January 18, 2025
balligaavi3

ಶಿವಮೊಗ್ಗ ಜಿಲ್ಲೆಯ, ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಗ್ರಾಮವೇ ಪುರಾಣಪ್ರಸಿದ್ದ,ಐತಿಹಾಸಿಕ ಹಿನ್ನೆಲೆಯುಳ್ಳ ಬಳ್ಳಿಗಾವಿ. ಈ ಊರಿನ ಮಧ್ಯದಲ್ಲಿ ನಿರ್ಮಿಸಲ್ಪಟ್ಟಿರುವ ದೇವಾಲಯವೇ ಶ್ರೀ ತ್ರಿಪುರಾಂತಕೇಶ್ವರ ದೇವಾಲಯ. ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲ್ಪಟ್ಟ ಈ ದೇವಾಲಯದಲ್ಲಿ ಶೈವರ ಆರಾಧ್ಯದೈವ ಈಶ್ವರನು ತನ್ನ ಇನ್ನೊಂದು ರೂಪವಾದ ತ್ರಿಪುರಾಂತಕೇಶ್ವರನ ರೂಪದಲ್ಲಿ ಇಲ್ಲಿ ಭಕ್ತರಿಗೆ ದರ್ಶನ ನೀಡುತ್ತಾ ಬಂದಿದ್ದಾನೆ.

ಈ ದೇವಾಲಯ ವಿಶೇಷ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಸುಮಾರು ಎಂಟು ಅಡಿ ಎತ್ತರದ ಪೀಠದ ಆಕಾರದ ಮೇಲೆ ದೇವಾಲಯವನ್ನು ನಿರ್ಮಿಸಿ,ತುಂಬಾ ವಿಶಾಲವಾದ ರಂಗಸಜ್ಜಿಕೆಗಳನ್ನು ವೇದಿಕೆಯಂತೆ ಕಟ್ಟಲಾಗಿದೆ.ಮೊದಲಿನಿಂದಲೂ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳು,ನಾಟ್ಯ, ನಾಟಕ ಮುಂತಾದ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುತ್ತಿತ್ತೆಂಬ ಕುರುಹುಗಳು ಸಿಗುತ್ತವೆ.ದೇವಾಲಯದ ಮೇಲ್ಛಾವಣಿಯ ಮೇಲೆ ಮತ್ತು ಗೋಡೆಗಳ ಮೇಲೆ ನವಿರಾಗಿ ಕೆತ್ತಿದ ಶಿಲ್ಪಕಲೆ,ರತಿಮನ್ಮಥರ ರಾಸಲೀಲೆಯ ಸರಣಿ ಶಿಲ್ಪಗಳ ಕೆತ್ತನೆ ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.ಈ ದೇವಾಲಯದ ಅನತಿ ದೂರದಲ್ಲಿ ಸಂಪೂರ್ಣ ಪಚ್ಚೆ ಕಲ್ಲಿನ ಲಿಂಗವೊಂದಿದ್ದು ,ಅದು ದಿನದ ಮೂರು ಹೊತ್ತು ಮೂರು ಬೇರೆ ಬೇರೆ ವರ್ಣಗಳಲ್ಲಿ ಕಂಗೊಳಿಸುವುದು ವಿಶೇಷ.

ಈ ದೇವಾಲಯ ಹೊಯ್ಸಳ ದೊರೆ ವಿಷ್ಣುವರ್ಧನನ ಪ್ರೇಮ ಕಥನಕ್ಕೆ ಸಾಕ್ಷಿಯಾದ ಪ್ರಸಂಗವೊಂದಿದೆ. ಒಮ್ಮೆ ಹೊಯ್ಸಳ ದೊರೆ ಬಿಟ್ಟಿದೇವ ಬೇಲೂರಿಗೆ ಹೋಗುವ ಮಾರ್ಗಮದ್ಯೆ ಈ ಬಳ್ಳಿಗಾವಿಯಲ್ಲಿ ತಂಗಿದ್ದವನು ಬೆಳಗಿನ ಜಾವ ಕೇಳಿದ ಗೆಜ್ಜೆನಾದ ಹೆಜ್ಜೆಯ ತಾಳಕ್ಕೆ ಮನಸೋತು, ಆ ಸಪ್ಪಳದ ಜಾಡನ್ನು ಅರಸುತ್ತ ಬಂದವನು ಇದೇ ತ್ರಿಪುರಾಂತಕೇಶ್ವರ ದೇವಾಲಯದ ರಂಗಸ್ಥಳದಲ್ಲಿ ನಾಟ್ಯಾಭ್ಯಾಸ ಮಾಡುತ್ತಿದ್ದ ಶಾಂತಲೆಯ ನೃತ್ಯಕಲೆ ಮತ್ತು ಅವಳ ಅಪ್ರತಿಮ ಸೌಂದರ್ಯಕ್ಕೆ ಮರುಳಾಗಿ ಮೊದಲ ನೋಟದಲ್ಲೇ ಪ್ರೇಮಾಂಕುರವಾಗಿ ಅವಳಲ್ಲಿ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾನೆ.ಆದರೆ ಜೈನಧರ್ಮದವಳಾದ ಶಾಂತಲೆ ಹಿಂದೂ ಧರ್ಮದ ಬಿಟ್ಟಿದೇವನನ್ನು ಮದುವೆಯಾಗಲು ನಿರಾಕರಿಸುತ್ತಾಳೆ.ಆದರೆ ಅವಳ ಸೌಂದರ್ಯಕ್ಕೆ ಮನಸೋತಿದ್ದ ದೊರೆ ಜೈನಧರ್ಮಕ್ಕೆ ಮತಾಂತರಗೊಂಡು ವಿಷ್ಣುವರ್ಧನನಾಗಿ ಅವಳನ್ನು ವರಿಸುತ್ತಾನೆ.ಇಂತಹ ಅಮರಪ್ರೇಮಕ್ಕೆ ಸಾಕ್ಷೀಭೂತವಾಗಿರುವ ಈ ದೇವಾಲಯ ಇಂದಿಗೂ ಕಾಲನ ಹೊಡೆತಕ್ಕೆ ಎದೆಯೊಡ್ಡಿ ನಿಂತಿದೆ.

ಶಿವರಾತ್ರಿ ಹಿಂದೂಗಳಿಗೆ ವಿಶೇಷ ಹಬ್ಬವಾದರೂ ಶಿವಭಕ್ತರಾದ ಶೈವರಿಗೆ ಪ್ರಮುಖ ಹಬ್ಬ. ಈ ದೇವಾಲಯದಲ್ಲಿ ಶಿವರಾತ್ರಿಯಂದು ರಾತ್ರಿಯಿಡೀ ಪ್ರವಚನ,ಭಜನೆ,ಗವಾಯಿಗಳಿಂದ ಕೀರ್ತನೆ,ಹರಿಕಥೆ ಮುಂತಾದ ಕಾರ್ಯಕ್ರಮಗಳು ಅಹೋರಾತ್ರಿ ನಡೆಯುತ್ತಿದ್ದ  ದಿನಗಳು ಈಗ ಹೆಚ್ಚಾಗಿ ಕಾಣುವುದಿಲ್ಲವಾದರೂ ಹಬ್ಬದ ದಿನ ಅನ್ನಾಹಾರ ತ್ಯಜಿಸಿ ಉಪವಾಸ ವೃತ ಮಾಡಿದ ಭಕ್ತರು ರಾತ್ರಿ ಈ ದೇವಾಲಯದಲ್ಲಿ ಒಟ್ಟು ಸೇರಿ ಪೂಜೆ,ಅಭಿಷೇಕದಲ್ಲಿ ಪಾಲ್ಗೊಂಡು ಭಕ್ತಿಯ ಪರವಶತೆಯಲ್ಲಿ ತೇಲುವುದನ್ನು ನಾವು ಈಗಲೂ ಕಾಣಬಹುದು.

ವರದಿ:ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

1 thought on “ಶ್ರೀ ತ್ರಿಪುರಾಂತಕೇಶ್ವರ ದೇವಾಲಯ

Leave a Reply

Your email address will not be published. Required fields are marked *