
ಹಸಿವು ಮತ್ತು ಅವಮಾನ ಕಲಿಸಿದಷ್ಟು ಪಾಠಗಳನ್ನು ಜೀವನದಲ್ಲಿ ಇನ್ನಾರೂ ಕಲಿಸಲು ಸಾಧ್ಯವಿಲ್ಲ. ಹಣದಿಂದ ತುಂಬಿರುವ ಜೇಬು ಹಾಳು ಮಾಡುವ ಹಲವು ದಾರಿಗಳನ್ನು ತೋರಿಸಿದರೆ ಖಾಲಿಯಾಗಿರುವ ಜೇಬು ಹಣ ಗಳಿಸುವ ಹಲವು ಪಾಠಗಳನ್ನು ಕಲಿಸುತ್ತದೆ.ಈ ಮೇಲಿನ ಮಾತುಗಳನ್ನು ಉಲ್ಲೇಖಿಸಲು ಕಾರಣವೇನೆಂದರೆ ಶಿವರಾಮ್ ಭಂಡಾರಿಯವರ ಬದುಕಿಗೆ ಈ ಮೇಲಿನ ಮಾತುಗಳು ಎಷ್ಟು ತಾಳೆಯಾಗುತ್ತವೆಂದರೆ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ಹಸಿವು ಮತ್ತು ಅವಮಾನದ ಘೋರ ಅನುಭವವನ್ನು ಕಣ್ಣಾರೆ ಕಂಡ ಶಿವರಾಮ ಭಂಡಾರಿಯವರು 1979 ರಲ್ಲಿ ತಮ್ಮ ಹದಿನೈದರ ಹರೆಯದಲ್ಲಿಯೇ ಹುಟ್ಟೂರಾದ ಕಾರ್ಕಳದ ಅತ್ತೂರಿನಿಂದ ಮುಂಬಯಿಯ ಕಡೆಗೆ ಪ್ರಯಾಣ ಬೆಳೆಸಿದರು.


ಹದಿಹರೆಯದ ಕಣ್ಣುಗಳಲ್ಲಿ ದೊಡ್ಡ ದೊಡ್ಡ ಕನಸುಗಳದೇ ಪ್ರತಿಬಿಂಬ. ಮುಂಬಯಿಯಲ್ಲಿ ಕೆಲವು ವರ್ಷಗಳ ಕಾಲ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡಿದ್ದ ಇವರು 1984 ರಲ್ಲಿ ದೂರದ ಕತಾರ್ ದೇಶದ ಕಡೆ ಮುಖ ಮಾಡಿದರು. ಕತಾರ್ ನಲ್ಲಿ ಕ್ಷೌರಿಕ ವೃತ್ತಿಯ ನೈಪುಣ್ಯತೆಯನ್ನು ಮೈಗೂಡಿಸಿಕೊಂಡು 1988 ರಲ್ಲಿ ಮುಂಬಯಿಗೆ ಮರಳಿದರು.





ಕತಾರ್ ನಲ್ಲಿ ಬೆವರು ಹರಿಸಿ ದುಡಿದ ಅಲ್ಪಸ್ವಲ್ಪ ಹಣವನ್ನು ಒಗ್ಗೂಡಿಸಿ ಮುಂಬಯಿಯಲ್ಲಿ ಆರಂಭಿಸಿದ ಸಂಸ್ಥೆಯೇ “ಶಿವಾಸ್ ಹೇರ್ ಡಿಸೈನಿಂಗ್ ಪ್ರವೇಟ್ ಲಿಮಿಟೆಡ್.”ದೊಡ್ಡ ಆಲೋಚನೆ ಮತ್ತು ದೊಡ್ಡ ಕನಸು ಎಂದಿಗೂ ದೊಡ್ಡ ಫಲಿತಾಂಶವನ್ನು, ದೊಡ್ಡ ಸಫಲತೆಯನ್ನು ತಂದು ಕೊಡುತ್ತದೆ ಎಂಬ ಮಾತಿನಂತೆ ಇವರ ಮಹತ್ವಾಕಾಂಕ್ಷೆಯ ಯೋಜನೆ ಶಿವಾಸ್ ಹೇರ್ ಡಿಸೈನಿಂಗ್ ಪ್ರೈವೇಟ್ ಕಂಪನಿ ದೊಡ್ಡ ಇತಿಹಾಸವನ್ನೇ ನಿರ್ಮಿಸಿತು.ಮುಂಬಯಿಯ ಪ್ರತಿಷ್ಠಿತ ಉದ್ದಿಮೆದಾರರು, ಪ್ರಖ್ಯಾತ ಚಿತ್ರ ನಟನಟಿಯರು, ಖ್ಯಾತನಾಮ ರಾಜಕಾರಣಿಗಳಿಗೆಲ್ಲಾ ಶಿವಾಸ್ ಒಂದು ಅತ್ಯಾಪ್ತ ತಾಣವಾಗಿ ಮಾರ್ಪಟ್ಟಿತು. ದೃಢ ಸಂಕಲ್ಪ, ಕಠಿಣ ಪರಿಶ್ರಮ ಸಾಧಾರಣ ವ್ಯಕ್ತಿಯೊಬ್ಬನನ್ನು ಹೇಗೆ ಅಸಾಧಾರಣ ವ್ಯಕ್ತಿಯನ್ನಾಗಿಸುತ್ತದೆ ಎಂಬುದಕ್ಕೆ ಶಿವರಾಮ ಭಂಡಾರಿಯವರು ಒಂದು ಉತ್ತಮ ಉದಾಹರಣೆ ಎನಿಸುತ್ತಾರೆ.


ನಲವತ್ತು ವರ್ಷಗಳ ಕೆಳಗೆ ಕಾರ್ಕಳದ ಅತ್ತೂರಿನಿಂದ ಮುಂಬಯಿಗೆ ಬಂದ ಅಮಾಯಕ ಹುಡುಗನೊಬ್ಬ ಇಂದು ಶಿವಾಸ್ ಗ್ರೂಪ್ ಆಫ್ ಕಂಪನಿ ಎಂಬ ಬೃಹತ್ ಉದ್ದಿಮೆಯನ್ನು ಸ್ಥಾಪಿಸಿ ಮುಂಬಯಿಯಾದ್ಯಂತ ಸುಮಾರು ಇಪ್ಪತ್ತು ಐಷಾರಾಮಿ ಮಳಿಗೆಗಳನ್ನು ಸ್ಥಾಪಿಸಿ ಹೇರ್ ಡಿಸೈನಿಂಗ್ ಉದ್ದಿಮೆಯಲ್ಲಿ ಒಂದು ವಿಶಿಷ್ಟ ಶಕ್ತಿಯಾಗಿ ಬೆಳೆದು ನಿಂತ, ಪ್ರತಿಷ್ಠಿತ ಭಾರತ್ ಗೌರವ್ ಪ್ರಶಸ್ತಿ ಪುರಸ್ಕೃತ, ಭಂಡಾರಿ ವಿಭೂಷಣ ಶ್ರೀಯುತ ಶಿವರಾಮ ಭಂಡಾರಿಯವರ ಬದುಕಿನ ಮೇಲೆ ಬೆಳಕು ಚೆಲ್ಲುವ ಒಂದು ಪ್ರಯತ್ನವನ್ನು ಮಾಡಲಾಗಿದೆ. ದೇಶದ ಪ್ರತಿಷ್ಠಿತ ಸುದ್ದಿ ಮಾಧ್ಯಮಗಳಾದ ನ್ಯೂಸ್ ಟುಡೇ, ಈ ಟಿವಿ ನ್ಯೂಸ್, ರಾಯಿಟರ್ಸ್ ಗಳಲ್ಲಿ ಕೆಲಸ ಮಾಡಿದ ಅನುಭವ ಇರುವ, ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮದ ಖ್ಯಾತ ಪತ್ರಕರ್ತೆ ಜಯಶ್ರೀ ಶೆಟ್ಟಿಯವರು ಶಿವರಾಮ ಭಂಡಾರಿಯವರ ಜೀವನಾಧಾರಿತ ಒಂದು ಪುಸ್ತಕವನ್ನು ಬರೆದಿದ್ದಾರೆ. ಅದುವೇ “ಸ್ಟೈಲಿಂಗ್ ಅಟ್ ದ ಟಾಪ್-ಜರ್ನಿ ಆಫ್ ಶಿವ.” ಬಾಲಿವುಡ್ ಸೆಲೆಬ್ರೇಟೆಡ್ ಹೇರ್ ಸ್ಟೈಲಿಸ್ಟ್ ಶಿವರಾಮ್.ಕೆ.ಭಂಡಾರಿ.


ಈ ಪುಸ್ತಕದಲ್ಲಿ ಶಿವರಾಮ ಭಂಡಾರಿಯವರ ಬಾಲ್ಯ, ವೃತ್ತಿ ಜೀವನದ ಆರಂಭ, ಕತಾರ್ ದೇಶದಲ್ಲಿ ಅವರ ವೃತ್ತಿ ಜೀವನದ ಪ್ರಗತಿ, ಬೆಳವಣಿಗೆಯ ಆ ದಿನಗಳು, ನಂತರ ಮುಂಬಯಿಯ ಎರಡನೇ ಇನ್ನಿಂಗ್ಸ್… ಶಿವಾಸ್ ಹೇರ್ ಡಿಸೈನಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆರಂಭದ ದಿನಗಳು, ಆ ದಿನಗಳಲ್ಲಿ ಅನುಭವಿಸಿದ ಕಷ್ಟ ಕೋಟಲೆಗಳು, ತೊಂದರೆಗಳು, ಅವುಗಳನ್ನು ಪರಿಹರಿಸಿಕೊಂಡು ಮುನ್ನುಗ್ಗಿದ ರೋಚಕ ದಿನಗಳು, ಅವರ ಈ ಸಾಧನೆಯ ಹಾದಿಯಲ್ಲಿ ತಾಯಿ ಗುಲಾಬಿ ಕೃಷ್ಣ ಭಂಡಾರಿಯವರ ಪಾತ್ರವೇನು? ಪತ್ನಿ ಅನುಶ್ರೀ ಭಂಡಾರಿ, ಮಕ್ಕಳಾದ ಮಾಸ್ಟರ್ ರೋಹಿಲ್, ಕುಮಾರಿ ಆರಾಧ್ಯಾರನ್ನೊಳಗೊಂಡ ಜೀವನದ ಸುಂದರ ಚಿತ್ರಣ, ಎಲ್ಲಾ ಅಡೆತಡೆಗಳನ್ನು ಎದುರಿಸಿ ಒಂದರಮೇಲೊಂದರಂತೆ ಸರಣಿ ಐಷಾರಾಮಿ ಹೇರ್ ಡಿಸೈನಿಂಗ್ ಮಳಿಗೆಗಳನ್ನು ಸ್ಥಾಪಿಸಿದ ಪರಿ…. ಹೀಗೆ ಪ್ರತಿಯೊಂದು ವಿಷಯವನ್ನು ಲೇಖಕಿ ಜಯಶ್ರೀ ಶೆಟ್ಟಿಯವರು ಯಾವುದೇ ಕಮರ್ಷಿಯಲ್ ಸಿನಿಮಾಗೂ ಕಮ್ಮಿ ಇಲ್ಲದಂತೆ ಅದ್ಭುತವಾಗಿ ಚಿತ್ರಿಸಿ ಪುಸ್ತಕ ರೂಪದಲ್ಲಿ ನಿಮ್ಮ ಮುಂದಿಟ್ಟಿದ್ದಾರೆ. ಈ ಪುಸ್ತಕ ಸಾಧನೆಯ ಹಾದಿಯಲ್ಲಿರುವ ಇಂದಿನ ಪೀಳಿಗೆಯ ಯುವಕ,ಯುವತಿಯರಿಗೆ ಸ್ಫೂರ್ತಿದಾಯಕವಾಗಲಿದೆ. ದೃಢಚಿತ್ತದಿಂದ ಗುರಿಯೆಡೆಗೆ ಗಟ್ಟಿ ಹೆಜ್ಜೆಯನ್ನಿಟ್ಟರೆ ನಮ್ಮ ಕನಸುಗಳೆಲ್ಲ ನಮ್ಮ ಕಾಲಡಿಗೆ ಬಂದು ಬೀಳುತ್ತವೆ ಎಂಬ ಹುಮ್ಮಸ್ಸು ನೀಡುವ, ನವಚೈತನ್ಯವನ್ನು ತುಂಬುವ ಸ್ಪೂರ್ತಿಯ ಚಿಲುಮೆ ಈ ಪುಸ್ತಕವೆಂದರೆ ಅತಿಶಯೋಕ್ತಿಯಾಗಲಾರದು.



ಇನ್ನು ಈ ಪುಸ್ತಕವನ್ನು ಅಂದವಾಗಿ ಮುದ್ರಿಸಿಕೊಟ್ಟವರು ಅಮರಿಲ್ಲೀಸ್ ಮತ್ತು ಮಂಜುಲ್ ಪಬ್ಲಿಷಿಂಗ್ (Amaryllies/Manjul Publishing.)ನವರು, ಮಂಜುಲ್ ಪಬ್ಲಿಷರ್ಸ್ ಈ ಹಿಂದೆ ಜಗದ್ವಿಖ್ಯಾತ ಹ್ಯಾರಿ ಪಾಟರ್ ಸರಣಿಯ ಹಿಂದಿ ಅವತರಣಿಕೆಯ ಪ್ರಕಾಶಕರಾಗಿ ಚಿರಪರಿಚಿತರು. ಹಾರ್ಪರ್-ಕಾಲಿನ್ಸ್ (Harper-Collins) ನವರು ವಿಶ್ವದಾದ್ಯಂತ “ಸ್ಟೈಲಿಂಗ್ ಅಟ್ ದ ಟಾಪ್” ಕೃತಿಯ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ. 266 ಪುಟಗಳ 499/- ರೂ ಮುಖಬೆಲೆಯ ಈ ಸುಂದರ ಪುಸ್ತಕವನ್ನು ಫ್ಲಿಪ್ ಕಾರ್ಟ್, ಅಮೇಝಾನ್ ಮುಖಾಂತರ ಆನ್ಲೈನ್ ಮೂಲಕ ತರಿಸಿಕೊಳ್ಳಬಹುದು.

ಬಾಲಿವುಡ್ ಬಾದ್ ಶಾ,ಪದ್ಮಶ್ರೀ ಪುರಸ್ಕೃತ, ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಪ್ರೀತಿಯಿಂದ ಶಿವರಾಮ್ ಭಂಡಾರಿಯವರ ಆಟೋಬಯಾಗ್ರಫಿ “ಸ್ಟೈಲಿಂಗ್ ಅಟ್ ದ ಟಾಪ್.” ಕೃತಿಯನ್ನು ಲೋಕಾರ್ಪಣೆ ಮಾಡಿ ಶಿವರಾಮ ಭಂಡಾರಿಯವರ ಬೆನ್ನು ತಟ್ಟಿ,ಶುಭ ಹಾರೈಸಿದರು.
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೆಸರಾರದ ಶ್ರೀ ಸುರೇಶ್ ಭಂಡಾರಿ ಕಡಂದಲೆಯವರು ಶಿವರಾಮ್ ಭಂಡಾರಿಯವರ ಜೀವನಗಾಥೆ “ಸ್ಟೈಲಿಂಗ್ ಅಟ್ ದ ಟಾಪ್” ಕೃತಿ ಬಿಡುಗಡೆ ಮಾಡಿ ಶುಭ ಹಾರೈಸಿದರು.


ಶ್ರದ್ಧೆಯಿಟ್ಟು ಕೆಲಸ ಮಾಡಿದರೆ ಯಾವ ವೃತ್ತಿಯೂ ಕೀಳಲ್ಲ ಎಂಬುದನ್ನರಿತ ಶಿವರಾಮ ಭಂಡಾರಿಯವರು ತಮ್ಮ ಕುಲಕಸುಬಾದ ಕ್ಷೌರಿಕ ವೃತ್ತಿಯಲ್ಲಿಯೇ ಅದ್ಭುತ ಸಾಧನೆಯನ್ನು ಮಾಡಿ ಒಂದು ನಿರ್ಲಕ್ಷ್ಯಕ್ಕೊಳಗಾದ ಸಮುದಾಯದವರನ್ನು ಜಗತ್ತಿನೆದುರು ಎದೆಯುಬ್ಬಿಸಿ ನಿಲ್ಲುವಂತೆ ಮಾಡಿದ್ದಾರೆ, ಭಂಡಾರಿ ಸಮಾಜದ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸಿದ್ದಾರೆ.


ಅವರು ಜೀವನದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ,ತನ್ಮೂಲಕ ಹೆತ್ತವರಿಗೆ, ಸಮಸ್ತ ಕ್ಷೌರಿಕ ಸಮುದಾಯದವರಿಗೆ ಇನ್ನೂ ಹೆಚ್ಚಿನ ಘನತೆ, ಗೌರವ ತಂದುಕೊಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
“ಹಾರ್ದಿಕ ಅಭಿನಂದನೆಗಳು ಶಿವರಾಮಣ್ಣ.”

ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.
Congratulations, it’s great of community. The wondering achievement s ur inspiration of savith samaj and bhandaris community. We are wishes to Karnataka, hassan district, arakalgud from suranjan santhosh.