿಂದ ಐದು

*ಉಪ್ಪು: ರುಚಿಗನುಸಾರ ಚಪಾತಿ ಅಂದ್ರೆ ಕೇವಲ ಗೋಧಿಹಿಟ್ಟು ಕಲಸಿದರೆ ಸಾಲದು!

ವಿಧಾನ: 1) ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಮರಳು ನಿವಾರಿಸಿ. ಸಾಮಾನ್ಯವಾಗಿ ಪಾಲಕ್ ಅನ್ನು ಮರಳಿನಲ್ಲಿ ಬೆಳೆಯುವ ಕಾರಣ ಇದರ ಎಲೆಗಳಲ್ಲಿ ಸೂಕ್ಷ್ಮವಾದ ಮರಳಿನ ಕಣಗಳು ಹುದುಗಿರುತ್ತವೆ. ಆದ್ದರಿಂದ ಪ್ರತಿ ಎಲೆಯನ್ನೂ ಹರಿಯುವ ನೀರಿನಡಿಯಲ್ಲಿ ಬಿಡಿಬಿಡಿಯಾಗಿ ತೊಳೆದು ದಂಟುಗಳನ್ನು ನಿವಾರಿಸಿ ಕುಕ್ಕರಿನಲ್ಲಿ ಎಲೆಗಳು ಮುಳುಗುವಷ್ಟು ಮಾತ್ರ ನೀರು ಹಾಕಿ ಕೊಂಚ ಉಪ್ಪಿನೊಂದಿಗೆ ಎರಡರಿಂದ ಮೂರು ಸೀಟಿ ಬರುವವರೆಗೆ ಬೇಯಿಸಿ.

2) ಬಳಿಕ ನೀರು ಬಸಿದು ಎಲೆಗಳನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿ ಇದಕ್ಕೆ ಕೊಂಚ ತಣ್ಣೀರು ಸುರಿಯಿರಿ.

3) ಕೊಂಚ ಹೊತ್ತಿನ ಬಳಿಕ ಈ ನೀರನ್ನೂ ಬಸಿದು ತೆಗೆಯಿರಿ. ಇದರಿಂದ ಹಿಟ್ಟು ನಾದಲು ಎಲೆಗಳು ತಣ್ಣಗಾಗಿ ಸುಲಭವಾಗುತ್ತದೆ.

4) ಈ ಎಲೆಗಳನ್ನು ಮಿಕ್ಸಿಯ ದೊಡ್ಡ ಜಾರಿಗೆ ಹಾಕಿ ಬೆಳ್ಳುಳ್ಳಿ, ಹಸಿಮೆಣಸಿನ ಸಹಿತ ನುಣ್ಣಗೆ ರುಬ್ಬಿ. ನೀರು ಸೇರಿಸಬೇಡಿ.

5) ಇನ್ನೊಂದು ಪಾತ್ರೆಯಲ್ಲಿ ಗೋಧಿಹಿಟ್ಟು ಮತ್ತು ಕೊಂಚ ಉಪ್ಪು ಸೇರಿಸಿ

6) ಈ ಪಾತ್ರೆಗೆ ಕಡೆದ ಪಾಲಕ್ ಎಲೆಗಳನ್ನು ಸೇರಿಸಿ ಚಪಾತಿಯಂತೆಯೇ ನಾದಿ. ಇದು ಸಾಮಾನ್ಯವಾದ ಚಪಾತಿ ಹಿಟ್ಟಿನ ಹದಕ್ಕೆ ಬರಬೇಕು.

7) ಬಳಿಕ ಉಂಡೆಗಳಾಗಿಸಿ ಲಟ್ಟಿಸಿ ಚಪಾತಿಯಂತೆಯೇ ಎರಡೂ ಬದಿಗಳನ್ನು ಕಾವಲಿಯ ಮೇಲೆ ಬೇಯಿಸಿ.

8) ಬಿಸಿಬಿಸಿಯಾಗಿದ್ದಂತೆಯೇ ಸವಿಯಲು ನೀಡಿ. ಈ ಚಪಾತಿ ಒಣದಾಗಿದ್ದಾಗಲೂ ರುಚಿಯಾಗಿದ್ದರೂ ಬಿಸಿಯಾಗಿರುವಾಗಲೇ ಚಿಕ್ಕ ಚಮದಷ್ಟು ಬೆಣ್ಣೆ ಅಥವಾ ತುಪ್ಪ ಸವರಿದರೆ ಇನ್ನಷ್ಟು ರುಚಿ ಬರುತ್ತದೆ. ಈ ಚಪಾತಿ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ:ಬಿ ಎಸ್

Leave a Reply

Your email address will not be published. Required fields are marked *