January 18, 2025
Shwetha123

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವಾರು ಸಾಧಕರು ನಮ್ಮ ಭಂಡಾರಿ ಕುಟುಂಬಗಳಲ್ಲಿ ಇದ್ದಾರೆ. ಈಗಾಗಲೇ ನಾವು ಭಂಡಾರಿವಾರ್ತೆಯಲ್ಲಿ ಕರಾಟೆ, ವಾಲಿಬಾಲ್, ಬ್ರಾಡ್ ಜಂಪ್ ಮುಂತಾದ ಕ್ರೀಡೆಗಳಲ್ಲಿ ಹೆಸರು ಮಾಡಿದ ಹಲವಾರು ಕ್ರೀಡಾಪಟುಗಳನ್ನು ಸಮಾಜಕ್ಕೆ ಪರಿಚಯಿಸಿ ಪ್ರೋತ್ಸಾಹಿಸಿದ್ದೇವೆ.  ಈ ವರದಿಯಲ್ಲಿ ನಾವು ಪರಿಚಯಿಸುತ್ತಿರುವ ಪ್ರತಿಭೆ ಕರ್ನಾಟಕದ ದೇಸಿ ಕ್ರೀಡೆಯಾದ ಕಬಡ್ಡಿಯಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಕುಮಾರಿ ಶ್ವೇತಾ ಕೃಷ್ಣಪ್ಪ ಭಂಡಾರಿ.
ಕಾರ್ಕಳ ತಾಲೂಕಿನ ಮುದ್ರಾಡಿಯ ನೆಲ್ಲಿಕಟ್ಟೆಯವರಾದ ಶ್ರೀ ಕೃಷ್ಣಪ್ಪ ಭಂಡಾರಿ ಮತ್ತು ಶ್ರೀಮತಿ ಪದ್ಮಾವತಿ ಕೃಷ್ಣಪ್ಪ ಭಂಡಾರಿ ದಂಪತಿಗಳ ದ್ವಿತೀಯ ಪುತ್ರಿ ಕು.ಶ್ವೇತಾ, ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು. ಮುನಿಯಾಲ್ ನಲ್ಲಿ ದ್ವಿತೀಯ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ.

  • ಕುಮಾರಿ ಶ್ವೇತಾ ಯವರು 2014-15 ನೇ ಸಾಲಿನಲ್ಲಿ ಪ್ರಥಮ ಪಿ.ಯು.ಸಿ ಓದುತ್ತಿರುವಾಗಲೇ ಕಬಡ್ಡಿಯಲ್ಲಿ ಉತ್ತಮವಾಗಿ ಆಡುತ್ತ ಆಯ್ಕೆಗಾರರ ಗಮನ ಸೆಳೆದು ಉಡುಪಿ ಜಿಲ್ಲಾ ಕಬಡ್ಡಿ ತಂಡಕ್ಕೆ ಆಯ್ಕೆಯಾದರು. ಕೋಟೇಶ್ವರದಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ, ಜಯಗಳಿಸಿ ಬಾಗಲಕೋಟೆಯಲ್ಲಿ ಜರುಗಿದ ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿದರು.

 

  • 2015-16 ರಲ್ಲಿ ದ್ವಿತೀಯ ಪಿ.ಯು.ಸಿ ವ್ಯಾಸಂಗ ಮಾಡುತ್ತಿರುವಾಗ ಕೋಟೇಶ್ವರದಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯಾವಳಿಗಳಲ್ಲಿ ಜಯಗಳಿಸಿ,ರಾಮನಗರ ಜಿಲ್ಲೆಯ ಕನಕಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿದರು.

 

  • 2016 ರಲ್ಲಿ ಕುಮಟಾದಲ್ಲಿ ಜರುಗಿದ ರಾಜ್ಯ ಮಟ್ಟದ ಅಮೆಚೂರ್ ಟೂರ್ನಮೆಂಟ್ ನಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿದರು.

 

  • 2016-17 ನೇ ಸಾಲಿನಲ್ಲಿ ಪ್ರಥಮ ವರ್ಷದ ಬಿ.ಕಾಂ.ಪದವಿ ಓದುತ್ತಿರುವಾಗಲೇ ಗದಗದಲ್ಲಿ ಜರುಗಿದ ರಾಜ್ಯ ಮಟ್ಟದ ಅಮೆಚೂರ್ ಕಬಡ್ಡಿ ಪಂದ್ಯಾವಳಿಯಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿ ತೃತೀಯ ಬಹುಮಾನ ಗಳಿಸಿದರು.

 

  • ಅಷ್ಟೇ ಅಲ್ಲದೇ ಮುನಿಯಾಲ್ ನ ಪ್ರಸಿದ್ಧ ಕಬಡ್ಡಿ ತಂಡ ದೇವಿಪ್ರಸಾದ್ ಕಬಡ್ಡಿ ತಂಡ ದ ಭರವಸೆಯ ಆಟಗಾರ್ತಿಯಾಗಿರುವ ಶ್ವೇತಾ ಹಲವಾರು ಮುಕ್ತ ಟೂರ್ನಿಗಳಲ್ಲಿ ಭಾಗವಹಿಸಿ ಅಸಂಖ್ಯ ಬಹುಮಾನ,ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ತಂದೆ ಬೀಡಿ ಫ್ಯಾಕ್ಟರಿಯಲ್ಲಿ ಚೆಕ್ಕರ್ ವೃತ್ತಿ ಮಾಡುತ್ತಿದ್ದರೂ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಒದಗಿಸಲು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಉತ್ತೇಜನ ನೀಡುತ್ತ ಬಂದಿರುವ ಪರಿಣಾಮ ಶ್ವೇತಾ ಳ ಅಕ್ಕ  ಕು. ಚೈತ್ರ ಬಿ.ಕಾಂ ಪದವೀಧರೆ, ತಂಗಿ ಕು. ಪವಿತ್ರ ಸಹ BBA ಯಲ್ಲಿ ಏವಿಯೇಷನ್‌ ಕೋರ್ಸ್ ಮಾಡುತ್ತಿದ್ದಾರೆ.
ಪುರುಷರೇ ಏಕಸ್ವಾಮ್ಯ ಹೊಂದಿರುವ ಕ್ರೀಡೆಯಾದ ಕಬಡ್ಡಿಯಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ಕು. ಶ್ವೇತಾ ಕರ್ನಾಟಕ ರಾಜ್ಯ ಕಬಡ್ಡಿ ತಂಡದಲ್ಲಿ ಸ್ಥಾನ ಗಳಿಸಲಿ, ಆ ಮೂಲಕ ಹೆತ್ತವರಿಗೂ, ರಾಜ್ಯಕ್ಕೂ,ಭಂಡಾರಿ ಕುಟುಂಬಕ್ಕೂ ಇನ್ನಷ್ಟು ಹೆಚ್ಚಿನ ಗೌರವ ತಂದುಕೊಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃದಯಪೂರ್ವಕ ವಾಗಿ ಶುಭ ಹಾರೈಸುತ್ತದೆ.

 

ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

1 thought on “ರಾಜ್ಯ ಮಟ್ಟದ ಕಬಡ್ಡಿ ಪ್ರತಿಭೆ ಶ್ವೇತಾ ಭಂಡಾರಿ.

Leave a Reply

Your email address will not be published. Required fields are marked *