ಅದೊಂದು ಬೆಟ್ಟದ ತಪ್ಪಲಿನ ಸುಂದರ ಹಳ್ಳಿ. ಸುತ್ತಲೂ ಹಚ್ಚ ಹಸುರಾಗಿ ಬೆಳೆದ ಕಾಡು. ಪ್ರಕೃತಿಯ ಮಡಿಲಲ್ಲಿ ತಣ್ಣಗೆ ಸಂತೋಷವಾಗಿತ್ತು. ಕೃಷಿ ಅಲ್ಲಿನ ಜನರ ಮುಖ್ಯ ಕಸುಬಾಗಿತ್ತು. ಜನರು ಕೃಷಿ ಕಾರ್ಯದಲ್ಲೇ ಸಂತೋಷವಾಗಿದ್ದರು, ಆದರೆ ಸಣ್ಣ ಹಳ್ಳಿಯಾಗಿದ್ದರಿಂದ ಎಲ್ಲರಿಗೂ ಅಲ್ಲಿ ಕೆಲಸವಿಲ್ಲದಿದರಿಂದ ಪಟ್ಟಣದೆಡೆಗೆ ಉದ್ಯೋಗ ಅರಸಿ ಹೋಗುತಿದ್ದರು. ಹಳ್ಳಿಯಿಂದ ಪಟ್ಟಣಕ್ಕೆ ಹೋಗಲು ಗದ್ದೆ , ತೊರೆ, ಕಾಡನ್ನು ದಾಟಿ ಹೋಗಬೇಕಾಗಿತ್ತು. ಹಳ್ಳಿಯಿಂದ ಐದಾರು ಮೈಲಿಯಷ್ಟು ದೂರದಲ್ಲಿನ ಮುಖ್ಯ ರಸ್ತೆಯ ಬಳಿ ಹೋಗಿ ನಿಂತರೆ ಯಾರದರೂ ಬಂದು ಕೆಲಸದಾಳುಗಳಾಗಿ ಕರೆದುಕೊಂಡು ಹೋಗುತಿದ್ದರು . ಅಂತವರಲ್ಲಿ ಬಾಲಣ್ಣನು ಒಬ್ಬ , ಸಣ್ಣ ಮನೆಯೊಂದರಲ್ಲಿ ತನ್ನ ಹೆಂಡತಿ ಮಗಳೊಂದಿಗೆ ಆ ಹಳ್ಳಿಯಲ್ಲೇ ಗುಡಿಸಲು ಮನೆಯಲ್ಲಿ ಇದ್ದವನು. ಅವನ ಮಗಳೇ ಸ್ಪೂರ್ತಿ, ಬಹಳ ಚೂಟಿ ಬುದ್ದಿವಂತ ಹುಡುಗಿ. ಐದನೆ ತರಗತಿಯಲ್ಲಿ ಓದುತಿದ್ದರೂ ದೊಡ್ಡವರಂತೆಯೇ ಆಲೋಚನೆ. ಎಂದಿನಂತೆ ಬಾಲಣ್ಣ ಪಟ್ಟಣಕ್ಕೆ ಹೋಗಿದ್ದ , ಸ್ಪೂರ್ತಿ ಶಾಲೆಯಲ್ಲಿದ್ದಳು. ಇತ್ತ ಮನೆಯಲ್ಲಿ ಸ್ಪೂರ್ತಿಯ ಅಮ್ಮ ಮದ್ಯಾಹ್ನದ ಊಟ ಮಾಡಿ ಮಲಗಿದ್ದಾಗ ಒಂದು ದುರಂತವೇ ನಡೆಯಿತು. ಗುಡಿಸಲಲ್ಲಿ ಒಲೆಯ ಕಿಡಿಯೊಂದು ಗುಡಿಸಲಿಗೆ ಜ್ವಾಲೆ ಹತ್ತಿಸಿತ್ತು, ಊರವರೆಲ್ಲ ಎಷ್ಟೇ ಪ್ರಯತ್ನಿಸಿದರೂ ಜ್ವಾಲೆ ನಂದಿಸುವಷ್ಟರಲ್ಲಿ ಸ್ಪೂರ್ತಿಯ ಅಮ್ಮ ಅರೆಜೀವವಾಗಿದ್ದರು. ಆಸ್ಪತ್ರೆಗೆ ಸಾಗಿಸಲು ಗದ್ದೆಗಳನ್ನು ದಾಟಿ ರಸ್ತೆಗೆ ತಲುಪುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು. ಸ್ಪೂರ್ತಿಗೆ ಅಮ್ಮ ತೀರಿ ಹೋಗಿದ್ದು ತಲೆಮೇಲೆ ಆಕಾಶವೇ ಕಳಚಿ ಬಿದ್ದಂತಾಯಿತು.
ಈ ಮದ್ಯೆ ಸ್ಪೂರ್ತಿಯ ಕಿವಿಗೊಂದು ಸುದ್ದಿ ಬಿತ್ತು , ಊರವರು ಹೇಳುವ ಪ್ರಕಾರ ಅನೇಕ ಬಾರಿ ಊರಿಗೊಂದು ರಸ್ತೆ ಮಾಡಿಕೊಡಿಯೆಂದು ಜನಪ್ರತಿನಿಧಿಗಳಿಗೆ ಅಂಗಲಾಚಿದರೂ ಯಾರೂ ಕಿವಿಗೊಟ್ಟಿರಲಿಲ್ಲ. ರಸ್ತೆಯೊಂದಿದ್ದರೆ ನಮ್ಮೂರಿನ ಅನೇಕ ಜೀವಗಳು ಉಳಿಯುತಿದ್ದವು ಎನ್ನುವ ಮಾತು ಹುಡುಗಿಯನ್ನು ಯೋಚನೆಗೆಳೆಯಿತು. ತನ್ನ ಮುದ್ದಾದ ಅಕ್ಷರಗಳಿಂದ ಅಧ್ಯಾಪಕರ ಸಹಾಯದಿಂದ ಜನಪ್ರತಿನಿಧಿಗಳಿಗೊಂದು ಪತ್ರ ಬರೆಯುತ್ತಾಳೆ.ಪತ್ರಕ್ಕೆ ಉತ್ತರ ಸಿಗದಿದ್ದಾಗ, ಊರವರೊಂದಿಗೆ ರಸ್ತೆಗಾಗಿ ಹೋರಾಡುವ ಬಗ್ಗೆ ಹೇಳಿಕೊಳ್ಳುತ್ತಾಳೆ,ಪುಟ್ಟ ಹುಡುಗಿಯ ಮಾತಿಗೆ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದಾಗ ಜನಪ್ರತಿನಿಧಿಯ ಮನೆಮುಂದೆ ಒಬ್ಬಂಟಿಯಾಗಿ ತಂದೆಯೊಂದಿಗೆ ಪ್ರತಿಭಟನೆಗೆ ಕೂರುತ್ತಾಳೆ. ಎರಡು ದಿನ ಅತ್ತ ಯಾರ ದೃಷ್ಟಿಯೂ ಬಿದ್ದಿರುವುದೇ ಇಲ್ಲ. ಇತ್ತ ಊರಿನಲ್ಲಿ ಈ ಸುದ್ದಿ ಹರಡಿ, ಹುಡುಗಿಯ ಹಠವಾದಕ್ಕೆ ಹೈರಾಣಾಗುತ್ತಾರೆ. ಊರವರೆಲ್ಲರೂ ಈ ಹೋರಾಟಕ್ಕೆ ಕೈ ಜೋಡಿಸುವ ಯೋಚನೆಯಿಂದ ಒಂದಾಗುತ್ತಾರೆ, ಸುದ್ದಿಮಾಧ್ಯಮಗಳೂ ವಿಷಯವನ್ನು ಬಿತ್ತರಿಸಿ ಅನೇಕ ಊರುಗಳಿಂದ ಬೆಂಬಲ ಬರತೊಡಗಿತು. ಇಡೀ ಸರಕಾರವನ್ನೇ ಪುಟ್ಟ ಹುಡುಗಿ ನಡುಗಿಸಿ ಬಿಟ್ಟಿರುತ್ತಾಳೆ. ಇದು ಜನಪ್ರತಿನಿದಿಯ ಪಕ್ಷದ ಹೈಕಮಾಂಡ್ ತಲುಪಿ ಕೊನೆಗೆ ಸರಕಾರ ಕಡೆಯಿಂದ ರಸ್ತೆ ನಿರ್ಮಾಣಕ್ಕೆ ಹಸಿರು ನಿಶಾನೆಯೊಂದಿಗೆ ಜನ ಪ್ರತಿನಿಧಿಯೊಬ್ಬ ಸ್ಥಳಕ್ಕೆ ಬಂದು ತನ್ನನ್ನು ಕ್ಷಮಿಸಿವಂತೆ ಕೇಳಿಕೊಳ್ಳುತ್ತಾ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿಕೊಳ್ಳುತ್ತಾನೆ. ಕೆಲವೇ ದಿನಗಳಲ್ಲಿ ರಸ್ತೆ ನಿರ್ಮಾಣಗೊಳ್ಳುತ್ತದೆ, ಗ್ರಾಮಸ್ಥರ ಅಪೇಕ್ಷೆಯಂತೆ ರಸ್ತೆಗೆ ಸ್ಫೂರ್ತಿಪಥಾ (ಸ್ಪೂರ್ತಿ ರಸ್ತೆ ) ಎಂದು ನಾಮಕರಣ ಮಾಡಲಾಯಿತು.
ರಂಜಿತ್ ಸಸಿಹಿತ್ಲು
ರಂಜಿತ್ ಸಸಿಹಿತ್ಲುರವರು ರವೀಂದ್ರ ಮತ್ತು ಶಕುಂತಳಾ ದಂಪತಿಯ ಮಗ. ಸಸಿಹಿತ್ಲು ನಿವಾಸಿಯಾಗಿದ್ದು ಬಿಬಿಎಂ ಪದವೀಧರ ಪ್ರಸ್ತುತ ಕೆನರಾ ಬ್ಯಾಂಕ್ ಅಧಿಕಾರಿಯಾಗಿ ವೃತ್ತ ಕಚೇರಿ ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉತ್ತಮವಾದ ಸಂದೇಶ ಉಳ್ಳ ಕಥೆ … ಅಭಿನಂದನೆಗಳು.💐