ಶತಮಾನದ ಮಹಾಮಾರಿ ಕೊರೋನಾ ವೈರಸ್ ನ ಹರಡುವಿಕೆಯನ್ನು ತಡೆಗಟ್ಟಲು ದೇಶದ ಪ್ರಧಾನಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಜೀಯವರು ಮಾರ್ಚ್ 22 ರಂದು ಜನತಾ ಕರ್ಫ್ಯೂ ಘೋಷಿಸಿ, ಮಾರ್ಚ್ 24 ರಿಂದ ಅನ್ವಯವಾಗುವಂತೆ ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿದ ನಂತರ ಹಲವಾರು ಸಣ್ಣಪುಟ್ಟ ಉದ್ದಿಮೆಗಳು, ದಿನಗೂಲಿ ನೌಕರರು, ಬೀದಿ ಬದಿ ವ್ಯಾಪಾರಿಗಳು, ಹೋಟೆಲ್ ಕಾರ್ಮಿಕರು ಹೀಗೆ ಇನ್ನೂ ಮುಂತಾದ ದಿನದ ದುಡಿಮೆಯ ಮೇಲೆ ಅವಲಂಬಿತವಾಗಿರುವ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದವು. ಅದೇ ರೀತಿ ಆ ದಿನದ ದುಡಿಮೆಯನ್ನೇ ನಂಬಿಕೊಂಡು ಜೀವನ ನಡೆಸುವ ವೃತ್ತಿಯಾದ ಕ್ಷೌರಿಕ ವೃತ್ತಿಯನ್ನು ನಂಬಿಕೊಂಡು ಬದುಕುವ ಲಕ್ಷಾಂತರ ಕುಟುಂಬಗಳು ಸಮಸ್ಯೆಯ ಸುಳಿಗೆ ಸಿಲುಕಿದವು.ರಾಜ್ಯದಲ್ಲಿರುವ ಸುಮಾರು ಎಂಟು ಲಕ್ಷಕ್ಕಿಂತಲೂ ಹೆಚ್ಚಿನ ಕ್ಷೌರಿಕ ಕುಟುಂಬಗಳಲ್ಲಿ ಪ್ರತಿಶತ ಅರುವತ್ತರಷ್ಟು ಕ್ಷೌರಿಕ ಕುಟುಂಬಗಳು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದ್ದು,ಆ ಕುಟುಂಬಗಳು ಕುಟುಂಬದ ಯಜಮಾನನ ದಿನದ ದುಡಿಮೆಯನ್ನು ನಂಬಿಕೊಂಡು ಬದುಕುತ್ತಿರುವುದು ಕಠೋರ ಸತ್ಯ.
ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿದ ಕ್ಷೌರಿಕ ಕುಟುಂಬಗಳಿಗೆ ಸರ್ಕಾರ ಯಾವುದೇ ಯೋಜನೆಗಳನ್ನು ಘೋಷಿಸಲಿಲ್ಲ. ಜನಪ್ರತಿನಿಧಿಗಳು ಇವರ ಮನೆ ಬಾಗಿಲಿಗೆ ಬರಲಿಲ್ಲ. ಸಾಮಾಜಿಕ ಸೇವಾ ಸಂಸ್ಥೆಗಳು ಇವರ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. ಒಂದು ಹೊತ್ತಿನ ಕೂಳಿಗೂ ಪರದಾಡುತ್ತಿರುವ ಅಶಕ್ತ ಕುಟುಂಬಗಳು ನಮ್ಮ ಸಮಾಜದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇದೆ ಎಂಬುದನ್ನು ಮನಗಂಡ ರಾಜ್ಯ ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀ ಎನ್. ಸಂಪತ್ ಕುಮಾರ್ ರವರು ತಮ್ಮ ಸಮರ್ಥ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಸಮಾಜಕ್ಕೆ ಈ ಸಂಕಷ್ಟ ಪರಿಸ್ಥಿತಿಯಲ್ಲಿ ನೆರವಾಗುವ ನಿಟ್ಟಿನಲ್ಲಿ ರೂಪಿಸಿದ ಯೋಜನೆಯೇ “ಸವಿತಾ ಜೀವ ಕಿರಣ.”
ಈ ಯೋಜನೆಯನ್ವಯ ಸವಿತಾ ಸಮಾಜದ ತುತ್ತ ತುದಿಯಲ್ಲಿರುವ ಅಶಕ್ತ, ಅತಿ ಬಡಸ್ತರದ ಕ್ಷೌರಿಕರಿಗೆ ಅವರ ಕುಟುಂಬ ನಿರ್ವಹಣೆಗೆ ಅಗತ್ಯವಿರುವ ದಿನಸಿ ವಸ್ತುಗಳ ಕಿಟ್ ಗಳನ್ನು ತಲುಪಿಸುವುದು. ಆ ಕಿಟ್ ಗಳಲ್ಲಿ ಎರಡು ಮೂರು ವಾರಗಳಿಗೆ ಜೀವನ ನಿರ್ವಹಿಸುವಷ್ಟು ಅಗತ್ಯ ದಿನಸಿ ಸಾಮಗ್ರಿಗಳು ತತ್ ಕ್ಷಣದ ಆಸರೆಯಾಗಿರಬೇಕು ಎಂಬುದು ಅವರ ಉದ್ದೇಶವಾಗಿತ್ತು.
ಕರ್ನಾಟಕ ರಾಜ್ಯ ಸವಿತಾ ಸಮಾಜದ ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಸಮಾಜದ ಹಲವಾರು ಬಂಧುಗಳು ತಮ್ಮ ಕಿರು ಕಾಣಿಕೆಗಳನ್ನು ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಹೊಸಕೋಟೆಯ ಉದ್ಯಮಿಯಾಗಿರುವ ಶ್ರೀ ಸದಾನಂದ ಹೊಸಕೋಟೆಯವರು,ಕೋಲಾರ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು ಮತ್ತು ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳು, ಬೆಂಗಳೂರು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ರಮೇಶ್ ರವರು, ಶ್ರೀ ನಾಮದೇವ್ ನಾಗರಾಜ್ ರವರು, ಶ್ರೀ ಎಮ್.ಬಿ.ಶಿವಕುಮಾರ್ ರವರು,ಶ್ರೀ ರಮೇಶ್ ಬಾಬುರವರು,ಬೆಂಗಳೂರು ಪ್ರೆಸ್ ಕ್ಲಬ್ ನ ಕಾರ್ಯದರ್ಶಿಗಳಾದ ಶ್ರೀ ರಮೇಶ್ ರವರು,ಉಪ ತಹಶೀಲ್ದಾರ್ ಶ್ರೀ ನಂದೀಶ್ ರವರು, ರಾಜ್ಯ ಸವಿತಾ ಸಮಾಜದ ನಿರ್ದೇಶಕರಾದ ಶ್ರೀ ಹೆಚ್.ಡಿ.ರಾಮುರವರು,ವಕೀಲರಾದ ಶ್ರೀ ನರಸಿಂಹ ರಾಜುರವರು,ಶ್ರೀ ಮಾದಪ್ಪ ಬೆಟ್ಟದಾಸನಪುರ ಮುಂತಾದವರು ಮುಕ್ತ ಮನಸ್ಸಿನಿಂದ ಧನಸಹಾಯ ನೀಡುವುದರೊಂದಿಗೆ ಯೋಜನೆಗೆ ಬೆಂಬಲವಾಗಿ ನಿಂತರು.ಇವರೊಂದಿಗೆ ಸಮಾಜದ ಹಲವಾರು ಹಿರಿಕಿರಿಯ ಬಂಧುಗಳು ಕೈ ಜೋಡಿಸಿದರು.
ರಾಜ್ಯದ ಮೂವತ್ತು ಜಿಲ್ಲೆಗಳ, ಇನ್ನೂರು ನಲವತ್ತು ತಾಲ್ಲೂಕುಗಳಲ್ಲಿ ವಾಸಿಸುತ್ತಿರುವ ಕರ್ನಾಟಕ ರಾಜ್ಯ ಸವಿತಾ ಸಮಾಜದ ಬಂಧುಗಳಲ್ಲಿ ಅತಿ ಸಂಕಷ್ಟದಲ್ಲಿರುವ, ಬಡ ಕುಟುಂಬಗಳಿಗೆ ಮೊದಲ ಹಂತದಲ್ಲಿ ಮೂರು ಸಾವಿರ ಕುಟುಂಬಗಳಿಗೆ ಕಿಟ್ ಗಳನ್ನು ತಯಾರಿಸುವ ಮೊದಲ ಹಂತಕ್ಕೆ ಚಾಲನೆ ನೀಡಲಾಯಿತು.ನಿಜವಾದ ಅಗ್ನಿ ಪರೀಕ್ಷೆ ಎದುರಾಗಿದ್ದು ಈ ಹಂತದಲ್ಲಿ. ಸುಮಾರು ಮೂರು ಸಾವಿರ ಕುಟುಂಬಗಳಿಗೆ ಬೇಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ಈ ಲಾಕ್ ಡೌನ್ ಸಂದರ್ಭದಲ್ಲಿ ಹೊಂದಿಸುವುದೇ ಕಷ್ಟಕರ ಕೆಲಸವಾಗಿತ್ತು. ಅಕ್ಕಿ, ತೊಗರಿ ಬೇಳೆ, ಗೋಧಿ ಹಿಟ್ಟು, ಹುಣಸೆ ಹಣ್ಣು, ಬಟ್ಟೆ ಒಗೆಯುವ ಸೋಪು, ಸ್ನಾನದ ಸೋಪು, ಸೋಪಿನ ಪುಡಿ, ಉಪ್ಪಿಟ್ಟು ರವೆ, ಉಪ್ಪು, ಖಾರದ ಪುಡಿ, ಧನಿಯಾ ಪುಡಿ, ಅರಿಶಿನ ಪುಡಿ, ಜೀರಿಗೆ, ಮೆಂತೆ, ಟೂತ್ ಪೇಸ್ಟ್ ಹೀಗೆ ಪ್ರತಿಯೊಂದು ದಿನಸಿ ವಸ್ತುಗಳನ್ನು ಕೊಳ್ಳುವಾಗಲೂ ಅವಶ್ಯಕವಿರುವಷ್ಟು ಸಾಮಗ್ರಿಗಳು ಲಭ್ಯವಾಗದೆ ಹೋಯಿತು. ಅವುಗಳನ್ನು ಖರೀದಿಸುವುದೇ ಸಮಸ್ಯೆಯಾಯಿತು.ಹೇಗೋ ಕಷ್ಟಪಟ್ಟು ದಿನಸಿ ಸಾಮಗ್ರಿಗಳನ್ನು ಸಂಗ್ರಹಿಸಿದ ನಂತರ ಅವುಗಳನ್ನು ಪ್ಯಾಕ್ ಮಾಡುವುದು ಇನ್ನೊಂದು ಸವಾಲಾಗಿತ್ತು.ಪ್ರತಿಯೊಂದು ಕಿಟ್ ಗಳಲ್ಲಿ ಹದಿನೆಂಟು ವಿವಿಧ ಸಾಮಗ್ರಿಗಳನ್ನು ಒಟ್ಟು ಮಾಡಿ ಪ್ಯಾಕಿಂಗ್ ಮಾಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದವರು ರಾಜ್ಯಾಧ್ಯಕ್ಷರ ಪುತ್ರ ಶ್ರೀಯುತ ಎಸ್. ಕಿರಣ್ ಕುಮಾರ್ ರವರು. ಸಂಪೂರ್ಣ ಯೋಜನೆಗೆ ಅತಿ ಹೆಚ್ಚು ಕಾಳಜಿ ಮತ್ತು ನಿಗಾ ವಹಿಸಿ ಕಾರ್ಯನಿರ್ವಹಿಸಿ, ಬಂಧುಗಳನ್ನು ಒಗ್ಗೂಡಿಸಿ, ಅವರನ್ನು ಹುರಿದುಂಬಿಸಿ ಸತತ ಹದಿನೈದು ದಿನಗಳ ಕಾಲ ನಿರಂತರವಾಗಿ ಶ್ರಮವಹಿಸಿ ದಿನಸಿ ಕಿಟ್ ಗಳನ್ನು ತಯಾರಿಸಲಾಯಿತು.ದಿನಸಿ ಸಾಮಗ್ರಿಗಳನ್ನು ಪ್ಯಾಕ್ ಮಾಡಲು ಶ್ರಮದಾನ ಮಾಡಿದವರನ್ನು ಈ ಸಂದರ್ಭದಲ್ಲಿ ಹೆಸರಿಸಲೇಬೇಕು.ನಾಮದೇವ್ ನಾಗರಾಜ್ ಮತ್ತು ತಂಡ, ಬೈಲಪ್ಪ ನಾರಾಯಣಸ್ವಾಮಿ ಮತ್ತು ಮಕ್ಕಳು, ಶ್ರೀಮತಿ ಇಂದಿರಮ್ಮ ಮತ್ತು ಕುಟುಂಬದವರು,ಕಿಶೋರ್, ಪ್ರಕಾಶ್.ಹೆಚ್.ಟಿ. ಕೃಷ್ಣ ಬೆಟ್ಟಹಳ್ಳಿ, ಸಾಯಿಪ್ರಸಾದ್, ಪ್ರವೀಣ್, ಅಂಜನಮೂರ್ತಿ, ರಂಗಸ್ವಾಮಿ, ನರಸಿಂಹಯ್ಯ, ಸಾಮ್ರಾಟ್ ಮಂಜು, ಅಭಿಷೇಕ್, ರವಿಕುಮಾರ್, ಶಿವಕೇಶವಮೂರ್ತಿ, ಭೀಮ, ಬಾಬು ಮುಂತಾದವರು ಸ್ವಯಂಪ್ರೇರಿತರಾಗಿ ಬಂದು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
ಕಿಟ್ ತಯಾರಿಸುತ್ತಿರುವ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಸರ್ಕಾರದ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ರವರು ಸವಿತಾ ಸಮಾಜದ ಕಾರ್ಯವೈಖರಿಯನ್ನು ಮೆಚ್ಚಿ ಬೆನ್ನು ತಟ್ಟಿ ನಮ್ಮ ಸಮಾಜದ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಏಪ್ರಿಲ್ 12,2020 ರ ಭಾನುವಾರ ಕೃಷ್ಣ ಬೆಟ್ಟಹಳ್ಳಿ, ಎಂ.ಬಿ.ಶಿವಕುಮಾರ್, ನಂದಗುಡಿ ನಾಗೇಶ್, ಬೈಲಪ್ಪ ನಾರಾಯಣಸ್ವಾಮಿ, ವೆಂಕಟರಾಜು, ಲಕ್ಷ್ಮಿ ಪ್ರಸನ್ನ ಮುಂತಾದವರ ಸಾರಥ್ಯದಲ್ಲಿ ರಾಜ್ಯದ ಎಲ್ಲಾ ಮೂವತ್ತು ಜಿಲ್ಲಾ ಕೇಂದ್ರಗಳಿಗೆ “ಸವಿತಾ ಜೀವ ಕಿರಣ” ಯೋಜನೆಯ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ಹೊತ್ತ ವಾಹನಗಳು ಹೊರಟು ನಿಂತವು. ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಶ್ರೀಯುತ ಅಶ್ವಥ್ ನಾರಾಯಣ್ ರವರು ಹಸಿರು ನಿಶಾನೆ ತೋರುವುದರೊಂದಿಗೆ ವಾಹನಗಳಿಗೆ ಚಾಲನೆ ನೀಡಿದರು.ನಂತರ ಮಾತನಾಡಿ “ಕೊರೋನಾ ಮಹಾಮಾರಿಯಿಂದಾಗಿ ಇಡೀ ದೇಶವೇ ಸಂಕಷ್ಟವನ್ನು ಎದುರಿಸುತ್ತಿದೆ.ಇಂತಹ ಸಂದರ್ಭದಲ್ಲಿ ಹಲವಾರು ಸಣ್ಣ ಪುಟ್ಟ ಸಮುದಾಯಗಳು ಸಮಸ್ಯೆಯ ಸುಳಿಗೆ ಸಿಲುಕಿವೆ. ಅಂತಹ ಸಮುದಾಯಗಳಲ್ಲಿ ಕ್ಷೌರಿಕ ಸಮುದಾಯವೂ ಒಂದು. ಕ್ಷೌರಿಕರ ಸಮಸ್ಯೆಗಳಿಗೆ ನಿಮ್ಮದೇ ಸಮಾಜ ಸ್ಪಂದಿಸುತ್ತಿರುವ ರೀತಿ ನಿಜಕ್ಕೂ ಅಭಿನಂದನಾರ್ಹ ಮತ್ತು ನಿಮ್ಮ ಈ ಕಾರ್ಯ ಇತರೆ ಸಮಾಜಗಳಿಗೆ ಮಾದರಿಯಾಗಿದೆ. ನಿಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ” ಎಂದು ಭರವಸೆ ನೀಡಿದರು.
ನಂತರ ಮಾತನಾಡಿದ ಕರ್ನಾಟಕ ರಾಜ್ಯ ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀಯುತ ಸಂಪತ್ ಕುಮಾರ್ ರವರು “ಕರ್ನಾಟಕ ರಾಜ್ಯಾದ್ಯಂತ ಎಂಟು ಲಕ್ಷಕ್ಕಿಂತಲೂ ಹೆಚ್ಚು ಕುಟುಂಬಗಳು ಕ್ಷೌರಿಕ ಸಮಾಜದ ವ್ಯಾಪ್ತಿಯಲ್ಲಿ ಬರುತ್ತವೆ. ಆ ಕುಟುಂಬಗಳಲ್ಲಿ ಸುಮಾರು ಒಂದೂವರೆ ಲಕ್ಷ ಜನ ಕ್ಷೌರಿಕ ವೃತ್ತಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದು ಅವರ ಜೀವನ ನಿರ್ವಹಣೆ ಲಾಕ್ ಡೌನ್ ನಿಂದಾಗಿ ದುಸ್ತರಗೊಂಡಿದೆ. ಅವರಲ್ಲಿ ಅನೇಕರು ದೂರವಾಣಿಯ ಮೂಲಕ ನನ್ನನ್ನು ಸಂಪರ್ಕಿಸಿ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡಾಗ ತಕ್ಷಣಕ್ಕೆ ಸ್ಪಂದಿಸಬೇಕಾದುದು ಸವಿತಾ ಸಮಾಜದ ರಾಜ್ಯಾಧ್ಯಕ್ಷನಾಗಿ ನನ್ನ ಮೊದಲ ಆದ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಸವಿತಾ ಜೀವ ಕಿರಣ ಯೋಜನೆಯನ್ನು ರೂಪಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಮೂರು ಸಾವಿರ ಕುಟುಂಬಗಳಿಗೆ ಈ ಯೋಜನೆಯ ಲಾಭ ದೊರೆಯಲಿದ್ದು ಮುಂದಿನ ಹಂತದಲ್ಲಿ ಇನ್ನಷ್ಟು ಕುಟುಂಬಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು” ಎಂದು ತಿಳಿಸಿದರು .ನಮ್ಮ ಸವಿತಾ ಸಮಾಜದ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಸರಕಾರದ ಮುಖ್ಯ ಕಾರ್ಯದರ್ಶಿಗಳನ್ನು, ಮುಖ್ಯಮಂತ್ರಿಗಳಾದ ಶ್ರೀಯುತ ಯಡಿಯೂರಪ್ಪನವರನ್ನು, ಸಾರಿಗೆ ಸಚಿವರಾದ ಶ್ರೀ ಆರ್.ಅಶೋಕ್ ರವರನ್ನು, ವಿರೋಧ ಪಕ್ಷದ ನಾಯಕರಾದ ಶ್ರೀ ಡಿ.ಕೆ. ಶಿವಕುಮಾರ್ ರವರನ್ನು ಸೇರಿದಂತೆ ಹಲವಾರು ರಾಜಕೀಯ ನಾಯಕರುಗಳನ್ನು ನಿರಂತರವಾಗಿ ಸಂಪರ್ಕಿಸಿ, ಸಮಾಜದ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ಸರ್ಕಾರದ ಮತ್ತು ಮುಖ್ಯಮಂತ್ರಿಗಳ ಗಮನವನ್ನು ಸೆಳೆಯುತ್ತಿರುವ ತಮ್ಮ ಪ್ರಯತ್ನಗಳನ್ನು ಸಮಾಜದ ಗಮನಕ್ಕೆ ತಂದರು.
ರಾಜ್ಯಾಧ್ಯಕ್ಷರು “ಸವಿತಾ ಜೀವ ಕಿರಣ” ಯೋಜನೆಯ ರೂಪುರೇಷೆಯನ್ನು ಸಿದ್ಧಪಡಿಸಿ, ಕಾರ್ಯ ಯೋಜನೆಯ ಯಶಸ್ಸಿಗೆ ಮಾರ್ಗದರ್ಶಿಗಳಾಗಿ ಸಹಕರಿಸಿದ ದೇವರಾಜ್ ಅರಸು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಶ್ರೀಯುತ ಅಶೋಕ್ ಗಸ್ತಿಯವರನ್ನು ವಿಶೇಷವಾಗಿ ಅಭಿನಂದಿಸಿದರು.ಮತ್ತು ಸೇವಾ ಯೋಜನೆಯ ಯಶಸ್ಸಿಗಾಗಿ ಬೆಂಬಲವಾಗಿ ನಿಂತ ಕರ್ನಾಟಕ ರಾಜ್ಯ ಸವಿತಾ ಸಮಾಜದ ಕಾರ್ಯಕಾರಿ ಮಂಡಳಿಯವರನ್ನು ಅಭಿನಂದಿಸಿದರು. ರಾಜ್ಯ ಉಪಾಧ್ಯಕ್ಷರಾದ ಶ್ರೀ ಮಾವಳ್ಳಿ ಕೃಷ್ಣ, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಎನ್.ವಿ.ನರಸಿಂಹಯ್ಯ, ರಾಜ್ಯ ಖಜಾಂಚಿಗಳಾದ ಶ್ರೀ ಆರ್.ನಾರಾಯಣ್ ಮತ್ತು ನಿರ್ದೇಶಕರುಗಳಾದ ಶ್ರೀ ಎಚ್.ಡಿ.ರಾಮು,ಶ್ರೀ ಚಲಪತಿ,ಶ್ರೀ ನಂದಗುಡಿ ನಾಗೇಶ್,ಶ್ರೀ ಬಿ.ಟಿ. ಆನಂದ್, ಡಾಕ್ಟರ್ ಶ್ರೀ ಮುರಳೀದರ್,ಶ್ರೀ ಎಸ್. ಬಾಲು,ಶ್ರೀ ವೆಂಕಟೇಶ್ ಹಾವೇರಿ,ಶ್ರೀ ತಿಪ್ಪಣ್ಣ ಬಳ್ಳಾರಿ,ಶ್ರೀ ರಮೇಶ್ ಶಹಾಬಾದ್,ಶ್ರೀ ಸೂರ್ಯಕಾಂತ್ ಚಿನ್ನಾಕಾರ್,ಶ್ರೀ ನಾಗರಾಜ್ ಮೈಸೂರು,ಶ್ರೀ ಜ್ಯೋತಿಕುಮಾರ್ ಗದಗ ಮತ್ತು ಶ್ರೀ ರವಿಕುಮಾರ್ ಕಡೂರು ಹೀಗೆ ಪ್ರತಿಯೊಬ್ಬರನ್ನೂ ಅಭಿನಂದಿಸಿದರು.
ಕರ್ನಾಟಕ ರಾಜ್ಯ ಸವಿತಾ ಸಮಾಜದ ಬಂಧುಗಳು ಸಂಕಷ್ಟಕ್ಕೆ ಸಿಲುಕಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೆರವಿನ ಹಸ್ತ ಚಾಚಿ, ಕ್ಷೌರಿಕ ಕುಟುಂಬದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಯ ಸದುಪಯೋಗವಾಗುವಂತೆ, ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸಿ, ಸಂಘಟಿತ ಮನೋಭಾವದಿಂದ ಕಾರ್ಯಯೋಜನೆಯನ್ನು ರೂಪಿಸಿ ಸವಿತಾ ಸಮಾಜದ ಬಡ ಕುಟುಂಬಗಳಿಗೆ ಆಸರೆಯಾಗುವಂತಹ ಸವಿತಾ ಜೀವ ಕಿರಣ ಯೋಜನೆಯನ್ನು ರೂಪಿಸಿ, ಯಶಸ್ಸು ಗಳಿಸಿದ ಕರ್ನಾಟಕ ರಾಜ್ಯ ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀಯುತ ಎನ್. ಸಂಪತ್ ಕುಮಾರ್ ರವರಿಗೂ, ಅವರ ಸಮರ್ಥ ಬಲಿಷ್ಠ ಕಾರ್ಯಕಾರಿ ಮಂಡಳಿಯವರಿಗೂ, ಸಹಕರಿಸಿದ ಸಮಾಜದ ಹಿರಿಯ ಕಿರಿಯ ಬಂಧುಗಳಿಗೂ ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿ ವಾರ್ತೆ” ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.ರಾಜ್ಯ ಸವಿತಾ ಸಮಾಜವು ಇಂತಹ ಇನ್ನಷ್ಟು ಸಮಾಜಮುಖಿ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ಮುನ್ನೆಡೆಯಲಿ ಎಂದು “ಭಂಡಾರಿ ವಾರ್ತೆ” ಹಾರೈಸುತ್ತದೆ.
“ಭಂಡಾರಿ ವಾರ್ತೆ.”
ವರದಿ : ಭಾಸ್ಕರ್ ಭಂಡಾರಿ.ಶಿರಾಳಕೊಪ್ಪ.
ಸಂಪೂರ್ಣ ಯೋಜನೆಯ ಯಾಶೋಗಾತೆಯ ಸುದ್ದಿ ನೀಡಿದರು ಭಂಡಾರಿ ವಾರ್ತಾ ಬಳಗಕ್ಕೆ ಧನ್ಯವಾದಗಳು